‘ಅಬ್ಬಾ, ನಾನಾಗ ಎಷ್ಟು ದಪ್ಪ ಆಗಿದ್ದೆ. ಅಯ್ಯೋ, ನಂಗೆ ಡಬ್ಬಲ್ ಚಿನ್ ಬೇರೆ ಬಂದಿತ್ತು! ಈಗ ನೆನೆಸಿಕೊಂಡರೆ, ಅರೆ ಅದು ನಾನೇನಾ ಅಂತನಿಸುತ್ತೆ..’

ಇದು ಕರೀನಾ ಕಪೂರ್ ಉದ್ಗಾರ. ಎರಡು ವರ್ಷಗಳ ಕೆಳಗೆ ತಾನು ಹೇಗಿದ್ದೆ ಅನ್ನೋದನ್ನು ನೆನೆಸಿಕೊಂಡು ಹೇಳಿದ್ದು. ‘ಅಯ್ಯೋ, ಡಬ್ಬಲ್ ಚಿನ್’ ಅನ್ನುವಷ್ಟು ಗಂಭೀರ ವಿಷಯವಾ ಇದು.. ಗೊತ್ತಿಲ್ಲ, ಅವರವರ ಭಾವಕ್ಕೆ. ಆದರೆ ಫಿಟ್‌ನೆಸ್‌ನಲ್ಲಿ ಮೋಹ ಇರೋರಿಗೆ ಮಾತ್ರ ಗಲ್ಲದ ಕೆಳಗೆ ಇಣುಕುವ ಇನ್ನೊಂದು ಲೇಯರ್ ಮಾಂಸದ ಮುದ್ದೆಯನ್ನು ಕಂಡರೆ ಅಸಹನೆ. ಅದನ್ನು ಕರಗಿಸಲು ಇನ್ನಿಲ್ಲದ ಕಸರತ್ತು ಮಾಡೋದು ಸಾಮಾನ್ಯ.

ಯಾವ್ದೋ ಹಾಲಿವುಡ್ ಸಿನಿಮಾದಲ್ಲಿ ಬಡವನೊಬ್ಬ ತಾನು ಸಿರಿವಂತನಾಗುವ ಕನಸು ಕಾಣುತ್ತಾ ಹಾಡುತ್ತಾನೆ. ಅದರಲ್ಲೊಂದು ಸಾಲಿನಲ್ಲಿ, ನಾನು ಶ್ರೀಮಂತನಾದಾಗ ನನ್ನ ಹೆಂಡತಿಗೆ ಡಬ್ಬಲ್ ಚಿನ್ ಬರುತ್ತೆ ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ವಾಸ್ತವದಲ್ಲಿ ನಿರಂತರ ದುಡಿಮೆ, ಸರಿಯಾದ ಊಟವಿಲ್ಲದೇ ಅವಳು ಮೂಳೆ ಚಕ್ಕಳದ ಹಾಗಾಗಿರುತ್ತಾಳೆ. ಅವನ ಕನಸು ಅವಳು ಮೈಕೈ ತುಂಬಿಕೊಂಡು ಡಬಲ್ ಚಿನ್‌ನ ಮಹಿಳೆಯಾಗೋದು. ಅಂದರೆ ಡಬಲ್ ಚಿನ್ ಅನ್ನೋದು ಒಂದರ್ಥದಲ್ಲಿ ಶ್ರೀಮಂತಿಕೆ, ಆರಾಮ ಬದುಕಿನ ಸಂಕೇತದ ಹಾಗಾಯ್ತು. ಬಡವನಿಗೆ ಅದು ಕನಸು, ಹೊಟ್ಟೆಗೆ ಬಟ್ಟೆಗೆ ಸಿಂಪಲ್ ವ್ಯಾಯಾಮ, ಟ್ರೈ ಮಾಡಿ ಬೇಕಾದಷ್ಟು ಇದ್ದವರಿಗೆ ಅದು ಶತ್ರು!

ಡಬ್ಬಲ್‌ಚಿನ್ ಯಾಕೆ ಬರುತ್ತೆ?

ತೂಕ ಹೆಚ್ಚಾದಾಗ ಡಬ್ಬಲ್ ಚಿನ್ ಕಾಣಿಸಿಕೊಳ್ಳೋದು ಸಾಮಾನ್ಯ. ಸೊಂಟದಲ್ಲಿ, ಹೊಟ್ಟೆ, ಕತ್ತಿನ ಭಾಗದಲ್ಲಿ ಬೊಜ್ಜು ಕಂಡು ಬರುವಷ್ಟೇ ಸಾಮಾನ್ಯವಾಗಿ ಗಲ್ಲದ ಕೆಳಗೂ ಬೊಜ್ಜು ಬರುತ್ತೆ. ಅದಕ್ಕಿರುವ ಕಾರಣವೇ ಇದಕ್ಕೂ. ಕೆಲವೊಮ್ಮೆ ಓವರ್‌ವೈಟ್ ಇಲ್ಲದಿದ್ದರೂ ಗಲ್ಲದ ಕೆಳಗೆ ಕೊಬ್ಬು ಕಾಣಿಸಿಕೊಳ್ಳಬಹುದು. ಇದಕ್ಕೆ ವಂಶವಾಹಿ ಕಾರಣ ಇರಬಹುದು ಅಥವಾ ಈ ಭಾಗದ ಚರ್ಮ ತುಸು ಸಡಿಲಾದರೂ ಹೀಗಾಗಬಹುದು.

ಸಿಂಪಲ್ ವ್ಯಾಯಾಮಗಳನ್ನು ಹೀಗೆ ಮಾಡಿ

ಗಾಳಿಯಲ್ಲಿ ಮುತ್ತು ತೇಲಿಸುವುದನ್ನು ನೆನೆಸಿಕೊಳ್ಳಿ. ತಲೆ ಎತ್ತಿ ಸೀಲಿಂಗ್‌ಅನ್ನು ನೋಡಿ. ಮುಖ ಸ್ನಾಯುಗಳನ್ನು ಬಿಗಿ ಮಾಡಿ ತುಟಿಗಳನ್ನು ಮುತ್ತು ಕೊಡುವ ರೀತಿ ಮುಂದೆ ಮಾಡಿ. ಹತ್ತು ಎಣಿಸುವವರೆಗೆ ಇದೇ ಭಂಗಿ ಇರಲಿ. ಆಮೇಲೆ ರಿಲ್ಯಾಕ್ಸ್ ಆಗಿ. ಹೀಗೇ ದಿನದಲ್ಲಿ ಆಗಾಗ ಮಾಡುತ್ತಿರಿ. ನಿಮ್ಮ ಅರಿವಿಗೆ ಬಾರದೇ ಡಬಲ್ ಚಿನ್ ಮಾಯವಾಗುತ್ತೆ.

9 ರಿಂದ 10 ಇಂಚು ಸುತ್ತಳತೆಯ ಬಾಲ್‌ಅನ್ನು ಗಲ್ಲದ ಕೆಳಗೆ ಇಡಿ. ಅದನ್ನು ಗಲ್ಲದಿಂದ ಗಟ್ಟಿಯಾಗಿ ಒತ್ತಿ ಸ್ವಲ್ಪ ಹೊತ್ತು ಹಾಗೇ ಇರಿ. ಆಮೇಲೆ ರಿಲ್ಯಾಕ್ಸ್ ಆಗಿ. ದಿನದಲ್ಲಿ 25 ಸಲ ಹೀಗೆ ಮಾಡಿದ್ರೆ ಬಹಳ ಬೇಗ ಡಬಲ್ ಚಿನ್ ಹೋಗುತ್ತೆ

ಕತ್ತು ನೇರ ಮಾಡಿ, ಒಂದೇ ಕಡೆ ನೋಡುತ್ತಿರಿ. ನಿಧಾನಕ್ಕೆ ಕತ್ತೆತ್ತಿ ಮೇಲೆ ನೋಡಿ. ತುಟಿಯ ಭಾಗವನ್ನು ಬಿಗಿ ಮಾಡಿ. ಹತ್ತು ಎಣಿಸಿ. ಕತ್ತು ಕೆಳಗಿಳಿಸಿ. ಹೀಗೆ ದಿನದಲ್ಲಿ ಹತ್ತರಿಂದ ಇಪ್ಪತ್ತು ಬಾರಿ ಮಾಡಿ.

ಕತ್ತನ್ನು ನೇರ ಮಾಡಿ ನಿಲ್ಲಿ. ನಾಲಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಹೊರಚಾಚಿ. ಹಾಗೇ ನಾಲಿಗೆಯನ್ನು ಮೇಲಕ್ಕೆತ್ತಿ ಮೂಗಿನ ತುದಿಯವರೆಗೆ ತನ್ನಿ. ಹತ್ತು ಸೆಕೆಂಡ್ ಹಾಗೇ ಇರಿ. ನಂತರ ಸಾಮಾನ್ಯ ಭಂಗಿಗೆ ಮರಳಿ.

ತಲೆಯನ್ನು ಹಿಂದಕ್ಕೆ ಬಾಗಿಸಿ ಮೇಲೆ ನೋಡಿ. ತಲೆಯನ್ನು ನಿಧಾನಕ್ಕೆ ಬಲಕ್ಕೆ ತಿರುಗಿಸಿ. ಕೆಳ ತುಟಿಯನ್ನು ಮುಂದೆ ಮಾಡಿ ಓರೆಯಾಗಿ ಒಂದು ಬದಿಗೆ ತಿರುಗಿಸಿ. ಹತ್ತು ಸೆಕೆಂಡ್ ಹಾಗೇ ಇದ್ದು ಆಮೇಲೆ ರಿಲ್ಯಾಕ್ಸ್ ಆಗಿ. ತಲೆಯನ್ನು ಎಡಕ್ಕೆ ತಿರುಗಿಸಿ ಇದೇ ವ್ಯಾಯಾಮವನ್ನು ಮುಂದುವರಿಸಿ.

- ನಿಶಾ ಕಮ್ಮರಡಿ