ಸಸ್ಯಗಳು ಮನೆಯೊಳಗಿರಲೀ, ಹೊರಗಿರಲಿ, ಕಚೇರಿಯಲ್ಲೇ ಇರಲಿ, ಹಸಿರಿದ್ದಲ್ಲಿ ಪಾಸಿಟಿವ್ ಎನರ್ಜಿ ಹರಿಯುತ್ತಿರುತ್ತದೆ. ಅವುಗಳು ಮನಕ್ಕೆ ಮುದ ನೀಡುವುದರ ಜೊತೆಗೆ ತಮ್ಮ ಶಕ್ತ್ಯಾನುಸಾರ ಸುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸುತ್ತಿರುತ್ತವೆ. ಆದರೆ, ಈ ಸಸ್ಯಗಳನ್ನು ಮೇಂಟೇನ್ ಮಾಡಲು ನಿಮಗೆ ಸಮಯವಿಲ್ಲ, ಮನೆಯೊಳಗೆ ಬೆಳೆಸಲು ಸೂರ್ಯನ ಬೆಳಕಿಲ್ಲ ಎಂಬುದು ಸಮಸ್ಯೆಯಾಗಿದ್ದಲ್ಲಿ, ಇಲ್ಲಿ ನೀಡಿರುವ ಸಸ್ಯಗಳು ನಿಮಗೆ ಒಗ್ಗುತ್ತವೆ ನೋಡಿ. ಇವು ಹೆಚ್ಚು ಮೇಂಟೇನೆನ್ಸ್ ಬೇಡುವುದಿಲ್ಲ. ಸೂರ್ಯನ ಬೆಳಕೂ ಕೇಳುವುದಿಲ್ಲ. ಹಾಗಂತ ಅಂದಕ್ಕೆ ಹೊಂದಾಣಿಕೆ ಬೇಕಿಲ್ಲ.

ಬ್ರೊಮೆಲಿಯಾಡ್

ಕಚೇರಿಗಳಲ್ಲಿ ಸಾಮಾನ್ಯವಾಗಿ ಫ್ಲೂರೋಸೆಂಟ್ ಬಲ್ಬ್‌ಗಳು ಪ್ರತಿದಿನ ಉರಿಯುತ್ತಲೇ ಇರುತ್ತವೆ. ಹೀಗಾಗಿ, ಈ ಸಸ್ಯ ಕಚೇರಿಗಳಿಗೆ ಹೇಳಿ ಮಾಡಿಸಿದ್ದು. ಏಕೆಂದರೆ ಇವು ಸೂರ್ಯನ ಕಿರಣವಿಲ್ಲದಿದ್ದರೂ, ಫ್ಲೋರೋಸೆಂಟ್ ಲೈಟಲ್ಲೇ ಬದುಕಬಲ್ಲವು.  ಬೋರಿಂಗ್ ಸ್ಥಳವೊಂದರ ಅಂದ ಹೆಚ್ಚಿಸಿ ಆಸಕ್ತಿಕರ ಜಾಗವಾಗಿಸುವ ತಾಕತ್ತು ಈ ಸಸ್ಯದ ಬಣ್ಣಕ್ಕಿದೆ. ಸುಮಾರು ಆರು ವರ್ಷಗಳ ಕಾಲ ಹೂವು ಬಿಡುತ್ತದೆ. ಕೆಂಪು, ಹಳದಿ, ನೇರಳೆ, ಕೇಸರಿ ಹಾಗೂ ಕಂದು ಬಣ್ಣದ ಹೂಗಳನ್ನು ಬಿಡುವ ಸಸ್ಯಗಳು ಲಭ್ಯ. 

ಪಾಸಾಗಬೇಕಂದ್ರೆ ಗಿಡ ನೆಡಿ: ಭೂ ರಮೆ ಹಸಿರಾಗಲು ಇನ್ನೇನು ಬೇಕೇಳಿ?

ಸ್ಪೈಡರ್ ಸಸ್ಯ

ಈ ಸಸ್ಯಗಳು ವರ್ಷಗಳ ಕಾಲ ಮನೆಯೊಳಗಿನ ಲೈಟಿಂಗ್ ವ್ಯವಸ್ಥೆಯನ್ನೇ ನೆಚ್ಚಿಕೊಂಡು ಬದುಕಬಲ್ಲವು. ಕೆಲ ದಿನಗಳ ಕಾಲ ನೀವು ನೀರು ಹಾಕುವುದು ಮರೆತರೂ ಅವು ನಗುತ್ತಾ ನಳನಳಿಸುವುದು ಮರೆಯುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಕನಿಷ್ಠ ನೀರಿನಲ್ಲಿ ಬದುಕಿಕೊಳ್ಳಬಲ್ಲ ಸ್ಪೈಡರ್ ಸಸ್ಯಗಳು ಬಿಳಿಯಾದ ಪುಟ್ಟ ಪುಟ್ಟ ಹೂಗಳನ್ನು ಬಿಟ್ಟು ಮನಕ್ಕೆ ಮುದ ನೀಡುತ್ತವೆ. ಬಹಳ ಬೇಗ ಬೆಳೆಯುತ್ತವೆ ಜೊತೆಗೆ ಕೋಣೆಯೊಳಗಿನ ಗಾಳಿ ಸ್ವಚ್ಛ ಮಾಡುವಲ್ಲಿ ಪರಿಣಾಮಕಾರಿ ಎನಿಸಿದೆ. ಹ್ಯಾಂಗಿಂಗ್ ಪಾಟ್‌ಗೆ ಕೂಡಾ ಹಾಕಬಹುದು. 

ಜೆಡ್ಜೆಡ್ ಸಸ್ಯ

ಸಾಯದೆ ಇರುವ ಸಸ್ಯ ಬೇಕೆಂದರೆ ಇದನ್ನು ಆಯ್ಕೆ ಮಾಡಿ. ಯಾವುದೇ ವಾತಾವರಣದಲ್ಲೂ ಹಸಿರನ್ನು ಕಳೆದುಕೊಳ್ಳದೆ, ಹೊಳೆಯುವ ಎಲೆಗಳಿಂದಾಗಿ ಸೆಳೆಯುತ್ತದೆ. ಜೀರೋ ಸನ್‌ಲೈಟ್‌ನಲ್ಲೂ ಆರಾಮಾಗಿ ಬೆಳೆಯುವ ಜೆಡ್ಜೆಡ್ ಸಸ್ಯ,  ಫ್ಲೋರೋಸೆಂಟ್ ಅಥವಾ ಪ್ಲ್ಯಾಂಟ್ ಲೈಟ್ನಲ್ಲೂ ಜೀವನ ಸಾಗಿಸಬಲ್ಲದು. 

ಬೆಗೋನಿಯಾ

ಗುಲಾಬಿ, ಹಳದಿ, ಕೆಂಪು, ಹಸಿರು ಸೇರಿದಂತೆ ಹಲವಾರು ಬಣ್ಣಗಳಲ್ಲಿ ಹಾಗೂ ಹಲವಾರು ಆಕಾರಗಳಲ್ಲಿ ಬರುವ ಬೆಗೋನಿಯಾ ಸಸ್ಯಗಳು ಹೆಚ್ಚಿನ ಆಯ್ಕೆಗಳನ್ನು ನೀಡುತ್ತವೆ. ಈ ಪುಟಾಣಿ ಸುಂದರಿಯರು ಬಣ್ಣಬಣ್ಣಗಳಲ್ಲಿ ಮನೆಯ ಅಂದ ಹೆಚ್ಚಿಸುತ್ತವೆ. ಹ್ಯಾಂಗಿಂಗ್ ಪಾಟ್‌ನಲ್ಲಿ ಹಾಕಲು ಉತ್ತಮ ಆಯ್ಕೆಗಳಿವು. 

ಬೆಂಗಳೂರಿಗೆ ವರ ಈ ಚಿರಾಗ್‌ ಅರೋರ!

ಮೇಯ್ಡನ್‌ಹೇರ್ ಫರ್ನ್

ಮೃದುವಾಗಿ ಫ್ರಿಲ್ ಫ್ರಿಲ್ ಎಲೆಗಳನ್ನು ಹೊಂದಿರುವ ಈ ಸಸ್ಯಗಳು ಒಳಾಂಗಣಕ್ಕೆ ಫ್ಯಾನ್ಸಿ ಲುಕ್ ನೀಡಬಲ್ಲವು. ಇವು ಹೆಚ್ಚು ಗಮನ ಬೇಡದೆ ಆರಾಮಾಗಿ ಬೆಳೆಯುತ್ತವೆ. ತೇವಾಂಶ ಹೆಚ್ಚಿದ್ದರೆ ಹೆಚ್ಚು ಬೆಳವಣಿಗೆ ಕಾಣುತ್ತವೆ. ಹೀಗಾಗಿ, ಬಾತ್‌ರೂಂಗೆ ಹೇಳಿ ಮಾಡಿಸಿದ ಸಸ್ಯವಿದು. 

ರೆಡ್ ಪ್ರೇಯರ್ ಪ್ಲ್ಯಾಂಟ್

ಈ ಸಸ್ಯಗಳ ವೈಶಿಷ್ಟ್ಯತೆಯೆಂದರೆ ರಾತ್ರಿ ಹೊತ್ತಿನಲ್ಲಿ ಇದರ ಎಲೆಗಳು ಮುಚ್ಚಿಕೊಳ್ಳುತ್ತವೆ. ಹೀಗೆ ಪ್ರಾರ್ಥನೆಗಾಗಿ ಕೈ ಮುಗಿದಂತೆ ಎಲೆಗಳು ನಿಲ್ಲುವುದರಿಂದಲೇ ಇವಕ್ಕೆ ಪ್ರೇಯರ್ ಪ್ಲ್ಯಾಂಟ್ ಎಂಬ ಹೆಸರು ಬಂದಿದೆ. ಇದರ ಎಲೆಗಳ ಅಡಿಯಲ್ಲಿ ಪಿಂಕ್ ಬಣ್ಣ ಇರುವುದರಿಂದ ಹ್ಯಾಂಗಿಂಗ್ ಪಾಟ್ಸ್‌ಗೆ ಬಹಳ ಚೆನ್ನಾಗಿ ಕಾಣುತ್ತವೆ. ಒದ್ದೆ ಮಣ್ಣೊಂದಿದ್ದರೆ ಸಾಕು, ಬೆಳಕೇನೂ ಬೇಡುವುದಿಲ್ಲ.

ಅರೆಕಾ ಪಾಮ್

ಇವು ಅತ್ಯುತ್ತಮ ಏರ್ ಪ್ಯೂರಿಪೈಯರ್ ಆಗಿದ್ದು, ಉತ್ತಮ ತೇವಾಂಶ ಹಿಡಿದಿಟ್ಟುಕೊಳ್ಳುವ ಗುಣ ಹೊಂದಿವೆ. ಮನೆಗೆ ಉಷ್ಣವಲಯದ ಫೀಲ್ ನೀಡುವ ಇವು, ಚಿಕ್ಕದಾದ ಹಳದಿ ಹೂಗಳನ್ನೂ ಬಿಡುತ್ತವೆ. 

ಪೀಸ್ ಲಿಲಿ

ಇವುಗಳು ಉದ್ದನೆಯ ಸುಂದರವಾದ ಬಿಳಿ ಹೂಗಳನ್ನು ವರ್ಷಪೂರ್ತಿ ಬಿಡುವುದರಿಂದ ಲಿವಿಂಗ್ ರೂಂಗೆ ಚೆನ್ನಾಗಿ ಒಪ್ಪುತ್ತವೆ. ಸ್ವಲ್ಪ ನ್ಯಾಚುರಲ್ ಬೆಳಕು ಸಿಕ್ಕಿದರೂ ಸಾಕು ಸುಮಾರು 40 ಇಂಚುಗಳಷ್ಟು ಉದ್ದ ಬೆಳೆಯುತ್ತವೆ. ಕಾಂಪೌಂಡ್‌ನ ಅಂದ ಕೂಡಾ ಹೆಚ್ಚಿಸುವ ಇವು ಮನ