ಲಂಡನ್‌ನಲ್ಲಿ ಲಂಬೋದರ: ಇಲ್ಲಿದೆ ಚಿತ್ರ ವಿಮರ್ಶೆ

ಬಹುನಿರೀಕ್ಷಿತ ಲಂಡನ್‌ನಲ್ಲಿ ಲಂಬೋದರ ಸಿನಿಮಾ ರಿಲೀಸ್ ಆಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

Kannada film Landannalli Lambodara film review

ಜೀವನದ ಗುರಿಯ ಕುದುರೆ ದಿನ ಭವಿಷ್ಯದ ಹಿಂದೆ ಹೋದರೆ ಏನಾಗುತ್ತದೆ ಎಂಬುದನ್ನು ಹೇಳುವ ಸಿನಿಮಾ ‘ಲಂಡನ್‌ನಲ್ಲಿ ಲಂಬೋದರ’. ಹಾಗೆ ನೋಡಿದರೆ ಕುರುಡು ಭವಿಷ್ಯ ನಂಬಿದವರಿಗೆ ಬದುಕಿರಲ್ಲ ಎಂಬುದನ್ನು ಈಗಾಗಲೇ ಸಾಕಷ್ಟು ನೋಡಿದ್ದರೂ ಅದನ್ನೇ ಮನರಂಜನಾತ್ಮಕವಾಗಿ, ಸಿನಿಮ್ಯಾಟಿಕ್ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಜ್ ಸೂರ್ಯ.

ಇಂಥ ಭವಿಷ್ಯಗಳ ಆಚೆಗೂ ದೂರದ ವಿದೇಶದಲ್ಲಿ ದುಡಿದು ಜೀವನ ಕಟ್ಟಿಕೊಳ್ಳುತ್ತಿರುವ ಹತ್ತು ಮಂದಿ ಲಂಡನ್ ಕನ್ನಡಿಗರು ಸೇರಿ ನಿರ್ಮಿಸಿರುವ ಸಿನಿಮಾ ಇದು. ಅವನು ತಾಯಿಯ ಹೊಟ್ಟೆಯಿಂದ ಜಗತ್ತಿಗೆ  ಬರುವುದೇ ತಡ. ನಿಧಾನವೇ ಪ್ರಧಾನ ಎನ್ನುವ ಈತ ಲೇಟ್ ಲತೀಫ್‌ಗೆ ಬ್ರಾಂಡ್ ಅಂಬಾಸಿಡರ್. ಈತನ ಹೆಸರು ಲಂಬೋದರ. ತೀರಾ ಚಿಕ್ಕಂದಿನಲ್ಲೇ ಗಿಣಿ ಶಾಸ್ತ್ರ ಕೇಳಿ, ಅದು ಹೇಗೆ ನಿಜವಾದ ಮೇಲೆ ಅಲ್ಲಿಂದ ಭವಿಷ್ಯ ತೋರಿಸಿಕೊಳ್ಳುವುದು, ಭವಿಷ್ಯ ಓದುವುದು. ತನ್ನ ರಾಶಿಗೆ ಏನೆಲ್ಲ ಬರೆದಿದ್ದಾರೆ ಎಂಬುದನ್ನು ಓದಿ ಚಾಚು ತಪ್ಪದೆ ಅದನ್ನು ಫಾಲೋ ಮಾಡುತ್ತಿರುವವನಿಗೆ ‘ನೀನು ಲಂಡನ್‌ನಲ್ಲಿ ಸೆಟ್ಲ ಆಗುತ್ತೀಯಾ’ ಎನ್ನುವ ಭವಿಷ್ಯ ವಾಣಿಯನ್ನು ಗಾಢವಾಗಿ ನಂಬುತ್ತಾನೆ.

ಲಂಡನ್‌ಗೂ ಹೋಗುತ್ತಾನೆ. ಅಲ್ಲಿ ಬಿಳಿ ಹುಡುಗಿ ಜತೆ ಪ್ರೀತಿಯಲ್ಲಿ ಬೀಳುತ್ತಾನೆ. ಆ ಪ್ರೀತಿ ಮತ್ತೊಂದು ಕ್ರೈಮ್ ಕತೆಗೆ ಜತೆಯಾಗಿ, ಭಯೋತ್ಪಾದಕ ಎನ್ನುವ ಲೇಬಲ್ ಅಂಟಿಸಿಕೊಳ್ಳುತ್ತಾನೆ. ನಿರ್ದೇಶಕ ರಾಜ್ ಸೂರ್ಯ, ಸೂಕ್ತವಾದ ಚಿತ್ರಕತೆ ಮೇಲೆ ನಿರೂಪಣೆ ಮಾಡಿದ್ದರೆ ಸಿನಿಮಾ ಅದ್ಭುತ ಎನಿಸುವ ಸಾಧ್ಯತೆಗಳಿದ್ದವು. ಜಾಳು ಜಾಳು ನಿರೂಪಣೆ. ದೃಶ್ಯ ಮತ್ತು ಸಂಭಾಷಣೆಗಳನ್ನೇ ನಂಬಿಕೊಂಡು ಇಡೀ ಸಿನಿಮಾ ಮಾಡಿದಂತ್ತಿದೆ. ಛಾಯಾಗ್ರಾಹಣ ಬೇರೆ ತೀರಾ ಕಳಪೆ.

ಇಂಥ ಚಿತ್ರ ನೋಡುಗನನ್ನು ಆಗಾಗ ನಗಿಸುತ್ತದೆ ಎಂದರೆ ಅದು ಪ್ರಶಾಂತ್ ರಾಜಪ್ಪ ಬರೆದಿರುವ ಸಂಭಾಷಣೆಗಳು. ಅಪ್ಪನಾಗಿ ಅಚ್ಯುತ್ ಕುಮಾರ್, ಕಾಮಿಡಿ ಕಿಂಗ್ ಆಗಿ ಸಾಧು ಕೋಕಿಲಾ ಹಾಗೂ ಸಂಪತ್ ರಾಜ್ ಪಾತ್ರಗಳು ಚಿತ್ರವನ್ನು ಮೇಲಕ್ಕೆತ್ತುವ ಸಾಹಸ ಮಾಡಿವೆ. ಅಲ್ಲದೆ ನಟಿ ಶ್ರುತಿ ಪ್ರಕಾಶ್ ನೋಡಲು ಚೆಂದ. 

- ಆರ್. ಕೇಶವಮೂರ್ತಿ 

- ಚಿತ್ರ: ಲಂಡನ್‌ನಲ್ಲಿ ಲಂಬೋದರ

ತಾರಾಗಣ: ಸಂತು, ಶ್ರುತಿ ಪ್ರಕಾಶ್,  ಸಂಪತ್ ರಾಜ್

ನಿರ್ದೇಶನ: ರಾಜ್ ಸೂರ್ಯ

ಸಂಗೀತ: ಪ್ರಣವ್

ಛಾಯಾಗ್ರಾಹಣ: ಫಣಿಧರ್ ರೇವನೂರು

ರೇಟಿಂಗ್: **

Latest Videos
Follow Us:
Download App:
  • android
  • ios