ನಮಗೀಗ ಆಯ್ಕೆಗಳು ಮೊಗೆದಷ್ಟು. ಇಷ್ಟವಾದುದ್ದನ್ನು ದಕ್ಕಿಸಿಕೊಳ್ಳುವವರೆಗೂ ಧುಮ್ಮಿಕ್ಕುವ ಆತುರ. ಅದನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ತಾತ್ಸರ. ಇದಿಲ್ಲವೆಂದರೆ ಮತ್ತೊಂದು ಎನ್ನುವ ನಿರ್ಲಕ್ಷೆ. ಸಹನೆ, ಸಮಾಧಾನದಿಂದ ವರ್ತಿಸಿದರೆ ಎಲ್ಲವೂ ಸರಿಹೋದೀತು ಎಂಬ ಸೂತ್ರ ಅರಿತರೂ, ಗಳಿಸಿದ್ದನ್ನು ಸಾವಧಾನದಿಂದ ಕಾಪಿಟ್ಟುಕೊಳ್ಳುವಷ್ಟು ವ್ಯವಧಾನ, ವಿವೇಚನೆ ಬಹಳ ವಿರಳ. ಇಂಥ ಮನಸ್ಥಿತಿ ದಾಂಪತ್ಯದಲ್ಲೂ ನುಸುಳಿ, ನರ್ತಿಸಿ ಸಂಬಂಧದ ಕುರುಹು ಸಿಗದಂತೆ ನಾಶಪಡಿಸುತ್ತಿರುವುದು ವಿಪರ್ಯಾಸ.

ನೀನೇ ಪ್ರಾಣ, ನೀನೇ ಜಗತ್ತು, ನೀನೇ ಸರ್ವಸ್ವ ಎಂದು ಹೇಳುತ್ತಾ ಎರಡ್ಮೂರು ವರ್ಷ ಪ್ರೀತಿಯ ಸಾಗರದಲ್ಲಿ ಮಿಂದೆದ್ದಿದವರ ದಾಂಪತ್ಯವೂ ಎರಡ್ಮೂರು ನಿಮಿಷದ ಕೋಪದ ಕತ್ತಿಗೆ ಬಲಿಯಾಗಿದ್ದನ್ನು ಕೇಳಿದ್ದೇವೆ, ಕಂಡಿದ್ದೇವೆ. ವರ್ಷಗಳ ಸಂಬಂಧಕ್ಕೆ ನಿಮಿಷಗಳಲ್ಲಿ ತಿಲಾಂಜಲಿ ಅರ್ಪಿಸುವಷ್ಟು ವಿವೇಚನಾರಹಿತರಾಗಿದ್ದೇವೆ. ಹೊರಗಿನಿಂದ ಒತ್ತಡದ ಅಲೆಗಳು ಅಪ್ಪಳಿಸಿ ನಮಗೆ ಘಾಸಿಗೊಳಿಸಿದಾಗ, ಎಲ್ಲೋ ಮೂಲೆಯಲ್ಲಿ ಅವಿತು ಕುಳಿತಿದ್ದ ಪರಸ್ಪರರ ವೈಯಕ್ತಿಕ ವಿಚಾರಗಳನ್ನೆಲ್ಲಾ ಬಡಿದೆಚ್ಚರಿಸಿ ಬೀದಿ ರಂಪಾಟ ಮಾಡಿ ಸಂಬಂಧಕ್ಕೇ ಕೊಳ್ಳಿ ಇಟ್ಟುಬಿಡುತ್ತೇವೆ.

ಸಣ್ಣ ಸಣ್ಣ ಸಂಗತಿಗಳಿಗೆಲ್ಲಾ ಮದುವೆ ಆಗಿದ್ದೇ ತಪ್ಪಾಯಿತು ಎನ್ನುವಷ್ಟರ ಮಟ್ಟಿಗೆ ಟೀಕೆಗಳ ಮಳೆಗೈದು ಆ ಸಂಬಂಧವನ್ನು ವಿಚ್ಛೇದನದ ಗಡಿ ಮುಟ್ಟಿಸಿಬಿಡುತ್ತೇವೆ. ನಾನೇಕೆ ಸೋಲಬೇಕು ಎನ್ನುವ ಅಹಂ ಮೈದಳೆದು, ಎಲ್ಲಿ ತಪ್ಪಾಗಿದೆ ಎಂದು ಕ್ಷಣಹೊತ್ತೂ ಯೋಚಿಸುವುದೇ ಇಲ್ಲ. ಕ್ಷಮೆಯಂತೂ ದೂರದ ಮಾತು. ಹೀಗಾದರೆ ಸಂಬಂಧ ಎಲ್ಲಿ ಉಳಿದೀತು? ನಿಮ್ಮ ಸಂಸಾರನೌಕೆ ಮುಳುಗುತ್ತಿದೆ ಎಂಬ ಆತಂಕ ನಿಮ್ಮಲ್ಲೂ ಇದ್ದರೆ ಒಂದಷ್ಟು ಸುಲಭ ಉಪಾಯಗಳನ್ನು ಅನುಸರಿಸಿ ಅದನ್ನು ಜೋಪಾನವಾಗಿ ದಡ ಸೇರಿಸಿಕೊಳ್ಳುವುದು ಒಳಿತು.

ಕಿವಿಗಳು ತೆರೆದಿರಲಿ

ದಾಂಪತ್ಯ ಚೆನ್ನಾಗಿರಬೇಕೆಂದರೆ ನಿಮ್ಮ ಕಿವಿಗಳು ನಿಮ್ಮ ಸಂಗಾತಿ ಮಾತುಗಳಿಗೆ ಸದಾ ತೆರೆದಿರಬೇಕು. ಪತಿ ಹೇಳಿದ್ದನ್ನೆಲ್ಲಾ ಪತ್ನಿ ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಪತ್ನಿಯೂ ಪತಿಯ ಸಮಸ್ಯೆಗಳಿಗೆ ಕಿವಿಯಾಗಬೇಕು. ಸಮಸ್ಯೆ ತೀರದಿದ್ದರೂ ನನ್ನ ನೋವು ಕೇಳುವರು ಇದ್ದಾರಲ್ಲ ಎಂಬ ಸಮಾಧಾನ ಪರಸ್ಪರರಲ್ಲಿ ಮೂಡುತ್ತವೆ. ಇಬ್ಬರೂ ತಮ್ಮದೇ ಲೋಕದಲ್ಲಿ ಮುಳುಗಿದರೆ,ನಾನು ಹೇಳುವು ದಷ್ಟೇ ನೀನು ಕೇಳಬೇಕೆಂದು ತಾಕೀತು ಮಾಡಿದರೆ ವೈವಾಹಿಕ ಬದುಕು ವಿಚ್ಛೇದನಕ್ಕೆ ತಿರುಗುತ್ತದೆ.

ನಂಬಿಕೆ ಇರಲಿ

ಅನುಮಾನ ಎಲ್ಲಿ ಎದ್ದೇಳುತ್ತೋ ಅಲ್ಲಿ ಸಂಬಂಧ ಚಿರನಿದ್ರೆಗೆ ಜಾರಿಬಿಡುತ್ತದೆ. ಪ್ರತಿ ಹೆಜ್ಜೆಯಲ್ಲೂ ಅನುಮಾನದ ನೆರಳು ಹಿಂಬಾಲಿಸದಂತೆ ಎಚ್ಚರವಹಿಸಿ. ಕೆಲವು ವಿಷಯಗಳಲ್ಲಿ ಪಾರದರ್ಶಕತೆ ಪ್ರಮುಖವಾಗಿರುತ್ತದೆ. ಇಬ್ಬರಲ್ಲೂ ವಂಚನೆ ಮಹಾಪರಾಧ ಎಂಬ ಸಂಗತಿಯ ಅರಿವಿದ್ದರೆ ನಂಬಿಕೆ ಪ್ರಬಲವಾಗಿದ್ದರೆ ಸಂಬಂಧ ಹಸನಾಗಿರುತ್ತದೆ.

ಸಮಸ್ಯೆಗೆ ತಕ್ಕ ಶಾಸ್ತಿ

ದಾಂಪತ್ಯದಲ್ಲಿ ಒಂದು ಚಿಕ್ಕ ಸಮಸ್ಯೆ ಬರಲಿ ಅದರ ಪರಿಣಾಮ ಸಂಬಂಧದ ಮೇಲಾಗುತ್ತದೆ. ಸಮಸ್ಯೆ ಏನು ಎಂಬುದನ್ನು ಅರಿಯಲು ಪರಸ್ಪರರು ಪ್ರಯತ್ನಿಸಿದರೆ ಸಾಕು ಸಮಸ್ಯೆ ದೂರವಾದಂತೆ. ಪ್ರಯತ್ನವನ್ನೇ ಮಾಡದೇ ಸಮಸ್ಯೆಗೆ ಹತ್ತಿರವಾಗುತ್ತಾ ಹೋದರೆ ನೀವು ದೂರವಾಗಬೇಕಾದೀತು. ನಿಮ್ಮ ಸಂಗಾತಿ ಕೋಪದಲ್ಲಿಏನಾದರು ಹೇಳಿದರೆ ಅದರ ಹಿಂದಿನ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲು ಯತ್ನಿಸುವುದು ಒಳ್ಳೆಯದು.

ಕಛೇರಿ ನಡೆಯದಿರಲಿ

ಈಗ ಪತಿ-ಪತ್ನಿ ಇಬ್ಬರೂ ಉದ್ಯೋಗಿಗಳಾಗಿಯೇ ಇರುತ್ತಾರೆ. ಕಚೇರಿಯಲ್ಲಿ ನಡೆದ ದುರ್ಘಟನೆಗಳು, ಒತ್ತಡಗಳನ್ನೆಲ್ಲಾ ಮನೆಯಲ್ಲಿ ಹೊರಹಾಕುತ್ತಾರೆ. ಇದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಕಚೇರಿಯ ಒತ್ತಡಗಳನ್ನು ಅಲ್ಲಿ ಯೇ ಬಿಟ್ಟು ನಿರಾಳರಾಗಿ ಮನೆಯಲ್ಲಿ ನೆಮ್ಮದಿಯಿಂದ ಇರಿ. ಮರುದಿನ ಮತ್ತದೇ ಸಮಸ್ಯೆಗಳನ್ನು ಅಪ್ಪಿಕೊಳ್ಳುವಿರಂತೆ.

ಜೊತೆಯಲ್ಲಿ ಶಾಪಿಂಗ್ ಮಾಡದಿರಿ

ತನ್ನ ಸಂಗಾತಿ ಜೊತೆಗೆ ಶಾಪಿಂಗ್ ಮಾಡಬೇಕೆನ್ನುವುದು ಪ್ರತಿ ಮಹಿಳೆಯ ಬಯಕೆ. ಆದರೆ, ಒಂದು ಸಂಶೋಧನೆ ಪ್ರಕಾರ ಒಟ್ಟಿಗೆ ಶಾಪಿಂಗ್ ಮಾಡಿದರೆ ಹೆಚ್ಚು ಮನಸ್ತಾಪಗಳು ತಲೆದೋರುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಪತ್ನಿ ತಾಸು ಗಟ್ಟಲೇ ಶಾಪಿಂಗ್ ಮಾಡುವಾಗ ಪತಿ ಹೊರಗೆ ಕಾಯುವುದು, ಪತ್ನಿ ಆಯ್ಕೆಗೆ ಪತಿ ನಿರಾಕಾರ, ಸಣ್ಣ ಸಣ್ಣ ಸಂಗತಿಗಳು ವಾದ-ವಿವಾದಗಳು ಭುಗೆಲೇಳುತ್ತವೆ. ಇಬ್ಬರೂ ಒಟ್ಟಿಗೆ ಶಾಪಿಂಗ್ ಮಾಡುವುದು ರುಚಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ.

ಕಾಳಜಿ ಮರೆತರೆ ಮುಗೀತು

ನಿಮ್ಮ ಸಂಗಾತಿ ಏನಾದರೂ ಒಳ್ಳೆಯ ಕೆಲಸ ಮಾಡಿದರೆ, ಅದಕ್ಕೆ ತಪ್ಪದೇ ಮೆಚ್ಚುಗೆಯ ನುಡಿಗಳನ್ನಾಡಿ. ಅದಕ್ಕೆ ಹಣವೇನೂ ವ್ಯರ್ಥವಾಗದು. ಆ ಮೆಚ್ಚಗೆಯಿಂದಲೇ ನಿಮ್ಮ ಸಂಸಾರದಲ್ಲಿ ತುಸು ಜೋರಾಗಿಯೇ ಪ್ರೀತಿಯ ಮಳೆ ಸುರಿಯಬಹುದು.ಇದರೊಂದಿಗೆ ಪರಸ್ಪರರಲ್ಲಿ ಹೆಚ್ಚು ಕಾಳಜಿ ವ್ಯಕ್ತವಾಗಲಿ. ನಿಮ್ಮ ಸಂಗಾತಿಯ ಚಿಕ್ಕ ಚಿಕ್ಕ ಖುಷಿಗಳಿಗೂ ಮನ್ನಣೆ ನೀಡಿ.

ನಿರೀಕ್ಷೆಗಳಿಗೆ ತುಸು ಬ್ರೇಕ್ ಹಾಕಿ

ನಿರೀಕ್ಷೆಗಳೇ ನಿರಾಸೆಗೆ ಬುನಾದಿ ಎಂಬದನ್ನರಿತಿದ್ದರೂ ಅಪೇಕ್ಷೆಗಳನ್ನಿಟ್ಟುಕೊಂಡು ನೋವಿಗೀಡಾಗುವುದು ಸರಿಯಲ್ಲ. ಸಮಯ-ಸಂದರ್ಭಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಿರುತ್ತದೆ. ಪ್ರತಿದಿನ ಅಷ್ಟೇ ಕಾಳಜಿ ತೋರಬೇಕು, ನಿನ್ನೆ ಇದ್ದಂತೆ ಇವತ್ತೂ ಇರಬೇಕು, ಕಳೆದ ವರ್ಷದ ಹಬ್ಬಕ್ಕೆ ನನಗೆ ದುಬಾರಿ ವೆಚ್ಚದ ಸೀರೆ ಕೊಡಿಸಿದ್ದರೂ, ಈ ಬಾರಿ ಅದಕ್ಕಿಂತ ದುಬಾರಿ ವೆಚ್ಚದ ಉಡುಗೊರೆ ಸಿಗಲಿದೆ ಎಂಬಿತ್ಯಾದಿ ಸಣ್ಣ ಸಣ್ಣ ನಿರೀಕ್ಷೆಗಳಿಗೆ ಬ್ರೇಕ್ ಹಾಕಿ.

ಟೀಕೆಗಳಿಗೆ ಟಾಟಾ

‘ನನಗೆಷ್ಟು ಒಳ್ಳೆಯ ಸಂಬಂಧಗಳು ಬಂದಿತ್ತೊ ಎಲ್ಲವನ್ನೂ ಬಿಟ್ಟು ನಿನ್ನ ಮದುವೆಯಾದೆ’ ಎಂದು ಗಿಲ್ಟಿ ಫೀಲ್ ಹಾಗೂ ನಿಮ್ಮ ಸಂಗಾತಿಯನ್ನು ಟೀಕಿಸಿದರೆ ಸಂಸಾರನೌಕೆ ಮುಳುಗುತ್ತದೆ. ಹಿಂದಿ ಸರಿದ ವ್ಯಕ್ತಿಗಳೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಸುವುದಕ್ಕೆ ಟಾಟಾ ಬೈ ಬೈ ಹೇಳಿ. ಸಂಗಾತಿಯನ್ನು ಮನಃಪೂರಕವಾಗಿ ಒಪ್ಪಿ ಬದುಕು ಸಾಗಿಸಿದರೆ ಒಳ್ಳೆಯದು.

- ಶ್ವೇತಾ ಕೆ ಪಿ