Asianet Suvarna News Asianet Suvarna News

ನಾಡಿನಿಂದ ಮತ್ತೆ ಕಾಡಿಗೆ, ಲಾರಿ ಹತ್ತಿ ಹೊರಟ 10 ಆನೆಗಳು

ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ 10 ಆನೆಗಳು ಮೈಸೂರಿನಿಂದ ಕಾಡಿಗೆ ಹೊರಟು ಹೋಗಿದೆ. 10 ಆನೆಗಳು, ಮಾವುತರು, ಅವರ ಕುಟುಂಬವೂ ದಸರಾ ಮುಗಿಸಿ ಶುಕ್ರವಾರ ತಮ್ಮೂರಿಗೆ ಹೊರಟರು.

10 Elephants leaves mysore travels to forest
Author
Bangalore, First Published Oct 11, 2019, 9:24 AM IST

ಮೈಸೂರು(ಅ.11): ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿದ್ದ ಗಜಪಡೆಯು ಗುರುವಾರ ನಾಡಿನಿಂದ ಕಾಡಿಗೆ ಮರಳಿದವು.

409ನೇ ದಸರಾ ಮಹೋತ್ಸವಕ್ಕಾಗಿ ಒಟ್ಟು 13 ಆನೆಗಳು ದಸರೆಯಲ್ಲಿ ಭಾಗವಹಿಸಲು ಆಗಮಿಸಿದ್ದವು. ಈ ಆನೆಗಳ ಪೈಕಿ 3 ಆನೆಗಳನ್ನು ಬಂಡೀಪುರ ಹುಲಿ ಕಾರ್ಯಾಚರಣೆಗೆ ಬುಧವಾರವೇ ಕಳುಹಿಸಲಾಗಿತ್ತು. ಉಳಿದ 10 ಆನೆಗಳನ್ನು ಗುರುವಾರ ಲಾರಿಗಳ ಮೂಲಕ ಕಾಡಿಗೆ ಕಳುಹಿಸಲಾಯಿತು. ಈ ಆನೆಗಳೊಂದಿಗೆ ಆಗಮಿಸಿದ್ದ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರು ಸಹ ಲಾರಿ ಏರಿ ತಮ್ಮ ಹಾಡಿಗಳಿಗೆ ತೆರಳಿದರು.

ಸ್ವಾಭಿಮಾನ ಪ್ರಶ್ನಿಸಿದ್ದೀರಿ; ಪರಿಣಾಮ ಎದುರಿಸಿ, ಎಚ್‌ಡಿಕೆಗೆ ಕೈ ಮುಖಂಡನ ಎಚ್ಚರಿಕೆ..!

ಇದಕ್ಕೂ ಮುನ್ನ ಅರಮನೆ ಆವರಣದಲ್ಲಿರುವ ನೀರಿನ ತೊಟ್ಟಿಯಲ್ಲಿ ತಮ್ಮತಮ್ಮ ಆನೆಗಳಿಗೆ ಮಾವುತರು ಮತ್ತು ಕಾವಾಡಿಗಳು ಸ್ನಾನ ಮಾಡಿಸಿದರು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ, ಮಾವುತರು ಮತ್ತು ಕಾವಾಡಿಗಳು ಸೇರಿ ಲಾರಿಗಳಲ್ಲಿ ಆನೆಗಳನ್ನು ಹತ್ತಿಸಿದರು. ಆನೆಯೊಂದಿಗೆ ಆಗಮಿಸಿದ ಕುಟುಂಬದವರು ಗೃಹಪಯೋಗಿ ವಸ್ತುಗಳನ್ನು ಲಾರಿಯ ಕ್ಯಾಬಿನ್‌ ಮೇಲೆ ಇರಿಸಿ, ತಮ್ಮ ಹಾಡಿಯಲ್ಲಿರುವ ಮನೆಗಳಿಗೆ ತೆಗೆದುಕೊಂಡು ಹೋದರು.

ಆನೆ ಶಿಬಿರಗಳತ್ತ ಪಯಣ:

ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆಯು ಇಷ್ಟುವರ್ಷ ಏಕಾಂಗಿಯಾಗಿ ಬಳ್ಳೆ ಆನೆ ಶಿಬಿರಕ್ಕೆ ತೆರಳುತ್ತಿತ್ತು. ಆದರೆ, ಈ ಬಾರಿ ಕೆ. ಗುಡಿ ಆನೆ ಶಿಬಿರಕ್ಕೆ ತೆರಳಬೇಕಿದ್ದ ದುರ್ಗಾಪರಮೇಶ್ವರಿ ಆನೆಯನ್ನು ಜೊತೆಗೆ ಕರೆದುಕೊಂಡು ಬಳ್ಳೆ ಆನೆ ಶಿಬಿರಕ್ಕೆ ಹೋಗಿದ್ದು ವಿಶೇಷ. ಉಳಿದಂತೆ ಮತ್ತಿಗೋಡು ಆನೆ ಶಿಬಿರಕ್ಕೆ ಬಲರಾಮ, ದುಬಾರೆ ಆನೆ ಶಿಬಿರಕ್ಕೆ ಧನಂಜಯ, ವಿಕ್ರಮ, ಗೋಪಿ, ಈಶ್ವರ, ವಿಜಯ ಮತ್ತು ಕಾವೇರಿ ಹಾಗೂ ರಾಂಪುರ ಆನೆ ಶಿಬಿರಕ್ಕೆ ಲಕ್ಷ್ಮಿಆನೆ ತೆರಳಿದವು.

ಹುಲಿ ಕಾರ್ಯಾಚರಣೆಗೆ ತೆರಳಿದ ಆನೆ:

ಇನ್ನೂ ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಕಾರ್ಯಾಚರಣೆಗಾಗಿ ಜಂಬೂ ಸವಾರಿ ಮಾರನೇ ದಿನವಾದ ಬುಧವಾರವೇ ಅಭಿಮನ್ಯು, ಗೋಪಾಲಸ್ವಾಮಿ ಮತ್ತು ಜಯಪ್ರಕಾಶ್‌ ಆನೆಗಳನ್ನು ಕಳುಹಿಸಲಾಗಿದೆ. ಈ ಕಾರ್ಯಾಚರಣೆ ಮುಗಿದ ಬಳಿಕ ಅಭಿಮನ್ಯು ಮತ್ತು ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರಕ್ಕೆ ಹಾಗೂ ಜಯಪ್ರಕಾಶ್‌ ಆನೆಯು ರಾಂಪುರ ಆನೆ ಶಿಬಿರಕ್ಕೆ ಹೋಗಿ ತಲುಪಲಿವೆ. ಇನ್ನೂ ದಸರೆಗೆ ಆಗಮಿಸಿ ಗರ್ಭಿಣಿಯಾದ ಕಾರಣ ಅರ್ಧಕ್ಕೆ ವರಲಕ್ಷ್ಮಿ ಆನೆ ಈಗಾಗಲೇ ಮತ್ತಿಗೋಡು ಆನೆ ಶಿಬಿರ ಹೋಗಿ ತಲುಪಿದೆ.

-ಬಿ. ಶೇಖರ್‌ ಗೋಪಿನಾಥಂ

Follow Us:
Download App:
  • android
  • ios