ಗಾಯಕ ಎಸ್‌ಬಿಪಿಗೆ ಪ್ಲಾಸ್ಮಾ ಚಿಕಿತ್ಸೆ| ಅವರು ಕ್ಲಿಷ್ಟಕರ ಹಂತ ದಾಟಿದ್ದಾರೆ: ರಜನೀಕಾಂತ್‌| ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ: ಸ್ಟಾಲಿನ್‌

ಚೆನ್ನೈ(ಆ.18): ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿ, ಗಂಭೀರ ಸ್ಥಿತಿಯಲ್ಲಿರುವ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿದೆ. ಆದಾಗ್ಯೂ ಅವರ ಆರೋಗ್ಯ ಸ್ಥಿತಿ ಕ್ಲಿಷ್ಟಕರವಾಗಿಯೇ ಇದೆ, ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಅವರು ಮುಂದುವರಿದಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ, ಚಿಕಿತ್ಸೆ ಬಳಿಕ ಎಸ್‌ಪಿಬಿ ದೇಹ ಸ್ಥಿತಿ ಬಿಗಡಾಯಿಸಿಲ್ಲದಿರುವುದು ಒಳ್ಳೆಯ ಬೆಳವಣಿಗೆ ಎಂದೂ ಹೇಳಿದ್ದಾರೆ.

ಈ ನಡುವೆ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಪುತ್ರ ಎಸ್‌.ಪಿ.ಬಿ. ಚರಣ್‌ ಅವರು ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಎಸ್‌ಪಿಬಿ ಅವರು ಕ್ಲಿಷ್ಟಕರ ಹಂತವನ್ನು ದಾಟಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ನನಗೆ ಸಂತೋಷವಾಗಿದೆ. ಬಾಲು ಸಾರ್‌ ಬೇಗ ಗುಣಮುಖರಾಗಿ ಎಂದು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಹಾರೈಸಿದ್ದಾರೆ. ಈ ಮಧ್ಯೆ, ಎಸ್‌ಪಿಬಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದು ಸಂತೋಷದ ವಿಚಾರ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ರೆಮ್‌ಡೆಸಿವರ್‌ ಔಷಧ:

ಎಸ್‌ಪಿಬಿ ಆರೋಗ್ಯದ ಬಗ್ಗೆ ಹೇಳಿಕೆ ನೀಡಿರುವ ಎಂಜಿಎಂ ಆಸ್ಪತ್ರೆಯ ಹಿರಿಯ ವೈದ್ಯ ಡಾ

ವಿ. ಸಭಾನಾಯಕಂ, ‘ಬಾಲಸುಬ್ರಹ್ಮಣ್ಯಂ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ. ರಕ್ತ ಹೆಪ್ಪುಗಟ್ಟದಂತಾಗಲು ರೆಮ್‌ಡೆಸಿವಿರ್‌ ಹಾಗೂ ಸ್ಟೆರಾಯ್ಡ್‌ ಔಷಧಗಳನ್ನೂ ಕೊಡಲಾಗಿದೆ. ವೆಂಟಿಲೇಟರ್‌ನಿಂದಾಗಿ ಅವರು ಸರಾಗವಾಗಿ ಉಸಿರಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ನಡುವೆ ಎಂಜಿಎಂ ಆಸ್ಪತ್ರೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಎಸ್‌ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ಆದರೆ ಹೊಸ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಇದು ಉತ್ತಮ ಲಕ್ಷಣ ಎಂದು ತಿಳಿಸಿದೆ.