ಮಂಡ್ಯ (ಅ.17): ರೈತರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ 10 ವರ್ಷಗಳ ನಂತರ 50 ದಿನಗಳ ಕಾಲ ನೀರಿನ ಸಂಗ್ರಹ ಗರಿಷ್ಠ ಮಿತಿ ಕಾಯ್ದುಕೊಂಡಿರುವುದು ದಾಖಲೆಯಾಗಿದೆ. ಒಂದೇ ವರ್ಷದಲ್ಲಿ ಮೂರು ಬಾರಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿದ್ದರೂ ನೀರಿನ ಗರಿಷ್ಠಮಿತಿ ಕಾಯ್ದುಕೊಂಡಿರುವುದು ದಶಕದ ಬಳಿಕ ಇದೇ ಮೊದಲು.

2006 ರಲ್ಲಿ 90 ದಿನಗಳ ಕಾಲ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿತ್ತು. ಆ ನಂತರ ಇಷ್ಟುಧೀರ್ಘ ಅವಧಿವರೆಗೆ ಅಣೆಕಟ್ಟೆಯಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ 50 ದಿನಗಳ ಕಾಲ ಅಣೆಕಟ್ಟೆಸಂಪೂರ್ಣ ಭರ್ತಿಯಾಗಿ ನೀರು ಸಂಗ್ರಹವಾಗಿದೆ. ಕಳೆದ ಎರಡು ದಿನಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಾಗಿದೆ. ಬುಧವಾರ ಅಣೆಕಟ್ಟೆಯಿಂದ 20 ಸಾವಿರ ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ತಮಿಳುನಾಡಿಗೆ ಹರಿದು ಹೋಗುತ್ತಿದೆ. 13 ವರ್ಷದ ನಂತರ ಸಂಭ್ರಮ: ಅಣೆಕಟ್ಟು 120.80 ಅಡಿ ತುಂಬಿ 50 ದಿನಗಳು ಕಳೆದಿದೆ. 2006 ವರ್ಷ ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ 50 ದಿನಗಳ ತನಕ ತುಂಬಿದೆ.