ಮುಂಬೈ(ಆ.12): ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಬಾಲಿವುಡ್‌ ನಟ ಸಂಜಯ್‌ ದತ್‌ ಅವರಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಶೀಘ್ರದಲ್ಲೇ ಸಂಜಯ್‌ ದತ್‌ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸಂಜಯ್‌ ದತ್‌ ಅವರ ಶ್ವಾಸಕೋಶ ಕ್ಯಾನ್ಸರ್‌ 3ನೇ ಹಂತದಲ್ಲಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅವರು ಆಘಾತಗೊಂಡಿದ್ದಾರೆ. ಆದಾಗ್ಯೂ ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ ಎಂದು ಅವರ ಆಪ್ತ ಸ್ನೇಹಿತ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಇದಕ್ಕೆ ಇಂಬು ನೀಡುವಂತೆ ಮಂಗಳವಾರ ಟ್ವೀಟ್‌ ಮಾಡಿದ್ದ ಸಂಜೂ, ವೈದ್ಯಕೀಯ ಚಿಕಿತ್ಸೆ ಕಾರಣಕ್ಕಾಗಿ ಕೆಲಸದಿಂದ ಕೆಲಕಾಲ ಬ್ರೇಕ್‌ ಪಡೆಯುತ್ತಿದ್ದೇನೆ. ಈ ಬಗ್ಗೆ ಯಾರೂ ಚಿಂತೆ ಪಡಬೇಕಾಗಿಲ್ಲ, ಊಹಾಪೋಹ ಹಬ್ಬಿಸಬೇಕಾಗಿಲ್ಲ. ಶೀಘ್ರದಲ್ಲೇ ವಾಪಸ್‌ ಬರುತ್ತೇನೆ ಎಂದು ಹೇಳಿದ್ದರು.

ಸಂಜಯ್‌ ದತ್‌ ಅವರು ಜು.29ರಂದು 61ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ‘ಕೆಜಿಎಫ್‌: ಚಾಪ್ಟರ್‌ 2’ ಸಿನಿಮಾದಲ್ಲೂ ನಟಿಸಿದ್ದು, ಆ ಚಲನಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ.