BBK Electronics: ಚೀನೀ ಮೋಸ, ಐದು ಮೊಬೈಲ್ ಬ್ರಾಂಡ್ಗಳಿಗೆ ಒಂದೇ ಕಂಪನಿ!
BBK Electronics Brands: ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಎನ್ನುವ ಕಂಪನಿಯ ಒಡೆತನದಲ್ಲಿ ಐದು ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿವೆ
ಲಡಾಖ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ಮಧ್ಯೆ ಸಂಘರ್ಷ ನಡೆದ ನಂತರ ಬಾಯ್ಕಾಟ್ ಚೀನಾ (Boycott China) ಅಭಿಯಾನ ಜೋರಾಗಿದೆ. ಚೀನಾ ಕಂಪನಿಗಳು ಉತ್ಪಾದಿಸೋ ವಸ್ತುಗಳ ವಿರುದ್ಧ ಅಭಿಯಾನವೇ ಆರಂಭವಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ದೇಶಾದ್ಯಂತ ಚೀನಾ ಮೊಬೈಲ್ ನದ್ದೇ (China Mobile) ಪಾರುಪತ್ಯ. ನಿಮಗೆ ಆಶ್ಚರ್ಯವಾಗಬಹುದು, ದೇಶದಲ್ಲಿ ಅತಿ ಹೆಚ್ಚು ಫೋನ್‌ಗಳನ್ನು ಮಾರಾಟ ಮಾಡುವ ಚೀನಾದ ಐದು ಪ್ರಮುಖ ಬ್ರ್ಯಾಂಡ್‌ಗಳಿಗೆ ಮೂಲ ಒಂದೇ ಕಂಪನಿ. ಆದರೆ ಭಾರತದಲ್ಲಿ ಬೇರೆ ಬೇರೆ ಬ್ರಾಂಡ್ಗಳ ಹೆಸರಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಮಾರಾಟ ಮಾಡುತ್ತೆ. ಗುಣಮಟ್ಟ, ತಂತ್ರಜ್ಞಾನ, ಸಾಮರ್ಥ್ಯದಲ್ಲಿ ವ್ಯತ್ಯಾಸವಿದ್ದರೆ ಬೇರೆ ಬೇರೆ ಬ್ರಾಂಡ್ಗಳನ್ನು ಒಪ್ಪಿಕೊಳ್ಳಬಹುದು. ಆದ್ರೆ ಐದು ಬ್ರಾಂಡ್ ಗಳಲ್ಲೂ ಒಂದೇ ರೀತಿಯ ಫೀಷರ್ಸ್ ಗಳಿದ್ದರೂ ಬೇರೆ ಬೇರೆ ಬ್ರಾಂಡ್ಗಳಲ್ಲಿ ಬಿಡುಗಡೆ ಮಾಡುತ್ತೆ. ಹಣ ಮಾಡುವ ಏಕೈಕ ಉದ್ದೇಶದಿಂದ ಕೆಲ ಬ್ರಾಂಡ್ಗಳಿಗೆ ಭಾರೀ ಬೆಲೆ ವಿಧಿಸಿ, ಇನ್ನು ಕೆಲ ಬ್ರಾಂಡ್ ಗಳಿಗೆ ಕಡಿಮೆ ಬೆಲೆ ಹಾಕಲಾಗುತ್ತೆ.
ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಎನ್ನುವ ಕಂಪನಿಯ ಒಡೆತನದಲ್ಲಿ ಐದು ಪ್ರಮುಖ ಸ್ಮಾರ್ಟ್‌ಫೋನ್ (Smartphones) ಬ್ರ್ಯಾಂಡ್‌ಗಳಿವೆ! 1998ರಲ್ಲಿ ಚೀನಾದಲ್ಲಿ ಆರಂಭವಾದ ಬಿಬಿಕೆ ಎಲೆಕ್ಟ್ರಾನಿಕ್ಸ್ (BBK Electronics) ಕಂಪನಿ ಇವತ್ತು ಜಗತ್ತಿನ ದೊಡ್ಡ ಮೊಬೈಲ್ ಕಂಪನಿಗಳಲ್ಲೊಂದು. ಒನ್‌ಪ್ಲಸ್ (One Plus), ಒಪ್ಪೋ (Oppo), ವಿವೋ (Vivo), ಐಕ್ಯೂ (iQOO) ಮತ್ತು ರಿಯಲ್‌ಮಿ (Realme) ಎಲ್ಲವೂ ಇದೇ ಕಂಪನಿಯ ಫೋನ್‌ಗಳು. ಈ ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ, ಬ್ಲೂರೇ ಪ್ಲೇಯರ್, ಹೆಡ್‌ಫೋನ್, ಸ್ಮಾರ್ಟ್‌ಫೋನ್, ಟಿವಿ ಮಾತ್ರವಲ್ಲದೆ, ಗ್ಯಾಜೆಟ್‌ಗಳನ್ನು ಉತ್ಪಾದಿಸುತ್ತದೆ.
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಉತ್ಪಾದನೆ ಮತ್ತು ಮಾರುಕಟ್ಟೆ ಪಾಲಿನಲ್ಲಿ ಸ್ಯಾಮ್‌ಸಂಗ್ ಮೊದಲ ಸ್ಥಾನದಲ್ಲಿದೆ. ಅದರ ನಂತರದ ಸ್ಥಾನದಲ್ಲಿದ್ದ ಹುವಾವೆ ಮತ್ತು ಆ್ಯಪಲ್ (Apple) ಕಂಪನಿಯನ್ನ ಹಿಂದಿಕ್ಕಿ, ಬಿಬಿಕೆ ಎಲೆಕ್ಟ್ರಾನಿಕ್ಸ್ ಎರಡನೇ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಾರಣ ಭಾರತದ ಮಾರುಕಟ್ಟೆ. ಚೀನಾ ಹೊರತುಪಡಿಸಿದರೆ, ಬಿಬಿಕೆ ಕಂಪನಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ!
ಆಪಲ್ ಐಫೋನ್ 15 ಭಾರತದಲ್ಲೇ ಉತ್ಪಾದನೆ, ಎಷ್ಟು ನಿಜ?
ಒನ್‌ಪ್ಲಸ್, ಒಪ್ಪೋ, ವಿವೋ, ರಿಯಲ್‌ಮಿ ಮತ್ತು ಐಕ್ಯೂ ಎನ್ನುವ ಐದು ಪ್ರಮುಖ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಬಿಬಿಕೆ ಒಡೆತನದಲ್ಲಿವೆ. ಸ್ಮಾರ್ಟ್ ಫೋನ್ ಗಳನ್ನು ಕೊಳ್ಳುವ ಗ್ರಾಹಕ ಇವೆಲ್ಲವೂ ಐದು ಬೇರೆ ಬೇರೆ ಕಂಪನಿಗಳವು ಅಂದುಕೊಂಡು ಖರೀದಿಬೇಕು ಅನ್ನೋ ತಂತ್ರ ಅನುಸರಿಸುತ್ತೆ ಈ ಕಂಪನಿ. ಒಂದೇ ಬ್ರಾಂಡ್ ಆದರೆ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಐದು ಬ್ರಾಂಡ್‌ನಲ್ಲಿ ಮೊಬೈಲ್ ಉತ್ಪಾದನೆ ಮಾಡುತ್ತೆ ಈ ಕಂಪನಿ. ಐದು ಬ್ರಾಂಡ್ಗಳಲ್ಲಿ ಬಳಸಲಾಗುವ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಗಳು ಒಂದೇ ಕಂಪನಿಯಲ್ಲಿ ವಿನ್ಯಾಸಗೊಳಿಸಲಾಗುತ್ತೆ. ಒಂದೇ ಕಂಪನಿಯಲ್ಲೇ ಹಲವು ಮೊಬೈಲ್ ಗಳನ್ನ ಉತ್ಪಾದನೆ ಮಾಡಿ ಅವುಗಳಿಗೆ ಬೇರೆ ಬೇರೆ ಬ್ರಾಂಡ್ ನಾಮಕರಣ ಮಾಡುತ್ತೆ ಈ ಕಂಪನಿ.
ಜಗತ್ತಿನ ಬಹುಪಾಲು ಮೊಬೈಲ್ ಕಂಪನಿಗಳು ಕೇವಲ ಒಂದೇ ಬ್ರಾಂಡ್‌ನಲ್ಲಿ ಮೊಬೈಲನ್ನ ಮಾರಾಟ ಮಾಡುತ್ವೆ. ಅದು ಆ್ಯಪಲ್ ಇರಬಹುದು, ಸ್ಯಾಮ್ ಸಂಗ್ ಇರಬಹುದು, ನೋಕಿಯಾ ಇರಬಹುದು. ಆದ್ರೆ ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪನಿ ಮಾರುಕಟ್ಟೆಯಲ್ಲಿ ಬಹುದೊಡ್ಡ ಪಾಲು ಪಡೆಯಲು ಬೇರೆ ಬೇರೆ ಬ್ರಾಂಡ್ಗಳ ತಂತ್ರ ಅನುಸರಿಸುತ್ತದೆ. ಅಂದ್ರೆ ಒಂದೇ ರೀತಿಯ ಮೊಬೈಲ್ ಸಾಮರ್ಥ್ಯ, ಗುಣಮಟ್ಟವಿರುವ ಮೊಬೈಲ್ಗಳಿಗೆ ಅಲ್ಪಸ್ವಲ್ಪ ಹೊರ ವಿನ್ಯಾಸ ಬದಲಿಸಿ ಬೇರೆ ಬ್ರಾಂಡ್ ಹೆಸರಲ್ಲಿ ಬಿಡುಗಡೆ ಮಾಡಲಾಗುತ್ತೆ. ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಐದು ಬ್ರಾಂಡ್ಗಳೂ ಕೊಟ್ಯಂತರ ರೂಪಾಯಿ ಹಣವನ್ನ ಜಾಹಿರಾತಿಗಾಗಿ ಖರ್ಚು ಮಾಡುತ್ತವೆ.