ಗುಂಡ್ಲುಪೇಟೆ[ಜ.29]: ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಎಂಬ ವನ್ಯಮೃಗಗಳ ಕುರಿತಾದ ಜನಪ್ರಿಯ ಟೀವಿ ಶೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡು ದೊಡ್ಡ ಸುದ್ದಿಯಾಗಿದ್ದರು. ಇದೀಗ ಈ ಶೋದಲ್ಲಿ ತಮಿಳು ಸೂಪರ್‌ಸ್ಟಾರ್‌ ಹಾಗೂ ರಾಜಕಾರಣಿ ರಜನೀಕಾಂತ್‌ ಕೂಡಾ ಕಾಣಿಸಿಕೊಳ್ಳುತ್ತಿದ್ದು ಬಂಡೀಪುರ ಅರಣ್ಯದಲ್ಲಿ ಶೂಟಿಂಗ್‌ ನಡೆಯುತ್ತಿದೆ. ಮಂಗಳವಾರ ಶೂಟಿಂಗ್‌ ವೇಳೆ ರಜನೀಕಾಂತ್‌ ಅವರಿಗೆ ಗಾಯವಾಗಿದ್ದು ಅವರು ಚೆನ್ನೈಗೆ ವಾಪಸ್ಸಾಗಿದ್ದಾರೆ.

ಪ್ರಖ್ಯಾತ ವನ್ಯ ಸಾಹಸಿ ಬೆಯರ್‌ ಗ್ರಿಲ್ಸ್‌ ನಡೆಸಿಕೊಡುವ ಈ ಕಾರ್ಯಕ್ರಮದ ಚಿತ್ರೀಕರಣ ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ಮಂಗಳವಾರದಿಂದ ಆರಂಭವಾಗಿದ್ದು ಜ.30ರವರೆಗೂ ನಡೆಯಲಿದೆ. ಶೂಟಿಂಗ್‌ಗಾಗಿ ರಜನೀಕಾಂತ್‌ ಮತ್ತು ಚಿತ್ರೀಕರಣ ತಂಡ ಸೋಮವಾರವೇ ಮೈಸೂರಿಗೆ ಆಗಮಿಸಿ, ಸಂಜೆ ವೇಳೆಗೆ ಬಂಡೀಪುರ ಬಳಿಯ ಸೆರಾಯಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿತ್ತು. ಕಾರ್ಯಕ್ರಮ ನಡೆಸಿಕೊಡುವ ಬೆಯರ್‌ ಗ್ರಿಲ್ಸ್‌ ಮಾತ್ರ ಮಂಗಳವಾರ ಬೆಳಗ್ಗೆ ಹೆಲಿಕಾಪ್ಟರ್‌ ಮೂಲಕ ಗುಂಡ್ಲುಪೇಟೆಗೆ ಆಗಮಿಸಿದರು. ಮಂಗಳವಾರ ಬೆಳಗ್ಗೆಯಿಂದ ರಜನೀ ಮತ್ತು ಗ್ರಿಲ್ಸ್‌ರನ್ನು ಒಳಗೊಂಡ ತಂಡ ಬಂಡೀಪುರ ರಕ್ಷಿತಾರಣ್ಯದ ಮದ್ದೂರು ಅರಣ್ಯದ ವಲಯದ ಚಮ್ಮನಹಳ್ಳ ಪ್ರದೇಶಕ್ಕೆ ತೆರಳಿ ಚಿತ್ರೀಕರಣ ನಡೆಸಿದೆ.

ರಜನಿಗೆ ಗಾಯ?:

ಈ ನಡುವೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ರಜನೀಕಾಂತ್‌ ಮಂಗಳವಾರ ಸಂಜೆ ದಿಢೀರನೆ ಚೆನ್ನೈಗೆ ಮರಳಿದ್ದಾರೆ. ಬಂಡೀ​ಪು​ರ​ದಿಂದ ಕಾರಿ​ನಲ್ಲಿ ಮೈಸೂರು ವಿಮಾನ ನಿಲ್ದಾ​ಣಕ್ಕೆ ಆಗ​ಮಿ​ಸಿದ ರಜ​ನೀ​ಕಾಂತ್‌ ಅವರು, ಕೆಲ​ಕಾಲ ವಿಮಾನ ನಿಲ್ದಾ​ಣ​ದಲ್ಲಿ ವಿಶ್ರಾಂತಿ ಪಡೆ​ದರು. ಈ ವೇಳೆ ವಿಮಾನ ನಿಲ್ದಾ​ಣದ ಅಧಿ​ಕಾ​ರಿ​ಗಳು ಮತ್ತು ಸಿಬ್ಬಂದಿ​ ಫೋಟೋ ತೆಗೆ​ಸಿ​ಕೊಂಡರು. ಬಂಡೀ​ಪುರ ಚಿತ್ರೀ​ಕ​ರಣ ವೇಳೆ ಗಾಯ​ಗೊಂಡಿ​ದ್ದಿ​ರಂತಲ್ಲ ಎಂದು ಸಿಬ್ಬಂದಿ ಕೇಳಿದ ಪ್ರಶ್ನೆಗೆ, ನನ​ಗೇನೂ ಆಗಿಲ್ಲ. ಅದು ಕೇವಲ ವದಂತಿಯಷ್ಟೆ ಎಂದು ಸ್ಪಷ್ಪ​ಡಿ​ಸಿ​ದರು.

ಈ ನಡುವೆ ಚಿತ್ರತಂಡ ಮಾತ್ರ ರಜನಿಗೆ ಸಣ್ಣ ತರಚಿದ ಗಾಯವಾಗಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ ಅವರು ಚೆನ್ನೈಗೆ ತೆರಳಿದ್ದೇಕೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಚಿತ್ರೀಕರಣ ಇನ್ನೂ 2 ದಿನ ಬಾಕಿ ಉಳಿದಿರುವಾಗಲೇ ರಜನಿ ದಿಢೀರ್‌ ಮರಳಿರುವುದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ. ಸಾಕ್ಷ್ಯಚಿತ್ರದಲ್ಲಿ ರಜನಿ ಪಾತ್ರದ ಶೂಟಿಂಗ್‌ ಮುಗಿಯಿತೇ? ಗಾಯಗೊಂಡ ಕಾರಣಕ್ಕೆ ಅವರು ಚೆನ್ನೈಗೆ ಮರಳಿದ್ದಾರಾ? ಮರಳಿ ಬಂಡೀಪುರಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಅಕ್ಷಯ್‌ ಕುಮಾರ್‌ ಭಾಗಿ?:

ಈ ನಡುವೆ ಈ ಶೋನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡಾ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಅವರು ಬಂಡೀಪುರದಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಬುಧವಾರ ಅಥವಾ ಗುರುವಾರ ಅವರು ಆಗಮಿಸುವ ನಿರೀಕ್ಷೆ ಇದೆ.

ಅನುಮತಿ ಇದೆ:

ಚಿತ್ರತಂಡ ಶೂಟಿಂಗ್‌ಗಾಗಿ ಪೂರ್ವಾನುಮತಿ ಪಡೆದುಕೊಂಡಿತ್ತು ಎಂದು ಕರ್ನಾಟಕದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್‌ ಸ್ಪಷ್ಟಪಡಿಸಿದ್ದಾರೆ. ಅನುಮತಿ ಇಲ್ಲದೆಯೇ ಅವರು ಅರಣ್ಯ ಪ್ರವೇಶಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ನಿರ್ಬಂಧ:

ರಕ್ಷಿತಾರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆವ ಸ್ಥಳಕ್ಕೆ ನಿಗದಿಪಡಿಸಿದ ಅರಣ್ಯ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ಥಳೀಯ ಪೊಲೀಸರಿಗೂ ನಿರ್ಬಂಧ ಹೇರಲಾಗಿತ್ತು. ಜೊತೆಗೆ ಗುಂಡ್ಲುಪೇಟೆಯಿಂದ ಕೇರಳ ರಸ್ತೆಯ ಚಮ್ಮನಹಳ್ಳ ಕ್ರಾಸ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ರಸ್ತೆಯ ಬದಿ ನಿಂತು ವಾಹನಗಳು ನಿಲ್ಲದಂತೆ ನಿರ್ಬಂಧ ಹೇರಿದ್ದರು.

ವಿರೋಧ:

ಈ ನಡುವೆ ಬಂಡೀಪುರದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದಕ್ಕೆ ವಿರೋಧವೂ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪರಿಸರವಾದಿ ಜೋಸೆಫ್‌ ಹೂವರ್‌, ಬೇಸಿಗೆ ಸಮಯದಲ್ಲಿ ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಣ ನಡೆಸುತ್ತಿರುವುದು ಸರಿಯಲ್ಲ. ಬೇಸಿಗೆಯಲ್ಲಿ ಕಾಡಲ್ಲಿ ಚಿತ್ರೀಕರಣ ನಡೆಸುವ ಬದಲು ಮಳೆಗಾಲದಲ್ಲಿ ನಡೆಸಿದ್ದರೆ ನಮ್ಮದೇನು ತಕರಾರಿಲ್ಲ.ಕಾಡು ರಕ್ಷಣೆಗೆ ಸಿಬ್ಬಂದಿ ಕಷ್ಟಪಡುವ ಸಮಯದಲ್ಲಿ ಇದೆಲ್ಲ ಬೇಕಿತ್ತಾ ಎಂದು ಕಿಡಿಕಾರಿದ್ದಾರೆ.

‘ಡಿಸ್ಕವರಿ’ಯಲ್ಲಿ ಪ್ರಸಾರ:

ಕಳೆದ ವರ್ಷ ಆಗಸ್ಟ್‌ನಲ್ಲಿ ಗ್ರಿಲ್ಸ್‌ ಅವರ ಜತೆ ನರೇಂದ್ರ ಮೋದಿ ಅವರು ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮ ಭಾರಿ ಜನಪ್ರಿಯತೆ ಗಳಿಸಿತ್ತು.