ಗುಂಡ್ಲುಪೇಟೆ[ಜ.30]: ಇಲ್ಲಿನ ಬಂಡೀಪುರ ಅರಣ್ಯದಲ್ಲಿ ಮ್ಯಾನ್‌ ವರ್ಸಸ್‌ ವೈಲ್ಡ್‌ ಸಾಕ್ಷ್ಯಚಿತ್ರದಲ್ಲಿ ರಜನಿಕಾಂತ್‌ ಶೂಟಿಂಗ್‌ ಮುಗಿಸಿ ಮಂಗಳವಾರ ವಾಪಸ್ಸಾದ ಬೆನ್ನಲ್ಲೆ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ನಟಿಸಲು ಬಂಡೀಪುರ ರಕ್ಷಿತಾರಣ್ಯದಂಚಿನಲ್ಲಿರುವ ಸೆರಾಯಿ ರೆಸಾರ್ಟ್‌ ಬುಧವಾರ ಮಧ್ಯಾಹ್ನ ಬಂದಿದ್ದಾರೆ.

ವನ್ಯಜೀವಿ ಸಾಹಸಿ ಬೆಯರ್‌ ಗ್ರಿಲ್ಸ್‌ ಈಗಾಗಲೇ ಬುಧವಾರ ಹೆಲಿಕ್ಯಾಪ್ಟರ್‌ ಮೂಲಕ ಗುಂಡ್ಲುಪೇಟೆಗೆ ಆಗಮಿಸಿ ಮದ್ದೂರು ಅರಣ್ಯದ ಚಮ್ಮನಹಳ್ಳದಲ್ಲಿ ರಜನಿಕಾಂತ್‌ ಜೊತೆಯಾಗಿ ಶೂಟಿಂಗ್‌ ನಡೆಸಿದ್ದಾರೆ. ಈಗ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಮೈಸೂರಿನಿಂದ ಕಾರಲ್ಲಿ ಆಗಮಿಸಿ ಬಂಡೀಪುರ ಮಾರ್ಗ ಸೆರಾಯಿ ರೆಸಾರ್ಟ್‌ಗೆ ಆಗಮಿಸಿದ್ದಾರೆ. ಸಂಜೆ ಸಾಹಸಿಗ ಬಿಯರ್‌ ಗ್ರಿಲ್ಸ್‌ ಅಕ್ಷಯ್‌ಕುಮಾರ್‌ ಜೊತೆಗೂಡಿದ್ದಾರೆ.

ಬಂಡೀಪುರ ರಕ್ಷಿತಾರಣ್ಯದ ಮದ್ದೂರು ವಲಯದ ಚಮ್ಮನಹಳ್ಳದ ಬಳಿ ರಜನಿಕಾಂತ್‌ ಶೂಟಿಂಗ್‌ ಮುಗಿಸಿದ್ದಾರೆ. ಗುರುವಾರ ಎಲ್ಲೂ ಶೂಟಿಂಗ್‌ ನಡೆದಿಲ್ಲ. ಗುರುವಾರದ ಶೂಟಿಂಗ್‌ಗಾಗಿ ಸ್ಧಳ ಹುಡುಕಾಟ ನಡೆದಿದೆ. ಬುಧವಾರ ಬೆಳಗ್ಗೆ ಸಾಹಸಿಗ ಬೆಯರ್‌ ಗ್ರಿಲ್ಸ್‌ ಸಫಾರಿ ವಾಹನದಲ್ಲಿ ಗುರುವಾರ ಶೂಟಿಂಗ್‌ ಸೂಕ್ತ ಸ್ಥಳ ಎಂದು ಹೇಳಲಾದ ಮೂಲೆಹೊಳೆ ಬಳಿಯ ರಾಂಪುರ ಆನೆ ಶಿಬಿರದಲ್ಲಿ ಶೂಟಿಂಗ್‌ ನಡೆಸಲಾಗುತ್ತದೆ ಎನ್ನಲಾಗಿದೆ.

ಇಂದು ಶೂಟಿಂಗ್‌:

ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಗುರುವಾರ ಬೆಳಗ್ಗೆ ಕಾಡಿನ ಮೂಲಕವೇ ಮೂಲೆಹೊಳೆ ಬಳಿಯ ರಾಂಪುರ ಆನೆ ಶಿಬಿರದ ಬಳಿ ನಿಗದಿಯಾದ ಸ್ಥಳದಲ್ಲಿ ಶೂಟಿಂಗ್‌ ನಡೆಸಲಿದ್ದಾರೆ. ಮೂರು ದಿನಗಳ ಕಾಲ ಶೂಟಿಂಗ್‌ಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಲಾಗಿದೆ. ಗುರುವಾರ ಮಧ್ಯಾಹ್ನದ ಮಾತ್ರ ಶೂಟಿಂಗ್‌ ಕಾಲಾವಕಾಶ ಇರುವ ಕಾರಣ ಇಂದು ಶೂಟಿಂಗ್‌ ಕೊನೆಗೊಳ್ಳಲಿದೆ.