Jalsa: ಒಬ್ಬಳು ಅಪಘಾತದಲ್ಲಿ ಮಗಳನ್ನು ಕಳೆದುಕೊಂಡವಳು. ಮತ್ತೊಬ್ಬಳು ಮಾನಸಿಕ ವಿಕಲಾಂಗ ಮಗನ ತಾಯಿ. ಈ ಇಬ್ಬರ ನಡುವೆ ಇರುವ ಸಂಬಂಧವೇನು? 2022ರಲ್ಲಿ ಬಿಡುಗಡೆಯಾದ ಸುರೇಶ್ ತ್ರಿವೇಣಿ ನಿರ್ದೇಶಿಸಿರುವ, ಶೆಫಾಲಿ ಶಾ ಹಾಗೂ ವಿದ್ಯಾಬಾಲನ್ ನಟನೆಯ ಭಾವನಾತ್ಮಕ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಓಡುತ್ತಿದೆ.
ಮಾಯಾ ಮೆನನ್ ಒಬ್ಬ ಯಶಸ್ವೀ ಮಹಿಳೆ. ಫ್ಯಾನ್ ಫಾಲೋಯಿಂಗ್ ಇರುವ ಖ್ಯಾತ ಪತ್ರಕರ್ತೆ. ಅವಳ ಟಿವಿ ಶೋ ಫೇಸ್ ದ ಟ್ರುತ್ (ಸತ್ಯವನ್ನು ಎದುರಿಸಿ) ಅವಳಿಗೆ ಕೀರ್ತಿ, ಖ್ಯಾತಿಯನ್ನು ತಂದು ಕೊಟ್ಟಿದೆ. ಅವಳ ಜೊತೆ ಕೆಲಸ ಮಾಡುವುದೇ ಒಂದು ಮಹಾಭಾಗ್ಯ ಎಂದು ಅಂದುಕೊಳ್ಳುವ ಜೂನಿಯರ್ಸ್ ಇದ್ದಾರೆ. ದೊಡ್ಡ ಸಂಬಳ, ಐಷಾರಾಮಿ ಜೀವನ ಇರುವ ಮಾಯಾ ವಿಚ್ಛೇದಿತೆ. ತನ್ನ ಮಾನಸಿಕ ವಿಕಲಾಂಗ ಮಗ ಹಾಗೂ ವಯಸ್ಸಾದ ತಾಯಿಯೊಂದಿಗೆ ಇರುವ ಮಾಯಾ, ತನ್ನ ಬಾಸ್‌ನೊಂದಿಗೆ ಒಂದು ಹಿತವಾದ ಸಂಬಂಧ ಹೊಂದಿರುತ್ತಾಳೆ. ಅವಳ ವಿಚ್ಛೇದಿತ ಗಂಡ ವಾರಕ್ಕೊಮ್ಮ ಬಂದು ಮಗನ ಜೊತೆ ಇದ್ದು ಹೋಗುತ್ತಾನೆ. ಅವನು ತನ್ನ ಎರಡನೇ ಪತ್ನಿ ಹಾಗೂ ಒಂದು ಮಗುವಿನೊಂದಿಗೆ ಖುಷಿಯಾಗಿ ಇರುತ್ತಾನೆ. ತನ್ನ ಮಗನ ಬಗ್ಗೆ ಇರುವ ಕೊರತೆ ಬಿಟ್ಟರೆ, ಮಾಯಾ ತನ್ನದೇ ಒಂದು ಮಾಯಾಲೋಕದಲ್ಲಿ ವಿಹರಿಸುತ್ತ ಆರಾಮವಾಗಿ ಇರುವ ಹೆಣ್ಣು.
ರುಕ್ಸಾನಾ ಎಂಬ ಮಾಯಾಳ ವಯಸ್ಸಿನವಳೇ ಆದ ಒಬ್ಬ ಹೆಣ್ಣು ಮಗಳು ಮಾಯಾಳ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುತ್ತಾಳೆ. ರುಕ್ಸಾನಾಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು. ಮಗಳು ಹದಿವಯಸ್ಸಿನವಳು. ಈ ಕಾಲದ ಹೆಣ್ಣು ಮಕ್ಕಳಿಗೆ ಇರುವಂತೆ ಮೊಬೈಲ್ ಹುಚ್ಚು ಹಾಗೂ ಒಬ್ಬ ಬಾಯ್ ಫ್ರೆಂಡೂ ಅವಳಿಗೂ ಇರುತ್ತಾರೆ. ರುಕ್ಸಾನಾ ಬೆಳಗ್ಗೆ ಮಾಯಾಳ ಮನೆಗೆ ಬಂದರೆ, ರಾತ್ರೀವರೆಗೂ ಅವಳಿಗೆ ಕೆಲಸ. ಮಾಯಾಳ ಮಗನನ್ನು ನೋಡಿಕೊಳ್ಳುವುದು ಹಾಗೂ ಅಡುಗೆ ಮಾಡುವುದರಲ್ಲಿಯೇ ವ್ಯಸ್ತಳು. ಮಾಯಾಳ ಮಗನನ್ನು ತುಸು ಹೆಚ್ಚೇ ಎನ್ನುವಷ್ಟು ರುಕ್ಸಾನ ಹಚ್ಚಿಕೊಂಡಿರುತ್ತಾಳೆ. ಅವನ ಎಲ್ಲ ಬೇಕು ಬೇಡಗಳು ಅವಳಿಗೆ ತಿಳಿದಿರುತ್ತದೆ. ಮಾಯಾಳ ಮಗನಿಗೆ ಸಹ ರುಕ್ಸಾನಾ ಎಂದರೆ ತಾಯಿಗಿಂತ ಹೆಚ್ಚು ಸಲುಗೆ ಪ್ರೀತಿ. ರುಕ್ಸಾನಾ ಅಡುಗೆ ಬಹಳ ರುಚಿಕರವಾಗಿ ಮಾಡುತ್ತಾಳೆ. ಹಾಗಾಗಿ ಮಾಯಾಳ ತಾಯಿಗೂ ರುಕ್ಸಾನ ಪ್ರಿಯಳು. ರುಕ್ಸಾನಾಳ ರಕ್ಷಣೆಯಲ್ಲಿರುವ ತನ್ನ ಮಗನ ಬಗ್ಗೆ ಮಾಯಾಳಿಗೂ ನಿಶ್ಚಿಂತೆ.
ಜೀವನಕ್ಕೆ ಬೇಕಲ್ಲವೇ ಬ್ರೇಕ್?
ಜೀವನ ಹೀಗೇ ಸರಾಗವಾಗಿ ನಡೆದುಬಿಟ್ಟರೆ ಹೇಗೆ? ಒಂದು ಬ್ರೇಕ್ ಬೇಕಲ್ಲವೇ? ಒಮ್ಮೆ ಮಾಯಾ ತಡರಾತ್ರಿ ತನ್ನ ಶೋ ಮುಗಿಸಿಕೊಂಡು ತನ್ನ ಬಾಸ್ ಜೊತೆ ಲಲ್ಲೆ ಹೊಡೆದು, ಕೊಂಚ ಮಾದಕ ಪೇಯ ಸೇವಿಸಿ ತನ್ನ ಕಾರಿನಲ್ಲಿ ಮನೆಯತ್ತ ಧಾವಿಸುತ್ತಾಳೆ. ಆ ದಿನ ಅವಳ ಡ್ರೈವರ್ ರಜೆ ತೆಗೆದು ಕೊಂಡಿರುತ್ತಾನೆ. ಹಾಗಾಗಿ ಮಾಯಾಳೇ ಡ್ರೈವ್ ಮಾಡುತ್ತಿರುತ್ತಾಳೆ. ಅರ್ಧರಾತ್ರಿ ಹೆಚ್ಚು ಜನ ಇಲ್ಲದ ರಸ್ತೆ, ಕಾರು ವೇಗವಾಗಿಯೇ ಸಾಗುತ್ತಿರುತ್ತದೆ. ಮಾದಕ ಪೇಯದ ಅಮಲು ಅಥವಾ ನಿದ್ರೆ ಮಾಯಾಳನ್ನು ಮುತ್ತಿಗೆ ಹಾಕಿರುತ್ತದೆ. ಮುಚ್ಚಿ ಕೊಳ್ಲುವ ಕಣ್ಣುಗಳನ್ನು ಬಿಡಿಸಿಕೊಳ್ಳುತ್ತಾ ಆಕಳಿಸುತ್ತಾ ಮಾಯಾ ವೇಗ ಹೆಚ್ಚಿಸುತ್ತಾಳೆ. ಆಗ ಸಡನ್ ಆಗಿ ಕಾರಿಗೆ ಒಬ್ಬ ಹದಿವಯಸ್ಸಿನ ಹುಡುಗಿ ಅಡ್ಡ ಬಂದು ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಾಳೆ. ಮಾಯಾಳ ಅಮಲು ತಕ್ಷಣವೇ ಇಳಿಯುತ್ತದೆ. ಮುಂದಕ್ಕೆ ಹೋದವಳು ಹಿಂದೆ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ಹುಡುಗಿಯನ್ನು ನೋಡಿ ಭಯದಿಂದ ಕಾರು ಹತ್ತಿ ಒಂದೇ ದೌಡಿನಲ್ಲಿ ಮನೆ ಸೇರುತ್ತಾಳೆ. ಹುಡುಗಿ ಬಂದು ಹೊಡೆದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಸೀಳಿರುತ್ತದೆ. ಅದು ಯಾರಿಗೂ ಗೊತ್ತಾಗಬಾರದೆಂದು ಸರಸರನೆ ಕಾರಿಗೆ ಹೊದಿಕೆ ಹೊದ್ದಿಸಿ ಮನೆಯೊಳಗೆ ಸೇರಿ ಕೊಳ್ಳುತ್ತಾಳೆ.
ಆ ದಿನ ರುಕ್ಸಾನ ಮಾಯಾಳ ಮನೆಯಲ್ಲೇ ಇರುತ್ತಾಳೆ. ಮಾಯಾ ಬಂದದ್ದೂ ನೋಡುತ್ತಾಳೆ, ಮಾಯಾಳ ಗಾಬರಿ, ನಡುಕ ನೋಡಿದರೂ ತನಗೇನೂ ಸಂಬಂಧ ಇಲ್ಲವೆಂಬಂತೆ ನಿರ್ಲಕ್ಷಿಸುತ್ತಾಳೆ.
ಅಪಘಾತದ ನಂತರ ತನ್ನಿಂದಾದ ಎರಡು ಪ್ರಮಾದಗಳನ್ನು ಮಾಯಾ ಗಮನಿಸುವುದಿಲ್ಲ. ಒಂದು ಅಪಘಾತದ ಜಾಗದಲ್ಲಿರುವ ಸಿಸಿ ಕ್ಯಾಮೆರಾ ಅಪಘಾತದ ದೃಶ್ಯವನ್ನು ಸೆರೆ ಹಿಡಿದಿರುತ್ತದೆ ಹಾಗೂ ತನ್ನ ಅಪರ್ಟ್‌ಮೆಂಟ್‌ನಲ್ಲಿ ಕಾರು ನಿಲ್ಲಿಸಿ ಕಾರಿಗೆ ಹೊದಿಕೆ ಹೊದಿಸಿದ್ದು, ತಾನು ನಡುಗುತ್ತ ಇದ್ದದ್ದು ಎಲ್ಲವೂ ಸೆಕ್ಯುರಿಟಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು.
ಮಾರನೇ ದಿನ ಬೆಳಗಿನ ಜಾವ ರುಕ್ಸಾನಾಳಿಗೆ ಮನೆಯಿಂದ ಕಾಲ್ ಬರುತ್ತದೆ. ಅವಳ ಮಗಳು ಇನ್ನೂ ಮನೆಗೆ ಬಂದಿಲ್ಲ ಎಂದು. ರುಕ್ಸಾನಾ ಗಾಬರಿಯಲ್ಲಿ ಮನೆಗೆ ಹೋಗುತ್ತಾಳೆ. ಅಷ್ಟು ಹೊತ್ತಿಗೆ ರುಕ್ಸಾನಾ ಮಗಳಿಗೆ ಭೀಕರ ಅಪಘಾತವಾಗಿ ಆಸ್ಪತ್ರೆಯಲ್ಲಿ ಇದ್ದಾಳೆ ಎಂಬ ಸುದ್ದಿಯೂ ಸಿಕ್ಕಿರುತ್ತದೆ. ರುಕ್ಸಾನಾ ಅವಳ ಗಂಡ ಆಸ್ಪತ್ರೆಗೆ ಓಡುತ್ತಾರೆ. ಅವಳ ಮಗಳಿಗೆ ತಲೆಗೆ ಭಾರಿ ಪೆಟ್ಟು ಬಿದ್ದು, ಪ್ರಜ್ಞಾಶೂನ್ಯಳಾಗಿರುತ್ತಾಳೆ, ಬದುಕಿರುವುದೇ ಹೆಚ್ಚು ಎಂದು ವೈದ್ಯರು ಮಾತನಾಡಿಕೊಳ್ಳುತ್ತಿರುತ್ತಾರೆ. ಕಣ್ಣಿಗೆ ಕೂಡಾ ಏಟಾಗಿರುತ್ತದೆ. ಮುಖ ವಿಕಾರವಾಗಿರುತ್ತದೆ. ರುಕ್ಸಾನಾಗೆ ಅಚ್ಚರಿ ಏನೆಂದರೆ ತನ್ನ ಮಗಳು ಅರ್ಧರಾತ್ರಿಯಲ್ಲಿ ಯಾಕಾಗಿ ಮನೆಯಿಂದ ಅಷ್ಟು ದೂರ ಹೋಗಿದ್ದಳು? ಎಂದು. ಆದರೆ ರುಕ್ಸಾನಾ ಮಗನಿಗೆ ಅವನು ಆಯುಷ್‌ನಷ್ಟೇ (ಮಾಯಾಳ ಮಗ) ವಯಸ್ಸಿನವನಾದರೂ ತನ್ನಕ್ಕನಿಗೆ ಒಬ್ಬ ಬಾಯ್ ಫ್ರೆಂಡ್ ಇದ್ದದ್ದು, ಯಾವಾಗಲೂ ಅವನ ಜೊತೆ ಅವಳು ಚಾಟ್ ಮಾಡ್ತಿದ್ದದ್ದೂ ತಿಳಿದಿರುತ್ತದೆ. ಅಕ್ಕ ತನ್ನ ಬಾಯ್ ಫ್ರೆಂಡ್‌ನನ್ನು ನೋಡಲು ಆ ಅರ್ಧರಾತ್ರಿಯಲ್ಲಿ ಹೊರಗೆ ಹೋಗಿದ್ದಳೆಂದು ಅವನಿಗೆ ಗೊತ್ತಿರುತ್ತದೆ. ಭಯದಿಂದ ಬಾಯಿ ಬಿಡುವುದಿಲ್ಲ. ರುಕ್ಸಾನಾಳ ಮಗಳು ತನ್ನ ಗೆಳೆಯನನ್ನು ನೋಡಲು ಹೋದಾಗ ಅಫಘಾತ ಆಗಿದೆ. ಅದನ್ನು ನೋಡುವ ಪ್ರತ್ಯಕ್ಷ ಸಾಕ್ಷಿ ಅವಳ ಗೆಳೆಯನೇ. ಆದರೆ ಅವನೂ ಭಯದಿಂದ ಸೀನ್‌ಗೇ ಬರುವುದಿಲ್ಲ.
ರುಕ್ಸಾನಾ ಮಗಳ ಅಪಘಾತದ ವಿಷಯ ತಿಳಿದು ಮಾಯಾ ಆಸ್ಪತ್ರೆಗೆ ಹೋಗಿ ನೋಡುತ್ತಾಳೆ. ಅವಳಿಗೆ ನೆನ್ನೆ ರಾತ್ರಿ ತಾನು ಮಾಡಿದ್ದ ಅಪಘಾತ ಇದೇ ಎಂದು ಅರಿವಾಗುತ್ತದೆ. ಪಾಪ ಪ್ರಜ್ಞೆ ಕಾಡಿಸುತ್ತದೆ. ಯಾರೊಂದಿಗೂ ಏನೂ ಹೇಳದ ಮಾಯಾ ರುಕ್ಸಾನಾಳ ಮಗಳನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸಿ ರುಕ್ಸಾನಾಳಿಗೆ ಧೈರ್ಯ ಹೇಳುತ್ತಾಳೆ. ಆಸ್ಪತ್ರೆ ವೆಚ್ಚ ತಾನೇ ಭರಿಸುವುದಾಗಿಯೂ ಹೇಳುತ್ತಾಳೆ. ತನ್ನ ಕಚೇರಿಗೆ ಬಂದು, ತನ್ನ ಬಾಸ್‌ಗೆ ಎಲ್ಲವನ್ನೂ ಹೇಳುವ ಮಾಯಾ ತನ್ನನ್ನು ರಕ್ಷಿಸಲು ಕೇಳಿ ಕೊಳ್ಳುತ್ತಾಳೆ. ಮಾಯಾಳಿಗೆ ಬಾಸ್ ಧೈರ್ಯ ಹೇಳುತ್ತಾನೆ. ಎಷ್ಟು ಖರ್ಚಾದರೂ ನಿನ್ನ ಹೆಸರು ಹೊರಗೆ ಬರಲು ಬಿಡುವುದಿಲ್ಲ ಎಂದು ಹೇಳುತ್ತಾನೆ. ಏಕೆಂದರೆ ಅವಳ ಶೋ ಬಹಳ ಹಣ ಮಾಡುತ್ತದೆ. ಅದರಿಂದ ಅವನಿಗೆ ಮಾಯಾಳನ್ನು ಬಿಟ್ಟು ಕೊಡಲು ಇಷ್ಟವಿಲ್ಲ. ಜೊತೆಗೆ ಮಾಯಾಳ ಮೇಲೆ ಮೋಹ ಸಹಾ.
ಅಪಘಾತದ ತನಿಖೆ ಶುರು:
ಈ ಅಪಘಾತದ ತನಿಖೆ ನಡೆಸುವ ಪೊಲೀಸ್ ಅಧಿಕಾರಿ ತನ್ನ ನಾಲ್ಕು ಸಿಬ್ಬಂದಿಯೊಡನೆ ಅಪಘಾತವಾಗುವ ಒಂದು ಗಂಟೆಯ ಹಿಂದೆ ಅದೇ ಸ್ಥಳದಲ್ಲಿ ಇರುತ್ತಾನೆ. ಯಾವುದೋ ಒಂದು ಘಟನೆಯ ಬಗ್ಗೆ ಅಲ್ಲಿ ಲಂಚದ ಪ್ರಕರಣ ನಡೆಯುತ್ತಿರುತ್ತದೆ. ಅಪಘಾತ ನಡೆದ ಜಾಗದ ಸಿಸಿ ಟಿವಿ ದೃಶ್ಯ ನೋಡಿದಾಗ ಅವನಿಗೆ ಶಾಕ್ ಆಗುತ್ತದೆ. ತನ್ನ ಲಂಚದ ಪ್ರಕರಣ ಇದರಲ್ಲಿ ಸೆರೆಯಾಗಿದೆ. ಇದೇನಾದರೂ ಈ ಅಪಘಾತ ದೃಶ್ಯ ನೋಡುವಾಗ ಹೊರಗೆ ಬಂದರೆ ತನ್ನ ಸ್ಥಾನಮಾನಕ್ಕೆ ಕುತ್ತು ಎಂದೆಣಿಸಿ, ಸಿಸಿ ಟಿವಿಯ ದೃಶ್ಯಗಳನ್ನು ಮುಚ್ಚಿ ಹಾಕುತ್ತಾನೆ. ಅವನ ಮಗಳ ಮದುವೆ ನಿಶ್ಚಯವಾಗಿರುತ್ತದೆ. ಮಾಯಾಳ ಕಾರು ಆ ಅಪಘಾತ ಮಾಡಿದ್ದು ಯಾವುದನ್ನೂ ಅವನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಅಕಸ್ಮಾತ್ ತನ್ನ ಲಂಚ ಪ್ರಕರಣ ಹೊರಗೆ ಬಂದರೆ, ತನ್ನ ಮಗಳ ಮದುವೆ ನಿಂತು ಹೋಗಬಹುದು ಎಂಬ ಭಯದಲ್ಲಿ ಇದ್ದ ಏಕೈಕ ಸಾಕ್ಷಿ ಸಿಸಿ ಟಿವಿಯ ದೃಶ್ಯವನ್ನೂ ಮುಚ್ಚಿ ಹಾಕುತ್ತಾನೆ.
ಹೀಗೆ ಎಲ್ಲರೂ ಅವರವರ ರಕ್ಷಣೆಗಾಗಿ ಮೌನ ಧರಿಸಿದರೆ, ಅಪರಾಧಿ ಪತ್ತೆಯಾಗುವುದು ಹೇಗೆ? ಅಪಘಾತದ ಅಪರಾಧಿ ಗಮನಿಸದೇ ಇದ್ದ ಒಂದು ವಿಷಯ ಅವಳ ಕಾರಿನ ಚಾಲಕನಿಗೆ ಕಂಡು ಬರುತ್ತದೆ. ರುಕ್ಸಾನಾ ಮಗಳು ಬಂದು ಕಾರಿಗೆ ಹೊಡೆದಾಗ ಆ ರಭಸಕ್ಕೆ ಅವಳ ಒಂದು ಕಿವಿಯ ಲೋಲಾಕು ಕಾರಿನ ವಿಂಡ್ ಶೀಲ್ಡ್‌ಗೆ ಸಿಕ್ಕಿ ಕೊಂಡಿರುತ್ತದೆ. ಮಾರನೇ ದಿನ ಕಾರಿನ ಚಾಲಕ ಕಾರನ್ನು ನೋಡಿದಾಗ ಅವನಿಗೆ ಮಾಯಾಳೇ ಅಪಘಾತ ಮಾಡಿರಬಹುದೆಂಬ ಗುಮಾನಿ ಬರುತ್ತದೆ. ಆದರೆ ಅವನೂ ಮೌನ ವಹಿಸಿ ಮಾಯಾಳಿಂದ ಹಣ ಸೆಳೆಯಲು ಹೊಂಚು ಹಾಕುತ್ತಾನೆ.
ರೋಹಿಣಿ ಎಂಬ ಮಾಯಾಳ ಸಹಾಯಕಿಗೆ ಈ ಕೇಸ್ ತನಿಖೆ ಮಾಡುವ ಆಸಕ್ತಿ. ಮಾಯಾಳ ಕೈಯಲ್ಲಿ ಭೇಶ್ ಎನಿಸಿಕೊಳ್ಳಬೇಕೆಂಬ ಕನಸು. ರೋಹಿಣಿಗೆ ಮಾಯಾ ಎಂದರೆ ದೊಡ್ಡ ಆದರ್ಶ. ಅವಳಿಗೂ ತನ್ನ ವೃದ್ಧತಾಯಿಯನ್ನು ತಾನಿರುವ ಜಾಗದಲ್ಲಿ ಮನೆ ಮಾಡಿ ಕರೆಸಿಕೊಳ್ಳುವ ಜವಾಬ್ದಾರಿ ಇರುತ್ತದೆ. ಮನೆಗೆ ಕೊಡುವ ಪಗಡಿಗಾಗಿ ಪ್ರಯತ್ನ ಮಾಡುತ್ತಿರುತ್ತಾಳೆ. ಈ ತನಿಖೆಯ ಅಧಿಕಾರಿಯನ್ನು ಭೇಟಿ ಮಾಡಿ ಸಿಸಿಟಿವಿ ಫೂಟೇಜ್ ತೆಗೆಸಿಕೊಡು ಎಂದು ದುಂಬಾಲು ಬೀಳುತ್ತಾಳೆ. ತನಗೆ ಈ ಕೇಸ್ ಪತ್ತೆ ಮಾಡಿದರೆ ಪ್ರಮೋಷನ್ ಸಿಗುತ್ತದೆ, ಸಂಬಳ ಹೆಚ್ಚಾಗುತ್ತದೆ ಎಂದು ಗೋಗರೆಯುತ್ತಾಳೆ. ತನಿಖಾಧಿಕಾರಿ ಅವಳಿಗೆ ಕೈ ಮುಗಿದು ಕೇಳಿಕೊಳ್ಳುತ್ತಾನೆ ಈ ಕೇಸ್ ಬಿಟ್ಟು ಬಿಡು ಎಂದು ಗೋಗರೆಯುತ್ತಾನೆ. ರೋಹಿಣಿ ತನ್ನ ಸುದ್ದಿಯ ಅಪ್‌ಡೇಟ್ ಕೊಡಲು ಹೋದಾಗ, ಈ ತನಿಖಾಧಿಕಾರಿ ಸಿಸಿ ಟಿವಿ ದೃಶ್ಯಗಳನ್ನು ತೋರಿಸುತ್ತಿಲ್ಲ ಎಂದು ತನ್ನ ಬಾಸ್‌ಗೆ ದೂರುತ್ತಾಳೆ. ಆಗ ಬಾಸ್‌ಗೆ ಶಾಕ್ ಆಗುತ್ತದೆ. ರೋಹಿಣಿ ಈ ತನಿಖೆ ಮುಂದುವರಿಸಿದರೆ ತನ್ನ ಚಾನಲ್ ಹೆಸರು ಕೆಡುತ್ತದೆ. ಮಾಯಾ ಜೈಲಿಗೆ ಹೋಗುತ್ತಾಳೆ. ಅವಳ ಪ್ರಸಿದ್ಧ ಶೋ ನೆಲಕ್ಕೆ ಬಿದ್ದು ತನ್ನ ಚಾನಲ್ ಟಿಆರ್‌ಪಿ ಮಣ್ಣು ಪಾಲಾಗುತ್ತದೆ ಎಂದು ಹೆದರಿ ರೋಹಿಣಿಗೆ ಹಣದಾಸೆ ತೋರಿಸಿ ಎರಡು ಲಕ್ಷ ಕೊಟ್ಟು, ಅವಳ ಬಾಯಿ ಮುಚ್ಚಿಸುತ್ತಾನೆ.
ಅಪಘಾತದ ತನಿಖೆಯ ಅಧಿಕಾರಿ ರುಕ್ಸಾನಾ ಹಾಗೂ ಅವಳ ಗಂಡನಿಗೆ ಒಂದು ದೊಡ್ಡ ಮೊತ್ತ ಪಾವತಿಸಿ, ಈ ಕೇಸನ್ನು ಮುಚ್ಚಿಹಾಕಲು ನೋಡುತ್ತಾನೆ. ರುಕ್ಸಾನಾಳಿಗೆ ತನ್ನ ಮಗಳ ಅಪಘಾತ ಯಾರು ಮಾಡಿದ್ದು ಎಂದು ಹೇಗೆ ಗೊತ್ತಾಗುತ್ತದೆ? ಗೊತ್ತಾದಾಗ ಏನು ಮಾಡುತ್ತಾಳೆ? ಮಾಯಾಳಿಗೆ ಅವಳ ಅಂತರಾತ್ಮ ಚುಚ್ಚುವುದಿಲ್ಲವೇ? ಮಾಯಾ ಏನು ನಿರ್ಧಾರ ಮಾಡುತ್ತಾಳೆ? ತಾನೇ ಅಪಘಾತ ಮಾಡಿದ್ದು ಎಂದು ಪೊಲೀಸರ ಮುಂದೆ ಒಪ್ಪಿಕೊಳ್ಳೂತ್ತಾಳಾ? ಒಪ್ಪಿಕೊಂಡು ಜೈಲಿಗೆ ಹೋದರೆ ಅವಳ ಮಾನಸಿಕ ವಿಕಲಾಂಗ ಮಗನ ಗತಿ ಏನು? ತನ್ನ ಉದ್ಯೋಗದ ಗತಿ ಏನು? ತನ್ನ ವಯಸ್ಸಾದ ತಾಯಿಯ ಗತಿ ಏನು? ಮಾಯಾ ಅಂತಿಮವಾಗಿ ಏನು ಮಾಡುತ್ತಾಳೆ? ರುಕ್ಸಾನಾ ಮಾಯಾಳನ್ನು ಹೇಗೆ ಟ್ರೀಟ್ ಮಾಡುತ್ತಾಳೆ? ಚಿತ್ರವನ್ನು ನೀವೇ ನೋಡಿ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಕ್ರೈಮ್ ಥ್ರಿಲ್ಲರ್ ಚಿತ್ರ ಆದರೂ ಹಿಂಸೆ ಇಲ್ಲ ಬರೀ ಭಾವನೆಗಳೇ ಪ್ರಧಾನವಾದ ಈ ಚಿತ್ರ ಸಾಕಷ್ಟು ಹಣ ಗಳಿಸಿಲ್ಲವಾದರೂ, ಬಿಗಿಯಾದ ಚಿತ್ರಕತೆ ನಿರ್ದೇಶನದಿಂದ ತನ್ನ ಗತ್ತು ಕಾಯ್ದುಕೊಂಡಿದೆ. ಎಣಿಸಿದಷ್ಟು ಪ್ರಸಿದ್ಧವಾಗದಿದ್ದರೂ ಒಂದೊಳ್ಳೆಯ ಚಿತ್ರ ಎಂದೇ ಹೇಳಬಹುದು. ರುಕ್ಸಾನಾ ಆಗಿ ಶೆಫಾಲಿ ಶಾ, ಮಾಯಾ ಆಗಿ ವಿದ್ಯಾಬಾಲನ್ ನಟನೆ ಅದ್ಭುತ.
