Murderbaad movie review ಜೈಪುರ ಪ್ರವಾಸದ ವೇಳೆ ಯುವತಿಯೊಬ್ಬಳು ಕಾಣೆಯಾಗುತ್ತಾಳೆ. ಬಸ್ ಚಾಲಕ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರೂ, ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಈ ಕೊಲೆಯ ಹಿಂದೆ ಟೂರ್ ಗೈಡ್‌ನ ಬೆಚ್ಚಿಬೀಳಿಸುವ ಮಾನಸಿಕ ಕಾಯಿಲೆಯ ಕರಾಳ ಸತ್ಯವೊಂದು ಅಡಗಿದೆ. ಮನುಷ್ಯನ ಕರಾಳ ಮುಖದ ಅನಾವರಣ.

ಮರ್ಡರ್‌ಬಾದ್ (ಕೊಲೆಯ ನಂತರ)

OTT:ಜಿಯೋ ಹಾಟ್ ಸ್ಟಾರ್

ಅಶೋಕ್ ಗುಪ್ತಾ ಜೈಪುರದಲ್ಲಿ ಒಂದು ಟ್ರಾವೆಲ್ ಏಜೆನ್ಸಿ ನಡೆಸುತ್ತಿರುತ್ತಾನೆ. ಅವನ ಏಜನ್ಸಿಯಲ್ಲಿ ಮಸೂದ್ ಎಂಬ ಮ್ಯಾನೇಜರ್ ಇರುತ್ತಾನೆ. ಅನಿವಾರ್ಯ ಪ್ರಸಂಗಗಳಲ್ಲಿ ಇವನು ಬಸ್ ಚಾಲಕನೂ ಆಗುತ್ತಾನೆ. ಇವರಿಗೆ ಟೂರ್ ಗೈಡ್ ಬೇಕಾಗಿರುತ್ತದೆ. ಮಸೂದ್ ತನಗೆ ಹೊಸದಾಗಿ ಪರಿಚಿತನಾಗಿದ್ದ ಜಯೇಶ್‌ನನ್ನು ಅಶೊಕ್ ಗುಪ್ತಾಗೆ ಪರಿಚಯಿಸಿ, ಗೈಡ್ ಕೆಲಸ ಕೊಡಿಸುತ್ತಾನೆ. ಜಯೇಶ್ 26/28 ರ ಆಕರ್ಷಕ ಯುವಕ. ಮಾತಾಡುವುದರಲ್ಲಿ ಚಾಲಾಕಿ. ಗೈಡ್ ಕೆಲಸ ಉತ್ಸಾಹದಿಂದ ಶುರು ಮಾಡುತ್ತಾನೆ.

ಒಂದು ಹೊಸ ಟೀಂ ಜೈಪುರ್ ನೋಡಲು ಬರುತ್ತದೆ. ಅವರು ಅಶೋಕ್ ಗುಪ್ತಾನ ಟೂರಿಸ್ಟ್ ಗಾಡಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ ಡ್ರೈವರ್ಸ್ ಸ್ಟ್ರೈಕ್ ನಡೆಯುತ್ತಿದ್ದುದರಿಂದ ಮಸೂದನೇ ಬಸ್‌ಗೆ ಚಾಲಕನಾಗುತ್ತಾನೆ. ಜಯೇಶ್ ಟೂರ್ ಗೈಡಾಗುತ್ತಾನೆ. ಆ ಟೀಮಿನಲ್ಲಿ ಇಸಬೆಲ್ಲಾ ಎಂಬ ಅನಿವಾಸಿ ಭಾರತೀಯಳೂ ಇರುತ್ತಾಳೆ. ಅವಳ ತಾಯಿ ಭಾರತೀಯಳು. ಈಗ ಅವರ ಪರಿವಾರವೆಲ್ಲ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಸಬೆಲ್ಲಾ ಭಾರತದ ಪ್ರವಾಸಕ್ಕೆ ಬಂದು ರಾಜಾಸ್ಥಾನಕ್ಕೆ ಬಂದಿದ್ದಾಳೆ. 23/24 ರ ಇಸಬೆಲ್ಲಾ ಸುಂದರ ತರುಣಿ ಮತ್ತು ಸದಾ ಹಸನ್ಮುಖಿ. ಅವಳ ನಾಗರೀಕತೆ ಶಿಷ್ಟಾಚಾರ ಜಯೇಶ್‌ನನ್ನು ಆಕರ್ಷಿಸುತ್ತದೆ. ಇಸಬೆಲ್ಲಾ ಸಹ ಜಯೇಶ್‌ನಿಂದ ಆಕರ್ಷಿತಳಾಗುತ್ತಾಳೆ. ಜಯೇಶ್ ಇಳಿದುಕೊಂಡ ಹೋಟೆಲ್ ರೂಮಿಗೆ ಬಂದು ಅವನೊಂದಿಗೆ ಮಾತನಾಡುತ್ತಾ, ಅವನನ್ನು ತನ್ನತ್ತ ಸೆಳೆದುಕೊಳ್ಳುತ್ತಾಳೆ. ಇಬ್ಬರೂ ಒಂದಾಗುತ್ತಾರೆ. ಜಯೇಶ್ ತನಗೆ ತಂದೆ, ತಾಯಿ ಯಾರೂ ಇಲ್ಲವೆಂದು ಹೇಳುತ್ತಾನೆ. ತಾನು ಪಶ್ಚಿಮ ಬಂಗಾಳದ ಒಂದು ಪ್ರದೇಶದವನು ಎಂದು ಹೇಳುತ್ತಾನೆ. ಪ್ರತಿದಿನ ಟೂರ್‌ನಲ್ಲಿ ಜಯೇಶ್, ಇಸಬೆಲ್ಲಾ ಜೋಡಿಗಳಂತೆ ಓಡಾಡಿಕೊಂಡಿರುತ್ತಾರೆ. ಬೇರೆ ಪ್ರವಾಸಿಗರು ಇದನ್ನು ಗಮನಿಸಿದರೂ, ಯಾರೂ ಆಕ್ಷೇಪ ಮಾಡುವುದಿಲ್ಲ. ಮಸೂದ್‌ಗೆ ಇದೇ ಟೀಂನಲ್ಲಿರುವ ಶೆಲ್ಲಿ ಎಂಬ ಯುವತಿಯ ಮೇಲೆ ಪ್ರೇಮ. ಆದರೆ ಶೆಲ್ಲಿ ಮಸೂದ್‌‌ನನ್ನು ಇಷ್ಟಪಡುವುದಿಲ್ಲ. ಶೆಲ್ಲಿ ಒಂದು ವಿದೇಶಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಕೈತುಂಬಾ ಸಂಪಾದಿಸಿ ತನಗೆ ಬೇಕಾದಂತೆ ಇರುವ ಸ್ವಚ್ಛಂದ ಮನಸ್ಸಿನ ಯುವತಿ. ಅವಳಿಗೆ ಮಸೂದ್‌ನಂತ ಡೈವರ್ ಎಂದರೆ ತಿರಸ್ಕಾರ. ಒಮ್ಮೆ ಮಸೂದ್ ಪ್ರಪೋಸ್ ಮಾಡಿದರೂ, ನೀನು ನಿನ್ನ ಯೋಗ್ಯತೆಯಂತೆ ನಡೆದುಕೋ ಎಂದು ದಬಾಯಿಸಿಬಿಡುತ್ತಾಳೆ. ಮಸೂದನಿಗೆ ಅವಮಾನವಾಗುತ್ತದೆ.

ಕಾಣೆಯಾದ ಸ್ವತಂತ್ರ ಯುವತಿ ಶೆಲ್ಲಿ:

ಪ್ರವಾಸದ ಎರಡನೇ ದಿನ ಟೂರಿಸ್ಟ್ ಬಸ್ ಮುಂದಿನ ಪ್ರಯಾಣಕ್ಕೆ ಹೊರಟು ನಿಂತಾಗ ಎಲ್ಲರೂ ಬಂದರೂ ಶೆಲ್ಲಿ ಬಂದಿರುವುದಿಲ್ಲ. ಎಷ್ಟು ಹೊತ್ತಾದರೂ ಬರುವುದಿಲ್ಲ. ಇಸಾಬೆಲ್ಲಾ ಕೂಡ ಹುಡುಕುತ್ತಾಳೆ ಆದರೂ ಸಿಗುವುದಿಲ್ಲ. ಶೆಲ್ಲಿಯ ರೂಮಿನಲ್ಲೂ ಇರುವುದಿಲ್ಲ. ಕರೆಗೂ ಸ್ಪಂದಿಸುವುದಿಲ್ಲ. ಕೊನೆಗೆ ಹೋಟೆಲ್ ಮ್ಯಾನೇಜರ್ ಬಂದು ಶೆಲ್ಲಿ ಕಾಣೆಯಾಗಿದ್ದಾಳೆ. ಅವಳ ರೂಂ ಕೀ ಹೋಟೆಲ್ ಹಿಂಭಾಗದ ತೋಟದಲ್ಲಿ ಸಿಕ್ಕಿದೆ. ಎಂದು ಹೇಳುತ್ತಾನೆ. ಮ್ಯಾನೇಜರ್ ಪೊಲೀಸಿಗೆ ಫೋನ್ ಮಾಡಿ ಕರೆಸುತ್ತಾನೆ. ಪೊಲೀಸ್ ತಂಡ ಬರುತ್ತದೆ. ಪೊಲೀಸ್ ಎಸ್‌ಐ ಸೂರ್ಯಕಾಂತ್ ಆರಂಭಿಕ ವಿಚಾರಣೆ ನಡೆಸಿ, ಯಾರೂ ಎಲ್ಲಿಗೂ ಹೋಗಬಾರದೆಂದು ಹೇಳುತ್ತಾರೆ. ಹೋಟೆಲಿನ ಸಿಸಿ ಟಿವಿ ಚೆಕ್ ಮಾಡಿದಾಗ ಈ ಟೀಂನಲ್ಲಿ ಇದ್ದ ಒಬ್ಬ ನಡು ವಯಸ್ಸಿನ ವ್ಯಕ್ತಿಯು ಒಂದು ಅಸಹಜ ಪ್ರಕ್ರಿಯೆ ಕಾಣುತ್ತದೆ. ಆ ವ್ಯಕ್ತಿ ಶೆಲ್ಲಿ ಕಾಣೆಯಾದ ರಾತ್ರಿ ಶೆಲ್ಲಿಯ ರೂಮಿನ ಮುಂದೆ ನಿಂತು ಅಸಹಜವಾಗಿ ನಡೆದುಕೊಂಡಿರುತ್ತಾನೆ. ಅವನನ್ನು ಹಾಗೂ ಟೂರಿಸ್ಟ್ ಕಂಪೆನಿಯ ಮಾಲಿಕ ಅಶೋಕ್ ಗುಪ್ತಾನನ್ನು ಪೊಲೀಸರು ಹೇಳಿಕೆ ತೆಗೆದುಕೊಳ್ಳಲು ಠಾಣೆಗೆ ಕರೆದೊಯ್ಯುತ್ತಾರೆ. ಆ ವ್ಯಕ್ತಿ ತಾನು ಅಸಹಜ ರೀತಿಯಲ್ಲಿ ನಡೆದುಕೊಂಡದ್ದು ನಿಜವಾದರೂ, ಶೆಲ್ಲಿಯ ನಾಪತ್ತೆ ವಿಚಾರದಲ್ಲಿ ತನ್ನ ಪಾತ್ರ ಇಲ್ಲವೆಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಹಾಗೆಯೇ ಸೂರ್ಯಕಾಂತ್ ಸಿಸಿ ಟಿವಿ ಪರಿಶೀಲಿಸುವಾಗ ಮಸೂದ್ ಒಂದು ಭಾರವಾದ ಸೂಟ್ ಕೇಸ್ ಎಳೆದುಕೊಂಡು ಮಧ್ಯರಾತ್ರಿಯಲ್ಲಿ ಹೋಟೆಲಿನ ಹೊರಗೆ ಹೋಗುತ್ತಿರುವುದನ್ನು ನೋಡುತ್ತಾರೆ. ಮಸೂದ್‌ನನ್ನೂ ಅರೆಸ್ಟ್ ಮಾಡಿ, ಕರೆತಂದು ವಿಚಾರಣೆ ನಡೆಸಿದಾಗ ಮೊದಲು ಏನೂ ಒಪ್ಪಿಕೊಳ್ಳದಿದ್ದರೂ, ಪೊಲೀಸ್ ಏಟಿನ ರುಚಿ ನೋಡುತ್ತಲೇ ತಾನೇ ಶೆಲ್ಲಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಇಷ್ಟಕ್ಕೇ ಕತೆ ಮುಗಿಯಲಿಲ್ಲ. ಮತ್ತಷ್ಟು ರೋಚಕ ತಿರುವುಗಳಿವೆ. ಆದರೆ ಶೆಲ್ಲಿಯ ಹೆಣ ಎಲ್ಲಿಯೂ ಸಿಗುವುದಿಲ್ಲ. ಶೆಲ್ಲಿಯ ದೇಹ ಏನಾಯಿತು?

ಮಸೂದ್ ಹೇಳುವ ಪ್ರಕಾರ ಶೆಲ್ಲಿಗೂ ಮಸೂದ್‌ಗೂ ಹಿಂದಿನ ರಾತ್ರಿ ಜಗಳ ಆಗಿರುತ್ತದೆ. ಶೆಲ್ಲಿ ರೂಮಿಗೆ ಹೋದ ಮೇಲೆ ಮಸೂದ್ ಶೆಲ್ಲಿಯ ರೂಮಿಗೆ ಹೋಗಿ ಬಾಗಿಲು ತೆಗೆಸಿ ಅವಳ ಕ್ಷಮೆ ಯಾಚಿಸುತ್ತಾನೆ. ಶೆಲ್ಲಿ ಸಂಪೂರ್ಣ ಕುಡಿದ ಮತ್ತಿನಲ್ಲಿರುತ್ತಾಳೆ. ಮಸೂದ್ ಶೆಲ್ಲಿಯನ್ನು ಬಹಳ ಪ್ರೀತಿಸುವುದಾಗಿ ಹೇಳುತ್ತಾನೆ. ಶೆಲ್ಲಿಗೆ ಮತ್ತೆ ಕೋಪ ಬರುತ್ತದೆ. 'ನೀನೇನು? ನಿನ್ನ ಯೋಗ್ಯತೆ ಏನು? ನೀನೊಬ್ಬ ಸಾಧಾರಣ ಬಸ್ ಚಾಲಕ' ಎಂದೆಲ್ಲಾ ಬೈದು ಬಿಡುತ್ತಾಳೆ. ಮಸೂದನಿಗೆ ಕೋಪ ಬಂದು, ಹುಚ್ಚನಂತೆ ಶೆಲ್ಲಿಗೆ ಹಿಗ್ಗಾಮಗ್ಗಾ ಥಳಿಸುತ್ತಾನೆ. ಮಸೂದನೂ ಕುಡಿದಿರುತ್ತಾನೆ. ಈ ಲಟಾಪಟಿಯಲ್ಲಿ ಶೆಲ್ಲಿ ತಲೆಗೆ ಏಟು ಬಿದ್ದು, ಅವಳು ಮೃತಳಾಗುತ್ತಾಳೆ. ಮಸೂದನಿಗೆ ಏರಿದ್ದ ಮತ್ತೆಲ್ಲಾ ಇಳಿಯುತ್ತದೆ. ಕೈಯಾರೆ ಮಾಡಿಕೊಂಡ ಪ್ರಮಾದಕ್ಕಾಗಿ ತಲೆ ಚಚ್ಚಿಕೊಳ್ಳುತ್ತಾನೆ. ಅಳುತ್ತಾನೆ. ಶೆಲ್ಲಿಯ ಸೂಟ್‌ಕೇಸ್‌ನಲ್ಲಿ ಇರುವ ಬಟ್ಟೆಗಳೆಲ್ಲಾ ತೆಗೆದು ಅವಳ ದೇಹವನ್ನು ಅದರಲ್ಲಿ ತುರುಕಿ ಹೋಟೆಲ್ ಹಿಂಭಾಗದ ದಾರಿಯಿಂದ ಹೊರ ಹೋಗುತ್ತಾನೆ. ಅದೇ ರಾತ್ರಿ ಜಯೇಶ್ ಇಸಾಬೆಲ್ಲಾಳ ರೂಮಿನಲ್ಲಿ ಅವಳೊಂದಿಗೆ ರಸನಿಮಿಷಗಳನ್ನು ಕಳೆದು, ಅವಳು ನಿದ್ರಿಸಿದ ನಂತರ ಬಾಲ್ಕನಿಗೆ ಬಂದು ಸಿಗರೇಟ್ ಹೊತ್ತಿಸುವಾಗ ಮಸೂದ್ ಸೂಟ್‌ಕೇಸ್ ಎಳೆದುಕೊಂಡು ಹೋಗುವುದು ಕಾಣುತ್ತದೆ. ಕುತೂಹಲದಿಂದ ಮಸೂದನನ್ನು ಹಿಂಬಾಲಿಸುವ ಜಯೇಶ್ ಮಸೂದನನ್ನು ಏನಾಯ್ತೆಂದು ಕೇಳುತ್ತಾನೆ. ಅಳುತ್ತಾ ಮಸೂದ್ ಎಲ್ಲವನ್ನೂ ಜಯೇಶ್‌ನಿಗೆ ಹೇಳಿ ಬಿಡುತ್ತಾನೆ. ಶೆಲ್ಲಿಯನ್ನು ಜಯೇಶ್ ಪರೀಕ್ಷಿಸಿದಾಗ ಶೆಲ್ಲಿಯಲ್ಲಿ ಕ್ಷೀಣ ಉಸಿರಾಟ ಕಾಣುತ್ತದೆ. ನೀನು ಹೋಗು ನಾನು ಇವಳನ್ನು ಆಸ್ಪತ್ರೆಗೆ ಸೇರಿಸುತ್ತೇನೆ ಎಂದು ಹೇಳಿ ಮಸೂದನನ್ನು ಸಾಗಹಾಕಿದ ಜಯೇಶ್ ಒಬ್ಬ ಚಾಯ್ ಅಂಗಡಿಯ ಕಾಕಾ ಕಾಣಿಸಿದಾಗ ಅವನ ಸೈಕಲ್‌ನಲ್ಲಿ ಶೆಲ್ಲಿಯನ್ನು ಕೂಡಿಸಿಕೊಂಡು ಹೋಗುತ್ತಾನೆ.

ಶೆಲ್ಲಿ ಕಾಣೆಯಾಗಿದ್ದಾಳೆಂದು ಮುಂದುವರಿದ ನಾಟಕ: theatre artst 

ಇಷ್ಟು ಮಸೂದ್ ಹೇಳಿದ ಕತೆ. ಮರುದಿನ ಎಂದಿನಂತೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವಾಗ ಮಸೂದ್ ಹಾಗೂ ಜಯೇಶ್ ಶೆಲ್ಲಿ ಕಾಣುತ್ತಿಲ್ಲವೆಂದು ನಾಟಕವಾಡುತ್ತಾರೆ. ಮಸೂದ್ ದಸ್ತಗಿರಿಯಾದ ನಂತರ ಜಯೇಶ್ ಇಸಾಬೆಲ್ಲಾಗೂ ಹೇಳದೆ ಎಲ್ಲೋ ಮಾಯವಾಗಿಬಿಡುತ್ತಾನೆ. ಶೆಲ್ಲಿಯನ್ನು ಜಯೇಶ್ ಕರೆದುಕೊಂಡು ಹೋದ ನಂತರ ತಾನು ಅವಳನ್ನು ನೋಡಲಿಲ್ಲ ಎನ್ನುತ್ತಾನೆ ಮಸೂದ್. ಚಾಯ್‌ವಾಲಾ ಕಾಕಾನ ಹೆಣ ಮರುದಿನ ಕೆರೆಯಲ್ಲಿ ಸಿಗುತ್ತದೆ. ಯಾರ ಕೊಲೆ, ಯಾರು ಮಾಡಿದರು? ಪೊಲೀಸರಿಗೆ ಈ ಸಿಕ್ಕು ಬಿಡಿಸಲಾಗದೆ ತಲೆ ಕೆಡುತ್ತದೆ. ಇಸಾಬೆಲ್ಲಾಳಿಗೆ ಜಯೇಶನ ಮನೆಯ ಬೀಗದ ಕೈ ಸಿಗುತ್ತದೆ. ಯಾವಾಗಲೋ ಅವನು ಹೇಳಿದ್ದ ಅವನ ಮನೆಯ ವಿಳಾಸ ಹುಡುಕಿ ಹೋಗುತ್ತಾಳೆ. ಮನೆ ಬೀಗ ಹಾಕಿರುತ್ತದೆ. ತನ್ನಲ್ಲಿರುವ ಬೀಗದ ಕೈಯಿಂದ ಬೀಗ ತೆಗೆದು ಒಳಗೆ ಹೋದವಳಿಗೆ ಕಿರುಚಿಕೊಳ್ಳುವಂತಾಗುತ್ತದೆ. ಕಾರಣ ಶೆಲ್ಲಿ ಸತ್ತ ಎರಡು ದಿನದ ನಂತರ ಅವಳ ಹೆಣ ಜಯೇಶ್ ಮನೆಯಲ್ಲಿ ಅದೂ ಅವನ ಮಂಚದ ಮೇಲಿರುತ್ತದೆ. ಮನೆಯಲ್ಲಾ ಒಂದು ಬಗೆಯ ರಾಸಾಯನಿಕದ ವಾಸನೆ!

ಇಸಬೆಲ್ಲಾ ಪೊಲೀಸ್ ಅಧಿಕಾರಿ ಚಂದ್ರಕಾಂತನಿಗೆ ನಡೆದದ್ದೆಲ್ಲ ಹೇಳುತ್ತಾಳೆ. ಪೊಲೀಸರು ಶೆಲ್ಲಿಯ ದೇಹದ ಮಹಜರು ಮಾಡಿಸಿ ಪೋಸ್ಟ್ ಮಾರ್ಟಂಗೆ ಕಳಿಸುತ್ತಾರೆ. ಶೆಲ್ಲಿ ಪೋಷಕರ ವಿಳಾಸ ಹುಡುಕಿ ಹೇಳಿ ಕಳಿಸುತ್ತಾರೆ. ಜಯೇಶ್ ಪತ್ತೆಯೇ ಇಲ್ಲ. ಅವನೇ ಕೊಲೆಗಾರನೆಂದು ಪೊಲೀಸರಿಗೆ ಬಲವಾದ ಗುಮಾನಿ. ನಾಲ್ಕೈದು ದಿನಗಳ ನಂತರ ಜಯೇಶನಿಂದ ಇಸಾಬೆಲ್ಲಾಗೆ ಫೋನ್ ಬರುತ್ತದೆ. ಇಸಾಬೆಲ್ಲಾಗೂ ಜಯೇಶನ ಮೇಲೆ ಅನುಮಾನ ಬಂದಿರುವುದರಿಂದ ಕಾನ್ಫರೆನ್ಸ್ ಕಾಲ್ ಹಾಕಿ ಸೂರ್ಯಕಾಂತನೂ ತಮ್ಮ ಸಂಭಾಷಣೆ ಕೇಳಿಸಿಕೊಳ್ಳುವ ಹಾಗೆ ಮಾಡುತ್ತಾಳೆ. ಅವರ ಮಾತಿನ ಪ್ರಕಾರ ಜಯೇಶನಿಗೆ, ಮಸೂದ್‌ನನ್ನು ಪೊಲೀಸರು ಹಿಡಿದು ಕೊಂಡು ಹೋದ ಮೇಲೆ ಅವನ ಸ್ನೇಹಿತನಾದ ತನ್ನನ್ನೂ ಹಿಡಿಯುವರು ಎಂದು ಭಯವಾಗಿದೆ. ತಾನು ಯಾವ ಕೊಲೆಯನ್ನೂ ಮಾಡಿಲ್ಲ ಎಂದು ಹೇಳುತ್ತಾನೆ. ಈಗ ತಾನು ಪಶ್ಚಿಮ ಬಂಗಾಳದ ತನ್ನೂರಿನಲ್ಲಿ ಇದ್ದೇನೆಂದು ಇಸಾಬೆಲ್ಲಾಳ ಜೊತೆ ಒಮ್ಮೆ ಭೇಟಿ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ.

ಮೊಬೈಲ್ ಟವರ್‌ನಿಂದ ಅವನಿರುವ ತಾಣದ ಮಾಹಿತಿ ಪಡೆದ ಸೂರ್ಯಕಾಂತ್ ತನ್ನ ಮೇಲಾಧಿಕಾರಿಯ ಒಪ್ಪಿಗೆ ಪಡೆದು ಇಸಾಬೆಲ್ಲಾ ಹಾಗೂ ತನ್ನ ಸಹಾಯಕಿಯೊಂದಿಗೆ ಪಶ್ಚಿಮ ಬಂಗಾಳಾಕ್ಕೆ ಹಾರುತ್ತಾನೆ. ಅಲ್ಲಿನ ಪೊಲೀಸಿನವರೊಂದಿಗೆ ಜಯೇಶನ ಚಿತ್ರ ತೋರಿಸಿ ಮಾಹಿತಿ ಕೇಳಿದಾಗ ಮೈಜುಂ ಎನ್ನುವ ಅನೇಕ ಮಾಹಿತಿ ಜಯೇಶನ ಬಗ್ಗೆ ತಿಳಿಯುತ್ತದೆ.

ಜಯೇಶನ ಅಸಲಿ ಹೆಸರು ಜೋಗೇಶ್. ಅವನ ತಂದೆ ಬೀರೇಶ್ ಸ್ಮಶಾನದಲ್ಲಿ ಕೆಲಸ ಮಾಡುವವನು. ಸ್ಮಶಾನದಲ್ಲಿ ಹೆಣಗಳ ದಹನಕ್ರಿಯೆಗೆ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ಹೆಂಡತಿ, ಮಗ ಜೋಗೇಶ್ ಹಾಗೂ ತಮ್ಮನೊಡನೆ ಅವನ ವಾಸ. ಚಿಕ್ಕಂದಿನಿಂದಲೇ ಜೋಗೇಶ್‌ಗೆ ಹೆಣಗಳೊಡನೆ ದೈಹಿಕ ಸಂಪರ್ಕ ಮಾಡುವ ಒಂದು ಮಾನಸಿಕ ಕಾಯಿಲೆ ಇರುತ್ತದೆ. ಅಪ್ಪನ ಕಣ್ಣು ತಪ್ಪಿಸಿ, ಮಹಿಳಾ ಶವಗಳೊಡನೆ ದೈಹಿಕ ಸಂಪರ್ಕ ಮಾಡುತ್ತಿರುತ್ತಾನೆ. ಇದು ತಂದೆಯ ಗಮನಕ್ಕೆ ಬಂದಾಗ ಮಗನನ್ನು ಬೈದು,ಹೊಡೆದು ಮಾಡಿದರೂ ಅವನ ಚಾಳಿ ಬಿಡುವುದಿಲ್ಲ. ಮತ್ತು ಮನೆಯಿಂದ ಗಾಯಬ್ ಆಗುತ್ತಾನೆ. ಕೊಲ್ಕತ್ತಾದಲ್ಲಿ ಒಂದು ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಅಲ್ಲಿಯೂ ತನ್ನ ಚಾಳಿ ಬಿಡುವುದಿಲ್ಲ. ಶವಾಗಾರದ ಸಿಸಿ ಟಿವಿಯಲ್ಲಿ ಇವನ ಕೃತ್ಯ ಬಹಿರಂಗವಾಗುತ್ತದೆ. ಆಸ್ಪತ್ರೆಯ ಮುಖ್ಯಸ್ಥ ಸಾಕ್ಷಿಯೊಂದಿಗೆ ಇವನನ್ನು ಹಿಡಿದು ಕೊಡಬೇಕೆಂದುಕೊಂಡಾಗ ಅಚಾನಕ್ ಅಲ್ಲಿಂದ ಜೋಗೇಶ್ ಮಾಯಾವಾಗುತ್ತಾನೆ. ಅಲ್ಲಿಂದ ಜೈಪುರಕ್ಕೆ ಬಂದು ಗುಪ್ತಾ ಟ್ರಾವೆಲ್ಸ್‌ನಲ್ಲಿ ಕೆಲಸಕ್ಕೆ ಸೇರುತ್ತಾನೆ.

ಪೊಲೀಸ್ ಅಧಿಕಾರಿ ಸೂರ್ಯಕಾಂತ್ ಇದನ್ನೆಲ್ಲ ಇಸಬೆಲ್ಲಾಗೆ ತಿಳಿಸುತ್ತಾನೆ. ಇಸಾಬೆಲ್ಲಾಗೆ ಮೈ ಹಿಮಗಟ್ಟಿದ ಹಾಗೆ ಆಗುತ್ತದೆ. ಅವಳಿಗೆ ಜೋಗೇಶ್ ಶೆಲ್ಲಿಯ ಶವವನ್ನು ಏಕೆ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಎಂಬುದು ಅರ್ಥವಾದಾಗ ಬವಳಿ ಬಂದಂತಾಗುತ್ತದೆ. ಜೋಗೇಶ್‌ನನ್ನು ಬಂಧಿಸಲು ನೀನು ಸಹಾಯ ಮಾಡಬೇಕು ಎಂದು ಸೂರ್ಯಕಾಂತ್ ಇಸಾಬೆಲ್ಲಾಗೆ ಹೇಳುತ್ತಾನೆ. ನಿಮ್ಮ ಸುರಕ್ಷತೆ ನನ್ನ ಜವಾಬ್ದಾರಿ ಎಂದೂ ಹೇಳುತ್ತಾನೆ. ಕೊಂಚ ಭಯ ಕೊಂಚ ಜಿಗುಪ್ಸೆ ಅನುಮಾನಗಳ ಮಿಶ್ರಭಾವದಲ್ಲಿ ಇಸಾಬೆಲ್ಲಾ ಪೊಲೀಸರಿಗೆ ಸಹಾಯ ಮಾಡಲು ಒಪ್ಪುತ್ತಾಳೆ. ಜೋಗೇಶ್‌ನ ಕರೆಗಾಗಿ ಎಲ್ಲರೂ ಕಾಯುತ್ತಿರುತ್ತಾರೆ.

ಜೋಗೇಶ್ ಇಸಾಬೆಲ್ಲಾಗೆ ಕರೆ ಮಾಡಿ ಒಂದು ಜಾಗಕ್ಕೆ ಬರಲು ಹೇಳುತ್ತಾನೆ. ಅಲ್ಲಿಗೇ ಹೋದ ಇಸಾಬೆಲ್ಲಾಳನ್ನು ತನ್ನ ಜೀಪಿನಲ್ಲಿ ಕೂಡಿಸಿಕೊಂಡು ಎಲ್ಲಿಗೋ ಕರೆದುಕೊಂಡು ಹೋಗುತ್ತಾನೆ. ಸೂರ್ಯಕಾಂತ್ ತನ್ನ ಪಡೆಯೊಂದಿಗೆ ಅವರಿಬ್ಬರನ್ನೂ ಹಿಂಬಾಲಿಸುತ್ತಾನೆ. ಜೋಗೇಶ್ ಇಸಾಳನ್ನು ನಗರದಿಂದ ದೂರ ಒಂದು ಮನೆಗೆ ಕರೆತರುತ್ತಾನೆ. ಇಸಾ ಜೋಗೇಶ್‌ನೊಂದಿಗೆ ಮನೆಯೊಳಗೆ ಹೋಗುತ್ತಾಳೆ. ಪೊಲೀಸರು ಇಸಾಬೆಲ್ಲಾಳ ಕರೆಗಾಗಿ ಕಾದು ಅಲ್ಲಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ.

ಕತೆ ಇಲ್ಲಿಗೆ ನಿಲ್ಲಿಸೋಣ. ಈಗ ಜೋಗೇಶನ ಜೊತೆ ಮನೆಯೊಳಗೆ ಹೋದ ಇಸಾಬೆಲ್ಲಾಳ ಕತೆ ಏನಾಯ್ತು? ಜೋಗೇಶ ಇಸಾಳ ಬಳಿ ತಪ್ಪೊಪ್ಪಿಗೆ ಮಾಡಿಕೊಂಡನೇ? ಇಸಾಳಿಗೆ ಅಪಾಯ ಮಾಡಿದನೇ? ಪೊಲೀಸಿನವರು ಇಸಾಳನ್ನು ಕಾಪಾಡಲು ಶಕ್ಯರಾದರೇ? ಜೋಗೇಶ್ ಪೊಲೀಸರಿಂದ ಇಲ್ಲೂ ತಪ್ಪಿಸಿಕೊಂಡನೇ ಅಥವಾ ಪೊಲೀಸರ ಗುಂಡೇಟಿಗೆ ಬಲಿಯಾದನೇ? ಇಸಾಬೆಲ್ಲಾ ಸುರಕ್ಷಿತವಾಗಿ ತನ್ನ ಊರು ಲಂಡನ್ ಸೇರಿದಳೇ? ಇವೆಲ್ಲಾ ನೀವು ತೆರೆಯ ಮೇಲೆ ನೋಡಿ ರೋಚಕತೆ ಅನುಭವಿಸಿ.

YouTube video player

ನಕುಲ್ ಸಚದೇವ್ ಜೋಗೇಶ್‌ನ ಪಾತ್ರದಲ್ಲಿ, ಮಸೂದನಾಗಿ ಶರೀಬ್ ಹಶ್ಮಿ, ಇಸಾಬೆಲ್ಲಾ ಆಗಿ ಕನಿಕಾ ಕಪೂರ್, ಪೊಲೀಸ್ ಅಧಿಕಾರಿ ಸೂರ್ಯಕಾಂತನಾಗಿ ಮನೀಶ್ ಚೌಧರಿ, ಶೆಲ್ಲಿಯಾಗಿ ಸೆಲೋನಿ ಬಾತ್ರಾ, ಪ್ರವಾಸಿ ಕಂಪೆನಿಯ ಒಡೆಯನಾಗಿ ಅಂಜನ್ ಶ್ರೀವಾಸ್ತವ್ ಅಭಿನಯಿಸಿದ್ದಾರೆ. ಎಲ್ಲರೂ ಬಹಳ ಚೆಂದದ ಅಭಿನಯ ನೀಡಿದ್ದಾರೆ. ಕತೆ ಎಲ್ಲಿಯೂ ಬಿಗಿ ಕಳೆದು ಕೊಂಡಿಲ್ಲ. ಕೊನೆಯವರೆಗೂ ರೋಚಕತೆ ಕಾಯ್ದುಕೊಂಡಿದೆ. ಆರ್ನಬ್ ಚಟರ್ಜಿ ಚಿತ್ರಕತೆ ಬರೆದು ನಿರ್ದೇಶಿಸಿರುವ ಮರ್ಡರ್ ಬಾದ್ ಚಿತ್ರ ಜಿಯೋ ಹಾಟ್ ಸ್ಟಾರ್ ನಲ್ಲಿ ಓಡುತ್ತಿದೆ