ತೆಲುಗು, ತಮಿಳು ಚಿತ್ರರಂಗದಲ್ಲಿ ಬಾಲಕೃಷ್ಣ, ರಜನಿಕಾಂತ್ ಅವರಂತಹ ಹಿರಿಯ ನಟರು ಯಶಸ್ವಿಯಾಗಲು ಅವರ ನಟನೆಯ ಮೇಲಿನ ತುಡಿತ ಮತ್ತು ವೃತ್ತಿಪರತೆಯೇ ಕಾರಣ. ಈ ನಟರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.
ಮೊನ್ನೆ ತೆಲುಗಿನ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕು ಮಹಾರಾಜ್’ ಕಣ್ಣಿಗೆ ಬಿತ್ತು. ಹತ್ತು ನಿಮಿಷವೂ ನೋಡಲಾಗಲಿಲ್ಲ. ಅಷ್ಟೊಂದು ಬಿಲ್ಡಪ್, ಫೈಟ್, ಸೆಂಟಿಮೆಂಟ್, ಹೀರೋಯಿಸಂ..ಆದ್ರೆ, ಹತ್ತೇ ನಿಮಿಷದಲ್ಲಿ ಸೆಳೆದಿದ್ದು ಬಾಲಕೃಷ್ಣ ಆ್ಯಕ್ಟಿಂಗ್. 64 ವರ್ಷದಲ್ಲೂ ಬಾಲಕೃಷ್ಣರದ್ದು ಯಂಗ್ ಹೀರೋಗಳನ್ನು ಮೀರಿಸುವಂಥ ಬಿಲ್ಡಪ್ ಆದರೂ, ನಟನೆ ಬಗೆಗಿನ ಅವರ ಆಸಕ್ತಿ, ಪ್ರೊಫೆಷನಲಿಸಂ. ಲೀಲಾಜಾಲವಾಗಿ ನಟಿಸುವ ಪರಿ, ಆ ಫೋರ್ಸ್, ಡೈಲಾಗ್ ಡೆಲಿವರಿ.. ಈ ವಯಸ್ಸಲ್ಲಿ ಇದೆಲ್ಲಾ ಬೇಕಾ ಅನ್ನಿಸಿತು. ಆದರೆ, ಯಾವುದೇ ವೃತ್ತಿ ಇರಲಿ, ದುಡಿಯಬೇಕೆಂಬ ತುಡಿತ, ಹೊಸ ಹೊಸ ಪಾತ್ರಗಳಿಗೆ ಮಾಡಿಕೊಳ್ಳುವ ತಯಾರಿ, ಹೊಸತನಕ್ಕೆ ತೆರೆದುಕೊಳ್ಳುವ ಪರಿ, ಕಮಿಟ್ಮೆಂಟ್ ಇದ್ದಾಗ ಬಾಲಕೃಷ್ಣರಂಥವರು ತೆರೆ ಮೇಲೆ ಮಿಂಚುತ್ತಾರೆ. ಬರೀ ಬಾಲಕೃಷ್ಣ ಅಷ್ಟೇ ಅಲ್ಲ ರಜನಿಕಾಂತ್, ಅಮಿತಾಬ್ ಬಚ್ಚನ್, ಮಮ್ಮುಟಿ, ಮೋಹನ್ಲಾಲ್ ಈಗಲು ಚಿತ್ರರಂಗದಲ್ಲಿ ಟಾಪ್ ಸ್ಥಾನದಲ್ಲಿರುವುದಕ್ಕೆ ಕಾರಣ ನಟನೆ ಮೇಲಿನ ತುಡಿತ. ಈ ಹಿರಿಯ ನಟರ ವೃತ್ತಿಪರತೆ, ಅವರಿಗಷ್ಟೇ ಹೆಸರು ತಂದಿಲ್ಲ, ಅವರನ್ನು ನಂಬಿದ್ದ ಚಿತ್ರೋದ್ಯಮವೂ ಅವರಿಂದಾಗಿ ಬೆಳೆದಿದೆ, ಬೆಳೆಯುತ್ತಿದೆ. ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ ಚಿತ್ರೋದ್ಯಮ ಇಂದು ಆರ್ಥಿಕವಾಗಿ ಬಲಿಷ್ಠವಾಗಿರಲು, ವೈವಿಧ್ಯಮ ಚಿತ್ರಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಇಂಥ ಸ್ಟಾರ್ ನಟರ ಬದ್ಧತೆಯೇ ಕಾರಣ.
ಅದರಲ್ಲೂ ತೆಲುಗು ಚಿತ್ರರಂಗ, ಇಡೀ ಭಾರತದಲ್ಲೇ ಅತ್ಯಂತ ಪ್ರಭಾವಶಾಲಿ ಅಷ್ಟೇ ಅಲ್ಲ ಅತ್ಯಧಿಕ ದಾಖಲೆಯ ವಹಿವಾಟು ನಡೆಸುತ್ತಿರುವ ಇಂಡಸ್ಟ್ರಿಯಾಗಿ ಬೆಳೆದು ನಂತಿದೆ. 2023ರಲ್ಲಿ ತೆಲುಗು ಚಿತ್ರೋದ್ಯಮ 2,000 ಕೋಟಿ ಸಂಗ್ರಹ ಮಾಡಿ ದಾಖಲೆ ನಿರ್ಮಿಸಿತ್ತು. 2023ರಲ್ಲಿ ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್ 12,226 ಕೋಟಿ. ಅದರಲ್ಲಿ ಬಾಲಿವುಡ್ -5,380 ಕೋಟಿ, ತೆಲುಗು- 2,265 ಕೋಟಿ, ತಮಿಳು- 1,961 ಕೋಟಿ ಕಲೆಕ್ಷನ್ ಮಾಡಿತ್ತು.
ಪುಪ್ಪ-2 ಚಿತ್ರ ಗ್ಲೋಬಲ್ ಬಾಕ್ಸ್ ಆಫೀಸ್ ದಾಖಲೆ ಪುಡಿಗಟ್ಟಿತ್ತು. 1700 ಕೋಟಿ ಕಲೆಕ್ಷನ್ ಮಾಡುವ ಮೂಲಕ ಪುಪ್ಪ-2 ಹೊಸ ದಾಖಲೆ ನಿರ್ಮಿಸಿತ್ತು. ಕಳೆದ ವರ್ಷ ಟಾಲಿವುಡ್ ಖಜಾನೆ ಸೇರಿದ್ದು ಸುಮಾರು 8000 ಕೋಟಿ ರೂ. ಇನ್ನು ಕನ್ನಡ ಚಿತ್ರರಂಗದ ಸಾಧನೆ, ಹಣ ಗಳಿಕೆ ನೋಡಿದ್ರೆ ಶಾಕ್ ಆಗೋದು ಪಕ್ಕಾ. 2022ರಲ್ಲಿ ಸ್ಯಾಂಡಲ್ವುಡ್ ಗಳಿಕೆ 810 ಕೋಟಿ ರೂ. 2024ರಲ್ಲಿ ಸ್ಯಾಂಡಲ್ವುಡ್ ಗಳಿಕೆ ಪಾತಾಳಕ್ಕಿಳಿದಿತ್ತು. 2024 ಓರ್ಮ್ಯಾಕ್ಸ್ ಪ್ರಕಾರ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್‌ಗೆ 2024 ಅತ್ಯಂತ ಕೆಟ್ಟ ವರ್ಷವಾಗಿತ್ತಂತೆ. 2024ರಲ್ಲಿ ಗಳಿಸಿದ್ದು 304 ಕೋಟಿ ಆದಾಯ, 2023ರಲ್ಲಿ 312 ಕೋಟಿಗೆ ಹೋಲಿಸಿದರೆ 2.56% ನಷ್ಟು ಕುಸಿತವಂತೆ.
ಇನ್ನು ಬಾಲಕೃಷ್ಣ ವಿಷಯಕ್ಕೆ ಬಂದ್ರೆ, ಇತ್ತೀಚಿಗೆ ರಿಲೀಸ್ ಆದ ಡಾಕು ಮಹಾರಾಜ್, ಬಾಕ್ಸ್ ಆಫೀಸ್ ಚಿಂದಿ ಮಾಡಿದೆ. 115 ಕೋಟಿ ರೂ ಕಲೆಕ್ಷನ್ ಮಾಡಿದ್ದು, 2025ರಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ತೆಲುಗಿನ ಆರನೇ ಚಿತ್ರ ಎಂಬ ಹೆಗ್ಗಳಿಕೆ ಬಾಲಕೃಷ್ಣ ಚಿತ್ರಕ್ಕೆ ಸಲ್ಲುತ್ತದೆ.
ರಜನಿಕಾಂತ್ ವಿಷಯಕ್ಕೆ ಬರೋದಾದ್ರೆ, 2023ರಲ್ಲಿ ತೆರೆ ಕಂಡ ಜೈಲರ್ ಚಿತ್ರ 604 ಕೋಟಿ ಸಂಗ್ರಹಿಸಿ, ಬಾಕ್ಸ್ ಆಫೀಸ್ ಚಿಂದಿ ಮಾಡಿತ್ತು. 74ನೇ ವಯಸ್ಸಿನಲ್ಲೂ ರಜನಿಕಾಂತ್ ಆಕ್ಷನ್, ಸ್ಟೈಲಿಷ್ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ರು. 2024ರಲ್ಲಿ ತೆರೆ ಕಂಡ ವೆಟ್ಟಾಯನ್ 253 ಕೋಟಿ ರೂ. ಗಳಿಕೆಯೊಂದಿಗೆ ಹೊಸ ದಾಖಲೆ ನಿರ್ಮಿಸಿತ್ತು.
ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡಿದ ದಕ್ಷಿಣ ಭಾರತದ ಸಿಎಂಗಳು
ಹೆಸರು, ಖ್ಯಾತಿ, ಕೋಟ್ಯಂತರ ರೂ. ಸಂಭಾವನೆ ಪಡೆದು ಈ ನಟರೆಲ್ಲ, ಈ ವಯಸ್ಸಿನಲ್ಲಿ ನಟಿಸಬೇಕೆಂಬ ಯಾವ ಜರೂರತ್ತೂ ಇರಲಿಲ್ಲ. ನಟಿಸಲೇಬೇಕೆಂಬ ಒತ್ತಡವೂ ಇರಲಿಲ್ಲ. ಆದ್ರೆ, ನಟಿಸಬೇಕೆಂಬ ತೀವ್ರತೆ ಇಲ್ಲದಿದ್ರೆ ಅವನು ಕಲಾವಿದನಲ್ಲ. ಕಲೆಯನ್ನೇ ಉಸಿರಾಗಿಸಿಕೊಂಡು, ಕಲೆಯಿಂದಲೇ ಬದುಕು ಕಟ್ಟಿಕೊಂಡ ರಜನಿಕಾಂತ್, ಬಾಲಕೃಷ್ಣರಂಥವರು, ಬದುಕಿನ ಸಂಧ್ಯಾಕಾಲದಲ್ಲೂ ಬೆವರು ಹರಿಸುತ್ತಾ, ಹೊಸ ಹೊಸ ಸಾಹಸಗಳಿಗೆ ಮೈಯೊಡ್ಡುತ್ತಾ, ಟ್ರೆಂಡ್ಗೆ ತಕ್ಕಂಥ ಸಿನಿಮಾದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಾ, ಚಿತ್ರರಂಗದ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುತ್ತಾ, ತಾವು ಬೆಳೆದ ನೆಲದ ಋಣ ತೀರಿಸುತ್ತಾ ಬದುಕುವುದಿದೆಯಲ್ಲ, ಅದನ್ನೇ ಕಲಾ ತಪಸ್ಸು ಅಂತಾರಲ್ವಾ? ಒಂದೆರಡು ಹಿಟ್ ಸಿನಿಮಾ ಕೊಟ್ಟು, ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿ, ಕಂಫರ್ಟ್ ಝೋನ್ನಲ್ಲಿ ಬದುಕಿಬಿಡುವ ನಟರು, ಬಾಲಕೃಷ್ಣ, ರಜನಿ, ಅಮಿತಾಬ್, ಮಮ್ಮುಟಿಯಂಥವರನ್ನು ಸಮಕ್ಕೆ ನಿಲ್ಲುವುದು ಬಿಡಿ, ಅವರ ನೆರಳ ಸಮೀಪಕ್ಕೂ ಬರಲಾಗದು.
ಮಹಾಕುಂಭಮೇಳ: ಬಡವರಿಗೆ ಭಕ್ತಿಯಂತೆ, ಶ್ರೀಮಂತರಿಗೆ ಮುಕ್ತಿಯ ಚಿಂತೆ..!.
