ದೇಶಾದ್ರಿ ಹೊಸ್ಮನೆ

ಏನು ಅರಿಯದ ಮುಗ್ಧ ಮಗುವೊಂದು ದೇವರ ಕಾಣಲು ಬಯಸುವುದರ ಹಿಂದೆ ಕರಳು ಹಿಂಡುವ ಕತೆಯಿದೆ. ಆ ಕತೆ ಬಹುತೇಕ ತಿರುವು-ಮುರುವು ರಸ್ತೆಗಳನ್ನು ಹಾದು ಬೆಂಗಳೂರು ತಲುಪುತ್ತದೆ. ಅದೊಂದು ಸಾಂಕೇತಿಕ ದಾರಿ.

ಯಾಕಂದ್ರೆ, ಅದು ಆತನ ಭವಿಷ್ಯದ ಬದುಕಿನ ಹಾದಿಯ ರೂಪಕವೂ ಹೌದು. ಇಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ಇದ್ದಾರೆ. ಅವರ ಮೂಲಕ ತಾನು ಬಯಸುವ ದೇವರನ್ನು ಕಾಣುವ ಹಂಬಲ ಆ ಬಾಲಕನದ್ದು. ಕಾಕತಾಳೀಯ ಎನ್ನುವ ಹಾಗೆ ಆತನ ಹೆಸರು ಕೂಡ ಅಪ್ಪು. ಆ ಕತೆಗೂ ಒಂದು ಟ್ವಿಸ್ಟ್ ಇದೆ. ಅದು ಏನು ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್. ತುಂಬಾ ಸರಳವೆನಿಸುವ ಕತೆ ಇದು. ಹೇಳಬೇಕಿದ್ದನ್ನು ನೇರವಾಗಿ ಹೇಳುವ ಪ್ರಯತ್ನ ನಿರ್ದೇಶಕರದ್ದು.

ಕೆಂಜ ಚೇತನ್‌ ದಾರಿಯಲ್ಲಿ ದೇವರ ಹುಡುಕಾಟ ನಡೆಯುತ್ತಿದೆ!

ಅದು ನೋಡುಗನಲ್ಲಿ ತಣ್ಣಗೆ ಇಳಿಯುತ್ತಾ ಹೋದಂತೆ, ಕತೆಯ ಗಂಭೀರತೆ ಮನ ಕದಡುತ್ತದೆ. ಮಗುವೊಂದನ್ನು ಸಾಂಕೇತಿಕವಾಗಿಟ್ಟುಕೊಂಡು ಆ ಕತೆ ಹೇಳಲು ಬಯಸಿರುವ ನಿರ್ದೇಶಕರ ಪ್ರಯತ್ನ ಇಲ್ಲಿ ರಾ ಹೊಸತು ಮತ್ತು ವಿಭಿನ್ನ.

ಒಂದಷ್ಟು ಅನವಶ್ಯಕ ಎನಿಸುವ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾಕ್ಕೆ ಇನ್ನಷ್ಟು ವೇಗ ಮತ್ತು ನೋಡುವ ತೀವ್ರತೆ ಹೆಚ್ಚುತ್ತಿತ್ತು. ಅಪ್ಪು ಪಾತ್ರಧಾರಿ ಅನೂಪ್ ಹಾಗೂ ಆತನ  ತಾತನಾಗಿ ಹಿರಿಯ ನಟ ಶಿವರಾಮಣ್ಣ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್. ಅವರಿಬ್ಬರ ಜುಗಲ್‌ಬಂದಿ ಅದ್ಭುತವಾಗಿದೆ. ಅಷ್ಟು ಚಿಕ್ಕ ವಯಸ್ಸಿನಲ್ಲೇ ನಟನೆಯ ಸೂಕ್ಷ್ಮತೆ, ಕ್ಯಾಮರಾ ಜ್ಞಾನ ಎರಡರ ಬಗ್ಗೆಯೂ ಜ್ಞಾನ ಇರುವ ಪುಟಾಣಿ ಅನೂಪ್  ನನ್ನು ನಿರ್ದೇಶಕರು ಇನ್ನಷ್ಟು ಪ್ರಯೋಗಕ್ಕೆ ಬಳಸಿಕೊಂಡಿದ್ದರೆ, ಸಿನಿಮಾ ಇನ್ನೊಂದು ಹಂತದಲ್ಲಿರುತ್ತಿತ್ತು.

ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ 'ದೇವರು ಬೇಕಾಗಿದ್ದಾರೆ' !

ತಾತನಾಗಿ ಶಿವರಾಮಣ್ಣ ಅವರ ಅಭಿನಯದಲ್ಲಿ ನಟನೆ ಎನ್ನುವುದಕ್ಕಿಂತ  ಸಹಜತೆ ಇದೆ. ಪ್ರಸಾದ್ ವಸಿಷ್ಟ, ಸತ್ಯನಾಥ್, ಶಾರದಾ ಅವರ  ಅಭಿನಯವೂ ಸಿನಿಮಾವನ್ನು ಸುಂದರಗೊಳಿಸಿದೆ. ವಯಸ್ಸಿಗೆ ಮೀರಿದ ಮಾತುಗಳನ್ನು ಅನೂಪ್ ಬಾಯಿಯಿಂದ ಹೇಳಿಸಿದ್ದು ಮುಂತಾದ ಒಂದೆರಡು ಕೊರತೆಗಳನ್ನು ಛಾಯಾಗ್ರಹಣ ಮತ್ತು ಕತೆಯ ತೀವ್ರತೆ ಮರೆಸುತ್ತದೆ. ಅನಾಥ ಮಕ್ಕಳಿಗೂ ನೀವು ತಂದೆ-ತಾಯಿಯರಾಗುವ ಗುಣ ಹೊಂದಿದ್ದರೆ ಇಲ್ಲಿ ನೀವೇ ದೇವರಾಗಬಹುದು.