ಪಿಎಂ ಕಿಸಾನ್ ಯೋಜನೆಯಡಿ ಒಂದೇ ಮನೆಯಲ್ಲಿರುವ ತಂದೆ ಮತ್ತು ಮಗ ಇಬ್ಬರಿಗೂ ಹಣ ಸಿಗುವುದಿಲ್ಲ. ಆದರೆ, ವಯಸ್ಕ ಮಗ ಪ್ರತ್ಯೇಕ ಪಡಿತರ ಚೀಟಿ ಮತ್ತು ಕೃಷಿ ಭೂಮಿ ಹೊಂದಿದ್ದರೆ ಮಾತ್ರ ಈ ಸೌಲಭ್ಯ ಪಡೆಯಬಹುದು. ನಿಯಮ ಮೀರಿ ಹಣ ಪಡೆದರೆ ದಂಡ ಕಟ್ಟಬೇಕಾಗುತ್ತದೆ.
ಭಾರತ ಸರ್ಕಾರವು ದೇಶದ ರೈತರ ಆರ್ಥಿಕ ಭದ್ರತೆಗಾಗಿ ಮತ್ತು ಕೃಷಿ ವೆಚ್ಚಗಳನ್ನು ಭರಿಸಲು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷ ಒಟ್ಟು 6,000 ರೂಪಾಯಿಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈ ಹಣವನ್ನು ತಲಾ 2,000 ರೂಪಾಯಿಗಳಂತೆ ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಲಾಗುತ್ತದೆ. ಹಾಗಾದರೆ ಈ ಯೋಜನೆಯನ್ನು ಅಪ್ಪ-ಮಕ್ಕಳು ಇಬ್ಬರಿಗೂ ಲಭ್ಯವೇ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
3ನೇ ಕಂತಿನ ನೀರಿಕ್ಷೆಯಲ್ಲಿ ರೈತ!
ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ರೈತರು ಈಗಾಗಲೇ ಎರಡು ಕಂತುಗಳ ಯೋಜನೆಯ ಹಣವನ್ನು ಪಡೆದುಕೊಂಡಿದ್ದು, ಇದೀಗ ಮೂರನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ದೇಶಾದ್ಯಂತ ಲಕ್ಷಾಂತರ ರೈತರು ಈ ಕಂತಿನ ಹಣಕ್ಕಾಗಿ ಕಾಯುತ್ತಿರುವ ಈ ಸಮಯದಲ್ಲಿ, ಅನೇಕ ರೈತ ಕುಟುಂಬಗಳಲ್ಲಿ ಒಂದು ಪ್ರಮುಖ ಗೊಂದಲ ಹಾಗೂ ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ—ಒಂದೇ ಮನೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಕೃಷಿ ಮಾಡುತ್ತಿದ್ದರೆ, ಇಬ್ಬರಿಗೂ ತಲಾ 2,000 ರೂಪಾಯಿಗಳ ಪ್ರತ್ಯೇಕ ಕಂತು ಸಿಗುತ್ತದೆಯೇ? ತಂದೆ ಮತ್ತು ಮಗ ಇಬ್ಬರೂ ಈ ಯೋಜನೆಯ ಫಲಾನುಭವಿಗಳಾಗಬಹುದೇ? ಈ ಕುರಿತು ಕೇಂದ್ರ ಸರ್ಕಾರದ ನಿಯಮಗಳು ಏನು ಹೇಳುತ್ತವೆ ಎಂಬುದರ ವಿವರವಾದ ಮಾಹಿತಿ ಇಲ್ಲಿದೆ.
ತಂದೆ ಮತ್ತು ಮಗ ಇಬ್ಬರಿಗೂ ಹಣ ಸಿಗುತ್ತದೆಯೇ? ನಿಯಮಗಳೇನು?
ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ನಿಯಮಾವಳಿಗಳ ಪ್ರಕಾರ, ತಂದೆ ಮತ್ತು ಮಗ ಒಂದೇ ‘ರೈತ ಕುಟುಂಬ’ಕ್ಕೆ ಸೇರಿದವರಾಗಿದ್ದರೆ, ಅವರಿಬ್ಬರಿಗೂ ಪ್ರತ್ಯೇಕವಾಗಿ ಕಂತಿನ ಹಣ ಸಿಗುವುದಿಲ್ಲ. ಈ ಯೋಜನೆಯಡಿ ಸರ್ಕಾರವು ವ್ಯಕ್ತಿಯನ್ನಲ್ಲ, ಬದಲಾಗಿ ‘ಕುಟುಂಬ’ವನ್ನು ಒಂದೇ ಘಟಕವನ್ನಾಗಿ ಪರಿಗಣಿಸುತ್ತದೆ. ಯೋಜನೆಯ ವ್ಯಾಖ್ಯಾನದಂತೆ, ತಂದೆ, ತಾಯಿ ಮತ್ತು ಅವರ ಅಪ್ರಾಪ್ತ (18 ವರ್ಷಕ್ಕಿಂತ ಕಡಿಮೆ ವಯಸ್ಸಿನ) ಮಕ್ಕಳು ಒಂದೇ ಕುಟುಂಬದ ವ್ಯಾಪ್ತಿಗೆ ಬರುತ್ತಾರೆ. ಭೂ ದಾಖಲೆಗಳು ಯಾರ ಹೆಸರಲ್ಲೇ ಇದ್ದರೂ, ಆ ಕುಟುಂಬವು ಯೋಜನೆಯ ಅರ್ಹತೆ ಹೊಂದಿದ್ದರೆ ವಾರ್ಷಿಕವಾಗಿ ಒಟ್ಟು 6,000 ರೂಪಾಯಿಗಳನ್ನು ಮಾತ್ರ ಪಡೆಯಲು ಸಾಧ್ಯ. ಅಂದರೆ, ಮೂರು ಕಂತುಗಳಲ್ಲಿ ತಲಾ 2,000 ರೂ.ಗಳಂತೆ ಹಣ ಖಾತೆಗೆ ಬರಲಿದೆ. ಒಂದೇ ಪಡಿತರ ಚೀಟಿಯಲ್ಲಿ (Ration Card) ಹೆಸರಿದ್ದು, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ ತಂದೆಗೆ ಮಾತ್ರ ಈ ಯೋಜನೆಯ ಸೌಲಭ್ಯ ಸಿಗುತ್ತದೆ ಹೊರತು ಮಗನಿಗೆ ಸಿಗುವುದಿಲ್ಲ.
ವಯಸ್ಕ ಮಗನಿದ್ದಾಗ ನಿಯಮಗಳು ಹೇಗೆ ಬದಲಾಗುತ್ತವೆ?
ಇಲ್ಲಿ ರೈತರು ಪ್ರಮುಖವಾದ ಒಂದು ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಪಿಎಂ ಕಿಸಾನ್ ಯೋಜನೆಯ ‘ಕುಟುಂಬ’ ಎಂಬ ವ್ಯಾಖ್ಯಾನದಲ್ಲಿ ಅಪ್ರಾಪ್ತ ಮಕ್ಕಳು ಮಾತ್ರ ಸೇರಿರುತ್ತಾರೆ. ಆದ್ದರಿಂದ, ವಯಸ್ಕ (18 ವರ್ಷ ಮೇಲ್ಪಟ್ಟ) ಮಗನ ವಿಷಯದಲ್ಲಿ ನಿಯಮಗಳು ಕೊಂಚ ಭಿನ್ನವಾಗಿರುತ್ತವೆ.
1. ಪ್ರತ್ಯೇಕ ಭೂ ದಾಖಲೆ ಕಡ್ಡಾಯ; ಮಗ ಕೇವಲ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ ಅಥವಾ ವಯಸ್ಕನಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಅವನಿಗೆ ಯೋಜನೆಯ ಹಣ ಸಿಗುವುದಿಲ್ಲ.
2. ಖಾತೆ ಮತ್ತು ಪಡಿತರ ಚೀಟಿ ಪ್ರತ್ಯೇಕವಿರಬೇಕು: ಮಗನಿಗೆ ಪ್ರತ್ಯೇಕ ಪಡಿತರ ಚೀಟಿ ಇರಬೇಕು ಹಾಗೂ ಕಂದಾಯ ದಾಖಲೆಗಳಲ್ಲಿ (ಖಾತೆ/ಖತೌನಿ/RTC) ಆತನ ಹೆಸರಿನಲ್ಲಿ ಕೃಷಿ ಭೂಮಿ ಅಧಿಕೃತವಾಗಿ ನೋಂದಣಿಯಾಗಿರಬೇಕು.
3. ಸ್ವತಂತ್ರ ರೈತ ಕುಟುಂಬ: ಮಗನು ಪ್ರತ್ಯೇಕವಾಗಿ ಕೃಷಿ ಭೂಮಿಯ ಮಾಲೀಕತ್ವ ಹೊಂದಿದ್ದು, ಸ್ವತಂತ್ರ ರೈತ ಕುಟುಂಬವಾಗಿ ಗುರುತಿಸಿಕೊಂಡರೆ ಮಾತ್ರ ಆತನ ಅರ್ಹತೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ.
ಸರಳವಾಗಿ ಹೇಳುವುದಾದರೆ, ಕಂದಾಯ ದಾಖಲೆಗಳಲ್ಲಿ ತಂದೆಯ ಹೆಸರಿನಲ್ಲಿ ಪ್ರತ್ಯೇಕ ಭೂಮಿ ಹಾಗೂ ಮಗನ ಹೆಸರಿನಲ್ಲಿ ಪ್ರತ್ಯೇಕ ಭೂಮಿ ಇದ್ದು, ಇಬ್ಬರ ಪಡಿತರ ಚೀಟಿಗಳೂ ಪ್ರತ್ಯೇಕವಾಗಿದ್ದರೆ ಮಾತ್ರ ತಂದೆ ಮತ್ತು ಮಗ ಇಬ್ಬರೂ ಪಿಎಂ ಕಿಸಾನ್ ಯೋಜನೆಯಡಿ ತಲಾ 2,000 ರೂಪಾಯಿಗಳ ಕಂತನ್ನು ಪಡೆಯಲು ಅರ್ಹರಾಗುತ್ತಾರೆ.
ತಪ್ಪಾಗಿ ಹಣ ಪಡೆದರೆ ದಂಡ ಅಥವಾ ನೋಟಿಸ್ ಎಚ್ಚರಿಕೆ!
ಒಂದೇ ಕುಟುಂಬದಲ್ಲಿದ್ದು, ನಿಯಮಗಳನ್ನು ಮೀರಿ ತಂದೆ ಮತ್ತು ಮಗ ಇಬ್ಬರೂ ಪಿಎಂ ಕಿಸಾನ್ ಸೌಲಭ್ಯ ಪಡೆಯುತ್ತಿದ್ದರೆ, ಅಂತಹವರನ್ನು ಸರ್ಕಾರ ಅನರ್ಹರು ಎಂದು ಪರಿಗಣಿಸುತ್ತದೆ. ಇ-ಕೆವೈಸಿ (e-KYC), ಆಧಾರ್ ಜೋಡಣೆ ಮತ್ತು ಭೂ ದಾಖಲೆಗಳ ಪರಿಶೀಲನೆ (Land Seeding) ಪ್ರಕ್ರಿಯೆಯ ಮೂಲಕ ಸರ್ಕಾರ ಇಂತಹ ಪ್ರಕರಣಗಳನ್ನು ಪತ್ತೆಹಚ್ಚುತ್ತಿದೆ. ನಿಯಮಬಾಹಿರವಾಗಿ ಹಣ ಪಡೆದಿರುವುದು ಕಂಡುಬಂದರೆ, ಈವರೆಗೆ ಪಡೆದ ಸಂಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ ಆದ್ದರಿಂದ, ರೈತರು ಯಾವುದೇ ಗೊಂದಲಕ್ಕೆ ಒಳಗಾಗದೆ, ತಮ್ಮ ಭೂ ದಾಖಲೆಗಳು ಮತ್ತು ಪಡಿತರ ಚೀಟಿಯ ಸ್ಥಿತಿಯನ್ನು ಪರಿಶೀಲಿಸಿಕೊಂಡು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವುದು ಸೂಕ್ತ.
