'ಚಿಟ್ಟಿ ಆಯೀ ಹೇ.. ' ಎನ್ನುತ್ತಲೇ ದೇವರ ಕರೆಗೆ ಓಗೊಟ್ಟ ಪಂಕಜ್ ಉದಾಸ್ ಅವರ ಎವರ್‌ಗ್ರೀನ್ ಹಾಡುಗಳು!
ಖ್ಯಾತ ಗಾಯಕ ಪಂಕಜ್ ಉದಾಸ್ ವಿಧಿವಶರಾಗಿದ್ದಾರೆ. ಅವರು ತಮ್ಮ 72 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಪಂಕಜ್ ಅವರ ಪುತ್ರಿ ನಯಾಬ್ ಉದಾಸ್ ಅವರು ಪಂಕಜ್ ಉದಾಸ್ ಅವರ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದಿಗ್ಗಜ ಗಾಯಕನ ಹಾಡುಗಳನ್ನು ನೆನಪಿಸಿಕೊಂಡು ಪಂಕಜ್ ಉದಾಸ್ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಚಿಟ್ಟಿ ಆಯೀ ಹೇ...
1986ರಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ ನಾಮ್ ಚಿತ್ರದ ಗೀತೆ. ಸಂಜಯ್ ದತ್, ಅಮೃತಾ ಸಿಂಗ್ ನಟಿಸಿದ್ದ ನಾಮ್ ಚಿತ್ರದ ಈ ಹಾಡಿನಲ್ಲಿ ಸ್ವತಃ ಪಂಕಜ್ ಉದಾಸ್ ಕಾಣಿಸಿಕೊಂಡಿದ್ದರು. ದೇಶಭಕ್ತಿಯನ್ನು ಸ್ಪುರಿಸುವ ಗೀತೆ ಇದಾಗಿದೆ.
ನಾ ಕಜ್ರೆ ಕಿ ಧಾರ್..
1994ರಲ್ಲಿ ಬಿಡುಗಡೆಯಾದ ಮೋಹ್ರಾ ಸಿನಿಮಾದ ಪ್ರಖ್ಯಾತ ಹಾಡು. ನಾ ಕಜ್ರೆ ಕಿ ಧಾರ್.. ಎಂದು ಆರಂಭವಾಗುವ ಈ ಹಾಡಿನಲ್ಲಿ ಪಂಕಜ್ ಉದಾಸ್ ಅವರೊಂದಿಗೆ ಸಾಧನಾ ಸರ್ಗಮ್ ಹಾಡಿದ್ದರು.
ಚಾಂದಿ ಜೈಸಾ ರಂಗ್ ಹೇ ತೇರಾ..
ಚಾಂದಿ ಜೈಸಾ ರಂಗ್ ಹೇ ತೇರಾ.. ಸೋನೆ ಜೈಸೇ ಬಾಲ್ ಎನ್ನುವ ಗೀತೆ ಕೇಳಿದಾಗಲೆಲ್ಲಾ ಪಂಕಜ್ ಉದಾಸ್ ಅವರ ಸುಮಧುರ ಕಂಠ ನೆನಪಾಗದೇ ಇರದು. ಬೆಳ್ಳಿಯಂಥ ನಿನ್ನ ಬಣ್ಣ, ಬಂಗಾರದಂತೆ ನಿಲ್ಲ ಕೂದಲು ಎಂದು ಅರ್ಥ ನೀಡುವ ಈ ಹಾಡನ್ನು ಪಂಕಜ್ ಉದಾಸ್ ತಮ್ಮ ಸಂಗೀತ ಜರ್ನಿಯ ಆರಂಭದಲ್ಲಿ ಹಾಡಿದ್ದರು.1988ರ ಏಕ್ ಹೀ ಮಕ್ಸದ್ ಸಿನಿಮಾದ ಹಾಡಿದು.
ಮಾಹಿಯಾ ತೇರಿ ಕಸಮ್..
ಸನ್ನಿ ಡಿಯೋಲ್ ಅವರ ಸೂಪರ್ ಹಿಟ್ ಸಿನಿಮಾ ಘಾಯಲ್ ಚಿತ್ರದ ಹಾಡು. ಮಾಹಿಯಾ ತೇರಿ ಕಸಮ್.. ಎನ್ನುವ ರೋಮ್ಯಾಂಟಿಕ್ ಗೀತೆಯಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಪಂಕಜ್ ಉದಾಸ್ ಹಾಡಿದ್ದರು. ಈ ಹಾಡು ಸೂಪರ್ ಹಿಟ್ ಆಗಿತ್ತು.
ಮೈ ದೀವಾನಾ ಹೂ ಮುಝೆ ದಿಲ್ಲಗಿ ನೆ ಮಾರಾ
1994ರಲ್ಲಿ ಬಿಡುಗಡೆಯಾದ ಯೇ ದಿಲ್ಲಗಿ ಸಿನಿಮಾದ ' ಮೈ ದೀವಾನಾ ಹೂ ಮುಝೆ ದಿಲ್ಲಗಿ ನೆ ಮಾರಾ..' ಹಾಡು ಇಂದಿಗೂ ಭಗ್ನಪ್ರೇಮಿಗಳ ಫೇವರಿಟ್ ಆಗಿದೆ. ಅಕ್ಷಯ್ ಕುಮಾರ್, ಕಾಜೋಲ್ ಹಾಗೂ ಸೈಫ್ ಅಲಿಖಾನ್ ನಟಿಸಿದ್ದ ಈ ಸಿನಿಮಾದ ಈ ನಾಡಿನಲ್ಲಿ ಸ್ವತಃ ಪಂಕಜ್ ಉದಾಸ್ ನಟಿಸಿದ್ದರು.
ಆಹಿಸ್ತಾ..
ಸ್ಟೋಲನ್ ಮೊಮೆಂಟ್ಸ್ ಆಲ್ಬಮ್‌ನ ಪ್ರಖ್ಯಾತ ಗೀತೆ ಆಹಿಸ್ತಾ. ಮಂತ್ರಮುಗ್ಧಗೊಳಿಸುವ ಸಂಗೀತದ ಮಾಸ್ಟರ್‌ಪೀಸ್ ಎಂದರೂ ತಪ್ಪಾಗಲಾರದು.
ಜೀಯೇ ತೋ ಜೀಯೇ ಕೈಸೇ
ಬಾಲಿವುಡ್‌ನ ಸೂಪರ್ ಡೂಪರ್ ಹಿಟ್ ಸಿನಿಮಾ ಸಾಜನ್ ಚಿತ್ರದ 'ಜೀಯೇ ತೋ ಜೀಯೇ ಕೈಸೇ..' ಹಾಡಿಲ್ಲದೆ ಪಂಕಜ್ ಉದಾಸ್ ಅವರ ಟಾಪ್-10 ಗೀತೆಯ ಲಿಸ್ಟ್ ಕಂಪ್ಲೀಟ್ ಮಾಡಲು ಸಾಧ್ಯವೇ ಇಲ್ಲ.
ಜಿಂದಗಿ ಕೋ ಗುಝಾರ್ನೆ ಕೆ ಲಿಯೇ
1997ರಲ್ಲಿ ಬಿಡುಗಡೆಯಾದ ಜೀವನ್ ಯುದ್ಧ್ ಸಿನಿಮಾದಲ್ಲಿ ಹಾಡಿರುವ 'ಜಿಂದಗಿ ಕೋ ಗುಝಾರ್ನೆ ಕೆ ಲಿಯೇ..' ಕೂಡ ಫೇವರಿಟ್. ಪಂಕಜ್ ಉದಾಸ್ ಅವರೊಂದಿಗೆ ಅಲ್ಕಾ ಯಾಗ್ನಿಕ್ ಹಾಡಿದ್ದರು.