‘ಟಿಕ್ ಟಿಕ್ ಟಿಕ್ ಟಿಕ್’ ಗೋಡೆಯ ಮೇಲಿನ ಗಡಿಯಾರದ ಮುಳ್ಳು ಶಬ್ದ ಮಾಡುತ್ತದೆ. ಆದರೆ ‘ಟಿಕ್ ಸಮಸ್ಯೆಯ’ (ಜ್ಚಿ ಜಿಟ್ಟಛ್ಟಿ) ಬಗ್ಗೆ ಕೇಳಿದ್ದೀರಾ? ಬಹುಶಃ ಕೆಲವರಿಗೆ ಮಾತ್ರ ತಿಳಿದಿದೆಯೇನೋ. ಹೌದು ‘ಟಿಕ್ ಸಮಸ್ಯೆ’ ಎಂಬುದು ನರಕ್ಕೆ ಸಂಬಂಧಿಸಿದ ಕಾಯಿಲೆ.  ಕ್ಷಿಪ್ರಗತಿಯ, ಪುನರಾವರ್ತಿಸುವ, ಸ್ನಾಯುಗಳ ಸಂಕೋಚನದಿಂದ, ಇಚ್ಛೆಗೆ ವಿರುದ್ಧವಾಗಿ ಆಗುವ ದೇಹದ ಕೆಲವು ಅಂಗಾಂಗಗಳ ಚಲನೆಗಳಿಗೆ ‘Tic Disarder  ಎನ್ನುತ್ತಾರೆ.

ಈ ಸಮಸ್ಯೆ ಇರುವವರು ಹೇಗಿರುತ್ತಾರೆ? 
ಕಾರಣವಿಲ್ಲದೆ ಮೋರೆ ಸೊಟ್ಟ ಮಾಡುವುದು, ಭುಜ ಅಲುಗಿಸುವುದು, ಕಾರಣವಿಲ್ಲದೆ ತುಟಿ ಕಚ್ಚುವುದು, ಕಣ್ಣು ಮಿಟುಕಿಸುವುದು, ನಶ್ಯ ಸೇದುವಂತೆ ಮೂಗಿನಲ್ಲಿ ಉಸಿರೆಳೆಯುವುದು, ಗಂಟಲು ಸರಿ ಮಾಡಿಕೊಳ್ಳುವುದು, ಇತ್ಯಾದಿ ಇದಕ್ಕೆ ಉದಾಹರಣೆ. ಪ್ರತಿ ಹತ್ತು ಸಾವಿರ ಜನರಲ್ಲಿ, ನಾಲ್ಕರಿಂದ ಐದು ಮಕ್ಕಳು/ವ್ಯಕ್ತಿಗಳಲ್ಲಿ ಇದು ಇರಬಹುದು. ಸಾಮಾನ್ಯವಾಗಿ  ಬಾಲ್ಯ ಅಥವಾ ಹರೆಯದ ಸಮಯದಲ್ಲಿ ಮೊದಲ ಬಾರಿ ಕಾಣಿಸಿಕೊಂಡು, ಯೌವನಕ್ಕೆ ಕಾಲಿಡುವಷ್ಟರಲ್ಲಿ ತನ್ನಿಂತಾನೇ ಕಡಿಮೆಯಾಗಬಹುದು. ಕೆಲವು ಬಾರಿ ವಯಸ್ಕರಲ್ಲೂ ಕಾಣುತ್ತೇವೆ.

ಟಿಕ್ಸ್ ವಿಧಗಳು
ಟಿಕ್ಸ್‌ಗಳನ್ನು ಎರಡು / ಮೂರು ರೀತಿಯಲ್ಲಿ ವಿಭಜಿಸಬಹುದು.

ಸ್ನಾಯುಗಳ ಚಲನೆಗೆ ಸಂಬಂಧಿಸಿದ ಟಿಕ್ಸ್ ಆದರೆ Motor Tics  ಎಂದು ಕರೆಯುತ್ತೇವೆ.  ಉಚ್ಛಾರಣೆಗೆ ಸಂಬಂಧಪಟ್ಟಿದ್ದರೆ Vocal Tics ಎನ್ನುತ್ತೇವೆ.  Motor Tics ನಲ್ಲೂ ಒಂದು ಗುಂಪಿನ ಸ್ನಾಯು ಅಥವಾ ಬೇರೆ ಬೇರೆ ಗುಂಪಿನ ಸ್ನಾಯುಗಳು ಒಳಗೊಂಡಿದ್ದರ ಆಧಾರದ ಮೇಲೆ ಸರಳ ಮತ್ತು ಸಂಕೀರ್ಣ ಎಂಬ ಪ್ರಬೇಧಗಳುಂಟು.  ಒಂದು ಮಗುವಿನಲ್ಲಿ ಒಂದು ವಿಧದ ಟಿಕ್ಸ್ ಇರಬಹುದು. ಅಥವಾ ಒಂದಕ್ಕಿಂತ ಹೆಚ್ಚಿನ ರೀತಿಯ ಟಿಕ್ಸ್ ಇರಬಹುದು.
 
ಏನಿದು ಟೊರೆಟ್ಸ್ ಸಿಂಡ್ರೋಮ್?
ಬಾಲ್ಯದಲ್ಲಿ ಕೆಲವೇ ಕೆಲವು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಿಂಡ್ರೋಮಿನಲ್ಲಿ ಎರಡು-ಮೂರಕ್ಕೂ ಹೆಚ್ಚಿನ ರೀತಿಯ ಸ್ನಾಯುವಿನ ಟಿಕ್ಸ್‌ಗಳು (ಮೋಟಾರ್ ಟಿಕ್ಸ್) ಹಾಗೂ ಉಚ್ಛಾರಣೆಗೆ/ಧ್ವನಿಗೆ ಸಂಬಂಧಪಟ್ಟ ವೋಕಲ್ ಟಿಕ್ಸ್‌ಗಳಿರುತ್ತವೆ. ತಮಗೇ ಗೊತ್ತಿಲ್ಲದೆ, ಕೆಟ್ಟ ಶಬ್ದಗಳನ್ನು ಬಾಯಿಂದ ಉಚ್ಛರಿಸುವಂತಹ ವೋಕಲ್ ಟಿಕ್ಸ್ ಇದರ ಒಂದು ವಿಶಿಷ್ಟ ಲಕ್ಷಣ. ಮಾನಸಿಕ ಗೀಳಿನ ಲಕ್ಷಣಗಳೂ ಇದರಲ್ಲಿರಬಹುದು. ಹದಿನೆಂಟನೆಯ ಶತಮಾನದ, ಪ್ರಸಿದ್ಧ ನರರೋಗತಜ್ಞ ‘ಜಾರ್ಜಸ್ ಆಲ್ಬರ್ಟ್ ಗಿಲೆಸ್ ಡಿ ಲಾ ಟೂರೆಟ್’ ಎಂಬುವವನು ಈ ಸಮಸ್ಯೆಯ ಕುರಿತು ಸಾಕಷ್ಟು ಸಂಶೋಧನೆ ಮಾಡಿ ಪ್ರಕಟಿಸಿದ್ದರಿಂದ ಅವನ ಹೆಸರನ್ನೇ ಈ ಸಿಂಡ್ರೋಮ್‌ಗೆ ಇಡಲಾಯಿತು. \

ಟಿಕ್ಸ್ ಹಾನಿಕಾರಕವೇ?
ಖಂಡಿತ ಇಲ್ಲ. ಜೀವಕ್ಕೇನೂ ಹಾನಿಯಿಲ್ಲ. ಆದರೆ ಮಕ್ಕಳಿಗೆ ಕಲಿಕೆಯಲ್ಲಿ, ದೊಡ್ಡವರಿಗೆ ಉದ್ಯೋಗದಲ್ಲಿ ಸಮಸ್ಯೆಯಾಗಬಹುದು. ಇತರರ ಮುಂದೆ ನಾಚಿಕೆಯಾಗಬಹುದು.
 

ಚಿಕಿತ್ಸೆ ಅಗತ್ಯವೇ?
ಟಿಕ್ಸ್ ಸಾಮಾನ್ಯವಾಗಿ ಮಗು/ವ್ಯಕ್ತಿಯ ನಿಯಂತ್ರಣದಲ್ಲಿ ಪೂರ್ಣ ಮಟ್ಟಿಗೆ ಇಲ್ಲದಿದ್ದರೂ, ಒಂದು ಹಂತದವರೆಗೆ ಸ್ವಯಂ ತಡೆಯಬಹುದು. ಗಮನ ಬೇರೆ ಕಡೆ ಇರುವಾಗ, ಟಿಕ್ಸ್ ತೀವ್ರತೆ ಕಡಿಮೆ. ನಿದ್ರೆಯಲ್ಲಿದ್ದಾಗ ಪೂರ್ಣ ಮಾಯ. ಅದೇ ಹೆಚ್ಚಿನ ಜನರಿರುವ ಕಡೆ, ವೇದಿಕೆಯ ಮೇಲೆ, ಆತಂಕಗೊಂಡಾಗ ಜಾಸ್ತಿಯಾಗುತ್ತದೆ. ಸೌಮ್ಯ ರೀತಿಯ ಟಿಕ್ಸ್ ಸಮಸ್ಯೆಗೆ ಚಿಕಿತ್ಸೆಯ ಅಗತ್ಯವೇ ಇಲ್ಲ. ಇದರಿಂದ  ಕಲಿಕೆ, ಕೆಲಸ ಕಾರ್ಯಗಳಲ್ಲಿ ತೊಂದರೆಯಾಗುತ್ತಿದ್ದರೆ ಚಿಕಿತ್ಸೆ ಅಗತ್ಯ. ಕೆಲವು ರೀತಿಯ ವರ್ತನಾ ಚಿಕಿತ್ಸೆ  ಮತ್ತು ಕೆಲವು ಮಾತ್ರೆಗಳು ಈ ಟಿಕ್ಸ್ ಶಮನ ಮಾಡುವಲ್ಲಿ ಉಪಯುಕ್ತ. ಆತಂಕ ಕಡಿಮೆ  ಮಾಡಲು ಆಪ್ತಸಮಾಲೋಚನೆಯೂ ಅತ್ಯಗತ್ಯ.

-ಡಾ.ಕೆ.ಎಸ್ ಶುಭ್ರತಾ, ಮನೋವೈದ್ಯೆ