ಸಾವು-ಬದುಕಿನ ನಡುವೆ ನರಳುತ್ತಿದ್ದ ಕೋತಿಗೆ ಅಮ್ಮನಾದರು ಈ ಮಹಾತಾಯಿ!

This lady save monkey
Highlights

ವಿದ್ಯುತ್ ಶಾಕ್ ಹೊಡೆದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೋತಿಯನ್ನು ಎಎಸ್‌ಐ ಯಶೋದಾ ಆಸ್ಪತ್ರೆಗೆ ಕೊಂಡೊಯ್ದು ಬದುಕಿಸಿದ್ದಾರೆ. ಯಶೋದಾ ಅವರ ಸಮಯ ಪ್ರಜ್ಞೆಯಿಂದಾಗಿ ಕೋತಿ ಬದುಕುಳಿದಿದೆ.  ಎಎಸ್‌ಐ ಯಶೋದಾ ಅವರ ಕೋತಿ ಮೇಲಿನ ಮಾನವೀಯತೆಗೆ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ ಶ್ಲಾಘನೆ ವ್ಯಕ್ತಪಡಿಸಿ, ‘ಪೊಲೀಸರ ಅಂತಃಕರಣಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ ಎಂದಿದ್ದಾರೆ. 

ಬೆಂಗಳೂರು (ಜೂ. 12): ಈ ಘಟನೆ ನಡೆದಿರುವುದು ನಾಲ್ಕು ದಿನದ ಹಿಂದೆಯಷ್ಟೇ. ಎಎಸ್‌ಐ ಯಶೋದಾ ಅವರು ಕಲಬುರಗಿಯ ಜಗತ್ ವೃತ್ತದ ಮಾರ್ಗವಾಗಿ ಯಲ್ಲಮ್ಮ ಮಂದಿರಕ್ಕೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಸಾಕಷ್ಟು ಜನ ಸಂದಣಿ ಸೇರಿದ್ದನ್ನು ಕಂಡು ಕುತೂಹಲಕ್ಕೆ ಏನೆಂದು ಇಣುಕಿದ್ದಾರೆ.

ಅಲ್ಲಿ ಕೋತಿಯೊಂದು ನರಳುತ್ತ ಬಿದ್ದಿರುವು ಕಾಣುತ್ತದೆ. ಏನೆಂದು ವಿಚಾರಿಸಿದಾಗ ಕೋತಿಗೆ ಕರೆಂಟ್ ಶಾಕ್  ತಗುಲಿದೆ. ಅದರಿಂದಾಗಿ ತೀವ್ರ ನಿಶ್ಯಕ್ತವಾಗಿದೆ. ಈಗ ಸರಿಯಾದ ಚಿಕಿತ್ಸೆ ಕೊಡಿಸದೇ ಇದ್ದರೆ ಕೋತಿ ಬದುಕುಳಿಯುವುದು ಕಷ್ಟ ಎಂಬುದನ್ನು ಅರಿತ ಯಶೋದಾ ಅವರು ದೇವಸ್ಥಾನಕ್ಕೆ ಹೋಗುವುದನ್ನು ಮೊಟಕುಕೊಳಿಸಿ ತಕ್ಷಣ ಕೋತಿಯನ್ನು ಎತ್ತಿಕೊಂಡು ಹತ್ತಿರದ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಚಿಕಿತ್ಸೆ ನಂತರ ಮನೆಯಲ್ಲೇ ಹಾರೈಕೆ:

ರಸ್ತೆಯಲ್ಲಿ ಬಿದ್ದು  ಒದ್ದಾಡುತ್ತಿದ್ದ ಕೋತಿಗೆ ಆಸ್ಪತ್ರೆಯಲ್ಲಿ ನೀಡಿದ ಗ್ಲೂಕೋಸ್, ಔಷಧದಿಂದ ಪ್ರಜ್ಞೆ ಬಂದಿದೆ. ಒಂದು ಹಂತದಲ್ಲಿ ಕೋತಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನ ಬೇಕು. ಅಲ್ಲಿಯವರೆಗೂ ಏನು ಮಾಡುವುದು? ಎಲ್ಲಿ ಆಶ್ರಯ ನೀಡುವುದು ಎಂಬ ಪ್ರಶ್ನೆ ಎದ್ದಾಗ ಸ್ವತಃ ಯಶೋದ ಅವರು ಕೋತಿಯನ್ನು ತಮ್ಮ ಮನೆಗೆ ಕೊಂಡೊಯ್ದು ಹಾರೈಕೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಇದಾದ ಮೇಲೆ ಕೋತಿಯನ್ನು ಮನೆಗೆ ಕೊಂಡೊಯ್ದು ಆರೈಕೆ ಮಾಡುವುದು ಸುಲಭದ ಮಾತಾಗಿರಲಿಲ್ಲ.

ಕಾರಣ ಅದರ ದೇಹ ಪ್ರಕೃತಿಯನ್ನು ಅರಿತು ವೈದ್ಯರು ನೀಡಿದ ಸಲಹೆಯಂತೆ ನೋಡಿಕೊಳ್ಳಬೇಕು. ಒಂದು ಕಡೆ ಕೆಲಸ, ಮನೆ, ಸಂಸಾರ, ಮಕ್ಕಳು ಎಲ್ಲದರ ನಡುವಲ್ಲೂ ಯಶೋದಾ ಅವರು ಕಳೆದ ನಾಲ್ಕು ದಿನಗಳಿಂದಲೂ ಸೂಕ್ತ ಆರೈಕೆ  ಮಾಡಿದ್ದರ ಫಲವಾಗಿ ಇಂದು ಕೋತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ.

ನಾನೇ ಸಾಕುವೆ:

‘ಸದ್ಯಕ್ಕೆ ಕೋತಿಯನ್ನು ನಾನು ಎಲ್ಲಿಯೂ ಬಿಡುವುದಿಲ್ಲ. ಕೆಲವರು ನಗರದಲ್ಲಿರುವ ಕಿರು ಮೃಗಾಯಲದಲ್ಲಿ ಕೋತಿಯನ್ನು ಬಿಡಿ ಎಂದು ಹೇಳಿದರು. ಆದರೆ ನನಗೆ ಬಿಡುವ ಮನಸ್ಸಿಲ್ಲ. ಒಂದು ವೇಳೆ ನಾನು ಅಲ್ಲಿಗೆ ಬಿಟ್ಟರೂ ಅದು ಚೆನ್ನಾಗಿ ಬದುಕುತ್ತದೆ ಎನ್ನುವ ನಂಬಿಕೆ ಇಲ್ಲ. ಇದು ಆಕಸ್ಮಿಕವಾಗಿ ನನ್ನ ಬಳಿ ಬಂದಿದೆ. ಸಾಯುತ್ತಿದ್ದ ಒಂದು ಜೀವಕ್ಕೆ ನೆರವಾಗಿದ್ದೇನೆ ಎನ್ನುವ ಸಾರ್ಥಕ ಭಾವವೂ ಈಗ ನನ್ನಲ್ಲಿ ಇರುವುದರಿಂದ ಕೋತಿ ಸಂಪೂರ್ಣವಾಗಿ ಗುಣಮುಖವಾಗುವವರೆಗೂ ನನ್ನ ಮನೆಯಲ್ಲೇ ಇಟ್ಟುಕೊಳ್ಳುತ್ತೇನೆ. ನಂತರ ಕಾನೂನು ಮತ್ತಿತರರ ಸಲಹೆ ಪಡೆದು ಕೋತಿಯನ್ನು ಮನೆಯಲ್ಲೇ ಇಟ್ಟುಕೊಳ್ಳುವುದಾ? ಇಲ್ಲಾ ಮೃಗಾಲಯಕ್ಕೆ ಬಿಡುವುದಾ? ಎನ್ನುವ ತೀರ್ಮಾನಕ್ಕೆ ಬರುತ್ತೇನೆ’ ಎಂದು ಯಶೋದಾ ಹೇಳುತ್ತಾರೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾಲನೆ 

ಎಎಸ್‌ಐ ಯಶೋದಾ ಅವರ ಕೋತಿ ಮೇಲಿನ  ಮಾನವೀಯತೆಗೆ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ ಶ್ಲಾಘನೆ ವ್ಯಕ್ತಪಡಿಸಿ, ‘ಪೊಲೀಸರ ಅಂತಃಕರಣಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಕೋತಿಯನ್ನು ಯಶೋದಾ ತಮ್ಮ ಮನೆಯಲ್ಲೇ ಸಾಕುತ್ತಾರೆ. ಅದಾಗದಿದ್ದರೆ ತಾವೂ ಕೂಡ ಕೋತಿಯನ್ನು ಸಾಕುವ ಚಿಂತನೆ ಮಾಡುತ್ತಿದ್ದೇವೆ. ಮೂಕ ಪ್ರಾಣಿಗಳ ಬಗ್ಗೆ ಎಲ್ಲರಿಗೂ ಕರುಣೆ, ಅನುಕಂಪ ಇರಬೇಕು. ಈ ರೀತಿಯ ಕಾರ್ಯವೊಂದು ನಮ್ಮ  ಇಲಾಖೆಯಲ್ಲಿ ಆಗುತ್ತಿರುವುದು ಸಂತೋಷ ತಂದಿದೆ’ ಎಂದು ತಮ್ಮ ಇಲಾಖೆಯ ಕಾರ್ಯಕ್ಕೆ  ಭೇಷ್ ಎನ್ನುವುದರ ಜೊತೆಗೆ ತಾವೂ ಕೂಡ  ಸಾಥ್ ನೀಡಿದ್ದಾರೆ.

loader