ನವದೆಹಲಿ[ಮೇ.27]: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿದೆ. ಆದರೀಗ ಇದರ ಬೆನ್ನಲ್ಲೇ ಚುನಾವಣೆಗೂ ಮೊದಲು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳೂ ಸದ್ದು ಮಾಡಲಾರಂಭಿಸಿವೆ. ಅಲ್ಲದೇ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳನ್ನು ಶೀಘ್ರವಾಗಿ ಪೂರೈಸಿ ಎಂಬ ಒತ್ತಾಯ ಹೆಚ್ಚಿದೆ. RSS ಮುಖ್ಯಸ್ಥ ಮೋಹನ್ ಭಾಗವತ್ ರಾಮ ಮಂದಿರ ನಿರ್ಮಾಣ ಆಗುತ್ತದೆ, ಆಗಲೇಬೇಕು ಎನ್ನುವ ಮೂಲಕ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 542 ಕ್ಷೇತ್ರಗಳ ಪೈಕಿ 303ನ್ನು ಗೆದ್ದ ಬಳಿಕ ಮೊದಲ ಬಾರಿ ಮಾತನಾಡಿದ RSS ಮುಖ್ಯಸ್ಥ ಮೋಹನ್ ಭಾಗವತ್ 'ರಾಮ ಮಂದಿರ ನಿರ್ಮಿಸುವ ಆಸೆ ಇದ್ದರೆ ನಾವೇ ಇದನ್ನು ಆರಂಭಿಸಬೇಕು. ಬೇರೆಯವರು ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದರೆ, ಅವರ ಮೇಕಲೆ ನಿಗಾ ಇಡಬೇಕಾಗುತ್ತದೆ. ರಾಮ ಮಂದಿರ ನಿರ್ಮಾಣ ಆಗುತ್ತದೆ ಹಾಗೂ ಅದು ಆಗಲೇಬೇಕು' ಎಂದಿದ್ದಾರೆ. 

ನಾವು ಯಾವುದನ್ನು ಬಯಸುತ್ತೇವೋ ಅದನ್ನು ಪಡೆಯಲು ನಾವು ಕಾಯಬೇಕಾಗುತ್ತದೆ. ಅಲ್ಲದೇ ನ್ಮಮ ಗುರಿ ತಲುಪಲು ಸಹಾಯ ಮಾಡುವವರಿಗೆ ನಾವು ಸಹಾಯ ಮಾಡಬೇಕು ಎಂದಿದ್ದಾರೆ. RSS ಆರಂಭದಿಂದಲೂ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಿಸಬೇಕೆಂಬ ಹಂಬಲ ಹೊಂದಿದೆ ಎಂಬುವುದು ಉಲ್ಲೇಖನೀಯ. ಇದೀಗ ಬಿಜೆಪಿ ಲೋಕ ಸಮರದಲ್ಲಿ ಜಯ ಗಳಿಸಿದ ಬೆನ್ನಲ್ಲೇ ರಾಮ ಮಂದಿರ ನಿರ್ಮಿಸಲು ಒತ್ತಡ ಹೇರಲಾರಂಭಿಸಿದೆ.