ಉತ್ತಮ ಜಾಗದಲ್ಲಿ ನೀವು ಹಣ ಹೂಡಿಕೆ ಮಾಡ್ದಾಗ ಲಾಭ ಹೆಚ್ಚು. ನೀವು ಗಳಿಸಿದ ಹಣಕ್ಕೆ ಒಂದು ಮರ್ಯಾದೆ ಸಿಗುತ್ತೆ. ಅದೇ ತಪ್ಪು ಜಾಗದಲ್ಲಿ ಹೂಡಿಕೆ ಮಾಡಿದಾಗ ನಷ್ಟವೇ ಹೆಚ್ಚು. ಹಣ ಹೂಡಿಕೆಗೆ ಮುನ್ನ ಚಾಣಕ್ಯ ಏನು ಹೇಳ್ತಾನೆ ಕೇಳಿ. 

ಹಣ (money) ಗಳಿಸೋದು ಮಾತ್ರ ಮುಖ್ಯವಲ್ಲ. ಗಳಿಸಿದ ಹಣವನ್ನು ನೀವು ಹೇಗೆ ಖರ್ಚು ಮಾಡ್ತೀರಿ, ಎಲ್ಲಿ ಹಣ ಹೂಡಿಕೆ ಮಾಡ್ತೀರಿ ಅನ್ನೋದು ಕೂಡ ಮುಖ್ಯವಾಗುತ್ತೆ. ಸರಿಯಾದ ಸ್ಥಳದಲ್ಲಿ ಹಣ ಹೂಡಿಕೆ (investment) ಮಾಡಿದ್ರೆ ಮಾತ್ರ ನೀವು ಗಳಿಸಿದ ಹಣಕ್ಕೆ ವಾಪಸ್ ಹಣ ಸಿಗೋದು. ಇಲ್ಲ ಅಂದ್ರೆ ನಿಮ್ಮ ಗಳಿಗೆ ವ್ಯರ್ಥವಾಗುತ್ತೆ. ಆಚಾರ್ಯ ಚಾಣಕ್ಯರು ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು ಎಂದಿದ್ದಾರೆ. ಭವಿಷ್ಯದ ಬಗ್ಗೆ ಯೋಚಿಸದೆ ನೀವು ಹಣವನ್ನು ಹೂಡಿಕೆ ಮಾಡಿದರೆ, ಆರ್ಥಿಕ ನಷ್ಟವಾಗೋದಲ್ದೆ ಜೀವನದುದ್ದಕ್ಕೂ ಪಶ್ಚಾತಾಪ ಪಡ್ಬೇಕಾಗುತ್ತೆ. ಆಚಾರ್ಯ ಚಾಣಕ್ಯ, ನೀವು ಗಳಿಸಿದ ಹಣವನ್ನು ಅಪ್ಪಿತಪ್ಪಿಯೂ ಕೆಲ ಕಡೆ ಹೂಡಿಕೆ ಮಾಡ್ಬೇಡಿ ಎಂದಿದ್ದಾರೆ.

ಈ ಸ್ಥಳದಲ್ಲಿ ಹಣ ಹೂಡಿಕೆ ಮಾಡ್ಬೇಡಿ :

ಇವರ ಜೊತೆ ವ್ಯವಹಾರ ಬೇಡ : ಜ್ಞಾನ ಇಲ್ಲದ, ಬೇಜವಾಬ್ದಾರಿಯಿಂದ ವರ್ತಿಸುವ ವ್ಯಕ್ತಿಗೆ ಎಂದೂ ಹಣ ನೀಡ್ಬಾರದು. ಅವರ ಜೊತೆ ಯಾವುದೇ ಹಣಕಾಸಿನ ವ್ಯವಹಾರ ಇಟ್ಟಕೊಳ್ಬಾರದು. ಅಂತಹ ಜನರು ಹಣವನ್ನು ಸರಿಯಾಗಿ ಬಳಸೋದಿಲ್ಲ. ಅಲ್ಲದೆ ನೀವು ಕೊಟ್ಟ ಹಣವನ್ನು ಅವರು ಸರಿಯಾಗಿ ಹಿಂತಿರುಗಿಸೋದೂ ಇಲ್ಲ ಎನ್ನುತ್ತಾರೆ ಚಾಣಕ್ಯ.

ಮಾಹಿತಿ ಇಲ್ಲದೆ ಎಲ್ಲಿಯೂ ಹಣ ಹೂಡಿಕೆ ಮಾಡ್ಬೇಡಿ : ನೀವು ಹಣವನ್ನು ಹೂಡುವ ಮುನ್ನ ಅದ್ರ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ. ನೀವು ಎಲ್ಲಿ ಹಣ ಹೂಡಿಕೆ ಮಾಡ್ತಿದ್ದೀರಿ, ಅದ್ರಿಂದ ನಿಮಗೆ ಲಾಭ ಏನು ಎಂಬುದನ್ನೆಲ್ಲ ನೀವು ಅರಿಯಾಗಿ ಅರ್ಥೈಸಿಕೊಂಡಿರಬೇಕು. ಸ್ನೇಹಿತರು, ಸಂಬಂಧಿಕರು ಅಥವಾ ಇನ್ನಾರೋ ಹೇಳಿದ್ರು ಅಂತ ನೀವು ಹಣ ಹೂಡಿಕೆ ಮಾಡೋದು ಮೂರ್ಖತನ. ನಿಮಗೆ ಹಿಡಿತ ಮತ್ತು ಜ್ಞಾನವಿರುವಲ್ಲಿ ಮಾತ್ರ ನೀವು ಹಣವನ್ನು ಹೂಡಿಕೆ ಮಾಡಬೇಕು.

ಈ ಸ್ಥಳಗಳಲ್ಲಿ ನಿಮ್ಮ ಹಣ ಖರ್ಚು ಮಾಡ್ಬೇಡಿ : ಕೈನಲ್ಲಿ ಹಣ ಬರ್ತಿದ್ದಂತೆ ಮಂಗಕ್ಕೆ ಸಾರಾಯಿ ಕುಡಿಸಿದಂತೆ ಜನ ಆಡ್ತಾರೆ. ಹಣ ಸಿಗ್ತಿದ್ದಂತೆ ಅದನ್ನು ಐಷಾರಾಮಿ, ಬ್ರಾಂಡೆಡ್ ವಸ್ತುಗಳು, ದುಬಾರಿ ಗ್ಯಾಜೆಟ್ಗಳ ಮೇಲೆ ಖರ್ಚು ಮಾಡ್ತಾರೆ. ಇದು ಸಂಪತ್ತಿಗೆ ಮಾಡುವ ಅವಮಾನ ಅಂತ ಚಾಣಕ್ಯ ಹೇಳ್ತಾನೆ. ಇಂಥ ಖರ್ಚು ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಅಡಿಪಾಯವಾಗುತ್ತೆ. ಹಾಗಾಗಿ ಪ್ರದರ್ಶನಕ್ಕಾಗಿ ಹಣವನ್ನು ಎಂದಿಗೂ ಹೂಡಿಕೆ ಮಾಡ್ಬೇಡಿ. ಶೋಕಿ ಕೂಡ ಒಂದು ವ್ಯಸನ. ಈ ಚಟದಿಂದ ಹೊರ ಬರೋದು ಬಹಳ ಕಷ್ಟ.

ಈ ಜನರ ಬ್ಯುಸಿನೆಸ್ನಲ್ಲಿ ಹಣ ಹೂಡ್ಬೇಡಿ : ಬೇರೆಯವರ ಸಾಲವನ್ನು ಮೈಮೇಲೆ ಇಟ್ಕೊಂಡು ನಿಮ್ಮ ಜೊತೆಯೂ ವ್ಯವಹಾರ ನಡೆಸಲು ಮುಂದಾದ್ರೆ ಅಂಥವರ ಬ್ಯುಸಿನೆಸ್ ನಲ್ಲಿ ನಿಮ್ಮ ಹಣ ಹೂಡಿಕೆ ಮಾಡ್ಬೇಡಿ. ಆ ವ್ಯಕ್ತಿ ನಿಮಗೆ ಹಣ ಹಿಂತಿರುಗಿಸಲು ಸಾಧ್ಯವೇ ಇಲ್ಲ. ಕೆಲಸ ಮಾಡೋದ್ರಲ್ಲಿ ಆತ ಸೋಮಾರಿಯಾಗಿರ್ತಾನೆ. ಅಸಡ್ಡೆ ಸ್ವಭಾವ ಹೊಂದಿರ್ತಾನೆ.

ಇವರಿಗೆ ಹಣ ಸಾಲ ನೀಡ್ಬೇಡಿ : ಚಾಣಕ್ಯನ ಪ್ರಕಾರ, ನಿಮ್ಮ ಹಣವನ್ನು ನೀವು ಸಾಲವಾಗಿ ನೀಡುವ ಮೊದಲೇ ಅನೇಕ ಬಾರಿ ಆಲೋಚನೆ ಮಾಡ್ಬೇಕು. ಹಣವನ್ನು ಸರಳತೆಯಿಂದ ಬಳಸಬೇಕು. ಹಣಕ್ಕಾಗಿ ಮಾತ್ರ ನಿಮ್ಮೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗೆ ಹಣವನ್ನು ಎಂದಿಗೂ ವ್ಯರ್ಥ ಮಾಡಬಾರದು. ಅಂತಹ ಜನರು ನಿಮ್ಮನ್ನು ಹಣ ಪ್ರಿಂಟ್ ಮಾಡುವ ಯಂತ್ರ ಅಂತ ಭಾವಿಸಿ, ನಿಮ್ಮ ಸುಲಿಗೆ ಮಾಡ್ತಾರೆ.

ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ : ಇತ್ತೀಚಿನ ದಿನಗಳಲ್ಲಿ ಜನರನ್ನು ತ್ವರಿತವಾಗಿ ಶ್ರೀಮಂತರನ್ನಾಗಿ ಮಾಡುವ ಅನೇಕ ಯೋಜನೆಗಳ ಪ್ರಚಾರ ನಡೆಯುತ್ತಿದೆ. ಒಂದಕ್ಕೆ ಡಬಲ್ ಹಣ ನೀಡುವ ಭರವಸೆ ನೀಡಲಾಗುತ್ತೆ. ನೀವದನ್ನು ನಂಬಿ ಅಲ್ಲಿ ಹಣ ಹೂಡಿಕೆ ಮಾಡ್ಬೇಡಿ.