ಬೆಂಗಳೂರು :  ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸದಾಶಿವನಗರ ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ನೋಟಿಸ್‌ ಸ್ವೀಕರಿಸಿರುವ ರಾಜೇಂದ್ರ ಸಿಂಗ್‌ ಬಾಬು ಅವರು, ‘ಕೆಲಸದ ನಿಮಿತ್ತ ನಾನು ನಗರದಿಂದ ಹೊರಗೆ ಹೋಗಿದ್ದೇನೆ. 

ಹೀಗಾಗಿ ಕಾಲಾವಕಾಶ ನೀಡಬೇಕು’ ಎಂದು ಕೋರಿದ್ದಾರೆ. ಈ ಮನವಿಯನ್ನು ಮಾನ್ಯ ಮಾಡಿರುವ ಪೊಲೀಸರು, ನಗರಕ್ಕೆ ಮರಳಿದ ಕೂಡಲೇ ಠಾಣೆಗೆ ಹಾಜರಾಗಿ ಪ್ರಕರಣದ ಕುರಿತು ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ.

ಆರ್‌ಎಂವಿ ಬಡಾವಣೆಯಲ್ಲಿ ಪ್ರಸನ್ನ ಎಂಬುವರ ಮನೆಯಲ್ಲಿ ರಾಜೇಂದ್ರ ಸಿಂಗ್‌ ಬಾಬು ಕುಟುಂಬ ಬಾಡಿಗೆಗೆ ನೆಲೆಸಿದೆ. ಇತ್ತೀಚೆಗೆ ಮನೆ ಮಾಲಿಕರ ಜತೆ ಬಾಡಿಗೆ ವಿಚಾರವಾಗಿ ವಿವಾದವಾಗಿದೆ. ಬಾಡಿಗೆ ಕೇಳಿದ್ದಕ್ಕೆ ತಮ್ಮ ಮೇಲೆ ರಾಜೇಂದ್ರ ಸಿಂಗ್‌ ಬಾಬು ಮತ್ತು ಅವರ ಪುತ್ರ ಆದಿತ್ಯ ದೌರ್ಜನ್ಯ ನಡೆಸಿದರು ಎಂದು ಆರೋಪಿಸಿ ಮೇ 5ರಂದು ಸದಾಶಿವ ನಗರ ಠಾಣೆಯಲ್ಲಿ ಪ್ರಸನ್ನ ದೂರು ನೀಡಿದ್ದರು. ಅದರನ್ವಯ ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರು, ರಾಜೇಂದ್ರ ಸಿಂಗ್‌ ಬಾಬು ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.