ನನ್ನ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಆ ದೇವರು ‘ಕ್ಯಾನ್ಸರ್’ ಎಂಬ ಮಾರಣಾಂತಿಕ ರೋಗವನ್ನೇ ಉಡುಗೊರೆಯಾಗಿ ನೀಡಿದ. ಮನೆಗೆ ಕರೆದೊಯ್ಯಿರಿ, ಎಷ್ಟೇ ದುಬಾರಿ ವೆಚ್ಚದ ಚಿಕಿತ್ಸೆ ನೀಡಿದರೂ ಇವ ಬದುಕಲಾರ, ಅದೃಷ್ಟವಶಾತ್ ಬದುಕುಳಿದರೂ ಸಾಮಾನ್ಯ ಮಕ್ಕಳಂತೆ ಮುಂದೆ ಶಾಲೆಗೆ ಹೋಗಲಾರ, ಎಲ್ಲರಂತೆ ಆಟವಾಡಲಾರ, ಶೇ.96ರಷ್ಟು ಅವನ ಸಾವು ಖಚಿತ ಎಂದು ವೈದ್ಯರು ಕೈಚೆಲ್ಲಿದರು. ಎಲ್ಲರೂ ಅದನ್ನು ನಂಬಿದರು. ನನ್ನಮ್ಮ ಮಾತ್ರ ಒಡಲೊಳಗೆ ಸಂಜೀವಿನಿ ಇಟ್ಟುಕೊಂಡವಳಂತೆ ನನ್ನನ್ನು ಉಳಿಸಿಕೊಳ್ಳುತ್ತೇನೆ ಎಂದು ಪಣ ತೊಟ್ಟಳು. ಅದರಂತೆ ನಡೆದಳು ಕೂಡಾ. ಪ್ರತಿ ಹಂತದಲ್ಲೂ ‘ಆತ್ಮವಿಶ್ವಾಸ’ ಎಂಬ ಅಮೃತವನ್ನು ಉಣಬಡಿಸುತ್ತಾ, ಹೊಸ ಚೈತನ್ಯ ತುಂಬುತ್ತಾ ಈ ಬದುಕಿಗೆ ಉಸಿರಾದಳು. 

ಇನ್ನೂ ನೆನಪಿದೆ ನನಗೆ, ನನಗಾಗ ಏಳು ವರ್ಷ. ಮಾಮೂಲಿಯಂತೆ ಚಿಕಿತ್ಸೆಗಾಗಿ ಅಮ್ಮ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ನನ್ನನ್ನು ಹೊರಗೆ ಕಳುಹಿಸಿದ ವೈದ್ಯರು, ಅವಳೊಂದಿಗೆ ಏನೋ ಗಂಭೀರವಾಗಿ ಪಿಸುಗುಡುತ್ತಿದ್ದರು. ಅಮ್ಮ ಹೊರಗೆ ಬಂದಮೇಲೆ ‘ಏನಂದ್ರಮ್ಮಾ ಡಾಕ್ಟರ್’ ಎಂದು ಕೇಳಿದೆ. ಕರ್ಟನ್ ಮರೆಯಲ್ಲಿ ಅವರ ಮಾತನ್ನು ನಾನು ಕದ್ದು ಕೇಳಿಸಿಕೊಂಡಿದ್ದೆ ಎಂಬುದನ್ನರಿಯದ ಅಮ್ಮ, ‘ಆದಷ್ಟು ಬೇಗ ಎಲ್ಲವೂ ಸರಿ ಹೋಗುತ್ತಂತೆ’ ಎಂದು ಭರವಸೆಯ ಮಳೆಗೈದು ಊರುಗೋಲಾಗಿ ನಿಂತರು.

ನನ್ನ ಸಾವು ಖಚಿತ ಎಂದು ವೈದ್ಯರು ಕೈಚೆಲ್ಲಿದರು. ಎಲ್ಲರೂ ಅದನ್ನು ನಂಬಿದರು. ನನ್ನಮ್ಮ ಮಾತ್ರ ಒಡಲೊಳಗೆ ಸಂಜೀವಿನಿ ಇಟ್ಟುಕೊಂಡವಳಂತೆ ನನ್ನನ್ನು ಉಳಿಸಿಕೊಳ್ಳುತ್ತೇನೆ ಎಂದು ಪಣ ತೊಟ್ಟಳು.

ಇಷ್ಟು ಸಾಲದೆಂಬಂತೆ 12ವರ್ಷದವನಿದ್ದಾಗ ಮೊದಲ ಬಾರಿಗೆ ಹೃದಯಘಾತವೂ ಸಂಭವಿಸಿತು. ಇವನಿಂದ ಹೆಚ್ಚು ನಡೆಯಲಾಗದು, ಓಡಲಾಗದು ಎಂದರು. ಅದೆಲ್ಲಿತ್ತೋ ಆ ಛಲ 18 ವರ್ಷದೊಳಗೆ ಉತ್ತಮ ಬೇಸ್‌ಬಾಲ್ ಪಟು ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡೆ. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ, ಯಮದೂತನಂತೆ ಮತ್ತೊಮ್ಮೆ ಎಗರಿದ ಆ ಹೃದಯಾಘಾತ ಶಾಶ್ವತವಾಗಿ ಬೇಸ್ ಬಾಲ್‌ಗೆ ಬೈಬೈ ಹೇಳುವಂತೆ ಮಾಡಿತು. ಇನ್ನೂ ಯಾಕಾದ್ರೂ ಆ ದೇವರು ನನ್ನನ್ನು ಉಳಿಸಿದ್ದಾನೆ ಬೇಗ ಕರೆದೊಯ್ಯಬಾರದೇ ಎಂದು ಊಳಿಡುವಷ್ಟು ನರಕಯಾತನೆ ಅನುಭವಿಸಿದೆ.

ಆ ವೇಳೆ ಒಂದು ಬ್ಯಾಂಕ್‌ನಲ್ಲಿ ನೌಕರಿ ಸಿಕ್ಕಿತು. ಉಳಿಯುವುದು ಸ್ವಲ್ಪ ದಿನ ಅಷ್ಟರೊಳಗೆ ಏನಾದರೂ ಸಾಧಿಸಬೇಕೆಂಬ ಕನವರಿಕೆಗಳು ಜೀವತಾಳಿದವು. 12 ತಿಂಗಳಲ್ಲಿ ಆಸ್ಟ್ರೇಲಿಯಾದ ಅತೀ ಕಿರಿಯ ಬ್ಯಾಂಕ್ ಮ್ಯಾನೇಜರ್ ಎಂಬ ಹಿರಿಮೆಗೆ ಪಾತ್ರನಾದೆ. 2 ವರ್ಷದಲ್ಲಿ ಏರಿಯಾ ಮ್ಯಾನೇಜರ್, 3 ವರ್ಷದಲ್ಲಿ ಸ್ಟೇಟ್ ಮ್ಯಾನೇಜರ್, 4 ವರ್ಷದಲ್ಲಿ ಅತೀ ಕಿರಿಯ ನ್ಯಾಷನಲ್ ಸೇಲ್ಸ್ ಡೆವಲೆಪ್‌ಮೆಂಟ್ ಮ್ಯಾನೇಜರ್ ಆದೆ. 

23ನೇ ವಯಸ್ಸಿಗೆ 600 ಸಿಬ್ಬಂದಿ ಹೊಂದಿರುವ ಕಂಪೆನಿಯ ನಿರ್ವಹಣೆಯ ಜವಾಬ್ದಾರಿ ಹೊತ್ತೆ. ಈಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಒಟ್ಟು 120 ಬ್ಯಾಂಕ್‌ಗಳನ್ನು ಸಂಭಾಳಿಸುತ್ತಿದ್ದೇನೆ. ಮಿಲೇನಿಯರ್ ಎಂಬ ಪಟ್ಟಗಿಟ್ಟಿಸಿಕೊಂಡಿದ್ದೇನೆ. ಒಂದು ಲಕ್ಷ ಡಾಲರ್ ವೆಚ್ಚದ ಸ್ಪೋರ್ಟ್ಸ್ ಕಾರ್‌ನ ಒಡೆಯನಾಗಿದ್ದೇನೆ. ದೊಡ್ಡ ಬಂಗಲೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಬಟ್ಟೆ ಧರಿಸಿ ಐಶಾರಾಮಿ ಜೀವನ ಸಾಗಿಸುತ್ತಿದ್ದೇನೆ. ಶಾಲೆ ಮತ್ತು ಅನಾಥಾಶ್ರಮಗಳನ್ನು ನಡೆಸುತ್ತಿದ್ದೇನೆ. ನನ್ನಂತೆ ಬದುಕಿನಲ್ಲಿ ಕುಗ್ಗಿದ ಅದೆಷ್ಟೋ ಮಂದಿಗೆ ನನ್ನಮ್ಮನಂತೆ ಸ್ಫೂರ್ತಿಯ ಚಿಲುಮೆಯಾಗಿ ನಿಂತಿದ್ದೇನೆ. ಈಗ ನನ್ನ ಅಲ್ಪ ಬದುಕು ಸಾರ್ಥಕತೆಯ ಶಿಖರವನ್ನೇರಿದೆ ಎಂದು ಭಾಸವಾಗುತ್ತಿದೆ.