ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ. ಹನ್ನೊಂದು ಮಂದಿಯನ್ನು ಗುರುತಿಸಲಾಗಿದ್ದು, ೪೮ ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಐಪಿ ವಿಳಾಸ ಪತ್ತೆಗೆ ಇನ್‌ಸ್ಟಾಗ್ರಾಮ್‌ಗೆ ಪೊಲೀಸರು ಪತ್ರ ಬರೆದಿದ್ದಾರೆ.
ಬೆಂಗಳೂರು: ನಟಿ ರಮ್ಯಾಗೆ ಅಶ್ಲೀಲ ಹಾಗೂ ಅವಾಚ್ಯ ಮೆಸೇಜ್‌ಗಳನ್ನು ಕಳಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದೀಗ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಬಂಧನವಾಗಿದ್ದು, ಹನ್ನೊಂದು ಮಂದಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಬಂಧಿತ ಆರೋಪಿಗಳನ್ನು ಓಬಣ್ಣ ಮತ್ತು ಗಂಗಾಧರ್ ಎಂದು ಗುರುತಿಸಲಾಗಿದೆ. ಇವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಮ್ಯಾ ಈಗಾಗಲೇ 43 ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದು, ಮತ್ತೂ 5 ಐಡಿಗಳ ಮಾಹಿತಿ ಕೂಡಾ ನೀಡಿದ್ದಾರೆ. ಇನ್ನು ಐಡಿಗಳನ್ನು ನಿರ್ವಹಿಸುತ್ತಿರುವ 48 ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಈ ಮೂಲಕ ಅಶ್ಲೀಲ ಕಮೆಂಟ್ ಹಾಕೋರಿಗೆ ಕಾದಿದೆ ಮಾರಿಹಬ್ಬ. ಏನು ಮಾಡ್ಕೊಳೋಕೆ ಆಗಲ್ಲ ಅಂತಾ ಮೆರಿತಿದ್ದವರಿಗೆ ರಮ್ಯಾ ಸರಿಯಾದ ಬುದ್ದಿ ಕಲಿಸ್ತಿದ್ದಾರೆ.
ರಮ್ಯಾ ಅವರಿಗೆ ಕೆಟ್ಟ ರೀತಿಯಲ್ಲಿ ಮೆಸೇಜ್ ಹಾಕಿದವರ ಮಟ್ಟ ಹಾಕಲು ಮುಂದಾಗಿರುವ ಪೊಲೀಸರು ಇನ್‌ಸ್ಟಾಗ್ರಾಂಗೆ ಪತ್ರ ಬರೆದಿದ್ದು, ಎಲ್ಲಾ IP ಅಡ್ರೆಸ್‌ಗಳ ವಿವರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪತ್ರವನ್ನು ಮೂರು ದಿನಗಳ ಹಿಂದೆ ಕಳುಹಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಪ್ರತಿಕ್ರಿಯೆ ಬರುವ ಸಾಧ್ಯತೆ ಇದೆ.
ಅಶ್ಲೀಲ ಚಿಹ್ನೆಗಳನ್ನು ಬಳಸಿರುವ, ಕೀಳು ಮಟ್ಟದ ಶಬ್ದಗಳನ್ನು ಬರೆದಿರುವ ಐಡಿಗಳ ಬಗ್ಗೆ ವಿಶೇಷವಾಗಿ ನಿಗಾ ಇಡಲಾಗಿದೆ. ಕೆಲವು ಐಡಿಗಳನ್ನು ಅಡ್ಮಿನ್‌ಗಳು ಈಗಾಗಲೇ ಡಿಲೀಟ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆದರೂ ಕೂಡ, ಐಡಿ ಕ್ರಿಯೇಷನ್ ಸಮಯದಲ್ಲಿ ಬಳಸಲಾದ IP ಅಡ್ರೆಸ್ ಮೂಲಕ ಅವರ ಸ್ಥಳ ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಸದ್ಯದಲ್ಲೇ IP ಅಡ್ರೆಸ್‌ಗಳ ಮಾಹಿತಿಯು ಸೈಬರ್ ಕ್ರೈಂ ಅಧಿಕಾರಿಗಳ ಕೈಗೆ ಸಿಗುವ ನಿರೀಕ್ಷೆಯಿದೆ. ಅದರಿಂದ ಮತ್ತಷ್ಟು ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ಸಾಧ್ಯತೆಯಿದೆ.
