ಭಾರತದ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ, ಅದರ ಮೇಲಿನ ನಿಯಂತ್ರಣಗಳು ಮತ್ತು ದ್ವೇಷ ಭಾಷಣದ ಕಾನೂನುಗಳನ್ನು ಈ ಲೇಖನ ವಿವರಿಸುತ್ತದೆ. ಇಂತಹ ಕಾನೂನುಗಳ ದುರುಪಯೋಗವನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ಚರ್ಚಿಸುತ್ತಾ, ಕರ್ನಾಟಕದ ಹೊಸ ದ್ವೇಷಭಾಷಣ ಮಸೂದೆಯ ಅನಗತ್ಯತೆಯನ್ನು ಇದು ಪ್ರತಿಪಾದಿಸುತ್ತದೆ.

ಡಾ. ಅರುಣ ಶ್ಯಾಮ್ ಎಂ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

-ಹಿರಿಯ ವಕೀಲರು ಮತ್ತು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್

ಭಾರತ ಸ್ವತಂತ್ರ ರಾಷ್ಟ್ರ. ಇದು ತನ್ನದೇ ಆದ ಸಂವಿಧಾನ ಹೊಂದಿದೆ. ಇಲ್ಲಿ ಜನರಿಂದ, ಜನರಿಗೋಸ್ಕರ, ಜನರೇ ನಡೆಸುವ ಆಡಳಿತ ವ್ಯವಸ್ಥೆ ಇದೆ. ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನದತ್ತವಾಗಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಅದರಲ್ಲಿ ಮುಖ್ಯವಾದುವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ. ಪ್ರಜೆಗಳಿಂದ ಚುನಾಯಿತವಾದ ಸರ್ಕಾರವನ್ನು ಅದರ ಧ್ಯೇಯ, ಉದ್ದೇಶ, ಚಿಂತನೆ ಮತ್ತು ಕಾರ್ಯಗಳನ್ನು ಟೀಕಿಸುವ ಅಥವಾ ಪ್ರಶ್ನಿಸುವ ಹಕ್ಕು ಬಹುಮುಖ್ಯವಾಗಿ ಪತ್ರಿಕಾ ಸ್ವಾತಂತ್ರ್ಯವೆಂದು ಗುರುತಿಸಿಕೊಂಡಿದೆ. ಇದು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದು.

ಅಭಿವ್ಯಕ್ತಿ ಸ್ವಾತಂತ್ರ್ಯವು ಕೇವಲ ಪತ್ರಿಕೆ ಅಥವಾ ಮಾಧ್ಯಮಕ್ಕೆ ಸೀಮಿತವಾಗದೆ ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ತತ್ತ್ವ, ಸಿದ್ಧಾಂತ ಮತ್ತು ವಿಚಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಅವನ್ನು ಯಾವುದೇ ರೀತಿಯಲ್ಲಿ ಬಹಿರಂಗವಾಗಿ ಪ್ರಕಟಿಸುವ ಹಕ್ಕು ನೀಡುತ್ತದೆ. ಇದನ್ನು ಮೌಖಿಕ, ಲಿಖಿತ, ಚಿತ್ರರೂಪದಲ್ಲಿ ಕೂಡ ವ್ಯಕ್ತಪಡಿಸಬಹುದು. ಮೌಖಿಕವಾಗಿ ವ್ಯಕ್ತಪಡಿಸುವ ಸಂದರ್ಭದಲ್ಲಿ ಭಾಷಣ, ಕವಿತೆ, ಶ್ಲೋಕ ಅಥವಾ ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಅವಕಾಶವಿದೆ. ಚಿತ್ರ, ಸಾಹಿತ್ಯ, ವ್ಯಂಗ್ಯಚಿತ್ರ, ಪೋಸ್ಟರ್, ಬ್ಯಾನರ್ ಅಥವಾ ಡಿಜಿಟಲ್ ಗ್ರಾಫಿಕ್ ಪತ್ರಿಕೆಗಳ ಮೂಲಕವೂ ವ್ಯಕ್ತಪಡಿಸಬಹುದು. ಇನ್ನೂ ನಾನಾ ತರಹದ ಕಲೆ, ನಾಟಕ, ಕಿರುಚಿತ್ರ, ಚಲನಚಿತ್ರ, ಯಕ್ಷಗಾನ, ಬಯಲಾಟದ ಮುಖಾಂತರವೂ ವಿಚಾರಗಳು ಹೊರಬರಬಹುದು. ಆದರೆ ಇವು ಕಾನೂನಿನ ವ್ಯಾಪ್ತಿ ಮೀರುವುದೆ ಅಥವಾ ವ್ಯಾಪ್ತಿಯ ಪರಿಧಿಯೊಳಗೆ ಬರುವುದೇ ಎನ್ನುವುದು ಮುಖ್ಯ.

ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಣಕ್ಕೂ ಅವಕಾಶ

ಸಂವಿಧಾನದ ಪರಿಚ್ಛೇದ 19(1)(ಎ)ನಲ್ಲಿ ಮೂಲಭೂತ ಹಕ್ಕನ್ನು ಕೊಟ್ಟಿದ್ದರೂ ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರಗಳು ಕಾನೂನು ರೂಪಿಸಲು ಪರಿಚ್ಛೇದ 19(2)ರಲ್ಲಿ ಅವಕಾಶ ಕಲ್ಪಿಸಿದೆ. ದೇಶದ ಭದ್ರತೆ, ಸಾರ್ವಭೌಮತೆ, ವಿದೇಶದೊಂದಿಗಿನ ಮಿತ್ರತ್ವ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಿಸ್ತಿಗೆ ತೊಂದರೆ ಬರದ ರೀತಿಯಲ್ಲಿ, ನ್ಯಾಯಾಂಗ ನಿಂದನೆ ಮತ್ತು ಮಾನಹಾನಿಯಾಗದ ರೀತಿಯಲ್ಲಿ ಅಥವಾ ಯಾವುದೇ ಆರೋಪಕ್ಕೆ ಕುಮ್ಮಕ್ಕು ನೀಡುವ ವಿಷಯವನ್ನು ಹತೋಟಿ ಮಾಡುವ ನಿಟ್ಟಿನಲ್ಲಿ ಈ ಕಾನೂನನ್ನು ರೂಪಿಸಲು ಅವಕಾಶವಿದೆ. ಹಾಗಾಗಿ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಗಳಲ್ಲಿ ಉದ್ದೇಶಪೂರ್ವಕವಾಗಿ ದ್ವೇಷ ಬಿತ್ತುವುದು, ಸಾಮಾಜಿಕ ಶಾಂತಿ ಕೆಡಿಸುವುದು, ದೊಂಬಿ ಎಬ್ಬಿಸುವ ಮಾತು, ಕೃತಿ, ಚಿತ್ರ ಇತ್ಯಾದಿ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖಿಸಲಾಗಿದೆ.

ದ್ವೇಷಪೂರಿತ ಭಾಷಣ, ಕೃತಿ, ಚಿತ್ರ, ನಾಟಕ ಮತ್ತು ಸಿನಿಮಾ ಮುಂತಾದವುಗಳು ಈ ಕಾಯಿದೆಗಳಡಿಯಲ್ಲಿ ಶಿಕ್ಷಾರ್ಹ ಅಪರಾಧ ಎನಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಅದೇ ರೀತಿ ತೇಜೋವಧೆ, ವ್ಯಕ್ತಿ-ಸಂಸ್ಥೆಗಳ ಮಾನಹಾನಿ ಆಗದಂತೆ ದಿವಾಣಿ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತರುವ ಅವಕಾಶವನ್ನು ಒಂದೆಡೆ ಕಲ್ಪಿಸಲಾಗಿದೆ. ಮಾನಹಾನಿ, ತೇಜೋವಧೆಯಾದಾಗ ಸೂಕ್ತ ಪರಿಹಾರವನ್ನು ದಿವಾಣಿ ನ್ಯಾಯಾಲಯದ ಮೂಲಕ ಪಡೆದುಕೊಳ್ಳಲು ಇನ್ನೊಂದೆಡೆ ಅವಕಾಶವಿರುತ್ತದೆ. ಹಾಗಾಗಿಯೇ ಸಂವಿಧಾನದತ್ತವಾಗಿ ಬಂದಂತಹ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ತಕ್ಕಮಟ್ಟಿನ ಅವಕಾಶವನ್ನು ಕಾನೂನಿನ ವ್ಯಾಪ್ತಿಯಲ್ಲಿ ಕಲ್ಪಿಸಲಾಗಿದೆ.

ಯಾವೆಲ್ಲ ನಡೆಗಳು ಅಪರಾಧ?

ಭಾರತೀಯ ದಂಡ ಸಂಹಿತೆ ಕಲಂ 153ಎ, 153, 295, 295ಎ, 505 ಇತ್ಯಾದಿ ಮತ್ತು ಇಂದಿನ ಭಾರತೀಯ ನ್ಯಾಯ ಸಂಹಿತೆಯ 353, 196, 192, 298, 299, 353, 302ರ ಪ್ರಕಾರ ಕೆಲವೊಂದು ಮಾತು ಅಥವಾ ಕೃತಿ ಶಿಕ್ಷಾರ್ಹ ಅಪರಾಧವೆಂದು ಹೇಳಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಸಮಾಜದಲ್ಲಿ ಧರ್ಮ-ಸಮುದಾಯಗಳ ಮಧ್ಯೆ ಪ್ರಾಂತ್ಯ, ಭಾಷೆ, ಪ್ರಾದೇಶಿಕತೆ, ಭಾಷೆ ಇತ್ಯಾದಿ ವಿಚಾರದಲ್ಲಿ ದ್ವೇಷಭಾವನೆ ಬಿತ್ತುವಂಥದ್ದು. ಇದೇ ಆಧಾರದಲ್ಲಿ 2 ಗುಂಪುಗಳ ಮಧ್ಯೆ ಜಗಳ, ದೊಂಬಿ, ವರ್ಗಸಂಘರ್ಷ ಉಂಟುಮಾಡುವ ದುರುದ್ದೇಶಪೂರಿತ ಮಾತು, ಭಾಷಣ, ಕೃತಿ, ಚಿತ್ರ ಅಥವಾ ಇನ್ಯಾವುದೇ ರೀತಿಯಲ್ಲಿ ವ್ಯಕ್ತಪಡಿಸುವುದು ಶಿಕ್ಷಾರ್ಹ ಅಪರಾಧ ಮಾತ್ರವಲ್ಲ, ಇದು ಸಂಜ್ಞೇಯ ಅಪರಾಧವಾದುದರಿಂದ ನೇರವಾಗಿ ಪೋಲಿಸರು ಎಫ್ಐಆರ್ ದಾಖಲಿಸಬಹುದು. ಜಾಮೀನುರಹಿತ ಅಪರಾಧಗಳಾದ್ದರಿಂದ ಬಂಧನದಲ್ಲಿಡಲು ಸಹ ಅವಕಾಶವಿದೆ. ಸಾಮಾನ್ಯವಾಗಿ ಈ ಕಾನೂನು ಉಪಯೋಗಕ್ಕಿಂತ ದುರುಪಯೋಗವಾಗುವುದೇ ಹೆಚ್ಚು. ಅಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್, ಪೋಲಿಸರು ಅಥವಾ ಸರ್ಕಾರಕ್ಕೆ ಛೀಮಾರಿ ಹಾಕಿ ಪ್ರಕರಣ ರದ್ದುಗೊಳಿಸುವುದನ್ನು ಕಾಣಬಹುದು.

ನ್ಯಾಯಾಲಯಗಳಿಂದ ಸ್ಪಷ್ಟ ನಿರ್ದೇಶನ

ದ್ವೇಷ ಭಾಷಣದ ಪ್ರಕರಣ ಬಂದಾಗ ನ್ಯಾಯಾಲಯಗಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಪದೇಪದೇ ಉಚ್ಚರಿಸಿವೆ. ಇದರಲ್ಲಿ ಮುಖ್ಯವಾಗಿ, ಇಮ್ರಾನ್ ಪ್ರತಾಪ್ ಗಡಿ ಪ್ರಕರಣ, ಜಾವೇದ್ ಅಹಮದ್ ಪ್ರಕರಣ, ಶಿವಪ್ರಸಾದ್ ಸ್ಯಾಮ್ಯುಲ್ ಶಿವಪ್ಪ ಪ್ರಕರಣ, ಪೆಟ್ರಿಶಿಯು ಮುಖಿವ್ ಪ್ರಕರಣ, ಸಯ್ಯದ್ ಖಾನ್ , ಅರ್ನಬ್ ಗೋಸ್ವಾಮಿ, ತೇಜಸ್ವಿ ಸೂರ್ಯ, ಪ್ರಮೋದ್ ಮುತಾಲಿಕ್ ಪ್ರಕರಣ ಮುಂತಾದವುಗಳ ನಿದರ್ಶನ ನೀಡಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣದ ಮಧ್ಯೆ ಹೇಗೆ ಸಮತೋಲನವನ್ನು ಕಾಯ್ದುಕೊಳ್ಳಬೇಕು, ಯಾವೆಲ್ಲಾ ಮಾತು ದ್ವೇಷ ಭಾಷಣದ ವ್ಯಾಪ್ತಿಗೆ ಬರಬಹುದು ಮತ್ತು ಯಾವ ಸಂದರ್ಭದಲ್ಲಿ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿನೊಳಗೆ ಇರಬಹುದು ಎಂದು ಉಲ್ಲೇಖಿಸಿದೆ.

ಅನಿಸಿದ್ದನ್ನು ಹೇಳಿದಾಕ್ಷಣ ಅಪರಾಧವಾಗಲ್ಲ

ಕೇವಲ ಯಾರೋ ತಮಗೆ ಅನಿಸಿದ್ದನ್ನು ವ್ಯಕ್ತಪಡಿಸಿದ ತಕ್ಷಣ ಅದು ಶಿಕ್ಷಾರ್ಹ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ. ಬದಲಾಗಿ ಅಂತಹ ನಡೆ ದುರುದ್ದೇಶದಿಂದ ಕೂಡಿದ್ದಲ್ಲಿ ಮಾತ್ರ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆ. ಯಾವುದೇ ದುರುದ್ದೇಶವಿಲ್ಲದೆ, ಸಮಾಜದ ಹಿತದೃಷ್ಟಿಯಿಂದ ಆಡಿದ ಮಾತು ಅಪರಾಧ ಆಗುವುದಿಲ್ಲ ಎಂದು ನ್ಯಾಯಾಲಯಗಳು ಸಾರಿ ಹೇಳಿವೆ. ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವ ಸಂದರ್ಭಗಳಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಇಂತಹ ಪ್ರಕರಣಗಳನ್ನು ಕಾನೂನು ದೃಷ್ಟಿಯಲ್ಲಿ ನೋಡುವಾಗ ಒಬ್ಬ ಜವಾಬ್ದಾರಿಯುತ ಗಟ್ಟಿ ಮನಸ್ಸಿನ ವ್ಯಕ್ತಿಯಾಗಿ ತೀರ್ಮಾನ ಮಾಡಬೇಕಾಗುತ್ತದೆ. ಮಾತ್ರವಲ್ಲದೇ ದುರ್ಬಲ ಮನಸ್ಸಿನ ಸಂಕುಚಿತ ಮನೋಭಾವದ ವ್ಯಕ್ತಿಯಾಗಿ ನೋಡುವಂತಿಲ್ಲ. ಹಾಗಾಗಿ ಕೆಲವರಿಗೆ ದ್ವೇಷ ಭಾಷಣ ವ್ಯಾಪ್ತಿಗೆ ಒಳಪಟ್ಟ ನಡೆ-ನುಡಿ ಅಂತ ಅನಿಸಿದಾಕ್ಷಣ ಅದು ಅಪರಾಧವಾಗಲು ಸಾಧ್ಯವಿಲ್ಲ. ಯಾರಿಗೋ ಕೆಲವರಿಗೆ ಅಂತಹ ಮಾತು, ಕೃತಿ ಹಿಡಿಸಿಲ್ಲ ಎನ್ನುವ ಮಾತ್ರಕ್ಕೆ ಅಪರಾಧವೂ ಆಗುವುದಿಲ್ಲ.

ವಿನಾಕಾರಣ ಬಂಧಿಸುವಂತಿಲ್ಲ

ರಾಜಕೀಯ ಕಾರಣಕ್ಕಾಗಿ ಕೆಲವರ ಒತ್ತಡಕ್ಕೆ ಮಣಿದು ಪ್ರಕರಣವನ್ನು ದಾಖಲಿಸುವ ಸಂದರ್ಭವು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಅಂತಹ ಕಡೆ ನ್ಯಾಯಾಲಯಗಳೂ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ಸಂರಕ್ಷಕರಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯ ಮತ್ತು ಸಹಜ. ಇಂತಹ ದ್ವೇಷ ಭಾಷಣ ಪ್ರಕರಣಗಳೆಲ್ಲವೂ 3 ವರ್ಷ ಜೈಲುಶಿಕ್ಷೆ ಮತ್ತು ದಂಡ ವಿಧಿಸಲು ಯೋಗ್ಯ ಪ್ರಕರಣಗಳಾಗಿರುವುದರಿಂದ, ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ವಿನಾಕಾರಣ ಬಂಧಿಸುವಂತಿಲ್ಲ ಮತ್ತು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತಿಲ್ಲ ಎಂದು ಅರ್ನೇಶ್‌ ಕುಮಾರ್, ಅಷ್ಪಾಕ್‌ ಆಲಮ್, ಸತ್ಯೇಂದ್ರಕುಮಾರ್ ಆಂಟೀಲ್ ಪ್ರಕರಣಗಳಲ್ಲಿ ಬಹಳ ಸ್ವಷ್ಟವಾಗಿ ಹೇಳಲ್ಪಟ್ಟಿದೆ. ಮಾತ್ರವಲ್ಲದೆ ವಿನಾಕಾರಣ ಬಂಧನಕ್ಕೆ ಒಳಪಡಿಸಿದಲ್ಲಿ ಅಂತಹ ಪೋಲಿಸ್ ಅಧಿಕಾರಿಗಳ ವಿರುದ್ಧ ಮತ್ತು ನ್ಯಾಯಾಧೀಶರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಹೇಳಲಾಗಿದೆ. ಹಾಗಾಗಿಯೇ ರಾಜಕಾರಣಿಗಳ ತಾಳಕ್ಕೆ ಕುಣಿದು, ವಿಚಾರವಾದಿಗಳ ಒತ್ತಡಕ್ಕೆ ಒಳಗಾಗಿ ಅಥವಾ ಯಾವುದೋ ಸಮುದಾಯ, ಜಾತಿ, ಧರ್ಮ, ಜನಾಂಗವನ್ನು ಓಲೈಸಲು ಇಂತಹ ಪ್ರಕರಣಗಳನ್ನು ಅಮಾಯಕ ಪ್ರಜೆಗಳ ಮೇಲೆ ದಾಖಲಿಸಿ ವಿನಾಕಾರಣ ತೊಂದರೆ ಕೊಟ್ಟಲ್ಲಿ ಅಧಿಕಾರಿಗಳು, ಅಧೀನ ನ್ಯಾಯಾಲಯದ ನ್ಯಾಯಾಧೀಶರು ಬಹುದೊಡ್ಡ ಸಂಕಷ್ಟಕ್ಕೆ ಒಳಗಾಗುವುದರಲ್ಲಿ ಸಂದೇಹವೇ ಇಲ್ಲ.

ಸುಪ್ರೀಂನಿಂದ ಮಹತ್ವದ ಮಾರ್ಗಸೂಚಿ

ಇತ್ತೀಚಿನ ನಲ್ಲಬಾಲು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರವನ್ನು ಎತ್ತಿ ಹಿಡಿದಿದೆ. ಈ ಮೂಲಕ ಪ್ರಜೆಗಳಲ್ಲಿ ಧೈರ್ಯ ಮೂಡಿಸಿದೆ. ಈ ಕೆಳಗೆ ಹೇಳಲಾದ ಮಾರ್ಗಸೂಚಿಗಳನ್ನು ಸುತ್ತೋಲೆ ರೂಪದಲ್ಲಿ ಅನುಷ್ಠಾನಕ್ಕೆ ತರಲು ನಿರ್ದೇಶನ ಕೂಡ ನೀಡಲಾಗಿದೆ. ಅದರಂತೆ:

1. ದ್ವೇಷ ಭಾಷಣ ಅಥವಾ ರಾಜಕೀಯಪ್ರೇರಿತ ಆರೋಪಗಳನ್ನು ಒಳಗೊಂಡ ದೂರು ಸಲ್ಲಿಸಿದ ಸಂದರ್ಭದಲ್ಲಿ ದೂರುದಾರ ನಿಜವಾದ ಸಂತ್ರಸ್ತನೇ ಎಂದು ನೋಡಬೇಕು. 3ನೇ ವ್ಯಕ್ತಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸುವಂತಿಲ್ಲ.

2. ಪ್ರಕರಣ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ನಡೆಸಿ ಸಂಜ್ಞೆಯ ಅಪರಾಧವಾಗಿದೆಯೇ ಮತ್ತು ಮೇಲ್ನೋಟಕ್ಕೆ ದ್ವೇಷ ಭಾಷಣದ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬರುತ್ತಿದೆಯೇ ಎಂದು ಗಮನಿಸಬೇಕು.

3. ಮೇಲ್ನೋಟಕ್ಕೆ ಆರೋಪಿತ ದ್ವೇಷ ಭಾಷಣ, ಶಾಂತಿಭಂಗ, ರಾಜದ್ರೋಹ ಇತ್ಯಾದಿ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ನೋಡುವುದರ ಜೊತೆಗೆ ಕೇದಾರನಾಥ ಸಿಂಗ್, ಶ್ರೇಯಾ ಸಿಂಘಾಲ್ ಪ್ರಕರಣಗಳಲ್ಲಿ ಹೇಳಲಾದ ತತ್ವಗಳಿಗೆ ಅನುಸಾರವಾಗಿದೆಯೇ ಎಂದು ಪರಿಶೀಲಿಸಬೇಕು.

4. ಪೊಲೀಸ್ ಅಧಿಕಾರಿಗಳು ಯಾಂತ್ರಿಕವಾಗಿ ಪ್ರಕರಣವನ್ನು ದಾಖಲಿಸುವಂತಿಲ್ಲ. ಸಂವಿಧಾನದ ಪರಿಚ್ಛೇದ 19(1)(ಎ)ನಲ್ಲಿ ಕೊಟ್ಟಂತಹ ವಾಕ್ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿ ಇದೆಯೇ ಅಥವಾ ಕೇವಲ ರಾಜಕೀಯ, ಸೈದ್ಧಾಂತಿಕ ಟೀಕೆಯೇ ಎಂದು ಪರಿಶೀಲಿಸಬೇಕು.

5. ಮಾನಹಾನಿ ಪ್ರಕರಣಗಳಲ್ಲಿ ನೇರವಾಗಿ ಪೊಲೀಸರು ಪ್ರಕರಣ ದಾಖಲಿಸುವಂತಿಲ್ಲ ಮತ್ತು ದೂರುದಾರರಿಗೆ ಸಂಬಂಧಪಟ್ಟ ದಂಡಾಧಿಕಾರಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವಂತೆ ಹೇಳಿ ಕಳುಹಿಸಬೇಕು.

6. ಇಂತಹ ಪ್ರಕರಣಗಳಲ್ಲಿ ಬಂಧನ ಮತ್ತು ಅದಕ್ಕೆ ಸಂಬಂಧಪಟ್ಟ ಕಾನೂನು ಪ್ರಕ್ರಿಯೆಯನ್ನು ನಡೆಸುವಾಗ ಯಾಂತ್ರಿಕವಾಗಿ ನಡೆದುಕೊಳ್ಳದೆ ತಮ್ಮ ವಿವೇಚನೆಯನ್ನು ಬಳಸಬೇಕು. ಕ್ಷುಲ್ಲಕ ಪ್ರಕರಣಗಳಲ್ಲಿ ಸಕಾರಣವಿಲ್ಲದೆ ಬಂಧನಕ್ಕೆ ಒಳಪಡಿಸುವಂತಿಲ್ಲ. ಗಂಭೀರ ಆರೋಪ ಇದ್ದಲ್ಲಿ ಮಾತ್ರ ಬಂಧನಕ್ಕೆ ಅವಕಾಶ.

7. ರಾಜಕೀಯ ಹಾಗೂ ಸೂಕ್ಷ್ಮ ವಿಷಯಗಳ ಭಾಷಣ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ದೂರುಗಳು ಬಂದಾಗ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವ ಮೊದಲು ಅಭಿಯೋಜಕರ ಅಭಿಪ್ರಾಯವನ್ನು ಪಡೆದು ತಾವು ತೆಗೆದುಕೊಳ್ಳುವ ಕಾನೂನಿನ ಪ್ರಕ್ರಿಯೆ ಅಥವಾ ಕ್ರಮ ನ್ಯಾಯಾಲಯಗಳಲ್ಲಿ ಸಿಂಧು ಆಗಬಹುದೇ ಎಂದು ಖಾತರಿ ಪಡಿಸಿಕೊಳ್ಳಬೇಕು.

8. ಸುಳ್ಳು, ದುರುದ್ದೇಶದಿಂದ ಕೂಡಿದ ಹಾಗೂ ರಾಜಕೀಯ ಪ್ರೇರಿತ ಪ್ರಕರಣಗಳು ಬಂದಾಗ ಅವುಗಳನ್ನು ತನಿಖೆಗೆ ಸೂಕ್ತ ಪ್ರಕರಣವಲ್ಲ ಎಂದು ಅಲ್ಲೇ ಕಾರಣ ನೀಡಿ ಮುಕ್ತಾಯಗೊಳಿಸಬೇಕು.

ಈ ಎಲ್ಲಾ ನಿರ್ದೇಶನಗಳು 2026ರ ಫೆ.7ರಂದು ಪೊಲೀಸ್ ಮಹಾ ನಿರ್ದೇಶಕರು ನೀಡಿದ ಸುತ್ತೋಲೆಯಲ್ಲಿ ಉಲ್ಲೇಖವಾಗಿವೆ. ಇವನ್ನು ಅನುಷ್ಠಾನಗೊಳಿಸಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಇಂತಹ ಕಾಲಘಟ್ಟದಲ್ಲಿ ಸಂವಿಧಾನದತ್ತವಾದ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ಯವನ್ನು ದಮನಿಸುವಂತಹ ಯಾವುದೇ ಬೆದರಿಕೆ ಅಥವಾ ರಾಜಕೀಯ ಪ್ರೇರಿತ ಒತ್ತಡಕ್ಕೆ ದೇಶದ ಪ್ರಜ್ಞಾವಂತ ಪ್ರಜೆಗಳು ಭಯಭೀತರಾಗುವಂತಹ ಆವಶ್ಯಕತೆ ಇಲ್ಲ. ನಮ್ಮ ನಮ್ಮ ಅಭಿಪ್ರಾಯ, ವೈಚಾರಿಕತೆ, ನಿಲುವುಗಳನ್ನು ವ್ಯಕ್ತಪಡಿಸಲು, ನೈಜ ಇತಿಹಾಸ ಹೇಳಲು, ಸಮಾಜಕ್ಕೆ ಬುದ್ಧಿ ಹೇಳಲು ಹಿಂಜರಿಯಬೇಕಾಗಿಲ್ಲ.

ಆದರೆ ಅದು ಸಂವಿಧಾನದ ವ್ಯಾಪ್ತಿ ಮೀರದಂತೆ, ಇನ್ನೊಂದು ಸಮುದಾಯದ ಭಾವನೆಗಳಿಗೆ ಅಡ್ಡಿಯಾಗದಂತೆ, ಸಾಮಾಜಿಕ ಶಾಂತಿ ಕದಡದಂತೆ, ವರ್ಗ ಸಂಘರ್ಷಕ್ಕೆ ಕಾರಣವಾಗದಂತೆ ನಡೆದುಕೊಳ್ಳುವುದು ಭಾರತದ ಪ್ರಜೆಗಳಾಗಿ ನಮ್ಮೆಲ್ಲರ ಆದ್ಯ ಕರ್ತವ್ಯ. ಇದೇ ಮಾನದಂಡ ಸಾಮಾಜಿಕ ಜಾಲತಾಣ, ವಾಟ್ಸಾಪ್‌, ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ ಇತ್ಯಾದಿಗಳಲ್ಲಿ ಸತ್ಯ ಸಂಗತಿಗಳನ್ನು, ಇತಿಹಾಸವನ್ನು ಹಂಚಿಕೊಳ್ಳುವ ಪೋಸ್ಟರ್, ರೀಲ್‌ಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ಯಾವುದೇ ದುರುದ್ದೇಶವಿಲ್ಲದೆ, ತಮಾಷೆಗಾಗಿ, ವ್ಯಂಗ್ಯವಾದ ಟೀಕೆ ಟಿಪ್ಪಣಿಗಳು ಅಪರಾಧವಾಗಲು ಸಾಧ್ಯವಿಲ್ಲ.

ಕರ್ನಾಟಕದ ಮಸೂದೆ ಜಾರಿ ಅನಗತ್ಯ

ಇತ್ತೀಚೆಗೆ ಕರ್ನಾಟಕ ಸರ್ಕಾರ ಜಾರಿಗೆ ತಂದ ದ್ವೇಷಭಾಷಣ ಮಸೂದೆ ಜಾರಿಗೆ ಬರುವ ಅವಶ್ಯಕತೆಯಿಲ್ಲ. ಏಕೆಂದರೆ ಈ ಮಸೂದೆಯಲ್ಲಿ ಹೇಳಿರುವ ಎಲ್ಲಾ ಅಂಶಗಳನ್ನು ಈಗಾಗಲೇ ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಒಳಗೊಂಡಿವೆ. ಸಂವಿಧಾನದ ಪರಿಚ್ಛೇದ 19(1)(ಎ) ಹಾಗೂ ಪರಿಚ್ಛೇದ 21ರಲ್ಲಿ ಹೇಳಿದ ಮೂಲಭೂತ ಹಕ್ಕಿನ ನೇರ ಉಲ್ಲಂಘನೆಯಗುವ ಎಲ್ಲಾ ಸಂದರ್ಭ ಹಾಗೂ ಕಾರಣ ಮೇಲ್ನೋಟಕ್ಕೆ ಕಾಣಿಸುತ್ತದೆ. ಒಂದೊಮ್ಮೆ ಈ ಕಾನೂನು ಜಾರಿಗೆ ಬಂದಲ್ಲಿ ರಾಜಕೀಯವಾಗಿ ದುರುಪಯೋಗವಾಗುವ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅವಕಾಶಗಳೇ ಹೆಚ್ಚು.

ಇದು ಜಾರಿಗೆ ಬಂದರೆ ಹಿರಿಯರು ಬುದ್ಧಿವಾದ ಹೇಳುವಂತಿಲ್ಲ. ಇತಿಹಾಸಕಾರರು ನೈಜ ಇತಿಹಾಸವನ್ನು ಹೇಳುವಂತಿಲ್ಲ, ಕವಿ ತನ್ನ ಭಾವವನ್ನು ವ್ಯಕ್ತಪಡಿಸುವಂತಿಲ್ಲ. ಚಿತ್ರಕಾರ ತನ್ನ ಕಲ್ಪನೆಯನ್ನು ಜಗತ್ತಿಗೆ ತೋರಿಸುವಂತಿಲ್ಲ, ಅಧ್ಯಾಪಕರು ಉಪನ್ಯಾಸಗಳಲ್ಲಿ ಮನಬಿಚ್ಚಿ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ, ಬರಹಗಾರರು ತಮ್ಮ ನಿಲುವನ್ನು ಬರೆಯುವಂತಿಲ್ಲ ಎಂಬಂತಾಗುತ್ತದೆ. ಪರ್ತಕರ್ತರು, ಲೇಖಕರು ಕೈಕಟ್ಟಿ ಕೂರುವಂತಾಗುತ್ತದೆ. ಕೊನೆಗೆ ಈ ಕಾನೂನು ಸಮಾಜದಲ್ಲಿ ದೊಂಬಿ ಹಾಗೂ ಅಶಾಂತಿ ಸೃಷ್ಟಿಸಲು ಕಾರಣವಾದರೂ ಆಶ್ಚರ್ಯವಿಲ್ಲ. ಇಂತಹ ಕಾನೂನುಗಳು ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಪೂರಕವಾಗಲು ಸಾಧ್ಯವಿಲ್ಲ. ಆದರೆ ಮಾರಕವಾಗುವ ಎಲ್ಲಾ ಗುಣಲಕ್ಷಣಗಳನ್ನೂ ಹೊಂದಿದೆ. ಸದ್ಯಕ್ಕೆ ಈ ಕಾನೂನು ಜಾರಿಗೆ ಬರದೇ ಇರುವುದರಿಂದ ನಾಡು ಸುರಕ್ಷಿತ.