ಮುಂಬೈ ಆಟೋಚಾಲಕನೊಬ್ಬನ ಗಳಿಕೆ ಎಲ್ಲರ ಹುಬ್ಬೇರಿಸಿದೆ. ಏನೂ ಇಲ್ಲದೆ ಆರಾಮವಾಗಿ ಕುಳಿತು ತಿಂಗಳಿಗೆ ಲಕ್ಷ ಲಕ್ಷ ಗಳಿಕೆ ಮಾಡ್ತಿರುವವ ಈಗ ಸುದ್ದಿಯಲ್ಲಿದ್ದಾನೆ. ಅಷ್ಟಕ್ಕೂ ಆತ ಮಾಡೋದು ಏನು ಗೊತ್ತಾ?
ಇಡೀ ದಿನ ಕೆಲ್ಸ (work) ಮಾಡಿ ಹಣ ಗಳಿಸೋರು ಒಂದ್ಕಡೆಯಾದ್ರೆ ಬುದ್ಧಿವಂತಿಕೆಯಿಂದ, ಯಾವುದೇ ಶ್ರಮ ಇಲ್ದೆ ಹಣ ಗಳಿಸೋರು ಇನ್ನೊಂದು ಕಡೆ. ಕೆಲವರ ಸ್ಮಾಟ್ ಗಳಿಕೆ ಅಚ್ಚರಿ ಹುಟ್ಟಿಸುತ್ತೆ. ಜಗತ್ತಿನಲ್ಲಿ ಹೀಗೂ ಹಣ ಗಳಿಸ್ಬಹುದಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕುತ್ತೆ. ಇದಕ್ಕೆ ಮುಂಬೈನ ಈ ವ್ಯಕ್ತಿ ಸಾಕ್ಷಿ. ಎಂಬಿಎ ಓದಿಲ್ಲ, ಇಂಜಿನಿಯರಿಂಗ್ ಮುಗಿಸಿಲ್ಲ, ಆನ್ಲೈನ್ – ಯೂಟ್ಯೂಬ್ ಅಂತ ಯಾವುದೇ ವಿಡಿಯೋ ಪೋಸ್ಟ್ ಮಾಡ್ತಿಲ್ಲ, ಟ್ರಾಫಿಕ್ ನಲ್ಲಿ ಡ್ರೈವರ್ ಕೆಲ್ಸ ಮಾಡಿ ಬೆವರಿಳಿಸಿಕೊಳ್ಳೋದಿಲ್ಲ. ಬುದ್ಧಿವಂತಿಕೆಯಿಂದ ಪ್ರತಿ ದಿನ ಸಾವಿರಾರು ರೂಪಾಯಿ ಗಳಿಸ್ತಿದ್ದಾನೆ. ಸದ್ಯ ಎಲ್ಲಿ ನೋಡಿದ್ರೂ ಈತನದ್ದೇ ಸುದ್ದಿ. ಆತ ಯಾರು? ಗಳಿಕೆ ಹೇಗೆ? ವಿವರ ಇಲ್ಲಿದೆ.
ಲೆನ್ಸ್ಕಾರ್ಟ್ನ (Lenskart) ಪ್ರೊಡಕ್ಟ್ ಲೀಡರ್ (Product Leader) ರಾಹುಲ್ ರೂಪಾನಿ (Rahul Rupani), ವೀಸಾಕ್ಕಾಗಿ ಮುಂಬೈನಲ್ಲಿರುವ ಯುಎಸ್ ಕಾನ್ಸುಲೇಟ್ (US Consulate)ಗೆ ಭೇಟಿ ನೀಡಿದ್ರು. ವೀಸಾ ಆಫೀಸ್ ಒಳಗೆ ಬ್ಯಾಗ್ ತೆಗೆದುಕೊಂಡು ಹೋಗುವಂತಿಲ್ಲ. ಬ್ಯಾಗ್ ಎಲ್ಲಿಡೋದು ಅಂತ ಅವ್ರಿಗೆ ಗೊತ್ತಾಗ್ತಿರಲಿಲ್ಲ. ಅಷ್ಟರಲ್ಲಿ ಒಬ್ಬ ಆಟೋ ಚಾಲಕ, ರೂಪಾನಿ ಅವ್ರನ್ನು ಕರೆದಿದ್ದಾರೆ. ಸರ್, ನಿಮ್ಮ ಬ್ಯಾಗ್ ಕೊಡಿ, ಸೇಫ್ ಆಗಿ ಇಟ್ಟುಕೊಳ್ತೇನೆ. 1000 ರೂಪಾಯಿ ಚಾರ್ಜ್ ಆಗುತ್ತೆ ಎಂದಿದ್ದಾರೆ. ಸಾವಿರ ಹೆಚ್ಚು ಎನ್ನಿಸಿದ್ರೂ ರೂಪಾನಿ ಬೇರೆ ದಾರಿ ಇಲ್ದೆ ಆಟೋ ಚಾಲಕನ ಕೈಗೆ ಬ್ಯಾಗ್ ನೀಡಿ, ಕೆಲ್ಸ ಮುಗಿಸಿ ಬಂದು ಬ್ಯಾಗ್ ಪಡೆದಿದ್ದಾರೆ. ಬರೀ ರೂಪಾನಿ ಮಾತ್ರವಲ್ಲ, ನಾವು – ನೀವು ಹೋದ್ರೂ ಇದೇ ಕೆಲ್ಸ ಮಾಡ್ತೇವೆ. ಬ್ಯಾಗ್ ಸುರಕ್ಷಿತವಾಗಿರಬೇಕು ಎಂದಾಗ, ಅದನ್ನು ಕಾಯ್ದುಕೊಳ್ಳೋರಿಗೆ ಹಣ ನೀಡೋಕೆ ಸಿದ್ಧ ಇರ್ತೇವೆ. ಈ ವಿಷ್ಯ ಮುಂಬೈ ಆಟೋ ಚಾಲಕನಿಗೆ ಗೊತ್ತು. ಇದನ್ನೇ ಬ್ಯುಸಿನೆಸ್ ಮಾಡ್ಕೊಂಡು ದಿನಕ್ಕೆ 20 ರಿಂದ 30 ಸಾವಿರ ಗಳಿಸ್ತಾನೆ. ತಿಂಗಳಿಗೆ 5 ರಿಂದ 8 ಲಕ್ಷ ರೂಪಾಯಿ ಸಂಪಾದನೆ ಕುಳಿತಲ್ಲೇ ಆಗ್ತಿದೆ.
ರೂಪಾನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಆಟೋ ಚಾಲಕನ ಬಗ್ಗೆ ಮಾಹಿತಿ ನೀಡಿದ್ದಾರೆ. ರೂಪಾನಿ ಪ್ರಕಾರ, ಆಟೋ ಚಾಲಕ ಪ್ರತಿದಿನ ಯುಎಸ್ ಕಾನ್ಸುಲೇಟ್ ಹೊರಗೆ ನಿಲ್ಲುತ್ತಾನೆ. ಪ್ರತಿದಿನ 20 ರಿಂದ 30 ಜನರು ತಮ್ಮ ಬ್ಯಾಗ್ಗಳನ್ನು ಅವನಿಗೆ ಹಸ್ತಾಂತರಿಸುತ್ತಾರೆ. ಪ್ರತಿ ಬ್ಯಾಗ್ ಗೆ 1000 ರೂಪಾಯಿ ವಸೂಲಿ ಮಾಡಿದ್ರೆ ದಿನಕ್ಕೆ 20,000 ರಿಂದ 30,000 ರೂಪಾಯಿ ಆಗುತ್ತೆ. ಹಾಗಂತ ಬ್ಯಾಗ್ ಸುರಕ್ಷಿತ. ಯಾವುದೇ ಮೋಸ ಇಲ್ಲ. ರಾಹುಲ್ ಪ್ರಕಾರ, ಚಾಲಕ ಸ್ಥಳೀಯ ಪೊಲೀಸ್ ಅಧಿಕಾರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಬ್ಯಾಗ್ ಗಳನ್ನು ಹತ್ತಿರದ ಲಾಕರ್ ನಲ್ಲಿ ಇಡ್ತಾನೆ. ಇಲ್ಲವೇ ತನ್ನ ಆಟೋದಲ್ಲಿಯೇ ಇಟ್ಟುಕೊಳ್ತಾನೆ. ಈ ಆಟೋ ಚಾಲನೆಗಲ್ಲ, ಲಾಕರ್ ರೀತಿ ಬಳಕೆ ಆಗ್ತಿದೆ.
ಈ ಆಟೋ ಚಾಲಕನಿಗೆ ಪದವಿ ಇಲ್ಲ, ಕಚೇರಿ ಇಲ್ಲ. ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ಕಲೆ ಮತ್ತು ನಂಬಿಕೆ ಹುಟ್ಟಿಸುವ ಶಕ್ತಿ ಇದೆ. ಇದು ಉದ್ಯಮಶೀಲತೆ ಎಂದು ರೂಪಾನಿ ಬರೆದಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ಪೋಸ್ಟ್ ಗೆ ಕಮೆಂಟ್ ಸುರಿಮಳೆಗೈದಿದ್ದಾರೆ. ಸಾವಿರ ರೂಪಾಯಿ ಜಾಸ್ತಿ ಆಯ್ತು ಅಂತ ಕೆಲವರು ಹೇಳಿದ್ರೂ, ಆ ಪರಿಸ್ಥಿತಿಯಲ್ಲಿ ನಮಗೆ ಬ್ಯಾಗ್ ಮುಖ್ಯವಾಗುತ್ತೆ. ಹಾಗಾಗಿ 1000 ರೂಪಾಯಿ ನೀಡಲು ನಾವು ಸಿದ್ಧರಾಗ್ತೇವೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಯುಎಸ್ ಕಾನ್ಸುಲೇಟ್ ಒಳಗೆ ಬ್ಯಾಗ್ ಪ್ರವೇಶವಿಲ್ಲ. ಕಚೇರಿ ಮುಂದೆ ಆಟೋ ಚಾಲಕನನ್ನು ನಾವು ನೋಡಿದ್ದೇವೆ ಎಂದು ಕೆಲವರು ರೂಪಾನಿ ಪೋಸ್ಟ್ ಸಮರ್ಥಿಸಿಕೊಂಡಿದ್ರೆ ಮತ್ತೆ ಕೆಲವರು ಚಾಲಕನ ಗಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
