ಬೆಂಗಳೂರು[ಫೆ.10]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳಾದ ರೇವತಿ ಇವರ ಮದುವೆ ನಿಶ್ಚಿತಾರ್ಥ ಸೋಮವಾರ ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಡೆಯಲಿದೆ.

ಎರಡೂ ಕುಟುಂಬದ ಸದಸ್ಯರು ಭೇಟಿಯ ಶಾಸ್ತ್ರ ಮುಗಿಸಿ ಮಾತುಕತೆ ನಡೆಸಿದ ತರುವಾಯ ನಿಶ್ಚಿತಾರ್ಥದ ದಿನಾಂಕ ನಿಗದಿಗೊಳಿಸಲಾಗಿದೆ. ಸೋಮವಾರ ಬೆಳಗ್ಗೆ ನಡೆಯುವ ಸಮಾರಂಭದಲ್ಲಿ ಚಿತ್ರರಂಗ, ರಾಜಕೀಯ ಸೇರಿದಂತೆ ಇತರೆ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ಅವರ ಮದುವೆ ನಡೆಸಲು ಎರಡೂ ಕುಟುಂಬದ ಹಿರಿಯರು ಮಾತುಕತೆ ನಡೆಸಿದ್ದು, ನಿಶ್ಚಿತಾರ್ಥ ಬಳಿಕ ಮದುವೆಯ ದಿನಾಂಕ ನಿಗದಿಗೊಳಿಸಲಿದ್ದಾರೆ.

ಮಗನ ಮದುವೆ ಪ್ಲಾನ್ ಬಗ್ಗೆ ಹೇಳಿದ್ರು ಶಾಸಕಿ ಅನಿತಾ ಕುಮಾರಸ್ವಾಮಿ

ಪುತ್ರನ ನಿಶ್ಚಿತಾರ್ಥ ಕುರಿತು ಭಾನುವಾರ ಜೆ.ಪಿ.ನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸೋಮವಾರ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿಯ ನಿಶ್ಚಿತಾರ್ಥ ನಡೆಯಲಿದೆ. ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿರುವರು. ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಕುಟುಂಬದ ಶುಭ ಸಮಾರಂಭ ಇದಾಗಿದ್ದು, ಪಕ್ಷದ ಶಾಸಕರು, ನಾಯಕರು, ಪ್ರಮುಖ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ಮಗನ ಮದುವೆ ಬಗ್ಗೆ ನನಗೊಂದು ಕನಸು, ಅಭಿಲಾಷೆ ಇದೆ. ನನ್ನ ಬೆಳೆಸಿದ ಜನರಿಗೆ ಪ್ರೀತಿ, ವಿಶ್ವಾಸ ವ್ಯಕ್ತಪಡಿಸಲು ಸಿಕ್ಕಿರುವ ಒಂದು ಅವಕಾಶ ಇದಾಗಿದೆ. ಮದುವೆ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಲಾಗುವುದು. ವಿಶೇಷವಾದ ರೀತಿಯಲ್ಲಿ ಮದುವೆ ಕಾರ್ಯಕ್ರಮ ಜರುಗಲಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ 4-5 ಸಾವಿರ ಅತಿಥಿಗಳು ಬರುವ ನಿರೀಕ್ಷೆ ಇದೆ. ಅದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ನಿಶ್ಚಿತಾರ್ಥ ಬಳಿಕ ಮದುವೆಯ ಸಿದ್ಧತೆ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ