OnePlus 10 Ultra: ಒನ್‌ಪ್ಲಸ್ 10 ಪ್ರೊ ಬೆನ್ನಲ್ಲೇ ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್?
*ಚೀನಾದಲ್ಲಿ ಬಿಡುಗಡೆಯಾಗಿರುವ ಒನ್‌ಪ್ಲಸ್ 10 ಪ್ರೋ ಜಾಗತಿಕ ಲಾಂಚ್ ಆಗಲಿದೆ
*ಈ ಫೋನ್ ಬೆನ್ನಲ್ಲೇ ಒನ್‌ಪ್ಲಸ್ 10 ಅಲ್ಟ್ರಾ ಕೂಡ ಈ ವರ್ಷದ ಉತ್ತರಾರ್ಧದಲ್ಲಿ ಲಾಂಚ್ ಆಗಬಹುದು.
* ಸದ್ಯ ಒನ್‌ಪ್ಲಸ್ 10 ಅಲ್ಟ್ರಾ ವಿವಿಧ ಪರೀಕ್ಷೆಯ ಹಂತದಲ್ಲಿದೆ.
Tech Desk: ಚೀನಾ (China) ಮೂಲದ ಒನ್‌ಪ್ಲಸ್ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಭಾರತ (India)ವು ಸೇರಿದಂತೆ ಜಗತ್ತಿನಾದ್ಯಂತ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ಬಳಕೆದಾರರಿಗೆ ಕಟಿಂಗ್ ಎಡ್ಜ್ ತಂತ್ರಜ್ಞಾನ ಲಾಭಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ ಈ ಒನ್ ಪ್ಲಸ್. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಪಾಲನ್ನ ಹೊಂದಿರುವ ಒನ್‌ಪ್ಲಸ್ ಇದೀಗ ಆ ಪಟ್ಟಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಸೇರಿಸುತ್ತಿದೆ. ಒನ್‌ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ ತಿಂಗಳಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ವಿಶೇಷ ಎಂದರೆ, ಫೋನ್ ಅನ್ನು ಕಂಪನಿಯು ಈ ಹಿಂದೆಯೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹಾಗೆಯೇ ಇನ್ನೂಂದು ಅಚ್ಚರಿ ಸುದ್ದಿಯೊಂದು ಕೇಳಿ ಬರುತ್ತಿದೆ. ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಸೇರಿಸುವ ಸಾಧ್ಯತೆ ಇದೆ. ಕಂಪನಿಯು ಇದೇ ವರ್ಷದ ಉತ್ತರಾರ್ಧದಲ್ಲಿ ಒನ್‌ಪ್ಲಸ್ 10 ಅಲ್ಟ್ರಾ (OnePlus 10 Ultra) ಫೋನ್ ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Meta Fastest Super Computer: ಫೇಸ್‌ಬುಕ್‌ನಿಂದ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್!
ಒನ್‌ಪ್ಲಸ್ 10 ಅಲ್ಟ್ರಾ (OnePlus 10 Ultra) ಸ್ಮಾರ್ಟ್‌ಫೋನ್ ಬಗ್ಗೆ ಆನ್‌ಲೈನ್‌ನಲ್ಲಿ ಕೆಲವು ಮಾಹಿತಿಗಳು ಸೋರಿಕೆಯಾಗುತ್ತಿರುವುದರಿಂದ ಬಳಕೆದಾರರಲ್ಲೂ ಹೆಚ್ಚಿನ ಕುತೂಹಲ ಮೂಡಲು ಕಾರಣವಾಗಿದೆ. ಟಿಪಸ್ಟರ್ ಯೋಗೇಶ್ ಬ್ರಾರ್ ಅವರ ಪ್ರಕಾರ, ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ಅಲ್ಟ್ರಾ ಫ್ಲ್ಯಾಗ್‌ಶಿಫ್‌ಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಕಾರ್ಯನಿರತವಾಗಿದೆ. ಸದ್ಯ ಈ ಫೋನು ಎಂಜಿನಿಯರಿಂಗ್ ವೆರಿಫಿಕೇಷನ್ ಟೆಸ್ಟಿಂಗ್ (Engineering Verification Testing-EVT) ಹಂತದಲ್ಲಿದೆ. ಸಾಮಾನ್ಯವಾಗಿ EVT ಎಂಬುದು, ಯಾವುದೇ ಸ್ಮಾರ್ಟ್‌ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಮೊದಲನೆಯ ಹಂತವಾಗಿರುತ್ತದೆ.
ಈ ಟೆಸ್ಟಿಂಗ್ ಮುಗಿದ ಬಳಕವಷ್ಟೇ ಡಿಸೈನ್ ವೆರಿಫಿಕೇಷನ್ ಟೆಸ್ಟಿಂಗ್ (DVT) ಹಂತಕ್ಕೆ ಸ್ಮಾರ್ಟ್‌ಫೋನ್ ಹೋಗುತ್ತದೆ. ಆ ಬಳಿಕವೇ ಪ್ರಾಡಕ್ಟ್ ವೆರಿಫಿಕೇಷನ್ ಟೆಸ್ಟಿಂಗ್ (PVT) ನಡೆಯುತ್ತದೆ. ಒಂದು ಸ್ಮಾರ್ಟ್‌ಫೋನ್ ಈ ಮೂರು ಮಾದರಿಯ ಟೆಸ್ಟಿಂಗ್ ಹಂತಗಳನ್ನು ಪೂರೈಸಲೇಬೇಕಾಗುತ್ತದೆ. ಈಗ ಒನ್‌ಪ್ಲಸ್ 10 ಅಲ್ಟ್ರಾ ಈ ಹಂತಗಳನ್ನು ಪೂರೈಸಬೇಕಿದೆ.
ಇದೇ ವೇಳೆ, ಒನ್ ಪ್ಲಸ್ ಕಂಪನಿಯು ಇನ್ನೂ ಹಲವು ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒನ್‌ಪ್ಲಸ್ ನಾರ್ಡ್ 2 ಸಿಇ (OnePlus Nord 2CE), ಒನ್‌ಪ್ಲಸ್ ನಾರ್ಡ್ 2 ಸಿಇ 5ಜಿ (OnePlus Nord 2 CE 5G) ಸ್ಮಾರ್ಟ್‌ಫೋನ್ ಅನ್ನು ಕಂಪನಿಯು ಮುಂಬರುವ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ನಿಖರವಾಗಿ ಹೇಳಬೇಕೆಂದರೆ, ಫೆಬ್ರವರಿ 11ರಂದು ಈ ಫೋನುಗಳು ಲಾಂಚ್ ಆಗಲಿವೆ ಎನ್ನಲಾಗುತ್ತಿದೆ. ಆದರೆ, ಈ ಫೋನುಗಳ ವಿಶೇಷತೆಗಳ ಬಗ್ಗೆ ಕಂಪನಿಯು ಯಾವುದೇ ರೀತಿಯ ಮಾಹಿತಿಯನ್ನು ಮಾತ್ರ ಇದುವರೆಗೂ ಹಂಚಿಕೊಂಡಿಲ್ಲ. ಕೆಲವು ವರದಿಗಳ ಪ್ರಕಾರ ಫೋನುಗಳು ಭಾರತೀಯ ಮಾರುಕಟ್ಟೆಯಲ್ಲೂ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಿಂದೆಯೂ ಹಲವು ಟಿಪ್ಸಟರ್‌ಗಳನ್ನು ಮಾಹಿತಿಯನ್ನು ಸೋರಿಕೆ ಮಾಡಿದ್ದರು.
ಇದನ್ನೂ ಓದಿ: NASA JW Telescope: ಭೂಮಿಯಿಂದ 15,00,000 ಕಿ.ಮೀ ದರೂದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಸ್ಥಿರ!
ಟಿಪ್ಸಟರ್‌ಗಳು ಬಹಿರಂಗ ಮಾಡಿರುವ ಮಾಹಿತಿಯ ಪ್ರಕಾರ, ಒನ್‌ಪ್ಲಸ್ ತನ್ನ ಮುಂಬರುವ ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ MariSilicon X NPU ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷ ಎಂದರೆ, ಒಪ್ಪೋ (Oppo) ಕಳೆದ ತಿಂಗಳವಷ್ಟೇ ಇದನ್ನು ಅನಾವರಣಗೊಳಿಸಿತ್ತು. ಒನ್‌ಪ್ಲಸ್ 10 ಅಲ್ಟ್ರಾ ಸ್ಮಾರ್ಟ್‌ಫೋನ್ ಸೋರಿಕೆಯಾಗುತ್ತಿರುವ ಮಾಹಿತಿಗಳ ಬಳಕೆದಾರರಲ್ಲಿ ಕುತೂಹಲವನ್ನು ಹೆಚ್ಚಿಸಿವೆ. ಬಹುಶಃ ಈ ವರ್ಷದ ಉತ್ತರಾರ್ಧದಲ್ಲಿ ಈ ಫೋನು ಬಿಡುಗಡೆಯಾಗುವ ಸಾಧ್ಯತೆ ಇದೆ.