Asianet Suvarna News Asianet Suvarna News

ಕಣಿವೆಯ ಹಾಡು: ಹಳ್ಳಿ-ನಗರಗಳ ನಡುವೆ ಮೊಮ್ಮಗಳ ಕನಸಿನ ಹಾರಾಟ, ನೋಡಲೇಬೇಕಾದ ನಾಟಕ

ಎರಡು ತಲೆಮಾರಿನ ಸಂಘರ್ಷ, ಹಳ್ಳಿ-ನಗರಗಳ ವಿರೋಧಾಭಾಸ, ಮತ್ತು ಹೊಸತನದ ಹುಡುಕಾಟ - ಕಣಿವೆಯ ಹಾಡು ನಾಟಕವು ಜೀವನದ ಭಾವನಾತ್ಮಕ ತಾಣಗಳನ್ನು ಸ್ಪರ್ಶಿಸುತ್ತದೆ. ಮೊಮ್ಮಗಳ ಕನಸುಗಳು ಮತ್ತು ಅಜ್ಜನ ಆತಂಕಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ಈ ನಾಟಕ ಸುಂದರವಾಗಿ ಚಿತ್ರಿಸುತ್ತದೆ.

south african playwright athol fugard kaviveya haadu must watch drama
Author
First Published Aug 16, 2024, 12:15 PM IST | Last Updated Aug 16, 2024, 12:33 PM IST

ರಜನಿ.ಎಂ.ಜಿ, ಬೆಂಗಳೂರು ಬ್ಯೂರೋ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಎರಡು ತಲೆಮಾರಿನ ತಾಕಲಾಟ. ಹಳ್ಳಿ ನಗರಗಳ ಸಂಘರ್ಷ, ಹರೆಯದ ಹುಮ್ಮಸ್ಸು- ವೃದ್ಧಾಪ್ಯದ ಆತಂಕ. ನೆಮ್ಮದಿಯ ಜೀವನ v/s ಹೊಸತನದ ಹುಡುಕಾಟ. ಎಲ್ಲವನ್ನೂ ರಂಗಭೂಮಿಗೆ ತಂದ ಬಗೆ ಅದ್ಭುತ. ಕೇವಲ ಎರಡೇ ಎರಡು ಪಾತ್ರಗಳು. ಪುಟ್ಟ ಹಳ್ಳಿಯಲ್ಲಿ ಕುಂಬಳಕಾಯಿ ಬೆಳೆಯುವ ಅಜ್ಜ, ಪುಟಿಯುವ ಉತ್ಸಾಹದ ಮೊಮ್ಮಗಳು. ಕುಂಬಳಕಾಯಿ ಬೆಳೆಯುವುದೇ ಜೀವನದ ಸೌಭಾಗ್ಯವೆಂದುಕೊಂಡ ಅಜ್ಜನಿಗೆ ಹಾಡಿನ ಮೂಲಕವೇ ಜಗತ್ತು ಗೆಲ್ಲಲು ಹೊರಡುವ ಮೊಮ್ಮಗಳ ಉತ್ಸಾಹ ಕಂಡು ಏನೋ ಆತಂಕ.  ಬಿಟ್ಟು ಹೋಗುವ ನೋವು, ಅನಿವಾರ್ಯತೆ ಇಬ್ಬರಿಗೂ. ಅಜ್ಜ ನೆಡುವ ಕುಂಬಳ ಬೀಜ ಮೊಳಕೆಯೊಡೆದು ಹಬ್ಬುವ ಪರಿಯಂತೆ, ಇಡೀ ನಾಟಕ ಹರಡುತ್ತಾ ಹೋಗುತ್ತದೆ. 

ಮೈಸೂರಿನ 'ನಟನ'ದ ದಿಶಾ ರಮೇಶ್ (ಮಂಡ್ಯ ರಮೇಶ್ ಮಗಳು)​​ ಹಾಗೂ ಮೇಘ ಸಮೀರ​​ ಒಂದೂವರೆ ಗಂಟೆಯ ಇಡೀ ನಾಟಕವನ್ನು ಆವರಿಸಿಕೊಂಡು ಬಿಡುತ್ತಾರೆ. ಹಾಡುತ್ತಾ, ಕುಣಿಯುತ್ತಾ ಸುಲಭವಾಗಿ ನಮ್ಮ ಭಾವಕಣಿವೆಯೊಳಗೆ ಇಳಿದು ಬಿಡುತ್ತಾರೆ.  ಅದರಲ್ಲೂ ದಿಶಾಳ ಹಾಡು ಇಡೀ ನಾಟಕದ ಜೀವಂತಿಕೆ. ಕಣಿವೆಯ ತಂಗಾಳಿಯಂತೆ ನಾಟಕದುದ್ದಕ್ಕೂ ಪ್ರೇಕ್ಷಕನ ಆವರಿಸಿಕೊಳ್ಳುತ್ತದೆ. ಅಜ್ಜನಿಗಾಗಿ ಮಿಡಿಯುವ ಪುಟಾಣಿ ಮೊಮ್ಮಗಳಾಗಿ, ಕನಸು ಕಂಗಳ ಗಾಯಕಿಯಾಗಿ, ಹೊಸ ಬದುಕನ್ನು ಬಿಟ್ಟು ಹೊರಡುವ ಸಾಹಸಿಯಾಗಿ ದಿಶಾ ಮನಸು ಗೆಲ್ಲುತ್ತಾರೆ. ಬದಲಾಗುವ ಭಾವನೆಗಳಿಗೆ ತಕ್ಕಂತೆ ನಟಿಸುತ್ತಾ, ಅದಕ್ಕೆ ತಕ್ಕಂತೆ ಹಾಡನ್ನೂ ಹಾಡುವ  ದಿಶಾ ಭಾವೋತ್ತೇಜಕ ನಟನೆಯನ್ನು ತಮ್ಮ ಕಂಠಕ್ಕೂ ಕಲಿಸಿದ್ದಾರೆ ಎನಿಸಿತು. ನಟನೆ, ಗಾಯನದಲ್ಲಿ ಇಷ್ಟೊಂದು ಪರಿಣತಿ ಇರುವ ದಿಶಾ ಕನ್ನಡ ರಂಗಭೂಮಿಯ ಆಸ್ತಿಯಾಗುವ  ಎಲ್ಲ ಅವಕಾಶ, ಅರ್ಹತೆಗಳೂ ಇವೆ. ನಾಟಕ ಮುಗಿದರೂ ಹಾಡುಗಳು ಕಾಡುತ್ತವೆ. 

ಬೆಂಗಳೂರೆಂಬ ಮಹಾನಗರಿಯನ್ನು ವೇದಿಕೆ ಮೇಲೆ ಕಟ್ಟಿ ಕೊಟ್ಟ ಬೆಂದ ಕಾಳು ಆನ್ ಟೋಸ್ಟ್!

south african playwright athol fugard kaviveya haadu must watch drama

ಒಂದು ನಾಟಕದಲ್ಲಿ ಲೈಟಿಂಗ್​​​ ಹೇಗಿರಬೇಕು ಅನ್ನೋದಕ್ಕೆ ಉದಾಹರಣೆಯಂತಿದೆ ಕಣಿವೆಯ ಹಾಡು. ಪಾತ್ರಗಳ ಭಾವನೆಗಳಿಗೆ ತಕ್ಕಂತೆ ಹಿನ್ನೆಲೆಯ ಕಣಿವೆಯ ಬಣ್ಣಗಳು ಬದಲಾಗುವ ತಂತ್ರ ಚನ್ನಾಗಿದೆ. 

ಅತ್ಯಂತ ಕಡಿಮೆ ರಂಗಪರಿಕರಗಳನ್ನು ಬಳಸಿಕೊಂಡು ಇಬ್ಬರೇ ಪಾತ್ರಧಾರಿಗಳು ಒಂದೂವರೆ ಗಂಟೆ ಪ್ರೇಕ್ಷಕರನ್ನು ಎಂಗೇಜ್​ ಮಾಡುವುದು ಸಾಮಾನ್ಯವಾದುದ್ದಲ್ಲ. ಮೊಮ್ಮಗಳ ಜೋಡು ಜಡೆಗಳೇ ಆಕೆಯ ಜಿಗಿಯುವ ಉತ್ಸಾಹದ ಪ್ರತೀಕವಾಗುತ್ತವೆ. 

Family Drama Movie Review: ಗಮನ ಸೆಳೆಯುವ ಚಿತ್ರಕಥೆ, ಅಮೋಘ ನಟನೆ, ಮುಖಾಮುಖಿಯಾಗುವ ರೌಡಿಸಂ ಜಗತ್ತು

ಈ ನಾಟಕ ಬರೆದದ್ದು ದಕ್ಷಿಣ ಆಫ್ರಿಕಾದ ಶ್ರೇಷ್ಠ ನಾಟಕಕಾರ ಅತೋಲ್ ಫ್ಯೂಗಾರ್ಡ್.  ಪ್ರಕೃತಿಯ ಮಧ್ಯೆ ಹಾಡು ಹೇಳುತ್ತಾ ಬೆಳೆದ ಹಕ್ಕಿಯೊಂದು ಮೈಕ್​​ ಹುಡುಕಿಕೊಂಡು ನಗರಕ್ಕೆ ಹೊರಡುವ ಈ ಕಥೆ ನಮ್ಮ ನಿಮ್ಮೆಲ್ಲರದ್ದು ಹೌದು.  ಕಣಿವೆಯ ಹಾಡೊಂದು ಎದೆಯ ಕಣಿವೆಯೊಳಗೆ ಇಳಿದು ಬರುವ ಪ್ರಕ್ರಿಯೆಗೆ ನಾಟಕ ಎಂದು ಹೆಸರಿಟ್ಟಿದ್ದಾರೆ ಎನಿಸಿತು. 

ಅತೋಲ್ ಫ್ಯೂಗಾರ್ಡ್ ನ 'ಕಣಿವೆಯ ಹಾಡು'
ಕನ್ನಡಕ್ಕೆ: ಡಾ. ಮೀರಾ ಮೂರ್ತಿ
ಸಂಗೀತ: ಅನುಷ್ ಶೆಟ್ಟಿ, ಮುನ್ನ ಮೈಸೂರು
ಅಭಿನಯ: ಮೇಘ ಸಮೀರ ಮತ್ತು ದಿಶಾ ರಮೇಶ್
ವಿನ್ಯಾಸ, ನಿರ್ದೇಶನ: ಡಾ. ಶ್ರೀಪಾದ ಭಟ್

south african playwright athol fugard kaviveya haadu must watch drama

Latest Videos
Follow Us:
Download App:
  • android
  • ios