ಮಂಡ್ಯ(ನ.03): ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಆಗಮಿಸಿದ ಸೈನಿಕ ಡಿ.ಸತೀಶ್‌ ಅವರಿಗೆ ಶನಿವಾರ ಜಿಲ್ಲಾ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು.

ತಾಲೂಕಿನ ಕೊತ್ತತ್ತಿ ಗ್ರಾಮದ ದೇವೇಗೌಡರ ಪುತ್ರ ಡಿ.ಸತೀಶ್‌ ಸಿಕ್ಕಿಂ, ರಾಜಸ್ಥಾನ, ಪಂಜಾಬ್‌ ಸೇರಿದಂತೆ ವಿವಿಧೆಡೆ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಶನಿವಾರ ನಗರಕ್ಕೆ ಆಗಮಿಸಿದರು. ಇವರನ್ನು ರೈಲ್ವೆ ನಿಲ್ದಾಣದಲ್ಲಿಯೇ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮೊದಲು ಅಭಿನಂದಿಸಿ ಬಳಿಕ ಬೆಳ್ಳಿ ಸಾರೋಟಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ವೇದಿಕೆ ಸದಸ್ಯರು ಬೈಕ್‌ ರಾರ‍ಯಲಿ ನಡೆಸಿದರು. ಅಂತೆಯೇ, ಸಾರ್ವಜನಿಕರು ಚಪ್ಪಾಳೆ ತಟ್ಟಿಗೌರವ ಸೂಚಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಲಿಂಗೇಗೌಡ ಮಾತನಾಡಿ, ದೇಶದೊಳಗೆ ನಾವು ನೆಮ್ಮದಿಯಿಂದ ಇರುವುದಕ್ಕೆ ಸೈನಿಕರೇ ಕಾರಣ. ಹಗಲು ರಾತ್ರಿಯೆನ್ನದೆ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಅದೇ ರೀತಿ ಡಿ.ಸತೀಶ್‌ ಅವರು ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ್ದಾರೆ. ಆದ್ದರಿಂದ, ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂಲಕ ಅವರ ಸೇವೆಗೆ ನಮ್ಮ ಕೃತಜ್ಞತೆ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ.

'ಸುಳ್ ಹೇಳೋದ್ರಲ್ಲಿ ಮೊಯ್ಲಿನ ಮೀರಿಸ್ತಿದ್ದಾರೆ ಸಿದ್ದು, ಬಾಯ್ಬಿಟ್ರೆ ಬರೀ ಸುಳ್ಳು'...!

ನಿವೃತ್ತ ಸೈನಿಕ ಡಿ.ಸತೀಶ್‌ ಮಾತನಾಡಿ, ಇದೊಂದು ಹೃದಯಸ್ಪರ್ಶಿ ಕ್ಷಣ. ಹಲವು ವರ್ಷ ದೇಶ ಸೇವೆ ಮಾಡಿ ತವರಿಗೆ ಬಂದಾಗ ಇಂತಹದೊಂದು ಸ್ವಾಗತ ಸಿಕ್ಕಿದ್ದು ಅವಿಸ್ಮರಣೀಯ. ಇದು ದೇಶದ ಸಾರ್ವಜನಿಕರಿಗೆ ಸೈನಿಕರ ಮೇಲಿನ ಗೌರವವನ್ನು ತೋರಿಸುತ್ತದೆ ಎಂದರು. ಈ ವೇಳೆ ಶಶಿಧರ್‌, ಕುಮಾರ್‌, ಬಿ.ಪಿ.ಪ್ರಕಾಶ್‌, ಬೈರಾಜು, ವೆಂಕಟೇಶ್‌, ಜಗನ್ನಾಥ್‌ ಶೆಟ್ಟಿ, ಶ್ರೀನಿವಾಸ್‌ ಶೆಟ್ಟಿ ಇತರರಿದ್ದರು.

KR ಪೇಟೆ ಉಪಸಮರ: ತಮ್ಮದೇ ತಂತ್ರ ರೂಪಿಸಿದ ಸುಮಲತಾ ಚಿತ್ತ ಎತ್ತ..?