ದೊಡ್ಡ ಸಂಬಳವಿದ್ದರಷ್ಟೇ ಶ್ರೀಮಂತರಾಗಲು ಸಾಧ್ಯ ಎಂಬುದು ತಪ್ಪು ಕಲ್ಪನೆ. ಹಣಕಾಸು ತಜ್ಞರ ಪ್ರಕಾರ, ಸರಿಯಾದ ಯೋಜನೆ ಮತ್ತು ಶಿಸ್ತು ಇದ್ದರೆ ತಿಂಗಳಿಗೆ 20,000 ರೂ. ಸಂಬಳ ಪಡೆಯುವವರೂ ದೊಡ್ಡ ಮೊತ್ತದ ಸಂಪತ್ತು ಸೃಷ್ಟಿಸಬಹುದು. ಇದಕ್ಕಾಗಿ 50/30/20 ನಿಯಮವನ್ನು ಪಾಲಿಸುವುದು ಮುಖ್ಯ.
ಜನರಲ್ಲಿ ಒಂದು ತಪ್ಪು ಕಲ್ಪನೆಯಿದೆ ಅದೇನೆಂದರೆ ಲಕ್ಷ ಲಕ್ಷ ಸಂಬಳ ಪಡೆಯವರು ಮಾತ್ರ ಹಣ ಉಳಿಸ್ತಾರೆ, ಬಡವರು ಏನು ಮಾಡೋದು, ಬರುವ ಇಪ್ಪತ್ತು ಸಾವಿರ ಸಂಬಳದಲ್ಲಿ ಹೊಟ್ಟೆಗೆ ಬಟ್ಟೆಗೆ ಖರ್ಚು ಮಾಡಿದ್ರೆ ಉಳಿಯೊದೆಷ್ಟು, ಅಯ್ಯೋ ನಮಗೆ ಹಣ ಉಳಿತಾಯ ಮಾಡೋಕಾಗಲ್ಲ ಅಂತಾ ಗಟ್ಟಿಯಾಗಿ ನಂಬಿಬಿಟ್ಟಿದ್ದಾರೆ. ಆದರೆ ಇದು ನಿಜವಗಲ್ಲ! ದೊಡ್ಡ ಸಂಬಳ ಬಂದರೆ ಮಾತ್ರ ಶ್ರೀಮಂತರಾಗಬಹುದು, ಹೆಚ್ಚು ಹಣ ಉಳಿಸಬಹುದು ಎಂಬುದು ತಪ್ಪು ಕಲ್ಪನೆ.
ಹಣಕಾಸು ತಜ್ಞರ ಪ್ರಕಾರ, ನಿಮ್ಮ ಸಂಬಳ ಎಷ್ಟಿದೆ ಎನ್ನುವುದಕ್ಕಿಂತ, ಬಂದ ಹಣವನ್ನು ನೀವು ಹೇಗೆ ಬಳಸುತ್ತೀರಿ ಎಂಬುದು ಮುಖ್ಯವಾಗುತ್ತೆ ಅಂತಾರೆ. ನಿಮಗೆ ತಿಂಗಳಿಗೆ 20,000 ರೂಪಾಯಿ ಸಂಬಳವಿದ್ದರೂ ಸರಿಯಾದ ಹಣಕಾಸು ಶಿಸ್ತು ಪಾಲಿಸಿದರೆ ದೊಡ್ಡ ಮೊತ್ತವನ್ನೇ ಸೃಷ್ಟಿಸಬಹುದು. ಇದನ್ನ ಸಾಧಿಸಲು ಹಣಕಾಸು ತಜ್ಞರು ಸೂಚಿಸುವುದೇ 50/30/20 ರೂಲ್ಸ್.
ಏನಿದು 50/30/20 ರೂಲ್ಸ್?
ನೀವು ಸಣ್ಣ ನೌಕರಿಯಲ್ಲಿದ್ದಿರಿ, ನಿಮಗೆ ಪ್ರತಿ ತಿಂಗಳು 20 ಸಾವಿರ ಸಂಬಳ ಬರುತ್ತಿದ್ದರೆ, ಅದನ್ನು ಮೂರು ಭಾಗಗಳಾಗಿ ವಿಂಗಡಿಸಿ ಖರ್ಚು ಮತ್ತು ಉಳಿತಾಯ ಮಾಡಲು ಹೇಳುವ ಸರಳ ಸೂತ್ರವೇ 50/30/20 ರೂಲ್ಸ್. ಈ ನಿಯಮವನ್ನು ಅರ್ಥಮಾಡಿಕೊಂಡು ಪಾಲಿಸಿದರೆ, ಕಡಿಮೆ ಸಂಬಳದಲ್ಲೂ ಆರ್ಥಿಕ ಭದ್ರತೆ ಸಾಧಿಸುವುದು ಕಷ್ಟವೇನಲ್ಲ. ಈ ನಿಯಮದ ಪ್ರಕಾರ, ನಿಮ್ಮ ಆದಾಯದ ಶೇ. 50ರಷ್ಟು ಹಣವನ್ನು ನಿಮ್ಮ ಅಗತ್ಯಗಳಿಗಾಗಿ ಮೀಸಲಿಡಬೇಕು. ಅಂದರೆ ಮನೆ ಬಾಡಿಗೆ, ದಿನಸಿ, ಮಕ್ಕಳ ಶಾಲಾ ಶುಲ್ಕ, ಸಾಲದ ಕಂತು (EMI) ಮತ್ತು ಇತರೆ ಬಿಲ್‌ಗಳಂತಹ ಕಡ್ಡಾಯ ಖರ್ಚುಗಳು ಇದರಲ್ಲಿ ಸೇರುತ್ತವೆ. ಇವುಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಲು ಸಾಧ್ಯವಿಲ್ಲ. ನಂತರ ಬರುವುದು ಶೇ. 30ರಷ್ಟು ಪಾಲು. ಇದನ್ನು ನಿಮ್ಮ ಇಷ್ಟದಂತೆ ಬಳಸಬಹುದು. ಶಾಪಿಂಗ್ ಮಾಡುವುದು, ಸಿನಿಮಾ ನೋಡುವುದು, ಪ್ರವಾಸ ಹೋಗುವುದು ಅಥವಾ ಹೋಟೆಲ್‌ನಲ್ಲಿ ಊಟ ಮಾಡುವಂತಹ ಖರ್ಚುಗಳು ಈ ವರ್ಗಕ್ಕೆ ಸೇರುತ್ತವೆ. ಈ ಖರ್ಚುಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಡಿಮೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಕೊನೆಯ ಮತ್ತು ಅತ್ಯಂತ ಪ್ರಮುಖವಾದದ್ದು ಶೇ. 20ರಷ್ಟು ಭಾಗ. ಇದನ್ನು ನೇರವಾಗಿ 'ಉಳಿತಾಯ ಮತ್ತು ಹೂಡಿಕೆ'ಗೆ ಮೀಸಲಿಡಬೇಕು. ಸಂಬಳ ಬಂದ ತಕ್ಷಣ ಈ ಮೊತ್ತವನ್ನು ಬೇರೆಡೆಗೆ ಎತ್ತಿಡುವುದರಿಂದ ಅನಗತ್ಯ ಖರ್ಚುಗಳನ್ನು ತಡೆಯಬಹುದು. ಉದಾಹರಣೆಗೆ, ನಿಮ್ಮ ಸಂಬಳ 20,000 ರೂ. ಇದ್ದರೆ, 10,000 ರೂ. ಅಗತ್ಯಗಳಿಗೆ, 6,000 ರೂ. ನಿಮ್ಮ ಸ್ವಂತ ಖರ್ಚು, ಉಳಿದ ನಾಲ್ಕು 4,000 ರೂ.ಗಳನ್ನು ಉಳಿತಾಯಕ್ಕೆ ಮೀಸಲಿಡಬೇಕು. ಉಳಿತಾಯದ ಹಣವನ್ನು ಏನು ಮಾಡಬೇಕು?
ಹಣ ಉಳಿತಾಯ ಮಾಡಿದ್ರೆ ಸಾಲದು, ಬೆಳೆಸಬೇಕು!
ಕೇವಲ ಹಣವನ್ನು ಉಳಿತಾಯ ಮಾಡಿದರೆ ಸಾಲದು, ಅದನ್ನು ಸರಿಯಾದ ಕಡೆ ಹೂಡಿಕೆ ಮಾಡುವುದು ಬಹಳ ಮುಖ್ಯ. ಆಗ ಮಾತ್ರ ಹಣದ ಮೌಲ್ಯ ಹೆಚ್ಚಾಗುತ್ತದೆ. ಇದಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮಾಡುವುದು ಉತ್ತಮ ಮಾರ್ಗವೆಂದು ತಜ್ಞರು ಸಲಹೆ ನೀಡುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಆರಂಭಿಸಿದರೆ, ಚಕ್ರಬಡ್ಡಿಯ ಲಾಭ ಪಡೆದು ದೀರ್ಘಾವಧಿಯಲ್ಲಿ ದೊಡ್ಡ ಸಂಪತ್ತು ಗಳಿಸಬಹುದು. ಒಂದು ಸಣ್ಣ ಉದಾಹರಣೆ ನೋಡುವುದಾದರೆ, ನೀವು ದಿನಕ್ಕೆ ಕೇವಲ 100 ರೂಪಾಯಿ ಉಳಿಸಿದರೆ, ತಿಂಗಳಿಗೆ 3,000 ರೂಪಾಯಿ ಆಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳು ಎಸ್‌ಐಪಿ ಮೂಲಕ ಹೂಡಿಕೆ ಮಾಡುತ್ತಾ ಬಂದರೆ, ವಾರ್ಷಿಕ ಶೇ. 12ರಷ್ಟು ಆದಾಯ ಸಿಕ್ಕರೂ, 25 ವರ್ಷಗಳಲ್ಲಿ ನಿಮ್ಮ ಬಳಿ ಬರೋಬ್ಬರಿ 57 ಲಕ್ಷ ರೂಪಾಯಿ ನಿಧಿ ಸಂಗ್ರಹವಾಗುತ್ತದೆ. ಕೇಳುವುದಕ್ಕೆ ಅಚ್ಚರಿಯಾದರೂ, ಶಿಸ್ತಿನ ಹೂಡಿಕೆಯಿಂದ ಇದು ಸಾಧ್ಯವಿದೆ.

