ಲಟ್ ಪಟ್ ನೆಟಿಕೆ ಬಗ್ಗೆ ನಿಮಗೆಷ್ಟು ಗೊತ್ತು?

What do you know about cracking knuckles
Highlights

ಒಮ್ಮೆ ನೆಟಿಕೆ ತೆಗೆದು, ಮತ್ತೆ ಅದೇ ಕೀಲಿನಲ್ಲಿ ನಟಿಕೆ ತೆಗೆಯಲು ಇಪ್ಪತ್ತು ನಿಮಿಷಗಳವರೆಗೆ ಕಾಯಬೇಕು. ಕೀಲು ಮತ್ತೊಮ್ಮೆ ಮೊದಲಿನ ಸ್ಥಿತಿಗೆ ಬರಲು ಅಷ್ಟು ಸಮಯ
ಬೇಕಾಗುತ್ತದೆ. 

- ಸುವರ್ಣಿನಿ ಕೊಣಲೆ

ಬೆಳ್ಳಂಬೆಳಗ್ಗೆ ವ್ಯಾಯಾಮವೋ ಯೋಗಾಸನವೋ ಮಾಡುವಾಗ ಹೆಚ್ಚಿನ ಎಲ್ಲಾ ಕೀಲುಗಳೂ ಲಟ್ ಪಟ್ ಎಂದು ಸದ್ದುಮಾಡುತ್ತವೆ. ಕೆಲವೊಮ್ಮೆ ಸೋಮಾರಿತನ ಆವರಿಸಿ, ನಿಧಾನಕ್ಕೆ ಮೈಮುರಿದಾಗ ಕೆಲವು ಕೀಲುಗಳಲ್ಲಿ ಸದ್ದಾಗುವುದಿದೆ. ಏನೋ ಯೋಚಿಸುತ್ತಾ ನಾವೇ ಕೈ ಬೆರಳುಗಳನ್ನು ಮಡಚಿಯೋ, ಎಳೆದೋ ಟಕ್ ಎನಿಸುವುದೂ ಇದೆ. ಕೆಲವೊಮ್ಮೆ ಯಾವುದೋ ಕೀಲಿನಲ್ಲಿ ನೋವು, ಸೆಳೆತ. ನೆಟಿಕೆ ತೆಗೆದ ಕ್ಷಣ ಅದು ಮಾಯ! 

ಕೈಬೆರಳುಗಳು ಮಾತ್ರವಲ್ಲ. ಕುತ್ತಿಗೆ, ಬೆನ್ನು, ಸೊಂಟ, ಮೊಣಕೈ, ಮೊಣಕಾಲು, ಪಾದ, ಎದೆಯ ಮೂಳೆ... ಹೀಗೆ ಎಲ್ಲ ಸೈನೋವಿಯಲ್ ಕೀಲುಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತದೆ. ಈ ನೆಟಿಕೆ ತೆಗೆಯುವುದು cracking knuckles ತೀರಾ ಸಾಮಾನ್ಯವಾದ ವಿಚಾರ. ಆದರೆ ಅದೇನು, ಯಾಕೆ? ಎಂಬ ಕುತೂಹಲ ಮಾತ್ರ ಇದ್ದದ್ದೇ.

ಏನಿದು?: 

ಒಂದು ಅಧ್ಯಯನ ನಡೆಯಿತು 1947ರಲ್ಲಿ. ನೆಟಿಕೆಗೆ ಇಂತದ್ದೇ ಕಾರಣ ಎಂಬುದನ್ನು ಹೇಳಲು ಸಾಧ್ಯವಿರಲಿಲ್ಲ. ಯಾಕೆಂದರೆ ಕೀಲುಗಳ ಒಳಗೆ ಆ ಕ್ಷಣದೊಳಗೆ ಏನಾಗುತ್ತದೆ ಎನ್ನುವುದನ್ನು ತಿಳಿಯುವುದು ಸಾಧ್ಯವೇ ಇರಲಿಲ್ಲ. ಊಹೆಗಳು, ಸಿದ್ಧಾಂತಗಳು ಆಧಾರವಾಗಿದ್ದವು ಅಧ್ಯಯನಕ್ಕೆ. ಈ ಕೀಲುಗಳಲ್ಲಿ, ಎರಡು ಮೂಳೆಗಳ ನಡುವೆ ಸೈನೋವಿಯಲ್ ಫ್ಲುಯಿಡ್ ಎಂಬ ಮೊಟ್ಟೆಯ ಬಿಳಿಲೋಳೆಯಂತಹ ದ್ರವ ತುಂಬಿಕೊಂಡಿರುತ್ತದೆ. 

ನೆಟಿಕೆ ತೆಗೆಯುವಾಗ, ನಾವು ಎರಡೂ ಮೂಳೆಗಳನ್ನು ದೂರ ದೂರ ಸರಿಸುವುದರಿಂದ ಕೀಲಿನಲ್ಲಿ ನಿರ್ವಾತವೊಂದು ಉಂಟಾಗುತ್ತದೆ. ಆ ಪ್ರಕ್ರಿಯೆಯೇ  ಶಬ್ದವುಂಟುಮಾಡುತ್ತದೆ. 1971ರಲ್ಲಿ ಮತ್ತೊಂದಷ್ಟು ಜನ ಇದೇ ವಿಷಯದ ಅಧ್ಯಯನ ಮಾಡಿ ಇನ್ನೊಂದು ವರದಿ ನೀಡಿದರು. ಕೀಲಿನ ಮಧ್ಯೆ ಹೀಗೆ ಉಂಟಾಗುವ ನಿರ್ವಾತದಲ್ಲಿ, ಸೈನೋವಿಯಲ್ ದ್ರವದಲ್ಲಿರುವ ಅನಿಲಗಳು (ಸಾರಜನಕ ಅಥವಾ ಇಂಗಾಲದ ಡೈ ಆಕ್ಸೈಡ್) ತುಂಬಿಕೊಳ್ಳುತ್ತವೆ. ಕೀಲಿನ ಮೂಳೆಗಳು ಸ್ವಸ್ಥಾನಕ್ಕೆ ಮರಳುವಾಗ ಇವುಗಳು ಒಡೆದು ಶಬ್ದವುಂಟಾಗುತ್ತದೆ.

ತೀರಾ ಇತ್ತೀಚೆಗೆ ಅಂದರೆ 2015ರಲ್ಲಿ ಎಂಆರ್‌ಐ ತಂತ್ರಜ್ಞಾನ ಬಳಸಿ, ಇಪ್ಪತ್ತೊಂದನೆಯ ಶತಮಾನದಲ್ಲೂ ನಿಗೂಢವಾಗಿ ಉಳಿದ, ಆದರೆ ತೀರಾ ಸಾಮಾನ್ಯವಾದ, ನೆಟಿಕೆಯ ಶಬ್ದವನ್ನು ಅರಿಯುವ ಪ್ರಯತ್ನ ಮಾಡಲಾಯಿತು. ಎರಡೂ ಮೂಳೆಗಳು ದೂರಾದಾಗ ಸೈನೋವಿಯಲ್ ದ್ರವದ ಒತ್ತಡದಲ್ಲಾಗುವ ಏರುಪೇರಿನಿಂದಾಗಿ ಅದರಲ್ಲಿರುವ ಅನಿಲಗಳು ಬೇರ್ಪಟ್ಟು ಒಂದು ಸಣ್ಣ ಗುಳ್ಳೆಯನ್ನು ಸೃಷ್ಟಿಸುತ್ತವೆ. ಆ ಪ್ರಕ್ರಿಯೆ ಶಬ್ದಕ್ಕೆ ಕಾರಣ. ಹೀಗಿದೆ ಈ ಅಧ್ಯಯನ ನೀಡಿದ ಉತ್ತರ.

ಆದರೆ.. ಪದೇಪದೇ ನೆಟಿಕೆ ತೆಗೆಯುವುದರಿಂದ ಸಂಧಿವಾತದ (osteoarthritis) ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದಿದೆ. ಒಮ್ಮೆ ನೆಟಿಕೆ ತೆಗೆದಾಗ ಕೀಲಿನ ಒಳಗಿನ ಸ್ಥಳ ಹೆಚ್ಚಾಗುತ್ತವೆ, ಸುತ್ತಲಿನ ರಚನೆಗಳು ಸಡಿಲಗೊಳ್ಳುತ್ತವೆ. ಇದರಿಂದ ಒಂದು ರೀತಿಯ ಆರಾಮದ ಅನುಭವವಾಗುತ್ತದೆ. ಆದರೆ ಪದೇ ಪದೇ ಈ ರೀತಿಯ ಒತ್ತಡ ಕೀಲಿನ ಮೇಲೆ ಹಾಕುವುದರಿಂದ, ಕೀಲಿನ ಸುತ್ತಲಿನ ಸ್ನಾಯುಗಳು ಮತ್ತು ಇತರ ರಚನೆಗಳಿಗೆ ಹಾನಿ ಉಂಟಾಗಬಹುದು, ಅವು ತಮ್ಮ ಶಕ್ತಿ ಕಳೆದು ಕೊಳ್ಳಬಹುದು. ಒಮ್ಮೆ ನೆಟಿಕೆ ತೆಗೆದು, ಮತ್ತೆ ಅದೇ ಕೀಲಿನಲ್ಲಿ ನಟಿಕೆ ತೆಗೆಯಲು ಇಪ್ಪತ್ತು ನಿಮಿಷಗಳವರೆಗೆ ಕಾಯಬೇಕು. ಕೀಲು ಮತ್ತೊಮ್ಮೆ ಮೊದಲಿನ ಸ್ಥಿತಿಗೆ ಬರಲು ಅಷ್ಟು ಸಮಯ ಬೇಕಾಗುತ್ತದೆ. 

ಡೊನಾಲ್ಡ್ ಅಂಗರ್ ಎಂಬ ವೈದ್ಯ 60 ವರ್ಷಗಳ ಕಾಲ ತನ್ನ ಎಡಗೈಯ ಬೆರಳುಗಳ ನಟಿಕೆ ತೆಗೆಯುತ್ತಲೇ ಇದ್ದ. ಆದರೆ ಬಲಗೈಯದ್ದಲ್ಲ.

ಯಾಕೆ?: 

ನಟಿಕೆ ತೆಗೆಯುವುದರಿಂದ osteoarthritis ಸಮಸ್ಯೆ ತಲೆದೋರುತ್ತದೆಯೇ, ಅಥವಾ ಇಲ್ಲವೇ ಎನ್ನುವುದನ್ನು ಆತ ಕಂಡುಹಿಡಿಯಬೇಕಿತ್ತು. ಆತನ ಎರಡೂ ಕೈಯ ಎಲ್ಲ ಬೆರಳ ಕೀಲುಗಳೂ ಆರೋಗ್ಯಕರವಾಗಿಯೇ ಇದ್ದವು ಎನ್ನುವುದು ವೈದ್ಯಲೋಕಕ್ಕೊಂದು ಉತ್ತಮ ಫಲಿತಾಂಶ. ಈ ಸಾಧನೆಗಾಗಿ 2009ರಲ್ಲಿ ಇಗ್ನೊಬೆಲ್ ಪ್ರಶಸ್ತಿ ಈತನಿಗೆ ದಕ್ಕಿತು. 
 

loader