ಮಿಸ್ಟರ್ ರಾಣಿ ಚಿತ್ರ ವಿಮರ್ಶೆ: ಬದುಕು ಬದಲಾಗುವ ಫಜೀತಿಯ, ವಿಷಾದದ, ತಮಾಷೆಯ ಚಿತ್ರಣ
ಪೋಷಕರ ಒತ್ತಾಯದಿಂದ ತನ್ನ ಖುಷಿಯ ದಾರಿಯನ್ನು ಬಿಡಬೇಕಾದ ತರುಣನ ಅಸಹಾಯಕತೆಯನ್ನು ಕಟ್ಟಿಕೊಡುತ್ತಾರೆ. ಆ ವಿಷಾದವನ್ನು ಹತ್ತಿಕ್ಕುವಂತೆ ಅವರು ಮುಂದಿನ ಚಿತ್ರಕತೆಯನ್ನು ರೂಪಿಸಿದ್ದಾರೆ.

ಆರ್.ಎಸ್.
ಅಪ್ಪ ಅಮ್ಮನ ಮಾತಿಗೆ ಕಟ್ಟುಬಿದ್ದು ಇಂಜಿನಿಯರ್ ಆಗುವ, ಆದರೆ ಮನಸ್ಸಲ್ಲಿ ನಟನೆಯ ಪ್ರೀತಿ ಇಟ್ಟುಕೊಂಡಿರುವ ಒಬ್ಬ ತರುಣನ ಕತೆ ಇದು. ಒಂದು ಸನ್ನಿವೇಶದಲ್ಲಿ ನಟಿಯಾಗಿ ಕಾಣಿಸಿಕೊಂಡು ಮುಂದೆ ಅದೇ ದಾರಿಯಲ್ಲಿ ಸಾಗುವ ಅನಿವಾರ್ಯಕ್ಕೆ ಸಿಲುಕುವ ವಿಶಿಷ್ಟ ಕತೆ ಇದು. ಮಧುಚಂದ್ರ ಅವರ ಈ ಹಿಂದಿನ ಸಿನಿಮಾಗಳಂತೆ ಒಂದು ಗಂಭೀರ ವಿಚಾರವನ್ನು ಇಟ್ಟಿದ್ದಾರೆ.
ಪೋಷಕರ ಒತ್ತಾಯದಿಂದ ತನ್ನ ಖುಷಿಯ ದಾರಿಯನ್ನು ಬಿಡಬೇಕಾದ ತರುಣನ ಅಸಹಾಯಕತೆಯನ್ನು ಕಟ್ಟಿಕೊಡುತ್ತಾರೆ. ಆ ವಿಷಾದವನ್ನು ಹತ್ತಿಕ್ಕುವಂತೆ ಅವರು ಮುಂದಿನ ಚಿತ್ರಕತೆಯನ್ನು ರೂಪಿಸಿದ್ದಾರೆ. ನಂಬಲು ಅಸಾಧ್ಯ ಅನ್ನಿಸುವ ಘಟನೆಗಳನ್ನು ಅವರು ಲೀಲಾಜಾಲವಾಗಿ ಹೇಳುತ್ತಾರೆ. ಬಹುತೇಕ ಕಡೆ ಹಗುರವಾಗಿ ದೃಶ್ಯಗಳನ್ನು ಕಟ್ಟಿದ್ದಾರೆ. ನಗಿಸುವುದೇ ಮುಖ್ಯ ಎಂಬಂತೆ ಅವರು ಕತೆ ಹೇಳುತ್ತಾ ಹೋಗುತ್ತಾರೆ. ಈ ಹಂತದಲ್ಲಿ ಅವರ ಉದ್ದೇಶದಲ್ಲಿ ಅವರು ಗೆಲ್ಲುತ್ತಾರೆ. ಲವಲವಿಕೆಯೇ ಅವರ ಚಿತ್ರಕತೆಯ ಮೂಲಾಧಾರವಾಗಿದೆ.
ಚಿತ್ರ: ಮಿಸ್ಟರ್ ರಾಣಿ
ನಿರ್ದೇಶನ: ಮಧು ಚಂದ್ರ
ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಪಾರ್ವತಿ, ಶ್ರೀವತ್ಸ, ಲಕ್ಷ್ಮಿ
ರೇಟಿಂಗ್: 3
ಈ ಚಿತ್ರದ ನಿಜವಾದ ಶಕ್ತಿ ದೀಪಕ್ ಸುಬ್ರಹ್ಮಣ್ಯ. ಅವರು ಪ್ರತಿಭೆಯ ಮೂಲಕ, ಶ್ರಮದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ. ಅವರ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಧುಚಂದ್ರ, ಪಾರ್ವತಿ, ಲಕ್ಷ್ಮೀ ಅವರವರ ಪಾತ್ರವೇ ಆಗಿದ್ದಾರೆ. ಒಟ್ಟಾರೆ ಇದೊಂದು ಅನಿವಾರ್ಯ ಪರಿಸ್ಥಿತಿಗೆ ಸಿಕ್ಕಿ ಬದುಕು ಬದಲಿಸುವ ತರುಣನ ಫಜೀತಿಯ, ವಿಷಾದದ, ತಮಾಷೆಯ ಚಿತ್ರಣವಾಗಿದೆ.