ನೀವು ಮನಸೋಇಚ್ಛೆ ತಿಂದರೂ ತೂಕ ಹೆಚ್ಚಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ? ಹಾಗಿದ್ದರೆ ವಾಲ್ಯೂಮೆಟ್ರಿಕ್ ಡಯಟ್ ನಿಮಗೆ ಹೇಳಿ ಮಾಡಿಸಿದ್ದು. ಆದರೆ ಕಂಡೀಶನ್ಸ್ ಅಪ್ಲೈ. 

ಇದಕ್ಕಾಗಿ ಊಟ ಬಿಡುವ ಅಗತ್ಯವಿಲ್ಲ ಅಥವಾ ಇಂಥ ಸಮಯಕ್ಕೆ ಇಷ್ಟು ತಿನ್ನಬೇಕೆಂಬ ನಿಯಮವಿಲ್ಲ. ಆದರೆ, ಕಡಿಮೆ ಡೆನ್ಸಿಟಿಯ ಆಹಾರಗಳನ್ನು ಸೇವಿಸಬೇಕು. ಅದನ್ನು ಎಷ್ಟು ಬೇಕಾದರೂ ಸೇವಿಸಿ, ಯಾರೂ ತಡೆಯುವುದಿಲ್ಲ, ತೂಕವೂ ಏರುವುದಿಲ್ಲ. ಹಸಿವನ್ನೂ ಕಟ್ಟಿಕೊಳ್ಳಬೇಕಾಗುವ ಸಮಸ್ಯೆಯಿಲ್ಲ. ಹಾಗಾದರೆ ಏನಿದು ವಾಲ್ಯೂಮೆಟ್ರಿಕ್ ಡಯಟ್?

ಪೆನ್ ಯೂನಿವರ್ಸಿಟಿಯ ನ್ಯೂಟ್ರಿಶನ್ ಪ್ರೊಫೆಸರ್ ಬಾರ್ಬರಾ ರೋಲ್ಸ್ ಹುಟ್ಟು ಹಾಕಿರುವ ವಾಲ್ಯೂಮೆಟ್ರಿಕ್ಸ್ ಡಯಟ್ ಪದ್ಧತಿಯಲ್ಲಿ ಡೆನ್ಸಿಟಿ ಆಧಾರದಲ್ಲಿ ಆಹಾರವನ್ನು ಮೇಲಿನಂತೆ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅತಿ ಕಡಿಮೆ ಸಾಂದ್ರತೆಯ ಆಹಾರ, ಕಡಿಮೆ ಡೆನ್ಸಿಟಿ ಆಹಾರ, ಮಧ್ಯಮ ಡೆನ್ಸಿಟಿ ಆಹಾರ ಹಾಗೂ ಹೆಚ್ಚು ಡೆನ್ಸಿಟಿಯ ಆಹಾರ. 

ಇದರಲ್ಲಿ ಅತಿ ಕಡಿಮೆ ಸಾಂದ್ರತೆಯ ಆಹಾರವನ್ನು ಎಷ್ಟು ಬೇಕಾದರೂ ಯಾವಾಗ ಬೇಕಾದರೂ ಸೇವಿಸಬಹುದು. ಕಡಿಮೆ ಡೆನ್ಸಿಟಿಯ ಆಹಾರವನ್ನು ದಿನದಲ್ಲಿ ಒಂದು ಬಾರಿ ಸೇವಿಸಬಹುದು. ಮಧ್ಯಮ ಸಾಂದ್ರತೆಯ ಆಹಾರವನ್ನು ವಾರಕ್ಕೆರಡು ಬಾರಿ ಸೇವಿಸಿದರೆ, ಹೆವಿ ಡೆನ್ಸಿಟಿಯ ಆಹಾರಗಳನ್ನು ಆದಷ್ಟು ದೂರವಿಡಿ ಎನ್ನುತ್ತದೆ ನಿಯಮ. 

ಕಡಿಮೆ ಡೆನ್ಸಿಟಿಯ ಆಹಾರಗಳು ಯಾವುವು?
ಕ್ಯಾಲೋರಿ ಕಡಿಮೆ ಇದ್ದು, ಫೈಬರ್, ನೀರು ಹಾಗೂ ಪೋಷಕಸತ್ವಗಳನ್ನು ಹೊಂದಿರುವ ಆಹಾರಗಳನ್ನು ತಿನ್ನಬೇಕಾದುದು ವಾಲ್ಯೂಮೆಟ್ರಿಕ್ ನಿಯಮ. ಹಾಗಾಗಿ ತಾಜಾ ಹಣ್ಣು ತರಕಾರಿಗಳ ಸೇವನೆ ಮಸ್ಟ್. ಅವುಗಳಲ್ಲೂ ಸ್ಟಾರ್ಚ್ ಇಲ್ಲದ್ದು ಮುಖ್ಯ. ಸೂಪ್ ಹಾಗೂ ಕಡಿಮೆ ಫ್ಯಾಟ್ ಹೊಂದಿರುವ ಡೈರಿ ಉತ್ಪನ್ನಗಳೂ ಈ ಡಯಟ್‌ನ ಪ್ರಮುಖ ಭಾಗ. ಇವುಗಳನ್ನು ನೀವು ಎಷ್ಟು ಬೇಕಾದರೂ ಸೇವಿಸಬಹುದು. ಅದಕ್ಕೆ ಮಿತಿ ಇಲ್ಲ. ನೀರಿನ ಅಂಶ ಹೆಚ್ಚಿರುವ ಆಹಾರ ಸೇವನೆಗೆ ಪ್ರಾಮುಖ್ಯತೆ ನೀಡಿ. ಇನ್ನು ಒಂದು ಮಿತಿಯಲ್ಲಿ ಸ್ಟಾರ್ಚ್ ಇರುವ ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು, ಲೋ ಫ್ಯಾಟ್ ಮೀಟ್ ಸೇವಿಸಬಹುದು. ವಾರಕ್ಕೆ ಎರಡು ಬಾರಿ ಮಧ್ಯಮ ಸಾಂದ್ರತೆಯ ಚೀಸ್, ಫ್ರೈಸ್, ಬ್ರೆಡ್, ಡ್ರೆಸಿಂಗ್ಸ್ ಹೊಂದಿದ ಸಲಾಡ್ ಸೇವಿಸಬಹುದು. ಆದರೆ ಚಿಪ್ಸ್, ಕುಕೀಸ್, ಅತಿಯಾಗಿ ಕರಿದ ಪದಾರ್ಥಗಳು, ಕ್ಯಾಂಡಿ, ಬೆಣ್ಣೆಗಳನ್ನು ಮಾತ್ರ ಸಾಧ್ಯವಾದಷ್ಟು ದೂರವಿಡಬೇಕು. 

ಕಡಿಮೆ ಡೆನ್ಸಿಟಿಯ ಆಹಾರಗಳನ್ನು ಸೇವಿಸುವುದರಿಂದ ನೀವದನ್ನು ಎಷ್ಟು ಸೇವಿಸಿದರೂ ಏರುವುದಿಲ್ಲ. ಕಡಿಮೆ ತಿನ್ನಬೇಕೆಂಬ ಮಿತಿ ಇಲ್ಲದಿರುವುದರಿಂದ ಹಸಿವನ್ನು ಕಟ್ಟಿಕೊಂಡು ಕೂರಬೇಕಾಗಿಯೂ ಇಲ್ಲ. ಇದರಿಂದ ಡಯಟ್ ಇಲ್ಲದೆಯೇ ತೂಕ ಇಳಿಸಿಕೊಂಡಂತೆ ನಿಮಗೆ ಭಾಸವಾಗುತ್ತದೆ. ಈ ವಾಲ್ಯೂಮೆಟ್ರಿಕ್ ಡಯಟ್ ಪದ್ಧತಿ ಪೋಷಕತ್ವಗಳನ್ನು ದೇಹಕ್ಕೆ ಒದಗಿಸುವುದಷ್ಟೇ ಅಲ್ಲ, ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಆದರೆ, ಇವುಗಳಲ್ಲಿ ದೇಹಕ್ಕೆ ಅಗತ್ಯವಾದ ಫ್ಯಾಟಿ ಆ್ಯಸಿಡ್ ದೊರೆಯುವುದಿಲ್ಲ ಎಂಬುದೊಂದು ಕೊರತೆಯಿದೆ. ಅದಕ್ಕಾಗಿ ಡ್ರೈಫ್ರೂಟ್ಸ್, ಬೆಣ್ಣೆಹಣ್ಣು, ಮೀನು ಸೇವಿಸಬಹುದು. ಏಕೆಂದರೆ ಹೃದಯದ ಮತ್ತು ಮೆದುಳಿನ ಆರೋಗ್ಯಕ್ಕೆ ಫ್ಯಾಟಿ ಆ್ಯಸಿಡ್ ಅಗತ್ಯವಿದೆ. 

ಸಣ್ಣದಾಗಿ ಹೇಳಬೇಕೆಂದರೆ ಉತ್ತಮ ಆಹಾರವನ್ನು ಹೆಚ್ಚು ಸೇವಿಸಿ, ಅಹಿತಕರ ಆಹಾರವನ್ನು ಮಿತಿಯಲ್ಲಿಡುವುದು ವಾಲ್ಯೂಮೆಟ್ರಿಕ್‌ನ ಬೇಸಿಕ್. ಇನ್ನು ಈ ಡಯಟ್‌ನ ಫಲಿತಾಂಶ ಹೆಚ್ಚು ಫಲಪ್ರದವಾಗಲು ಒಂದಿಷ್ಟು ವ್ಯಾಯಾಮ ಹಾಗೂ ಏನು ತಿನ್ನುತ್ತಿದ್ದೀರೆಂಬ ಕುರಿತ ಒಂದು ನೋಟ್ಬುಕ್ ನಿಭಾಯಿಸುವಂತೆ ಬಾರ್ಬರಾ ಕರೆ ನೀಡಿದ್ದಾರೆ.