ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

ಬೆಳಗಾವಿ (ಜು.13): ಉದ್ಯಮಿ, ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಶಿವರಂಜನ್ ಬೋಳಣ್ಣವರ್ ಮನೆ ಎದುರು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದ್ದು, ಅದೃಷ್ಟವಶಾತ್ ಮಿಸ್ ಫೈರ್ ಆಗಿ ಶಿವರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಬೈಲಹೊಂಗಲದ ಹಳೆಯ ಹನುಮಂತ ದೇವರ ದೇವಸ್ಥಾನ ಬಳಿ ಶಿವರಂಜನ್ ಅವರ ಮನೆ ಇದ್ದು, ಶಿವರಂಜನ್ ಸೋದರ ಸಂಬಂಧಿಯಿಂದಲೇ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ ಪಾಟೀಲ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ರಾತ್ರಿ ಏಳರಿಂದ ಎಂಟು ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಶಿವರಂಜನ್‌ ಅವರ ಮೇಲೆ ಶೂಟೌಟ್‌ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶಿವರಂಜನ್‌ ಅವರು ಈ ಹಿಂದೆ ನಟಿ ಶ್ರುತಿ ಅವರೊಂದಿಗೆ ಅಮೃತ ಸಿಂಧು, ಮತ್ತು ರಾಘವೇಂದ್ರ ರಾಜಕುಮಾರ್‌ ಅವರೊಂದಿಗೆ ಆಟ ಹುಡುಗಾಟ ಸೇರಿದಂತೆ ಸತ್ಯ ಸಂದೇಶ, ಬನ್ನಿ ಒಂದ್ಸಲ ನೋಡಿ, ಬಿಸಿರಕ್ತ, ಕನಸೆಂಬ ಕುದುರೆಯನೇರಿ , ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.