ಒಂದು ಕಾಲದಲ್ಲಿ ನೂರಾರು ಕಲಾವಿದರ ಕನಸಿಗೆ ವೇದಿಕೆಯಾಗಿದ್ದ ಬೆಂಗಳೂರಿನ ಕೆಂಗಲ್ ಹನುಮಂತಯ್ಯ ಕಲಾಸೌಧ ಇಂದು ಕಸದ ಗಾಡಿಗಳ ನಿಲ್ದಾಣವಾಗಿದೆ! ಪ್ರಕಾಸಂ ರಂಗತಂಡದ ಸಾಧನೆ ಮತ್ತು ಕಲಾಸೌಧದ ಕಣ್ಣೀರ ಕಥೆ ಓದಿ.

- ಬಿ.ಎಂ. ಗಿರಿರಾಜ್

‘ಮಗ, ರಂಗಶಂಕರದ ತರಹ ಒಂದು ಥೇಟರ್ ಸ್ಪೇಸ್ ಕಟ್ಟೋಣ’ ಅಂತ ಪಿ.ಡಿ. ಸತೀಶ್‌ಚಂದ್ರ 15 ವರ್ಷದ ಹಿಂದೆ ಹೇಳಿದಾಗ ನನಗೆ ಅವನನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಪಿ.ಡಿ.ಯನ್ನು ಭೇಟಿಯಾದ ಯಾರೇ ಆಗಲಿ ಅವನು ಆಡುವ ಮಾತು, ನಡೆದುಕೊಳ್ಳುವ ರೀತಿಯಿಂದ ಅವನನ್ನು ಕ್ರಿಯಾಶೀಲ ವ್ಯಕ್ತಿ ಅಂತ ನಂಬುವುದು ಸ್ವಲ್ಪ ಕಷ್ಟವೇ. ಅದಕ್ಕೆ ಅವನೇ ಹೊಣೆ. ಆದರೆ ಈ ಕುಂಭಕರ್ಣನಂತೆ ವರ್ತಿಸುವ ವಾಚಾಳಿ, ಅಪ್ಪಟ ಕನ್ನಡ ಪ್ರೇಮಿ ಹಾಗೂ ನಿಪುಣ ರಂಗಕರ್ಮಿ ಅನ್ನುವುದು ಅವನೊಂದಿಗೆ ಕೆಲದಿನಗಳ ಒಡನಾಟದ ನಂತರ ಎಲ್ಲರಿಗೂ ತಿಳಿಯುತ್ತದೆ. ಯಾರು ಏನೇ ಮಾಡುತ್ತೀನಿ ಅಂದರೂ ‘ಮಾಡು’ ಅಂತ ಹೇಳುವುದು ನಾನು ಮೊದಲಿಂದಲೂ ಪಾಲಿಸಿಕೊಂಡು ಬಂದಿರುವ ನಿಯಮ. ಇವನಿಗೂ ಹಾಗೇ ಅಂದೆ. ಆಗಲೇ ನನಗೆ ಇದು ಕುಡಿದು ಅಮಲಿನಲ್ಲಾಡಿದ ಮಾತಲ್ಲ, ದೀರ್ಘ ಧ್ಯಾನದ ನಂತರ ಅವನಾಗೇ ನಿರ್ಧರಿಸಿದ್ದ ಧ್ಯೇಯ ಅಂತ ಗೊತ್ತಾಗಿತ್ತು.

ಸರ್ಕಾರಗಳು ಬಜೆಟ್‌ನಲ್ಲಿ ಅಲ್ಲಲ್ಲಿ ಕಲಾ ಮಂದಿರಗಳನ್ನು ಕಟ್ಟಿಸುತ್ತೀವಿ ಅಂತಂದು ಕೆಲವು ಕಡೆ ಕಟ್ಟಿಸಿ, ಅದನ್ನು ಹಾಗೇ ಮೂಲೆಗೆ ತಳ್ಳಿ ಕೆಲ ವರ್ಷಗಳ ತನಕ ಉಪಯೋಗವಾಗದ ಕಲಾಭವನಕ್ಕೆ ದುರಸ್ತಿ ಅಂತ ಹೇಳಿ ಮತ್ತೆ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿಸಿಕೊಳ್ಳುವುದು ನಡೆದುಕೊಂಡು ಬಂದಿದ್ದಂತಹ ಒಂದು ಅವರ ಪಾಲಿನ ಕನಕವೃಷ್ಟಿಗರೆಯುವ ಯೋಜನೆಯಾಗಿತ್ತು. ಪಿ.ಡಿ. ಸತೀಶ್‌ಚಂದ್ರ ಇದನ್ನೆಲ್ಲ ಗಮನಿಸಿ ಅಧ್ಯಯನ ಮಾಡಿ, ಹಾಗೆ ಹನುಮಂತನಗರದ ರಾಮಾಂಜನೇಯ ಗುಡ್ಡದ ಮೇಲೆ ನಿರ್ಮಿಸಿ ಅವರೇ ಮರೆತು ಹೋಗಿದ್ದ ಕೆಂಗಲ್ ಹನುಮಂತಯ್ಯ ಕಲಾಸೌಧ ಎಂಬ ಬಿ.ಬಿ.ಎಂ.ಪಿ ಒಡೆತನದ ಕಟ್ಟಡವನ್ನು ಹುಡುಕಾಡಿ, ಇದರ ಟೆಂಡರ್ ಇನ್ನೂ ಕರೆದಿಲ್ಲ ಅಂತಂದು ಅವನೇ ಕಚೇರಿಗಳನ್ನು ಸುತ್ತಾಡಿ ಇದನ್ನು 5 ವರ್ಷದ ಭೋಗ್ಯಕ್ಕೆ ತೆಗೆದುಕೊಂಡ! ‘ಲೇಯ್, ಜಾಗ ತಗೊಂಡಿದ್ದೀಯಾ. ನಾಟಕ ಮಾಡಿಸಬೇಕಲ್ಲೋ?’ ಅಂತ ನನ್ನ ಆತಂಕ ವ್ಯಕ್ತಪಡಿಸಿದಾಗ ‘ಇದೆಯಲ್ಲೋ ನಮ್ಮ ಪ್ರಕಾಸಂ!’ ಅಂತ ನನ್ನನ್ನು ಬೆರಗಾಗಿಸಿದ.

ರೇಡಿಯೊದಲ್ಲಿ ಒಟ್ಟಿಗೆ ಕೆಲಸ ಮಾಡುವುದರಿಂದ ನನಗೆ ಪರಿಚಿತನಾದ ಪಿ.ಡಿ. ಸತೀಶ್‌ಚಂದ್ರ ಜನರಿಗೆ ಟಿ.ವಿ.ಯಲ್ಲಿ ಬರುವ ಹಾಸ್ಯ ಪಾತ್ರ ‘ಪದ್ದು’ವಾಗೇ ಎಲ್ಲರಿಗೂ ಪರಿಚಿತ. 2001ರಲ್ಲೇ ಪಿ.ಡಿ. ತನ್ನ ಆಪ್ತ ಚಂದನ್ ಶಂಕರ್‌ನೊಂದಿಗೆ ಪ್ರಕಾಸಂ (ಪ್ರದರ್ಶನ ಕಲಾ ಸಂಸ್ಥೆ)ಯನ್ನು ಹುಟ್ಟುಹಾಕಿ, ಇನ್ನಷ್ಟು ತರಲೆ ಗೆಳೆಯರೊಂದಿಗೆ ನಾಟಕಗಳನ್ನು ಮಾಡಲು ಶುರು ಮಾಡಿದ. ಒಡನಾಟ, ಅಭಿಮಾನ ಮತ್ತು ವ್ಯಕ್ತಿ ಮೇಲಿನ ಪ್ರೀತಿಯಿಂದಾಗಿ ಪಿ.ಡಿ. ಯಾರನ್ನೇ ಕೇಳಿದರೂ ಇವನ ಜೊತೆ ಮತ್ತು ಇವನಿಗಾಗಿ ನಾಟಕ ಮಾಡಲ್ಲ ಅಂತ ಯಾರೂ ಹೇಳುತ್ತಿರಲಿಲ್ಲ.

ಹಾಗಾಗಿ ಅಲ್ಲಲ್ಲಿ ನಾಟಕಗಳನ್ನು ಮಾಡಿಕೊಂಡು ಬರುತ್ತಿದ್ದರೂ ಪ್ರಕಾಸಂಗೆ ಬೆಂಗಳೂರಿನ ಪ್ರಮುಖ ನಾಟಕ ತಂಡಗಳ ಪಟ್ಟಿಯಲ್ಲಿ ಯಾವ ಸ್ಥಾನವೂ ಇರುತ್ತಿರಲಿಲ್ಲ. 2009ರಲ್ಲಿ ಪ್ರಕಾಸಂ ಹತ್ತಿರವೇ ಒಂದು ರಂಗಸ್ಥಳ ಇದ್ದರೆ ನಮ್ಮ ನಾಟಕಗಳನ್ನು ನಾವೇ ಪ್ರದರ್ಶಿಸಿ ಹೆಚ್ಚೆಚ್ಚು ರಂಗಪ್ರಯೋಗಗಳನ್ನು ಮಾಡಬಹುದು ಅಂತ ಕೆ.ಎಚ್. ಕಲಾಸೌಧವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಪಿ.ಡಿ. ನಿರ್ಧರಿಸಿದ. ಅದಕ್ಕೆ ತನ್ನ ಕೂಡಿಟ್ಟ ಹಣವನ್ನು ಪಣಕ್ಕೊಡ್ಡಲು ನಿರ್ಧರಿಸಿದ. ಪ್ರತಿ ಸಲ ನನಗೆ ಪ್ರಾಕ್ಟಿಕಲ್ ಆಗಿ ಯೋಚಿಸೋ ಅಂತ ಬೈಯುತ್ತಿದ್ದ ಪಿ.ಡಿ. ಈಗ ತುಘಲಕ್ ತರಹ ಆಡುತ್ತಿದ್ದದ್ದು ನನಗೆ ತುಂಬಾ ಖುಷಿ ಕೊಟ್ಟಿತ್ತು. ಆಗಲೇ ನಾನು ಮುಂದಿನ ಒಂಬತ್ತು ವರ್ಷಗಳ ತನಕ ಪ್ರಕಾಸಂನ ಎಲ್ಲ ಸಾಹಸಗಳಿಗೆ ಸಾಕ್ಷಿಯಾದೆ.

ಪ್ರಕಾಸಂ ಕಲಾಸೌಧವನ್ನು ತೆಗೆದುಕೊಂಡ ನಂತರ ನಾನು ಎರಡು ಆಯಾಮಗಳನ್ನು ಗಮನಿಸಿದೆ. ಒಂದು, ಪ್ರಕಾಸಂ ಬೆಂಗಳೂರಿನ ಪ್ರಮುಖ ನಾಟಕ ತಂಡವಾಗಿ ರೂಪುಗೊಂಡಿದ್ದು ಮತ್ತು ಬೆಂಗಳೂರಿನಲ್ಲಿ ಹೊಸ ನಾಟಕಗಳು, ತಂಡಗಳು, ನಿರ್ದೇಶಕರು ರೂಪುಗೊಂಡಿದ್ದು. ಮೊದಲಿಗೆ ಪ್ರಕಾಸಂ ಜನರನ್ನು ಆಕರ್ಷಿಸಲು ಡಾ. ರಾಜ್ ಅಭಿನಯದ ಸಿನಿಮಾ ‘ಹೊಸ ಬೆಳಕು’ವನ್ನು ನಾಟಕವಾಗಿ ಪ್ರದರ್ಶಿಸಲು ನಿರ್ಧರಿಸಿತು. ಆದರೆ ಸಿನಿಮಾವನ್ನು ಭಟ್ಟಿ ಇಳಿಸದೆ ಮೂಲ ಕೃತಿಕಾರರಾದ ವಾಣಿಯವರ ಕಾದಂಬರಿಯನ್ನೇ ರಂಗರೂಪವಾಗಿಸಿತು. ನಾಟಕ ದೊಡ್ಡ ಹಿಟ್ ಆಯಿತು. ಆದರೆ ಹವ್ಯಾಸಿ ನಾಟಕ ಮಾಡುವ ಎಲ್ಲರಿಗೂ ಗೊತ್ತು ದಿನಾ ನಾಟಕ ಮಾಡಲು ಆಗುವುದಿಲ್ಲ. ಪ್ರತಿ ನಾಟಕ ಪ್ರದರ್ಶನಕ್ಕೂ ತಾಲೀಮಿನ ಅವಶ್ಯಕತೆ ಇದೆ. ಹಾಗಾಗಿ ಬೇರೆ ಬೇರೆ ನಾಟಕಗಳನ್ನು ಮಾಡಬೇಕಾಗುತ್ತಿತ್ತು.

ಪ್ರಕಾಸಂಗೆ ಒಳ್ಳೆಯದಾಗಲಿ ಅಂತ ಸಿಹಿಕಹಿ ಚಂದ್ರು ಅಂತವರು ಏಕವ್ಯಕ್ತಿ ಪ್ರದರ್ಶನ ‘ಕೀಟಲೆ’ ನಾಟಕ ಮಾಡಿ ಕೊಟ್ಟರು. ಹಾಗೂ ಚಂದನ್ ಶಂಕರ್ ವಿರಚಿತ ‘ಬೋಗಿ’ ನಾಟಕದಲ್ಲಿ ಆರು ಪಾತ್ರಗಳನ್ನು ಒಬ್ಬರೇ ನಿಭಾಯಿಸಿದರು. ಹಾಗೆ ನೋಡಿದರೆ ಕೀಟಲೆಯನ್ನು ಸಿಹಿಕಹಿಯವರು ಪ್ರಕಾಸಂಗಾಗಿ 2001ರಲ್ಲೇ ಪ್ರದರ್ಶನ ಮಾಡಿದ್ದರು. ಪಿ.ಡಿ. ಹಾಗೂ ಸಿಹಿಕಹಿ ಚಂದ್ರುರವರು 90ರ ದಶಕಗಳಿಂದಲೂ ಇಂಗ್ಲಿಷ್ ಥೇಟರ್ ಮಾಡಿಕೊಂಡು ಒಡನಾಟ ಇಟ್ಟುಕೊಂಡಿದ್ದರು. ಆಗೆಲ್ಲ ತಾಲೀಮಿಗೆ ಯಾರ್ಯಾರದ್ದೋ ಮನೆಯ ಟೆರೆಸ್, ಹೊತ್ತಲ್ಲದ ಹೊತ್ತು ಮತ್ತು ಕೊನೆಯ ಕ್ಷಣದ ‘ಕೊಡಕ್ಕಾಗಲ್ಲ ಹೋಗ್ರಿ ಇಲ್ಲಿಂದ’ದ ಎಲ್ಲ ಮಜಲುಗಳನ್ನು ದಾಟಿ ಕಲಾಸೌಧವನ್ನು ತೆಗೆದುಕೊಂಡಾಗ ಹೇಗಿತ್ತೆಂದರೆ, ಹೊಸ ತಂಡಗಳಿಗೆ ನಾವೇ ತಾಲೀಮಿಗಾಗಿ ಹೊರಗಿನ ಜಾಗ, ಟೈಮು ಮತ್ತು ಪರಿಕರಗಳ ವ್ಯವಸ್ಥೆ ಮಾಡಿ ಕೊಟ್ಟಿದ್ದೂ ಇದೆ.

ಎರಡನೆಯದು, ಕಲಾಸೌಧ ಮತ್ತು ಅದನ್ನು ಆವರಿಸಿದ ರಾಮಾಂಜನೇಯ ಗುಡ್ಡ ಹೊಸ ಪೀಳಿಗೆಯ ಅನುಭವ ಮಂಟಪವಾಗುತ್ತಿತ್ತು. ಸಂಜೆ ಆದರೆ ಸಾಕು ಒಬ್ಬರಲ್ಲ ಇನ್ನೊಬ್ಬರು ಸುಮ್ಮನೆ ಸುತ್ತ ಕುಳಿತು ನಾಟಕ, ಸಿನಿಮಾ, ಸಮಾಜ, ರಾಜಕೀಯ ಅನ್ನುವ ಮಾತುಗಳು ಬಿಸಿ ಚರ್ಚೆಗೆ ಕುಮ್ಮಕ್ಕು ಕೊಡುತ್ತ, ಅಪರಿಚಿತರನ್ನು ಅದಮ್ಯ ಉತ್ಸಾಹಿ ಗೆಳೆಯ ಗೆಳತಿಯರಾಗಿಸುತ್ತಿದ್ದವು. ಹೊಸ ತಂಡಗಳು ಬಂದು ಹಣ ಕಡಿಮೆ ಇದೆ ಅಂದಾಗ ಅವರಿಗೆಲ್ಲ ಸೂಕ್ತ ಸಮಯಾವಕಾಶ ಹಾಗೂ ಅನುಭವದ ಮಾರ್ಗದರ್ಶನ ನೀಡುತ್ತ ನಾಟಕಗಳ ಗೆಲುವಿಗೂ ಕಲಾಸೌಧ ಕಾರಣವಾಯಿತು. ಹಸಿವಿರುವ ಕಲಾವಿದರು ಸೇರಿದಾಗ ಕಲಾಕೃತಿಗಳು ಹುಟ್ಟಿಕೊಳ್ಳುತ್ತವೆ. ನನ್ನ ಜಟ್ಟ, ಮೈತ್ರಿ, ಅದ್ವೈತ, ತುಂಡ್ ಹೈಕ್ಳ ಸಾವಾಸ ಸಿನಿಮಾಗಳ ಚರ್ಚೆ, ತಾಲೀಮು ಎಲ್ಲ ಪ್ರಕಾಸಂನ ಕಲಾಸೌಧದಲ್ಲೇ ಆಯಿತು.

ನಮ್ಮ ಡಿಫಾಲ್ಟ್ ಸಿನಿಮಾ ಆಫೀಸ್ ಆಗಿತ್ತು. ನಮ್ಮೊಂದಿಗೆ ಇನ್ನಷ್ಟು ಬಡ ಸಿನಿಮಾ ತಂಡಗಳಿಗೆ ಕುಳಿತುಕೊಂಡು ಕೆಲಸ ಮಾಡಲು ಕಲಾಸೌಧ ಅನುವು ಮಾಡಿಕೊಟ್ಟಿತ್ತು. ಹೊಸ ನಾಟಕಗಳ, ತಂಡಗಳ, ಸಿನಿಮಾಗಳ, ಚರ್ಚೆಗಳ ಹುಟ್ಟು ಹಾಗೂ ಬೆಳವಣಿಗೆಗೆ ಕಲಾಸೌಧ ನಾಂದಿಯಾಯಿತು. ರಂಗಾಯಣ ರಘುರವರ ಪತ್ನಿ ಮಂಗಳ ಮೇಡಂ ನಡೆಸುವ ಸಂಚಾರಿ ರಂಗ ತಂಡ ಕಲಾಸೌಧದ ಕೆಳಮಹಡಿಯಲ್ಲೇ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಸಂಚಾರಿ ವಿಜಿ ಇಲ್ಲೇ ರೂಪುಗೊಂಡಿದ್ದು. ನಾಟಕದ ತಾಲೀಮಿಗೂ ಜಾಗ ಇಲ್ಲದೆ ಒದ್ದಾಡಿದ್ದ ಪ್ರಕಾಸಂ ತಂಡ ಒಂದು ಮೌನ ಸಾಂಸ್ಕೃತಿಕ ಪಲ್ಲಟಕ್ಕೆ ಬುನಾದಿಯಾಗುತ್ತಿತ್ತು. ಅಧಿಕಾರಿಗಳ ಲಾಲಸೆ ಹಾಳು ಮಾಡದೆ ಇದ್ದಿದ್ದರೆ! ಅದು ನಂತರದ ಮಾತು.

ನಿಧಾನವಾಗಿ ಒಂದೊಂದೇ ನಾಟಕಗಳನ್ನು ಪ್ರಕಾಸಂ ಮಾಡುತ್ತಿದ್ದು, ಹಾಗೂ ಬೇರೆ ತಂಡಗಳು ಕಲಾಸೌಧದಲ್ಲಿ ಪ್ರದರ್ಶನ ಮಾಡುತ್ತಿದ್ದಾಗ ಬರುತ್ತಿದ್ದ ರಂಗಾಸಕ್ತರು ತಾವೂ ನಾಟಕ ಮಾಡಬೇಕೆಂದು ಆಸೆ ವ್ಯಕ್ತಪಡಿಸಲು ಶುರು ಮಾಡಿದರು. ವಿದ್ಯಾರ್ಥಿಗಳು, ಐಟಿ ಬಿಟಿಯವರು, ಗೃಹಿಣಿಯರು, ವಯಸ್ಸಾದವರು ಎಲ್ಲರಿಗೂ ತಮ್ಮದೇ ಜೀವನದ ಧಾವಂತದ ನಡುವೆ ಒಂದು ಕ್ಷಣ ಬೇರೆ ಪಾತ್ರದಲ್ಲಿ ತಮ್ಮನ್ನು ಮರೆಯುವ ಅದಮ್ಯ ಆಸೆಯನ್ನು ಕಲಾಸೌಧ ಹುಟ್ಟಿಸುತ್ತಿದ್ದದ್ದು ನಮಗೆ ಕಾಣಿಸುತ್ತಿತ್ತು. ಪ್ರಕಾಸಂ ಆಗ ಕಾರ್ಯಾಗಾರಗಳನ್ನು, ತಿಳಿದುಕೊಂಡವರಿಂದ ಸಂವಾದವನ್ನು ಹಾಗೂ ಚಾಲೆಂಜ್‌ಗಳನ್ನು ಹಾಕಲು ಶುರು ಮಾಡಿತು. ದಿನೇ ದಿನೇ ಹಸಿವಿರುವ ಕಲಾಸಕ್ತರು ಪ್ರಕಾಸಂಗೆ ಕಲಿಯಲು ಬರಲು ಶುರುವಾದರು. ಇವತ್ತು 400ಕ್ಕೂ ಹೆಚ್ಚಿನ ಸಕ್ರಿಯ ಕಲಾವಿದರು ಪ್ರಕಾಸಮ್ಮೇ ನಮ್ಮ ಎಷ್ಟೋ ನಗುವಿನ ಕ್ಷಣಕ್ಕೆ ಕಾರಣ ಅಂತ ಪ್ರಮಾಣಿಸುತ್ತಾರೆ.

ರಂಗಭೂಮಿಯ ಶಿಸ್ತಿನಂತೆ ಈ ಹುಡುಗರು ನಟರೂ ಆಗಿದ್ದರು, ಸೆಟ್ ಕೆಲಸ ಮಾಡುವವರೂ ಆಗಿದ್ದರು, ಟಿಕೆಟ್ ಹರಿಯುವವರೂ ಆಗಿದ್ದರು. ನಿಧಾನವಾಗಿ ಬರವಣಿಗೆಯ ಅಭ್ಯಾಸ ಇದ್ದ ಚಂದನ್ ಶಂಕರ್ ನಾಟಕ ರಚನೆ ಮಾಡಿದ್ದಲ್ಲದೆ ಶ್ರೀ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳ ಖಾಯಂ ಬರಹಗಾರರಾದರು. ಕುಲದೀಪ್, ನಿರಂಜನ್, ಶ್ರೀಹರಿ ಕಶ್ಯಪ್, ನಾಗರಾಜ್, ಸಂತೋಷ್ ಕರ್ಕಿಯಂತಹ ಎಷ್ಟೋ ನಟ ನಟಿಯರು ಕಿರುತೆರೆ ಹಿರಿತೆರೆಯಲ್ಲಿ ಮಿಂಚಲು ಶುರುವಾದರು. ಆದರೆ ಇವತ್ತೂ ಪ್ರಕಾಸಮ್ಮಿನ ಯಾವುದೇ ಪ್ರದರ್ಶನಕ್ಕೆ ಬಂದರೂ ಹಮ್ಮುಬಿಮ್ಮಿಲ್ಲದೆ ಮೊದಲಿನ ಶ್ರದ್ಧೆಯಿಂದಲೇ ದುಡಿಯುತ್ತಾರೆ.

ಪ್ರಕಾಸಂ ರಂಗಭೂಮಿಯಲ್ಲಿ ಹಲವಾರು ಪ್ರಯೋಗಗಳನ್ನೂ ಮಾಡಿತು. ಕೈಲಾಸಂರವರ ನಾಟಕವನ್ನು ಮತ್ತೆ ರಂಗಭೂಮಿಗೆ ತಂದಿದ್ದಲ್ಲದೆ, ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ನಾಟಕವನ್ನು ‘ಮಾಸ್ತಿಕಲ್ಲು’ ಎಂಬ ಹೆಸರಿನಲ್ಲಿ ರಂಗದ ಮೇಲೆ ತಂದರು. ರಾಜೇಂದ್ರ ಕಾರಂತರ ‘ಮಹಾಪೀಡೆ ಮಹಾಬ್ಲು’ ಅನ್ನುವ ನಾಟಕ ಈಗ ನೂರನೇ ಪ್ರದರ್ಶನ ಕಾಣುತ್ತಿದೆ. ಆದರೆ ಅವರ ‘ಮಾರ್ಗೋಸ ಮಹಲ್’ ಅನ್ನುವ 5ಡಿ ನಾಟಕ ತುಂಬಾ ರೋಚಕವಾಗಿತ್ತು. ಅದರಲ್ಲಿ ಪ್ರೇತದ ಅನುಭವ ಪ್ರೇಕ್ಷಕರಿಗೆ ಮೂಡಿಸಲು ಮೇಲಿಂದ ನೀರಿನ ಹನಿ ಸುರಿಸುವುದು, ಸೀರೆ ಬಿಟ್ಟು ಮೈ ಮೇಲೆ ತಾಗುವ ಹಾಗೆ ಮಾಡುವುದು, ಪಕ್ಕದಿಂದ ಹೊಗೆ ಬರುವುದು ಇಂತಹ ಚೇಷ್ಟೆಗಳಿಂದ ಪ್ರೇಕ್ಷಕರನ್ನು ಕಚಗುಳಿ ಇಡುತ್ತ ನಾಟಕವನ್ನೂ ನೋಡಿಸುತ್ತ ಹೋಗುವಂತೆ ಮಾಡಲಾಗುತ್ತಿತ್ತು.

ಪ್ರದರ್ಶನ ಕಲೆ ಅನ್ನುವುದು ಬರೀ ನಾಟಕಕ್ಕೇ ಸೀಮಿತವಾಗಿರಬಾರದು ಅಂತ ‘ಸ್ವರಾಗ’ ಅನ್ನುವ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಯಿತು. ಪ್ರಕಾಸಂನಲ್ಲಿರುವ ಆಸಕ್ತ ಗಾಯಕರಿಗೆ ಒಂದು ವೇದಿಕೆ ಕಲ್ಪಿಸಲು ಇದನ್ನು ಮೊದಲಿಗೆ ಹಮ್ಮಿಕೊಳ್ಳಲಾಯಿತು. ಕಾಲ ಕಳೆದಂತೆ ಪ್ರೇಕ್ಷಕರಿಗೂ ಈ ತಂಡದ ಕಲೆ ಹಾಗೂ ಆತಿಥ್ಯ ತುಂಬಾ ಅಚ್ಚುಮೆಚ್ಚಾಗಿ ಒಂದು ವಾರ್ಷಿಕ ಕಮಿಟ್‌ಮೆಂಟ್ ತರಹ ಆಗಿ ಹೋಗಿದೆ. ಪ್ರತಿಭೆ ಇದ್ದರೂ ಅವಕಾಶ ಸಿಗದ ಎಷ್ಟೋ ಗಾಯಕರಿಗೆ ಇದು ಉತ್ತಮ ವೇದಿಕೆಯಾಯಿತು.

ನಾಟಕ, ಸಂಗೀತದ ಜೊತೆಗೆ ನನಗೆ ಪ್ರಕಾಸಂ ಭಿನ್ನವಾಗಿ ಕಾಣಿಸುವುದು ಇವರ ಫ್ಯಾಮಿಲಿ ಟ್ರಿಪ್‌ಗಳು. ಯಾವ ನಾಟಕ ತಂಡವೂ ಸಂತೋಷ ಕೂಟಗಳಿಗಾಗಿ ಇಷ್ಟೆಲ್ಲ ಸಮಯ, ಶಕ್ತಿ ವಿನಿಯೋಗಿಸಿದ್ದು ನಾನು ನೋಡಿಲ್ಲ. ಕಾಸ್ಟ್ ಪಾರ್ಟಿ ಮಾಡುವುದು ಬೇರೆ. ಸರಿ ಊಟಿಗೆ ಹೋಗೋಣ, ಖರ್ಚು ಇಷ್ಟು ಬರತ್ತೆ, ಆಗುವವರು ಹೊಂದಿಸಿ ಅಂತಂದು ನಾಟಕದ ತಂಡಗಳು ಹೋಗಿ ಖುಷಿಯಾಗಿರೋದು ತುಂಬಾ ವಿರಳ. ಎಷ್ಟೋ ಸಲ ನಾಟಕ ಅಂತೆಲ್ಲ ಹೆಚ್ಚು ಸಮಯ ಕಳೆಯುವವರ ಮನೆಮಂದಿಗಳಿಗೆ, ತಮಗೆ ನಮ್ಮವರು ಸಮಯ ಕೊಡುತ್ತಿಲ್ಲ ಅನ್ನುವ ಅಸಮಾಧಾನ ಇರುತ್ತದೆ. ಪ್ರಕಾಸಂ ತಮ್ಮ ನಟ ನಟಿಯರನ್ನಷ್ಟೇ ಅಲ್ಲದೆ ಅವರ ಸಂಸಾರಗಳನ್ನೂ ತಮ್ಮ ತಂಡದ ಭಾಗವಾಗಿಸಿ ಒಂದು ಆರೋಗ್ಯಕರ, ಆಹ್ಲಾದಕರವಾದ ವಾತಾವರಣ ಸೃಷ್ಟಿಸಿದೆ. ಪಾಟ್‌ಲಕ್ ನೆಪದಲ್ಲಿ ಎಲ್ಲರೂ ತಮ್ಮ ಮನೆಯಿಂದ ಒಂದೊಂದು ಅಡುಗೆಯನ್ನು ಬುತ್ತಿ ಕಟ್ಟಿಕೊಂಡು ಬಂದು ಸುತ್ತ ಕುಳಿತು ಊಟವನ್ನು ಹಂಚಿಕೊಳ್ಳುತ್ತ ಅನ್ಯೋನ್ಯವಾಗಿ ಆಚರಿಸುವ ಸಂಭ್ರಮ ನೋಡಿಯೇ ತೀರಬೇಕು.

All good things must end ಅನ್ನುವ ಹಾಗೆ ಪ್ರಕಾಸಂ ಕಲಾಸೌಧವನ್ನು ಐದು ವರ್ಷ ಲೀಸ್ ತೆಗೆದು ಬೆಂಗಳೂರಿನಲ್ಲಿ ಒಂದು ರಂಗಭೂಮಿಯ ಅಧ್ಯಯನಶೀಲ ಸಂತೆಯನ್ನು ಮಾಡಿದ ನಂತರ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕಣ್ಣು ಇದರ ಮೇಲೆ ಬಿತ್ತು. ಇಷ್ಟೆಲ್ಲ ಜನ ಸೇರುವ, ಲವಲವಿಕೆಯಿಂದ ಇರುವ ಜನ ಸಮೂಹ, ಇಷ್ಟು ನೆಮ್ಮದಿಯಾಗಿದ್ದಾರೆ ಅಂದರೆ ಇಲ್ಲಿ ತುಂಬಾ ಹಣ ಇದೆ, ಇದನ್ನು ನಾವೇ ಪಡೆದುಕೊಳ್ಳಬೇಕೆಂದು ಲೀಸ್‌ಅನ್ನು ಮುಂದುವರೆಸದೆ ಬೇರೆಯವರಿಗೆ ಕೊಟ್ಟಿತು. ರಂಗಭೂಮಿಯನ್ನು ಕಾರ್ಪೊರೇಟ್ ಶಿಸ್ತಿನಲ್ಲಿ ನಡೆಸುತ್ತೇವೆ ಅಂತ ಬಿಬಿಎಂಪಿ ಎಡವಟ್ಟು ಮಾಡಿತು. ಕಾರ್ಪೊರೇಟ್ ಲಾಭ ಇಲ್ಲದೆ ಇದ್ದರೆ ಕಡಿದು ಹಾಕು ಅನ್ನುವ ಶಿಸ್ತನ್ನು ಪಾಲಿಸಿದರೆ, ರಂಗಭೂಮಿ ಸೋತವರನ್ನು, ಹೆದರುವವರನ್ನು ತಾಯಿಗರುಳಿನಿಂದ ಮುಂದೆ ತಳ್ಳಿ ಕೆಲವೊಮ್ಮೆ ತಲೆಯ ಮೇಲೆ ಮೊಟಕಿ ಬುದ್ಧಿ ಕಲಿಸುವ ಶಿಸ್ತನ್ನು ಪಾಲಿಸುತ್ತದೆ. ಕಲಾಸೌಧ ದಿನೇ ದಿನೇ ತನ್ನ ಒಳಹೊಳಪನ್ನು ಕಳೆದುಕೊಳ್ಳುತ್ತ ಈಗ ಪಾಳು ಬಿದ್ದಿರುವ ಗತವೈಭವದ ಮಂಟಪವಾಗಿದೆ.

ಸುತ್ತ ದೊಡ್ಡ ದೊಡ್ಡ ಚರ್ಚೆ, ಯೋಜನೆಗಳು ರೂಪುಗೊಳ್ಳುತ್ತಿದ್ದ ಜಾಗ ಈಗ ಕಸದ ಗಾಡಿಗಳ ನಿಲ್ದಾಣವಾಗಿದೆ. ಈ ವ್ಯತ್ಯಾಸ ನೋಡಿದವರಿಗೆ ಪ್ರಕಾಸಂನ ರಂಗಭೂಮಿಯೆಡೆಗಿನ ಬದ್ಧತೆ ಹಾಗೂ ಸಂಸ್ಥೆಯೊಂದನ್ನು ನಡೆಸಿಕೊಂಡು ಹೋಗುವ ದಕ್ಷತೆ ಎರಡೂ ಅರಿವಿಗೆ ಬರುತ್ತದೆ. ನಾನು ಇನ್ನೊಂದು ತಂಡಕ್ಕೆ ‘ಸುಗಂಧದ ಸೀಮೆಯಾಚೆ’ ನಾಟಕ ಮಾಡಿದಾಗ ಕಲಾಸೌಧದಲ್ಲೇ ಪ್ರದರ್ಶನ ಮಾಡಿದ್ದೆ. ಆಗ ಪಿ.ಡಿ. ಸತೀಶ್‌ಚಂದ್ರನನ್ನು ನಾಟಕ ನೋಡಲು ಕರೆದಾಗ, ‘ಕಲಾಸೌಧವನ್ನು ಹಾಗೆ ನೋಡಲಿಕ್ಕೆ ಆಗಲ್ಲ ಮಗ. ಬೇರೆ ಕಡೆ ನೋಡ್ತೀನಿ.’ ಅಂತ ಯಾವಾಗಲೂ ನಗುತ್ತ ಇರುವವನು ವಿಷಾದದಿಂದ ನುಡಿದ. ಅದೇ ಆ ಭವನದಲ್ಲಿ ನಮ್ಮ ಕೊನೆಯ ಪ್ರದರ್ಶನವೂ ಆಯಿತು. ಸದ್ಯ ಮಹಾಪೀಡೆಯ ನೂರನೇ ಪ್ರದರ್ಶನದ ಖುಷಿಯಲ್ಲಿರುವ ತಂಡ, ಮುಂದೆ ‘ಭೂ ಕೈಲಾಸ’ವನ್ನು ನಾಟಕ ಮಾಡುವ ಯೋಜನೆ ಹಾಕಿಕೊಂಡಿದೆ. ಯಶ್‌ನ ರಾವಣ ಪಾತ್ರಕ್ಕಿಂತ ನನ್ನ ರಾವಣ ಪಾತ್ರವನ್ನೇ ಜನ ಹೆಚ್ಚು ಇಷ್ಟಪಡುತ್ತಾರೆ ನೋಡು ಅಂತ ಪಿ.ಡಿ. ಗಹಗಹಿಸಿ ನಕ್ಕು ನುಡಿದ.