ನಮ್ಮೆಲ್ಲರದೂ ಒಂದಿಷ್ಟು ಅಭ್ಯಾಸಗಳಿರುತ್ತವೆ. ಇದಾದ ಬಳಿಕ ಇದು ಎಂದು ಒಂದಿಷ್ಟು ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿರುತ್ತೇವೆ. ಹಾಗೆಯೇ ಊಟವಾದ ಬಳಿಕ ಕೆಲವರು ಕಾಫಿ ಕುಡಿದರೆ, ಮತ್ತೆ ಕೆಲವರಿಗೆ ವಾಕ್ ಮಾಡುವ ಅಭ್ಯಾಸ. ಇನ್ನು ಕೆಲವರಿಗೆ ಮಲಗುವ ಅಭ್ಯಾಸ. ಆದರೆ, ಈ ಅಭ್ಯಾಸಗಳು ಕೆಲವೊಮ್ಮೆ ಆಭಾಸವಾಗುವುದೂ ಇದೆ. ನಮ್ಮ ದೇಹದ ಒಳಿತಿಗೆ, ಆರೋಗ್ಯಕ್ಕೆ ಯಾವುದು ಸರಿಯೋ ಅದನ್ನಷ್ಟೇ ರೂಢಿಸಿಕೊಳ್ಳುವುದು ಮುಖ್ಯ.

ವಾಕ್ ಹೋಗುವುದು

ಊಟವಾದ ತಕ್ಷಣ ವಾಕ್ ಮಾಡಿದರೆ ತಿಂದ ಆಹಾರ ಬೇಗ ಜೀರ್ಣವಾಗುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ. ಊಟವಾದೊಡನೆ ವಾಕ್ ಮಾಡುವುದರಿಂದ ಆ್ಯಸಿಡ್ ರಿಫ್ಲಕ್ಸ್, ಅಜೀರ್ಣ ಆಗಬಹುದು. ಕ್ಯಾಲೋರಿ ಕಳೆದುಕೊಳ್ಳಲು ವಾಕಿಂಗ್ ತುಂಬಾ ಒಳ್ಳೆಯ ವಿಧಾನವೆಂಬುದೇನೋ ಹೌದು, ಆದರೆ ಒಂದೇ ಸ್ಟ್ರೆಚ್‌ನಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಕಾಲ ವಾಕ್ ಮಾಡುವುದು ಒಳ್ಳೆಯದಲ್ಲ. ಅಲ್ಲದೆ ಊಟವಾದ ಬಳಿಕ ಅರ್ಧ ಗಂಟೆ ಗ್ಯಾಪ್ ಕೊಟ್ಟು ವಾಕ್ ಮಾಡುವುದು ಒಳ್ಳೆಯದು. 

ಹಣ್ಣುಗಳ ಸೇವನೆ

ಊಟವಾದೊಡನೆ ಹಣ್ಣುಗಳನ್ನು ಸೇವಿಸುವುದು ಸರಿಯಲ್ಲ. ಎಲ್ಲ ಹಣ್ಣುಗಳೂ ಬೇಗ ಜೀರ್ಣವಾಗುತ್ತವೆಂಬುದು ನಿಜವೇ ಆದರೂ, ಊಟವಾದೊಡನೆ ತಿಂದರೆ, ಸುಲಭವಾಗಿ ಲಿವರ್‌ಗೆ ಹೋಗಲಾಗುವುದಿಲ್ಲ. ಉಳಿದ ಆಹಾರದ ಮಧ್ಯೆ ಸೇರಿ ಕುಳಿತುಕೊಳ್ಳುತ್ತದೆ. ಹೀಗಾಗಿ, ಊಟವಾದ ಒಂದು ಗಂಟೆಯ ಬಳಿಕ ಹಣ್ಣುಗಳ ಸೇವನೆ ಹಿತಕರ.

ಟೀ ಕುಡಿಯುವುದು

ಟೀಯಲ್ಲಿ ಕ್ಲೆನ್ಸಿಂಗ್ ಪ್ರಾಪರ್ಟಿ ಇರುತ್ತದೆ, ಹಾಗಾಗಿ ಅವು ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಊಟವಾದ ಕೂಡಲೇ ಟೀ ಸೇವನೆಯನ್ನು ಯಾವ ನ್ಯೂಟ್ರಿಶನಿಸ್ಟ್ ಕೂಡಾ ಅನುಮೋದಿಸುವುದಿಲ್ಲ. ಟೀನಲ್ಲಿರುವ ಪಾಲಿಫಿನಾಲ್‌ಗಳು ಹಾಗೂ ಟ್ಯಾನಿನ್‌ಗಳು ನಮ್ಮ ಊಟದಲ್ಲಿದ್ದಿರಬಹುದಾದ ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳದಂತೆ ತಡೆ ಒಡ್ಡುತ್ತವೆ. 

ನಿದ್ದೆ  ಮಾಡುವುದು

ಊಟವಾದ ಕೂಡಲೇ ನಿದ್ದೆ ಮಾಡುವುದು ತಪ್ಪಲ್ಲ, ಆದರೆ ಮಲಗುವುದು ತಪ್ಪು. ಇದರಿಂದ ಕೆಲ ಪ್ರಮಾಣದ ಜೀರ್ಣರಸ ವಾಪಸ್ ಬಾಯಿಗೆ ಹರಿದು ಬರುತ್ತದೆ. ಈ ಜೀರ್ಣರಸಗಳು ಅಸಿಡಿಕ್ ಆಗಿರುವುದರಿಂದ ಅವು ನಿಮ್ಮ ಅನ್ನನಾಳದ ಒಳಗಿನ ಕೋಶಗಳನ್ನು ಸುಡಬಲ್ಲವು. ಹೀಗಾಗಿ ಊಟವಾದ ನಂತರ ಮಲಗಲು ಕನಿಷ್ಠ 2 ಗಂಟೆ ಗ್ಯಾಪ್ ನೀಡಿ. 

ಸ್ನಾನ ಮಾಡುವುದು

ಬಿಸಿನೀರಿನ ಸ್ನಾನವಾದ ಬಳಿಕ ದೇಹದ ತಾಪಮಾನ ಹೆಚ್ಚುತ್ತದೆ. ಈ ಹೀಟನ್ನು ಶಮನಗೊಳಿಸಲು ದೇಹವು ಹೆಚ್ಚು ರಕ್ತವನ್ನು ಚರ್ಮದ ಭಾಗಕ್ಕೆ ಪಂಪ್ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಬಳಕೆಯಾಗಬೇಕಾದ ರಕ್ತ ಹಾಗೂ ಶಕ್ತಿ ಸರಿಯಾದ ಪ್ರಮಾಣದಲ್ಲಿ ಸಿಗುವುದಿಲ್ಲ. 

ಸಿಗರೇಟ್ ಸೇವನೆ

ಊಟವಾದ ತಕ್ಷಣ ಸಿಗರೇಟ್ ಸೇವನೆಯಿಂದ ಅಲ್ಸರ್ ಆಗಬಹುದು, ಮಲಬದ್ಧತೆ ಕಾಡಬಹುದು.