ಮೈಸೂರು(ಅ.17): ಹುಣಸೂರು ಉಪಚುನಾವಣೆಗೆ ಬಿಜೆಪಿಯಿಂದ ಬೆಂಗಳೂರಿನವರೊಬ್ಬರು ಅಭ್ಯರ್ಥಿಯಾಗುತ್ತಾರೆ. ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಅಥವಾ ಅವರ ಕುಟುಂಬದವರಿಗೆ ಟಿಕೆಟ್‌ ಸಿಗುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಬಾಂಬ್‌ ಸಿಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವನಾಥ್‌ ಅಥವಾ ಕುಟುಂಬದವರು ಸ್ಪರ್ಧಿಸಿದರೆ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂಬ ಕಾರಣಕ್ಕೆ ಟಿಕೆಟ್‌ ನೀಡುವುದಿಲ್ಲ. ಹಾಗಾಗಿ ನೇರವಾಗಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ನಂತರ ಮಂತ್ರಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವ ಸಲುವಾಗಿ ಟಿಕೆಟ್‌ ನೀಡುತ್ತಿಲ್ಲ. ಹೊರಗಿನವರನ್ನು ತಂದು ನಿಲ್ಲಿಸಲು ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಅವರು ಯಾರು ಎಂಬುದು ಜನರಿಗೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ

ನಾನು ಮಾಲೀಕನಲ್ಲ, ಸೇವಕ:

ಹುಣಸೂರು ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ಮಾಡಿ, ಅದಕ್ಕೆ ಕೆ.ಆರ್‌. ನಗರ ಸೇರಿಸಲು ಜನ ಒಪ್ಪಿದರೆ ಮಾಡಲಿ. ನಾನು ಕೆ.ಆರ್‌. ನಗರದ ಮಾಲೀಕನಲ್ಲ, ಸೇವಕ. ವಿಶ್ವನಾಥ್‌ ತಾನು ಎಲ್ಲೆಲ್ಲಿ ಇರುತ್ತಾರೋ ಅಲ್ಲೆಲ್ಲಾ ದ್ರೋಹ ಬಗೆದು ಬಂದಿದ್ದಾರೆ. ಎಸ್‌.ಎಂ. ಕೃಷ್ಣ ಜತೆಗಿದ್ದು ಅವರ ಬಗ್ಗೆ ಪುಸ್ತಕ ಬರೆದರು. ಸಿದ್ದರಾಮಯ್ಯ ಜತೆಗಿದ್ದುಕೊಂಡೇ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

ಚಾಮುಂಡಿ ಚಾಲೆಂಜ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಅನರ್ಹ ಶಾಸಕ ವಿಶ್ವನಾಥ್!

ಈಗ ಜೆಡಿಎಸ್‌ಗೆ ಬಂದು ದ್ರೋಹ ಮಾಡಿ ಹೋಗಿದ್ದಾರೆ. ನಾನು ಕರೆದುಕೊಂಡು ಬಂದ ತಪ್ಪಿಗೆ ಅನುಭವಿಸುತ್ತಿದ್ದೇನೆ. 2009ರಲ್ಲಿ ಮಂಚನಹಳ್ಳಿ ಮಹದೇವುಗೆ ಸಿಗಬೇಕಾಗಿದ್ದ ಲೋಕಸಭಾ ಟಿಕೆಟ್‌ ಅನ್ನು ಕಸಿದುಕೊಂಡರು ಎಂದು ಟೀಕಿಸಿದರು.

ಇದೇ ವೇಳೆ ಪತ್ರಕರ್ತರು ಆ ಹೊಸ ಅಭ್ಯರ್ಥಿ ಸಿ.ಪಿ. ಯೋಗೀಶ್ವರ್‌ ಅವರಾ ಎಂಬ ಪ್ರಶ್ನೆಗೆ, ಎಲ್ಲವೂ ನಿಮಗೆ ಗೊತ್ತಿದೆಯಲ್ಲಾ? ಅದಕ್ಕೂ ಡೀಲ್‌ ಆಗಿರಬಹುದು. ಸದ್ಯದಲ್ಲಿಯೇ ಹೊರಗೆ ಬರುತ್ತದೆ ನೋಡ್ತಿರಿ ಎಂದಷ್ಟೇ ಹೇಳಿದ್ದಾರೆ.

ಚಾಮುಂಡಿ ಸನ್ನಿಧಿಯಲ್ಲಿ ವಿಶ್ವನಾಥ್‌ಗೆ ಎರಡು ಸವಾಲೆಸೆದ ಸಾರಾ ಮಹೇಶ್

ಜೆಡಿಎಸ್‌ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಾಜಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ಸುಭಾಷ್‌, ರವಿಚಂದ್ರೇಗೌಡ, ಪ್ರಕಾಶ್‌ ಪ್ರಿಯದರ್ಶನ್‌ ಇದ್ದರು.