ಚಿತ್ರ ವಿಮರ್ಶೆ : ದಿಯಾ
ಹಾರರ್, ಥ್ರಿಲ್ಲರ್‌ನಿಂದ, ಸಸ್ಪೆನ್ಸ್ ಟ್ರೇಲರ್‌ನಿಂದ ಗಮನ ಸೆಳೆದಿರುವ 'ದಿಯಾ' ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ನೋಡಿ ಚಿತ್ರ ವಿಮರ್ಶೆ.
- ಚಿತ್ರ: ದಿಯಾ
- ತಾರಾಗಣ: ಖುಷಿ, ಪ್ರಥ್ವಿ ಅಂಬರ, ದೀಕ್ಷಿತ್ ಶೆಟ್ಟಿ, ಪವಿತ್ರಾ ಲೋಕೇಶ್
ನಿರ್ದೇಶನ: ಅಶೋಕ್, ಸಂಗೀತ : ಅಜನೀಶ್ ಲೋಕನಾಥ್, ಸ್ಟಾರ್ : 4
ದಿಯಾ ಹೊಸಬರ ಸಿನಿಮಾ. 6-5= 2 ಎಂಬ ಸಿನಿಮಾ ಮಾಡಿದ್ದ ಹೊಸಬರ ತಂಡ ಈ ಚಿತ್ರ ಮಾಡಿದ್ದಾರೆ. ಒಂದಿಬ್ಬರನ್ನು ಬಿಟ್ಟರೆ ತೆರೆ ಮೇಲೆ ಬರೋದೆಲ್ಲ ಹೊಸ ಮುಖಗಳೇ. ಆ ಕಾರಣಕ್ಕೋ ಏನೋ ಇಡೀ ಸಿನಿಮಾ ಹಳೆಯ ಕಸಗಳನ್ನೆಲ್ಲ ಝಾಡಿಸಿ ಹೊಸತನದಿಂದ ಕಂಗೊಳಿಸುತ್ತೆ.
ಸಾಮಾನ್ಯವಾಗಿ ಯಾವ ಸಿನಿಮಾದ ಕತೆಯನ್ನು ನೋಡಿದರೂ ಇದು ಹೀಗಾಗಬಹುದು ಅನ್ನೋ ಊಹೆ ಇರುತ್ತೆ. ಪ್ರೇಕ್ಷಕನ ಆ ಊಹೆಯನ್ನು ತಪ್ಪಿಸಲು ನಿರ್ದೇಶಕ ಏನೇನೆಲ್ಲಾ ಕಸರತ್ತು ಮಾಡುತ್ತಾನೆ. ಇಂಥಾ ಸರ್ಕಸ್ ಪ್ಲಾಪ್ ಆಗೋದೇ ಹೆಚ್ಚು. ಆದರೆ ‘ದಿಯಾ’ ಸಿನಿಮಾದಲ್ಲಿ ಈ ಥರದ ಕಸರತ್ತು, ಗಿಮಿಕ್‌ಗಳೇನೂ ಕಾಣಲ್ಲ. ಇಲ್ಲಿ ಡ್ಯಾನ್ಸ್, ಮರ ಸುತ್ತೋ ಹಾಡುಗಳಿಲ್ಲ. ಹಾಗಾಗಿ ಕತೆಗೆ ಎಲ್ಲೂ ಡಿಸ್ಟ್ರಾಕ್ಷನ್ ಬರಲ್ಲ.
ಆರಂಭದಿಂದಲೇ ಸಹಜತೆಗೆ ತೀರಾ ಸಮೀಪದಲ್ಲಿ ಸಾಗುವ ಸಿನಿಮಾ ಒಂದು ಹಂತದ ಬಳಿಕ ಪ್ರೇಕ್ಷಕನ ಊಹೆಯನ್ನೂ ಮೀರಿ ಚಲಿಸುತ್ತದೆ. ಅದು ಸಿನಿಮಾದ ಪ್ಲಸ್ ಪಾಯಿಂಟ್. ಲೈಫ್ ಈಸ್ ಫುಲ್ ಆಫ್ ಸರ್ಪೈಸ್ ಅನ್ನುವ ಟ್ಯಾಗ್ ಲೈನ್‌ಗೆ ಅನ್ವರ್ಥದಂತಿದೆ ಈ ಸಿನಿಮಾದ ಕಥೆ. ಸಾಮಾನ್ಯ ಕತೆಯನ್ನೇ ಅಸಾಮಾನ್ಯ ಲೆವೆಲ್‌ಗೆ ಕೊಂಡೊಯ್ದಿದ್ದು ಕತೆಯ ತಾಕತ್ತು.
‘ದಿಯಾ’ ಸಿನಿಮಾದ ಕಥೆ ಮೇಲ್ನೋಟಕ್ಕೆ ಒಬ್ಬ ಹೆಣ್ಮಗಳ ಬದುಕಿನ ಪುಟದ ಹಾಗೆ ಕಂಡರೂ ಅದು ಅಷ್ಟೇ ಅಗಿಲ್ಲ. ಬದುಕನ್ನು ಅನೇಕ ಆಯಾಮಗಳಿಂದ ನೋಡೋ ಪ್ರಯತ್ನವನ್ನೂ ಮಾಡುತ್ತದೆ. ಪ್ರೀತಿ ಇನ್ನೇನು ಸಿಕ್ಕೇ ಬಿಟ್ಟಿತು ಅನ್ನುವಾಗ ಪ್ರೇಮಿಯೇ ಇಲ್ಲವಾಗುತ್ತಾನೆ. ಅವನಿಲ್ಲದೇ ಬದುಕಿಲ್ಲ ಅಂತ ಸಾಯ ಹೊರಟ ದಿಯಾ ಮತ್ತೆ ಬದುಕಿನತ್ತ ಹೊರಳುತ್ತಾಳೆ. ಹೊಸ ಬದುಕು ಚಿಗುರೊಡೆಯುತ್ತದೆ. ಅಲ್ಲೊಬ್ಬ ಗೆಳೆಯ ಸಿಗುತ್ತಾನೆ. ಅವಳ ನೋವಿನ ಆಳವಾದ ಗಾಯಕ್ಕೆ ಮುಲಾಮು ಹಚ್ಚುತ್ತಾನೆ.
ಇವರಿಬ್ಬರ ಸ್ನೇಹ ಗಾಢವಾಗಿ ಪ್ರೀತಿಯೂ ಚಿಗುರಿ ಇಬ್ಬರೂ ಮದುವೆಯಾಗಿ ಸುಖವಾಗಿರುತ್ತಾರೆ ಅಂದುಕೊಂಡರೆ ಮತ್ತೆ ತಿರುವು. ಸತ್ತೇ ಹೋಗಿದ್ದ ಹಳೇ ಪ್ರೇಮಿ ದಿಢೀರಾಗಿ ಪ್ರತ್ಯಕ್ಷ ಆಗ್ತಾನೆ. ನೀನಿಲ್ಲದೇ ಬದುಕಿಲ್ಲ ಅಂತ ಅವಳನ್ನು ತಬ್ಬಿಕೊಳ್ಳುತ್ತಾನೆ. ದಿಯಾ ಮತ್ತೆ ಆಘಾತ ಮೌನಕ್ಕೆ ಜಾರುತ್ತಾಳೆ. ಆಮೇಲೆ ಆ ವಿಷಾದವೇ ಗಾಢವಾಗುತ್ತಾ ಕೊನೆಗೊಮ್ಮೆ ತಿರುಗಿ ನೋಡುವಂಥಾ ಸ್ಪೋಟವಾಗುತ್ತದೆ. ಊಹಿಸಲೂ ಸಾಧ್ಯವಾಗದಂತೆ ಕತೆ ಹೆಣೆದವರಿಗೆ ಶಹಭಾಸ್ ಹೇಳಲೇ ಬೇಕು.
#MovieReview: ಈ ಜಂಟಲ್‌ಮನ್ ನಿಜಕ್ಕೂ ` ನಂಬರ್ ಒನ್..!'
ಇದೇ ಕತೆಯಾ ಅಂದರೆ ಹಾಗಂದುಕೊಳ್ಳಬೇಕಿಲ್ಲ. ನಮ್ಮ ಬದುಕಿಗೆ, ಅನುಭವಕ್ಕೆ ತಕ್ಕ ಹಾಗೆ ಕಥೆ ನಮ್ಮನ್ನು ಇನ್‌ವಾಲ್ವ್ ಮಾಡುತ್ತಾ ಹೋಗುತ್ತೆ. ಆದರೆ ಪ್ರತೀ ಪ್ರೇಕ್ಷಕನನ್ನೂ ಗಾಢವಾಗಿ ತಟ್ಟುವುದು ಸುಳ್ಳಲ್ಲ. ಅದರಲ್ಲೂ ದಿಯಾಳ ಸ್ನೇಹಿತನಾಗಿ ಬರುವ ಆದಿ ಮತ್ತು ತಾಯಿಯ ಆಪ್ತ ಕ್ಷಣಗಳು ಬಹಳ ಕಾಡುತ್ತವೆ.
ಪ್ರಥ್ವಿ ಅಂಬರ ಹಾಗೂ ಪವಿತ್ರಾ ಲೋಕೇಶ್ ನಟನೆ ಬಹಳ ಆಪ್ತವಾಗಿದೆ. ದಿಯಾ ಪಾತ್ರಧಾರಿ ಖುಷಿ ಕಣ್ಣಲ್ಲೇ ಎಲ್ಲವನ್ನೂ ಕಮ್ಯೂನಿಕೇಟ್ ಮಾಡುತ್ತಾರೆ. ಕಡಿಮೆ ಎಕ್ಸ್‌ಪ್ರೆಶನ್ ಮೂಲಕವೇ ಪ್ರೇಕ್ಷಕನೊಳಗೆ ಇಳಿಯುವ ಅಭಿನಯ ಅವರದ್ದು.
"
ಕತೆಗೆ ಬೇಕಿಲ್ಲದ ಅನವಶ್ಯಕ ಅಂಶಗಳು ಇಲ್ಲವೇ ಇಲ್ಲ. ಎಲ್ಲಿಯವರೆಗೆ ಅಂದರೆ ಇದರ ಎರಡನೇ ಭಾಗದಲ್ಲಿ ಬರೋ ಹೀರೋ ಏನ್ ಕೆಲಸ ಮಾಡ್ತಾನೆ ಅನ್ನೋದು ಗೊತ್ತಾಗಲ್ಲ. ದಿಯಾ ಅಪ್ಪನ ಪಾತ್ರ ಅಪೂರ್ಣ ಅನಿಸುತ್ತೆ. ಆರಂಭದಲ್ಲಿ ಕತೆ ತುಸು ಎಳೆದಂತಿದೆ. ಚಿತ್ರಕತೆಯ ತೀವ್ರತೆಯನ್ನು ಡೈಲಾಗ್‌ನಲ್ಲಿ ತರುವಲ್ಲಿ ತುಸು ಎಡವಿದ ಹಾಗಿದೆ. ಹಿನ್ನೆಲೆಯೇ ಇಲ್ಲದೇ ಬ್ಯಾಗ್ರೌಂಡ್‌ನಲ್ಲಿ ಬರುವ ಮಳೆಯ ಧ್ವನಿಗೆ ಕೊನೆಗೂ ಕಾರಣವೇ ತಿಳಿಯಲ್ಲ. ಇಂಥಾ ಸಣ್ಣ ಪುಟ್ಟಕೊರತೆಗಳನ್ನೂ ಮೀರಿ ‘ದಿಯಾ’ ಮೌನವಾಗಿ ಕಾಡುವ ಸಿನಿಮಾ ಅನ್ನಬಹುದು.
- ಪ್ರಿಯಾ ಕೇರ್ವಾಶೆ