Hagga Horror Film Review: ಹಗ್ಗದಲ್ಲಿದೆ ಕುತೂಹಲ ಹುಟ್ಟಿಸುವ ನಿಗೂಢ ಹಾರರ್ ಜಗತ್ತು
ನಿಗೂಢತೆ, ಕೂತೂಹಲ ಹುಟ್ಟಿಸುವ ಸಿನಿಮಾ ಮುಂದೆ ಯಾವ ಘಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂಬ ಭಾವ ಹುಟ್ಟಿಸುವಲ್ಲಿ ಗೆಲುವು ಸಾಧಿಸುತ್ತದೆ. ಅಷ್ಟರ ಮಟ್ಟಿಗೆ ಹಗ್ಗ ಆಕರ್ಷಣೆ ಹುಟ್ಟಿಸುತ್ತದೆ.
ಆರ್ ಎಸ್
ಕಾಡಿನ ಪಕ್ಕ ಒಂದೂರು. ಆ ಊರಲ್ಲಿ ಒಂದು ಹೆಣ್ಮಗು ಜನಿಸಿದರೆ ತಕ್ಷಣ ವೃದ್ಧ ಹೆಂಗಸೊಬ್ಬರು ದಾರುಣವಾಗಿ ತೀರಿಕೊಳ್ಳುತ್ತಾರೆ. ಇದರ ಹಿಂದೆ ಇರುವ ರಹಸ್ಯವನ್ನು ಪತ್ತೆ ಹಚ್ಚಲು ಇಬ್ಬರು ಮುಂದಾಗುವುದರೊಂದಿಗೆ ಕಥೆ ಶುರುವಾಗುತ್ತದೆ. ಆರಂಭದಲ್ಲಿ ನಿಗೂಢತೆ, ಕೂತೂಹಲ ಹುಟ್ಟಿಸುವ ಸಿನಿಮಾ ಮುಂದೆ ಯಾವ ಘಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂಬ ಭಾವ ಹುಟ್ಟಿಸುವಲ್ಲಿ ಗೆಲುವು ಸಾಧಿಸುತ್ತದೆ.
ಅಷ್ಟರ ಮಟ್ಟಿಗೆ ಹಗ್ಗ ಆಕರ್ಷಣೆ ಹುಟ್ಟಿಸುತ್ತದೆ. ಮುಂದೆ ದ್ವೇಷದ ಕಥೆ, ದಾರುಣ ಕಥೆ, ಹಿಂಸೆಯ ಕಥೆ, ಅಹಂಕಾರದ ಕಥೆ, ಮಾಟಗಾತಿಯ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದ್ಭುತ ವಿಎಫ್‌ಎಕ್ಸ್ ದೃಶ್ಯಾವಳಿ ಹೊಂದಿರುವ ಸಿನಿಮಾ ಭಾವನಾತ್ಮಕವಾಗಿ ಕೊಂಚ ದೂರ ನಿಲ್ಲುತ್ತದೆ. ಇಲ್ಲಿ ಗೂಢತೆ ಜೊತೆ ಗಾಢತೆ ಬೆರೆತಿದ್ದರೆ ಸೊಗಸಿತ್ತು. ನಿರ್ದೇಶಕರು ಇಲ್ಲಿ ಒಂದು ವಿಭಿನ್ನ ಜಗತ್ತು ಕಟ್ಟಿದ್ದಾರೆ. ಹಳೆಯ ಚಂದಮಾಮ ಕಥೆಗಳಲ್ಲಿ ಬರುತ್ತಿದ್ದಂತಹ ಕೆಲವು ಅದ್ಭುತ ಪರಿಕಲ್ಪನೆಗಳಿಗೆ ಜೀವ ಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ಹಗ್ಗವೂ ಒಂದು ಮಾಂತ್ರಿಕ ಶಕ್ತಿಯ ಪವಾಡವಾಗಿ ಕಾಣಿಸಿಕೊಳ್ಳುತ್ತದೆ.
ನೋಡುಗರನ್ನು ಪುರಾತನ ಕಾಲ್ಪನಿಕ ಜಗತ್ತಿಗೆಕೊಂಡೊಯ್ಯುವ ಮಾಯಾ ಭಾವ ಮೂಡಿಸುತ್ತದೆ. ಈ ಸಿನಿಮಾದ ಶಕ್ತಿ ಅನು ಪ್ರಭಾಕರ್, ಹಾರರ್ ಸಿನಿಮಾದಲ್ಲಿ ಅವರು ಮನಸಲ್ಲಿ ಉಳಿಯುವಂತೆ ನಟಿಸಿದ್ದಾರೆ. ಅವರಿಗೆ ಭವಾನಿ ಪ್ರಕಾಶ್ ಉತ್ತಮವಾಗಿ ಸಾಥ್ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ ಅವಿನಾಶ್, ವೇಣು ಕಥೆಗೆ ಪೂರಕವಾಗಿ ಹೊಂದಿಕೊಂಡಿದ್ದಾರೆ. ಕುತೂಹಲ ಹುಟ್ಟಿಸಲು ಗೆಲ್ಲುವ, ಉತ್ತಮ ತಾಂತ್ರಿಕ ಶಕ್ತಿ ಹೊಂದಿರುವ, ಪ್ರತಿಭಾವಂತ ಕಲಾವಿದರ ಸಂಗಮ ಆಗಿರುವ ಆಕರ್ಷಕ ಹಾರರ್ ಸಿನಿಮಾ ಇದು.
ಚಿತ್ರ: ಹಗ್ಗ
ತಾರಾಗಣ: ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ
ನಿರ್ದೇಶನ: ಅವಿನಾಶ್ ಎನ್
ರಾಜ್ ಭಾರದ್ವಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ, ಅವರದ್ದೇ ನಕಥೆಯನ್ನು ಹೊಂದಿರುವ ಹಗ್ಗ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೈಲರ್ ಮೂಲಕವೇ ಆಕರ್ಷಿತರಾಗಿ ನೋಡಲು ಬಂದವರೆಲ್ಲ ಥ್ರಿಲ್ ಆಗಿದ್ದಾರೆ. ಅದರಲ್ಲಿಯೂ ಅನು ಪ್ರಭಾಕರ್ ಪಾತ್ರಕ್ಕೂ ಮೆಚ್ಚುಗೆಯ ಮಹಾ ಪೂರವೇ ಹರಿದು ಬರಲಾರಂಭಿಸಿದೆ. ಅನು ಅವರ ಪಾಲಿಗೆ ಹಗ್ಗ ಒಂದು ಮೈಲಿಗಲ್ಲು. ಯಾಕೆಂದರೆ, ಅವರು ನಟಿಯಾಗಿ ಇದೀಗ ಇಪ್ಪತೈದು ವರ್ಷ ತುಂಬಿದೆ. ಈ ಸಿಲ್ವರ್ ಜ್ಯುಬಿಲಿ ಸಂಭ್ರಮದ ಹೆಗ್ಗುರುತಾಗಿ ಹಗ್ಗ ದಾಖಲಾಗುತ್ತದೆ. 1999ರಲ್ಲಿ ಹೃದಯ ಹೃದಯ ಚಿತ್ರದ ಮೂಲಕ ಬಣ್ಣ ಹಚ್ಚಿದ್ದವರು ಅನು ಪ್ರಭಾಕರ್. ಈವರೆಗೂ ನಾನಾ ಮಜಲಿನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರೇ ಹೇಳುವ ಪ್ರಕಾರ ಹಗ್ಗ ಎಂಬುದು ಅನು ವೃತ್ತಿ ಬದುಕಿನ ವಿಶಿಷ್ಟ ಚಿತ್ರ.