ದೇಶದಲ್ಲಿ ನಕಲಿ ಲೋನ್ ಆ್ಯಪ್‌ಗಳ ಹಾವಳಿ ಹೆಚ್ಚಾಗಿದೆ. ನಿಮಿಷಗಳಲ್ಲೇ ಸಾಲ ನೀಡುವುದಾಗಿ ಹೇಳಿ ಜನರನ್ನು ಬಲೆಗೆ ಬೀಳಿಸಿ, ನಂತರ ವಿಪರೀತ ಬಡ್ಡಿ, ಬ್ಲ್ಯಾಕ್‌ಮೇಲ್ ಮೂಲಕ ಕಿರುಕುಳ ನೀಡುತ್ತವೆ. ಇವುಗಳ ಕಾರ್ಯವೈಖರಿ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ದೇಶದಲ್ಲಿ ನಕಲಿ ಲೋನ್ ಆ್ಯಪ್‌ಗಳ ಹಾವಳಿ ಮಿತಿಮೀರಿದೆ. ಆಧಾರ್ ಕಾರ್ಡ್ ಮತ್ತು ಕೆಲವು ದಾಖಲೆ ಕೊಟ್ಟರೆ ಸಾಕು, ನಿಮಿಷಗಳಲ್ಲೇ ಲಕ್ಷಾಂತರ ರೂಪಾಯಿ ನಿಮ್ಮ ಅಕೌಂಟ್‌ಗೆ ಬರುತ್ತೆ ಅಂತ ಹೇಳಿ ಮೋಸ ಮಾಡೋ ಸೈಬರ್ ಗ್ಯಾಂಗ್‌ಗಳ ಆಕ್ಟಿವ್ ಆಗಿವೆ. ಸಾಲ ಪಡೆಯುವ ಮುನ್ನ ಈ ಬಗ್ಗೆ ಎಚ್ಚರವಾಗಿರಬೇಕಾದ ಸಮಯ ಬಂದಿದೆ. ಇಂತಹ ಜೀವಕ್ಕೆ ಕುತ್ತು ತರುವ ಆ್ಯಪ್‌ಗಳ ಬಗ್ಗೆ ಕೇರಳ ಪೊಲೀಸರು ಕೂಡ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಜೀವ ತೆಗೆಯೋ ಲೋನ್ ಆ್ಯಪ್‌ಗಳು

ಲೋನ್ ಆ್ಯಪ್‌ಗಳ ಬಲೆಗೆ ಬಿದ್ದವರ ಕಥೆಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ. ಸಾಲದ ಸುಳಿಯಲ್ಲಿ ಸಿಲುಕಿ, ಅವಮಾನ ತಾಳಲಾರದೆ ಜೀವನವನ್ನೇ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ 'ಕೆಲವೇ ದಾಖಲೆಗಳು, ನಿಮಿಷಗಳಲ್ಲಿ ಹಣ ನಿಮ್ಮ ಖಾತೆಗೆ' ಎಂಬಂತಹ ಆಕರ್ಷಕ ಜಾಹೀರಾತುಗಳ ಮೂಲಕ ಈ ವಂಚಕರು ಜನರನ್ನು ಸೆಳೆಯುತ್ತಾರೆ. ಆದರೆ, ಈ ಆ್ಯಪ್‌ಗಳಿಂದ ಸಾಲ ಪಡೆಯುವ ಜನರಿಗೆ ತಾವು ಒಂದು ದೊಡ್ಡ ಅಪಾಯದ ಬಲೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ತಕ್ಷಣಕ್ಕೆ ಸಾಲ ಸಿಗುತ್ತದೆಂಬ ಆಸೆಗೆ ಎಡವಿಬಿಳುವವರ ಸಂಖ್ಯೆ ಹೆಚ್ಚಿದೆ.

ಈ ಫೇಕ್ ಲೋನ್ ಆ್ಯಪ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಳನ್ನೇ ಪಾಲಿಸುವುದಿಲ್ಲ. ಸಾಲ ಪಡೆದವರಿಂದ ಸುಲಿಗೆ ಮಾಡುವ ರೀತಿಯಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತವೆ.

ನಮ್ಮಲ್ಲಿ ಮೀಟರ್ ಬಡ್ಡಿ ದಂಧೆ ಮಾಡುವವರ ಹಾಗೇ ಈ ಲೋನ್ ಆ್ಯಪ್ ಗ್ಯಾಂಗ್‌ಗಳು ಕೆಲಸ ಮಾಡುತ್ತವೆ. ಈ ಆರ್ಥಿಕ ವಂಚಕರ ತಂಡಗಳು ಹೆಚ್ಚಾಗಿ ಕೇರಳದ ಹೊರಗೆ, ಕೆಲವೊಮ್ಮೆ ವಿದೇಶಗಳಲ್ಲಿಯೂ ಕೂತು ಕಾರ್ಯಾಚರಣೆ ನಡೆಸುತ್ತವೆ. ಹಣ ಕೊಡುವಾಗ ಸೌಮ್ಯವಾಗಿ ಮಾತನಾಡುವ ಇವರು, ಸಾಲ ಮರುಪಾವತಿ ಸ್ವಲ್ಪ ತಡವಾದರೆ ತಮ್ಮ ನಿಜ ಬಣ್ಣ ತೋರಿಸುತ್ತಾರೆ. ಬೆದರಿಕೆ, ಬ್ಲ್ಯಾಕ್‌ಮೇಲ್ ಶುರುವಾಗುತ್ತದೆ. ನಿಮ್ಮ ಫೋಟೋಗಳನ್ನು ಮಾರ್ಫ್ ಮಾಡಿ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇಲ್ಲದಿದ್ದರೆ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಿ ಮಾನಹರಣ ಮಾಡುತ್ತಾರೆ. ಇದು ಈ ಲೋನ್ ಆ್ಯಪ್ ಗ್ಯಾಂಗ್‌ಗಳ ಸಾಮಾನ್ಯ ಬೆದರಿಕೆ ತಂತ್ರ.

ನೀವು ಪಡೆದ ಸಾಲ ಸಣ್ಣ ಮೊತ್ತದ್ದಾಗಿದ್ದರೂ, ಅದರ ಮೇಲೆ ವಿಪರೀತ ಬಡ್ಡಿ ಮತ್ತು ದಂಡ ಸೇರಿ ದೊಡ್ಡ ಮೊತ್ತವಾಗಿ ಬೆಳೆದು ನಿಲ್ಲುತ್ತದೆ. ಪಕ್ಕದ ಕೇರಳದಲ್ಲಿ ಈ ರೀತಿ ಪ್ರಾಣ ಕಳೆದುಕೊಂಡವರು ಅದೆಷ್ಟೋ ಮಂದಿ. ಅದರಲ್ಲೂ ಹೆಚ್ಚಾಗಿ ಯುವಕರೇ ಈ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಹದಿಹರೆಯದವರ ಸಂಖ್ಯೆಯೂ ಕಡಿಮೆ ಇಲ್ಲ.

ನೀವು ಲೋನ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗಲೇ ನಿಮ್ಮಿಂದ ಕೆಲವು ಪರ್ಮಿಷನ್‌ಗಳನ್ನು ಕೇಳುತ್ತವೆ. ಕಾಂಟ್ಯಾಕ್ಟ್‌ಗಳು, ಗ್ಯಾಲರಿ, ಲೊಕೇಶನ್‌ಗೆ ಆ್ಯಕ್ಸೆಸ್ ಕೊಡಿ ಎಂದು ಕೇಳುತ್ತವೆ. ನಿಮ್ಮ ಫೋನ್‌ನಲ್ಲಿರುವ ಮಾಹಿತಿ ಕದಿಯಲೆಂದೇ ಈ ರೀತಿ ಮಾಡುತ್ತವೆ ಎಂಬುದನ್ನು ಮರೆಯಬೇಡಿ. ಲೋನ್ ಆ್ಯಪ್ ವಂಚನೆಯಿಂದ ಸುರಕ್ಷಿತವಾಗಿರಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸಿ.

1. ಆ್ಯಪ್‌ನ ಅಸಲಿಯತ್ತು ಚೆಕ್ ಮಾಡಿ

ಸಾಲ ನೀಡುವ ಆ್ಯಪ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾನ್ಯತೆ ಪಡೆದ ಬ್ಯಾಂಕ್ ಅಥವಾ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿ (NBFC) ಜೊತೆ ಸಂಬಂಧ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಆ್ಯಪ್‌ಗೆ ಅಧಿಕೃತ ವೆಬ್‌ಸೈಟ್ ಮತ್ತು ಕಚೇರಿ ವಿಳಾಸ ಇದೆಯೇ ಎಂದು ಪರಿಶೀಲಿಸಿ.

2. ಪರ್ಮಿಷನ್ ಕೊಡುವಾಗ ಹುಷಾರಾಗಿರಿ

ಆ್ಯಪ್ ಇನ್‌ಸ್ಟಾಲ್ ಮಾಡುವಾಗ ನಿಮ್ಮ ಕಾಂಟ್ಯಾಕ್ಟ್, ಗ್ಯಾಲರಿ (ಫೋಟೋಗಳು), ಮತ್ತು ಲೊಕೇಶನ್‌ಗೆ ಆ್ಯಕ್ಸೆಸ್ ಕೇಳಿದರೆ ಎಚ್ಚರದಿಂದಿರಿ. ಸಾಮಾನ್ಯವಾಗಿ ಒಂದು ಲೋನ್ ಆ್ಯಪ್‌ಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನ ಅವಶ್ಯಕತೆ ಇರುವುದಿಲ್ಲ. ನಿಮ್ಮ ಫೋಟೋ ಮತ್ತು ಕಾಂಟ್ಯಾಕ್ಟ್‌ಗಳನ್ನೇ ಬಳಸಿಕೊಂಡು ಇವರು ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಾರೆ.

3. ಸಾಲದ ನಿಯಮಗಳನ್ನು ಸರಿಯಾಗಿ ಓದಿ

ಅತಿಯಾದ ಬಡ್ಡಿ ದರ, ಕಡಿಮೆ ಮರುಪಾವತಿ ಅವಧಿ (ಉದಾಹರಣೆಗೆ 7 ದಿನ) ಇವೆಲ್ಲವೂ ನಕಲಿ ಆ್ಯಪ್‌ಗಳ ಲಕ್ಷಣ. ಸಾಲ ನೀಡುವ ಮುನ್ನ 'ಪ್ರೊಸೆಸಿಂಗ್ ಫೀ' ಹೆಸರಿನಲ್ಲಿ ಹಣ ಕೇಳಿದರೆ, ಅದು 100% ಮೋಸದ ಜಾಲವಾಗಿರುತ್ತದೆ.

4. ಪ್ಲೇ ಸ್ಟೋರ್ ರಿವ್ಯೂಗಳನ್ನು ಮಾತ್ರ ನಂಬಬೇಡಿ

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ರೇಟಿಂಗ್ ಮತ್ತು ರಿವ್ಯೂಗಳನ್ನು ನಕಲಿಯಾಗಿ ಸೃಷ್ಟಿಸಲು ಸಾಧ್ಯವಿದೆ. ಹಾಗಾಗಿ, 'ಒನ್ ಸ್ಟಾರ್' (1-star) ರಿವ್ಯೂಗಳನ್ನು ತಪ್ಪದೇ ಓದಿ. ಅಲ್ಲಿ ಜನರು ತಾವು ಎದುರಿಸಿದ ವಂಚನೆಗಳ ಬಗ್ಗೆ ಬರೆದಿರುತ್ತಾರೆ.

5. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ

ಎಸ್‌ಎಂಎಸ್ (SMS) ಅಥವಾ ವಾಟ್ಸ್‌ಆ್ಯಪ್ (WhatsApp) ಮೂಲಕ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಯಾವಾಗಲೂ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಿಂದಲೇ ಡೌನ್‌ಲೋಡ್ ಮಾಡಿ.