ನವದೆಹಲಿ(ಆ.15): ಜೂನ್‌ನಲ್ಲಿ ಸಾವಿಗೀಡಾದ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಬ್ಯಾಂಕ್‌ ಖಾತೆಯಿಂದ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಖಾತೆಗೆ ಯಾವುದೇ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿಲ್ಲ ಎಂಬ ಮಾಹಿತಿ ಜಾರಿ ನಿರ್ದೇಶನಾಲಯ (ಇ.ಡಿ.)ದ ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ. ಆದರೆ ಸುಶಾಂತ್‌ ಖಾತೆಯಿಂದ 15 ಕೋಟಿ ರು. ಹೊರ ಹೋಗಿರುವುದು ನಿಜ ಎಂದು ಇಡಿ ಮೂಲಗಳು ತಿಳಿಸಿವೆ.

ಸುಶಾಂತ್‌ರ ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಖಾತೆಯಿಂದ 15 ಕೋಟಿ ರು. ವಿತ್‌ಡ್ರಾವಲ್‌ ಮಾಡಲಾಗಿದೆ. ಇದರ ಹಿಂದೆ ರಿಯಾ ಮತ್ತು ಆಕೆಯ ಸೋದರನ ಕೈವಾಡವಿದೆ ಎಂದು ಜು.25ರಂದು ಸುಶಾಂತ್‌ರ ತಂದೆ ದೂರಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಇ.ಡಿ. ತನಿಖೆ ಆರಂಭಿಸಿತ್ತು. ಈ ವೇಳೆ ಸುಶಾಂತ್‌ ಬ್ಯಾಂಕ್‌ ಖಾತೆಯಿಂದ ರಿಯಾ ಖಾತೆಗೆ ಭಾರೀ ಹಣ ವರ್ಗಾವಣೆಯಾಗಿರುವ ಯಾವುದೇ ಮಾಹಿತಿ ಕಂಡುಬಂದಿಲ್ಲ. ಆದರೆ ಸುಶಾಂತ್‌ರ ತಂದೆ ಆರೋಪಿಸಿದಂತೆ 15 ಕೋಟಿ ರು. ವೆಚ್ಚವಾಗಿರುವುದು ಖಚಿತಪಟ್ಟಿದೆ.

ಈ ಪೈಕಿ 2.7 ಕೋಟಿ ರು.ಗಳನ್ನು ಸುಶಾಂತ್‌ ಪರವಾಗಿ ತೆರಿಗೆ ಪಾವತಿಸಲು ಬಳಸಿಕೊಳ್ಳಲಾಗಿದೆ. ಉಳಿದ ಹಣವನ್ನು ಯಾರಾರ‍ಯರು, ಯಾವ್ಯಾವ ಕಾರಣಕ್ಕೆ ಬಳಸಿದ್ದಾರೆ ಎಂಬುದನ್ನು ಪತ್ತೆ ಮಾಡಲು ಇಡೀ ಬ್ಯಾಂಕಿಂಗ್‌ ವಹಿವಾಟಿನ ಪರಿಶೀಲನೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ ಸುಶಾಂತ್‌ರ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಯಾರಾರ‍ಯರು ಬಳಸುತ್ತಿದ್ದರು ಎಂಬುದರ ಮಾಹಿತಿ, ಅಲ್ಲದೆ ರಿಯಾ ಮತ್ತು ಆಕೆಯ ಸೋದರ ಶೋವಿಕ್‌ ಹೇಗೆ ಒಂದಾಗಿ ಸುಶಾಂತ್‌ ಜೊತೆಗೂಡಿ ಕಂಪನಿ ಆರಂಭಿಸಿದರು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.