Asianet Suvarna News Asianet Suvarna News

ಐಫೋನ್‌ನಲ್ಲಿ ಸ್ಯಾಟಲೈಟ್ ಕರೆ ಸೌಲಭ್ಯ: ನೆಟ್‌ವರ್ಕ್‌ ಬೇಕೆಂದಿಲ್ಲ!

* ಬರುತ್ತಿದೆ, ಉಪಗ್ರಹ ಮೂಲಕ ಕರೆ ಮಾಡುವ ಆ್ಯಪಲ್‌ ಐಫೋನ್‌

* ಮೊಬೈಲ್‌ ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು

* ಆ್ಯಪಲ್‌ನಿಂದ ಮುಂದಿನ ತಿಂಗಳು ಐಫೋನ್‌ 13 ಬಿಡುಗಡೆ

iPhone 13 series to feature low earth orbit satellite communication connectivity pod
Author
Bangalore, First Published Aug 31, 2021, 8:04 AM IST

ನ್ಯೂಯಾರ್ಕ್(ಆ.31): ಮೊಬೈಲ್‌ ಟವರ್‌ ಇಲ್ಲದ ಕಡೆ ಹಾಗೂ ನೆಟ್‌ವರ್ಕ್ ಸಮಸ್ಯೆ ಇರುವ ಸ್ಥಳಗಳಲ್ಲೂ ಕರೆ ಮಾಡಬಹುದಾದ, ಸಂದೇಶ ಕಳುಹಿಸಬಹುದಾದ ವಿಶಿಷ್ಟಫೋನ್‌ವೊಂದನ್ನು ಅಮೆರಿಕದ ಪ್ರಸಿದ್ಧ ಆ್ಯಪಲ್‌ ಕಂಪನಿ ಮುಂದಿನ ತಿಂಗಳು ಮಧ್ಯಭಾಗದಲ್ಲಿ ಬಿಡುಗಡೆ ಮಾಡುತ್ತಿದೆ.

ಗುಣಮಟ್ಟಹಾಗೂ ವಿಶೇಷತೆಗಳಿಂದಾಗಿ ಜಗದ್ವಿಖ್ಯಾತವಾಗಿರುವ ಆ್ಯಪಲ್‌ ಕಂಪನಿಯ ಐಫೋನ್‌ 13 ಮಾದರಿಯಲ್ಲಿ ಉಪಗ್ರಹದಿಂದ ಕರೆ ಮಾಡಬಹುದಾದ ಸೌಲಭ್ಯ ಇದೆ ಎಂದು ವರದಿಗಳು ತಿಳಿಸಿವೆ.

ಇದಕ್ಕಾಗಿ ಈ ಮೊಬೈಲ್‌ ಫೋನ್‌ನಲ್ಲಿ ಕ್ವಾಲ್‌ಕಾಮ್‌ ಎಕ್ಸ್‌60 ಚಿಪ್‌ ಅನ್ನು ಬಳಸಲಾಗಿದೆ. ಈ ವಿಶೇಷ ಚಿಪ್‌ನ ಪರಿಣಾಮ, ಆ್ಯಪಲ್‌ನ ಮೊಬೈಲ್‌ ಫೋನ್‌ ಭೂಮಿಯ ಮೇಲಿರುವ ಟವರ್‌ಗಳ ಬದಲಿಗೆ ಭೂ ಸನಿಹ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳ ಜತೆ ನೇರ ಸಂಪರ್ಕ ಸಾಧಿಸುತ್ತದೆ. ಹೀಗಾಗಿ ಗ್ರಾಹಕರು ದೂರಸಂಪರ್ಕ ಸೇವೆಯನ್ನು ಬಳಸಲು ಅವಕಾಶ ಸಿಗುತ್ತದೆ. ಉಪಗ್ರಹಗಳನ್ನು ಬಳಸುವ ಸಂಬಂಧ ಗ್ಲೋಬಲ್‌ ಸ್ಟಾರ್‌ ಕಂಪನಿ ಜತೆ ಪಾಲುದಾರಿಕೆ ಮಾಡಿಕೊಂಡು, ಅನುಮತಿಗಾಗಿ ಆ್ಯಪಲ್‌ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ಉಪಗ್ರಹ ಬಳಸಿ ಕರೆ ಮಾಡಬಹುದಾದ ಫೋನ್‌ ಕುರಿತು ಆ್ಯಪಲ್‌ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಆ್ಯಪಲ್‌ ಐಫೋನ್‌ಗಳಲ್ಲಿರುವ ವಿಶೇಷತೆಗಳನ್ನು ಬಿಡುಗಡೆಗೂ ಮುನ್ನವೇ ನಿಖರವಾಗಿ ಹೇಳುವ ವಿಶ್ಲೇಷಕ ಮಿಂಗ್‌- ಚಿ ಕುವೋ ಅವರು ಉಪಗ್ರಹ ಫೋನ್‌ ಸೌಲಭ್ಯದ ಬಗ್ಗೆ ಮಾಹಿತಿ ನೀಡಿರುವುದು ಸಂಚಲನಕ್ಕೆ ಕಾರಣವಾಗಿದೆ.

ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಅಂತಹ ಕಡೆ ಐಫೋನ್‌ನ ಈ ಸೌಲಭ್ಯ ನೆರವಿಗೆ ಬರಲಿದೆ. ಆದರೆ ಇದಕ್ಕೆ ಆ್ಯಪಲ್‌ ಕಂಪನಿ ಶುಲ್ಕ ವಿಧಿಸುತ್ತದೆಯೇ? ಗ್ರಾಹಕರು ನಿರಂತರವಾಗಿ ಉಪಗ್ರಹವನ್ನು ಬಳಸಿ ಕರೆ ಮಾಡಬಹುದೇ? ಅಥವಾ ಸೆಲ್ಯುಲರ್‌ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಮಾತ್ರ ಈ ಸೌಲಭ್ಯ ಸಿಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

2019ರಿಂದಲೇ ಸಿದ್ಧತೆ:

2019ರಲ್ಲೇ ಆ್ಯಪಲ್‌ ಸಂಸ್ಥೆ ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಮತ್ತು ಏರೋಸ್ಪೇಸ್‌ ಎಂಜಿನಿಯರ್‌ಗಳನ್ನು ನೇಮ ಮಾಡಿಕೊಂಡಿತ್ತು. ಆಗ ಹೊಸ ಸಂಪರ್ಕ ವ್ಯವಸ್ಥೆಯ ಬಗ್ಗೆ ಅವಿಷ್ಕಾರಕ್ಕಾಗಿ ಈ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಅದು, ಉಪಗ್ರಹ ಕರೆ ವ್ಯವಸ್ಥೆ ಅಭಿವೃದ್ಧಿಗೆ ಎಂಬುದು ಇದೀಗ ಖಚಿತಪಟ್ಟಿದೆ.

Follow Us:
Download App:
  • android
  • ios