ಶಾರುಖ್, ಕತ್ರೀನಾ, ಫಡ್ನವೀಸ್‌ಗೆ ಕೋವಿಡ್ ದೃಢ: 4ನೇ ಅಲೆ ಭೀತಿ, ಗಣ್ಯರಿಗೆ ಸೋಂಕು!
* ದೇಶಾದ್ಯಂತ ಕೊರೋನಾ 4ನೇ ಅಲೆ ಲಕ್ಷಣಗಳು ಗೋಚರ
* ಶಾರುಖ್, ಕತ್ರೀನಾ, ಫಡ್ನವೀಸ್‌ಗೆ ಕೋವಿಡ್ ದೃಢ
* ಮುಂಬೈನಲ್ಲಿ ಕೊರೋನಾ ಮತ್ತೆ ತೀವ್ರ
ಮುಂಬೈ(ಜೂ.06): ದೇಶಾದ್ಯಂತ ಕೊರೋನಾ 4ನೇ ಅಲೆ ಲಕ್ಷಣಗಳು ಗೋಚರಿಸುತ್ತಿರುವ ನಡುವೆಯೇ, ಬಾಲಿವುಡ್ ನಟ ಶಾರುಖ್ ಖಾನ್, ಕತ್ರೀನಾ ಕೈಫ್ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಶಾರುಖ್ ಖಾನ್‌ಗೆ ಸೋಂಕು:
ಇತ್ತೀಚೆಗೆ ಶಾರುಖ್ ಹೊಸ ಚಿತ್ರ ಜವಾನ್‌ನಲ್ಲಿ ತಮ್ಮ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಶಾರುಖ್‌ಗೆ ಕೊರೋನಾ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಫಡ್ನವೀಸ್‌ಗೆ ವೈರಸ್:
ಮಹಾರಾಷ್ಟ್ರದ ವಿಪಕ್ಷ ನಾಯಕರಾಗಿರುವ ದೇವೇಂದ್ರ ಫಡ್ನವೀಸ್ ಕೂಡಾ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಮನೆಯಲ್ಲೇ ಐಸೋಲೇಶನ್‌ನಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಹಿಂದೆ 2020ರಲ್ಲಿ ಕೂಡಾ ಫಡ್ನವೀಸ್‌ಗೆ ಸೋಂಕು ದೃಢಪಟ್ಟಿತ್ತು. ಆಗ ಅವರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು.
ಕತ್ರೀನಾಗೆ ಕೋವಿಡ್:
ನಟಿ ಕತ್ರೀನಾ ಕೈಫ್‌ಗೆ ಕೂಡಾ ಕೊರೋನಾ ಸೋಂಕು ತಗುಲಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ವಿಜಯ ಸೇತುಪತಿ ಅವರೊಂದಿಗೆ ಹೊಸ ಚಿತ್ರ ‘ಮೆರ್ರಿ ಕ್ರಿಸ್ಮಸ್’ನ ಶೂಟಿಂಗ್ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಎನ್ನಲಾಗಿದೆ. ಈಗ ಕತ್ರೀನಾ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಬೈಯಲ್ಲಿ ಕೊರೋನಾ ಮತ್ತೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಅಲರ್ಚ್ ಘೋಷಿಸಿದೆ.