ಜಮೀನು ಸ್ವಾಧೀನಕ್ಕೆ ಪೊಲೀಸ್‌ ರಕ್ಷಣೆ ನೀಡಲು ರೈತನಿಂದ 22ಸಾವಿರ ರು.ಲಂಚ ಸ್ವೀಕಾರ ಮಾಡುತ್ತಿದ್ದ ಕೆ.ಆರ್‌ .ಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯ ಎಎಸ್‌ಐ ಈರೇಗೌಡ ಎಸಿಬಿ ಬಲೆಗೆ ಬಿದ್ದಿದ್ದಾರೆ. ಲಂಚದ ಹಣದ ಸಮೇತ ಎಎಸ್‌ಐ ಈರೇಗೌಡ ಅವರನ್ನು ಬಂಧಿಸಲಾಗಿದೆ.

ಮಂಡ್ಯ(ಅ.23): ಜಮೀನು ಸ್ವಾಧೀನಕ್ಕೆ ಪೊಲೀಸ್‌ ರಕ್ಷಣೆ ನೀಡಲು ರೈತನಿಂದ 22ಸಾವಿರ ರು.ಲಂಚ ಸ್ವೀಕಾರ ಮಾಡುತ್ತಿದ್ದ ಕೆ.ಆರ್‌ .ಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯ ಎಎಸ್‌ಐ ಈರೇಗೌಡ ಅವರನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಮೇತ ಬಂಧಿಸಿರುವ ಘಟನೆ ನಡೆದಿದೆ.

ಕೆ.ಆರ್‌ .ಪೇಟೆ ತಾಲೂಕಿನಹೆಮ್ಮನಹಳ್ಳಿ ಗ್ರಾಮದ ರೈತ ಉಮೇಶಗೌಡರು ತಮ್ಮ ಜಮೀನನ್ನು ಅಳತೆ ಮಾಡಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಯಾವುದೇ ತಂಟೆ ತಕರಾರು ಬಾರದಂತೆ ಪೊಲೀಸ್‌ ರಕ್ಷಣೆ ನೀಡುವಂತೆ ತಹಸೀಲ್ದಾರ್‌ ಮೂಲಕ ಗ್ರಾಮಾಂತರ ಪೊಲೀಸರಿಗೆ ಪತ್ರ ಬರೆದಿದ್ದರು.

'ಜಾಕ್‌ವೆಲ್ ನನ್ನ ಸಮಾಧಿ ಮೇಲೆ ಅಳವಡಿಸಿ': ಕುಡಿಯುವ ನೀರಿನಲ್ಲೂ ಕೈ ಶಾಸಕನ ರಾಜಕೀಯ..!

ಈ ಹಿನ್ನೆಲೆಯಲ್ಲಿ ರೈತ ಉಮೇಶಗೌಡ ರಕ್ಷಣೆ ನೀಡುವಂತೆ ಎಎಸ್‌ಐ ಈರೇಗೌಡ ಅವರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ತಕರಾರು ಇರುವ ಜಮೀನಿಗೆ ರಕ್ಷಣೆ ನೀಡಬೇಕಾದರೆ 30 ಸಾವಿರ ಲಂಚ ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ರೈತನಿಗೆ ಕಳೆದ ಒಂದೂವರೆ ತಿಂಗಳಿನಿಂದಲೂ ರಕ್ಷಣೆ ನೀಡಲು ಒಂದಲ್ಲ ಒಂದು ಸಬೂಬು ಹೇಳುತ್ತಾ ಬಂದಿದ್ದರು.

ಕೊನೆಗೆ ರೈತ ಉಮೇಶಗೌಡ ಅವರು ನನ್ನ ಬಳಿ ಹಣವಿಲ್ಲ ಸಾಲ ಮಾಡಿ 20 ಸಾವಿರ ಕೊಡುತ್ತೇನೆ ದಯಮಾಡಿ ಜಮೀನು ಸ್ವಾಧೀನಕ್ಕೆ ಪಡೆಯಲು ರಕ್ಷಣೆ ಕೊಡಿ ಎಂದು ಕೇಳಿಕೊಂಡಿದ್ದಾನೆ. ಈ ವೇಳೆ ಎಎಸ್‌ಐ ಈರೇಗೌಡ 25 ಸಾವಿರಕ್ಕೆ ಒಪ್ಪಿಕೊಂಡು ಅಡ್ವಾನ್ಸ್‌ ಆಗಿ 22 ಸಾವಿರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ರೋಸಿಹೋದ ರೈತ ಉಮೇಶಗೌಡ ಅವರು ಭ್ರಷ್ಟಪೊಲೀಸ್‌ ಅಧಿಕಾರಿಗೆ ಬುದ್ದಿ ಕಲಿಸಬೇಕೆಂದು ತೀರ್ಮಾನಿಸಿ ಮಂಡ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಲಾಖೆಗೆ ಅ.21ರಂದು ಬೆಳಿಗ್ಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.

ಏಕಾಏಕಿ ಸುರಿದ ಮಳೆಗೆ ಭತ್ತದ ಗದ್ದೆ ಸಂಪೂರ್ಣ ನಾಶ..!

ಈ ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರ ಕಚೇರಿಯ ದ್ವಾರದ ಮುಂಭಾಗದಲ್ಲಿ ರೈತ ಉಮೇಶಗೌಡ ಅವರಿಂದ ಎಎಸ್‌ಐ ಈರೇಗೌಡ ಅವರು 22 ಸಾವಿರ ರು.ಗಳನ್ನು ಲಂಚ ಸ್ವೀಕರಿಸುತ್ತಿದ್ದಾಗ ದಿಢೀರ್‌ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಇಲಾಖೆಯ ಎಸ್‌ಪಿ ಜಿ.ಕೆ.ರಶ್ಮಿ ಅವರ ಮಾರ್ಗದರ್ಶನದಲ್ಲಿ ಎಸಿಬಿ ಡಿಎಸ್‌ಪಿ ಮಂಜುನಾಥ್‌, ಇನ್ಸ್‌ ಪೆಕ್ಟರ್‌ ಸತೀಶ್‌, ರವಿಶಂಕರ್‌, ಸಿಬ್ಬಂದಿಯಾದ ವೆಂಕಟೇಶ್‌, ಮಹಾದೇವ್‌, ಪಾಪಣ್ಣ, ಮಹೇಶ್‌ ನೇತೃತ್ವದ ಎಸಿಬಿ ಅಧಿಕಾರಿಗಳ ತಂಡವು ಈರೇಗೌಡ ಅವರನ್ನು ಲಂಚದ ಹಣ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಕುರಿತು ಕೆ.ಆರ್‌.ಪೇಟೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...