ನವದೆಹಲಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಟನೆ ಹಾಗೂ ನಿರ್ಮಾಣದ ‘ಭಾರತ್‌’ ಚಲನಚಿತ್ರ ಜೂ.5ರಂದು ತೆರೆ ಕಾಣಲಿದೆ. ಆದರೆ, ಈ ಚಿತ್ರದ ಹೆಸರಿನ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವೊಂದು ಸೋಮವಾರ ವಜಾಗೊಳಿಸಿದೆ.

 ‘ಭಾರತ್‌’ ಎಂಬುದು ದೇಶದ ಅಧಿಕೃತ ಹೆಸರು. ಅದರ ಹೆಸರಿನಲ್ಲಿ ವ್ಯಾಪಾರ, ವಹಿವಾಟು, ವೃತ್ತಿ ಮಾಡುವಂತಿಲ್ಲ. ಈ ಚಿತ್ರಕ್ಕೆ ದೇಶದ ಹೆಸರಿಟ್ಟಿರುವುದು ಕಾಯ್ದೆಗೆ ವಿರುದ್ಧವಾದುದು ಎಂದು ಅರ್ಜಿಯಲ್ಲಿ ವಾದಿಸಿದ್ದರು. ಈ ಕುರಿತು ನ್ಯಾ.ಜೆ.ಆರ್‌. ಮಿಧಾ ಮತ್ತು ನ್ಯಾ. ಚಂದೇರ್‌ ಶೇಖರ್‌ ಅವರುಗಳ ವಿಭಾಗೀಯ ಪೀಠ ವಿಚಾರಣೆ ನಡೆಸಿ, ದೂರು ಪೂರ್ವಾಗ್ರಹದಿಂದ ಕೂಡಿದೆ. ಚಿತ್ರವನ್ನು ವೀಕ್ಷಿಸದೇ ದೂರು ನೀಡಿರುವುದು ಪಕ್ವವಾದುದಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.

ಅಲಿ ಅಬ್ಬಾಸ್‌ ಜಫರ್‌ ನಿರ್ದೇಶನದ, ಸಲ್ಮಾನ್‌ಖಾನ್‌ ಫಿಲ್ಮಂಸ್‌, ರಿಯಲ್‌ ಲೈಫ್‌ ಪ್ರೋಡಕ್ಷನ್‌ ಪ್ರೈ, ಲಿಮಿಟೆಡ್‌ ಸಂಯುಕ್ತ ನಿರ್ಮಾಣದಲ್ಲಿ ‘ಭಾರತ್‌’ ಚಿತ್ರ ನಿರ್ಮಾಣವಾಗಿದ್ದು, ಪ್ರಮುಖ ಭೂಮಿಕೆಯಲ್ಲಿ ಸಲ್ಮಾನ್‌ಖಾನ್‌ ನಟಿಸಿದ್ದಾರೆ. ಇದು ಜೂ.5ರಂದು ರಂಜಾನ್‌ ದಿನ ತೆರೆಕಾಣಲಿದೆ. ವಿಕಾಸ್‌ ತ್ಯಾಗಿ ಎಂಬುವವರು ಈ ಕುರಿತು ದೂರು ಸಲ್ಲಿಸಿದ್ದರು.