ಬಗಲು ಬೆವರಿನ ಬ್ಯಾಕ್ಟೀರಿಯಾಗಳಿಗೆ ಆಡಲು ಬಟಾಬಯಲು. ಇವುಗಳ ಆಟೋಟಕ್ಕೆ ಪರದಾಟ ಪಟ್ಟು ಆಗಾಗ ಅವಮಾನ ಎದುರಿಸಬೇಕಾಗುತ್ತದೆ. ಒಂದೆಡೆ ಕಂಕಳಲ್ಲಿ ಬೆವರಿನಿಂದ ಬಟ್ಟೆ ಒದ್ದೆಯಾಗಿ ಅವಮಾನವಾದರೆ ಮತ್ತೊಂದೆಡೆ, ಅದರಿಂದ ಹರಡುವ ವಾಸನೆ ಬೇರೆ. ಇದು ಬಹಳ ದಿನದ ಗೋಳಾಗುತ್ತಲೇ ಕಪ್ಪಾಗುವ ಕಂಕುಳು. ಜನ ನಿಮ್ಮ ಹತ್ತಿರ ಬರಲೇ ಹೆದರುವ ಸ್ಥಿತಿ ಬರುವ ಮುಂಚೆ ಎಚ್ಚೆತ್ತುಕೊಳ್ಳಿ. ಹೌದು, ರೋಲ್ ಆನ್, ಪರ್ಪ್ಯೂಮ್ ಇತ್ಯಾದಿಗಳನ್ನು ಟ್ರೈ ಮಾಡಿರುತ್ತೀರಿ. ಅವೆಲ್ಲ ಕೆಲ ಗಂಟೆಗಳ ಕಾಲ ಮಾತ್ರ ನಿಮ್ಮನ್ನು ಕಾಪಾಡಬಲ್ಲವು. ಆದರೆ, ಮತ್ತೆ ಮತ್ತೆ ವಾಸನೆ ಎಂಬ ಪೆಂಡಂಭೂತ ನಿಮ್ಮ ಹೆಗಲು, ಅಲ್ಲಲ್ಲ, ಬಗಲು ಹತ್ತಿ ಕೂರುತ್ತದೆ. ಇದರಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ನೈಸರ್ಗಿಕ ವಸ್ತುಗಳ ಮೊರೆ ಹೋಗಿ ನೋಡಿ. ಈ ಮನೆಮದ್ದುಗಳು ಕಂಕುಳ ವಾಸನೆಯನ್ನು ಹೋಗಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಕೆಲವೇ ದಿನಗಳಲ್ಲಿ ಯೋಚನೆಯಿಲ್ಲದೆ ಸ್ಲೀವ್‌ಲೆಸ್ ಹಾಕಿ ಬಿಡುಬೀಸಾಗಿ ಓಡಾಡಬಹುದು. 

1. ಬೇಕಿಂಗ್ ಸೋಡಾ ಹಾಗೂ ನಿಂಬೆರಸ
ಬೇಕಾಗುವ ವಸ್ತುಗಳು
ಬೇಕಿಂಗ್ ಸೋಡಾ- 1 ಚಮಚ
ನಿಂಬೆರಸ- 1 ಚಮಚ

ವಿಧಾನ
1 ಚಮಚ ಬೇಕಿಂಗ್ ಸೋಡಾಕ್ಕೆ 1 ಚಮಚ ನಿಂಬೆರಸ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಎರಡೂ ಬಗಲಿಗೆ  ಹಚ್ಚಿ. 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಟವೆಲ್‌ನಿಂದ ಒದ್ದೆ ತೆಗೆಯಿರಿ. ದಿನಕ್ಕೊಮ್ಮೆ ಈ ವಿಧಾನವನ್ನು ಮಾಡಿ ನೋಡಿ.

ಬೇಕಿಂಗ್ ಸೋಡಾದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದ್ದು, ಇದು ಕಂಕುಳಿನಲ್ಲಿ ಕುಳಿತ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕುತ್ತದೆ. ಇದರಿಂದ ಕಂಕುಳ ವಾಸನೆ ದೂರವಾಗುತ್ತದೆ. ಇದು ಅತ್ಯುತ್ತಮ ಎಕ್ಸ್‌ಫೋಲಿಯೇಟರ್ ಆಗಿದ್ದು, ಕಂಕುಳಿನಿಂದ ಡೆಡ್‌ಸ್ಕಿನ್ ಸೆಲ್‌ಗಳನ್ನು ಹಾಗೂ ಕೊಳೆಯನ್ನು ತೆಗೆಯುತ್ತದೆ. ಇನ್ನು ನಿಂಬೆಯು ಉತ್ತಮ ಬ್ಲೀಚಿಂಗ್ ಏಜೆಂಟ್ ಆಗಿದ್ದು ಕಪ್ಪಾದ ಕಂಕುಳನ್ನು ಬೆಳ್ಳಗಾಗಿಸುತ್ತದೆ. ಇವೆರಡನ್ನೂ ಒಟ್ಟಾಗಿ ಬಳಸುವುದರಿಂದ ಗರಿಷ್ಠ ಲಾಭ ಪಡೆಯಬಹುದು.

2. ಅಲೋವೆರಾ
ಬೇಕಾಗುವ ವಸ್ತುಗಳು
ಅಲೋವೆರಾ ಫ್ರೆಶ್ ಎಲೆ

ವಿಧಾನ
ಅಲೋವೆರಾ ಎಲೆಯನ್ನು ಮಧ್ಯಕ್ಕೆ ಸೀಳಿ ಅದರೊಳಗಿನ ಜೆಲ್ ಹೊರಗೆ ತೆಗೆಯಿರಿ. ಇದನ್ನು ಪ್ರತಿ ರಾತ್ರಿ ಮಲಗುವಾಗ ಅಂಡರ್ ಆರ್ಮ್ಸ್‌ಗೆ ಹಚ್ಚಿಕೊಳ್ಳಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದು ತೊಳೆಯಿರಿ. ಮೃದುವಾದ ಟವಲ್‌ನಿಂದ ಒದ್ದೆ ತೆಗೆಯಿರಿ. 
ಅಲೋವೆರಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ಬಗಲಿನಲ್ಲಿರಬಹುದಾದ ಯಾವುದೇ ಇನ್ಪೆಕ್ಷನ್ ಓಡಿಸಿದರೆ, ಇದರ ಕ್ರಿಮಿನಾಶಕ ಗುಣವು ಬ್ಯಾಕ್ಟೀರಿಯಾಗಳನ್ನು ಬಗ್ಗು ಬಡಿಯುತ್ತದೆ. ಅಲ್ಲದೆ ಕಂಕುಳ ಚರ್ಮಕ್ಕೆ ಮಾಯಿಶ್ಚರೈಸ್ ಒದಗಿಸಿ ಅವು ಹೆಚ್ಚು ಮೃದುವಾಗಿರುವಂತೆ ನೋಡಿಕೊಳ್ಳುತ್ತವೆ.

ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆ
ಬೇಕಾಗುವ ವಸ್ತುಗಳು
ಕೊಬ್ಬರಿ ಎಣ್ಣೆ 2 ಚಮಚ
ಹರಳೆಣ್ಣೆ 2 ಚಮಚ

ವಿಧಾನ
ಬಟ್ಟಲಿನಲ್ಲಿ ಎರಡೂ ಎಣ್ಣೆಯನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ. ಇದನ್ನು ಪ್ರತಿ ರಾತ್ರಿ ಕಂಕುಳಿಗೆ ಹಚ್ಚಿಕೊಂಡು ಮಲಗಿ. ಬೆಳಗ್ಗೆದ್ದು ಸ್ನಾನಕ್ಕೆ ಹೋದಾಗ ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಈ ವಿಧಾನ ಅನುಸರಿಸಿ. 
ಕೊಬ್ಬರಿ ಎಣ್ಣೆಯಲ್ಲಿರುವ ಫ್ಯಾಟಿ ಆ್ಯಸಿಡ್ಸ್ ಬಹು ಉತ್ತಮ ಆ್ಯಂಟಿಮೈಕ್ರೋಬಿಯಲ್ ಏಜೆಂಟ್ಸ್ ಆಗಿದ್ದು, ಇವು ವಾಸನೆ ಹರಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಅಲ್ಲದೆ ಇದು ಕಂಕುಳಿಗೆ ಮಾಯಿಶ್ಚರೈಸರ್ ಒದಗಿಸಿ ಚರ್ಮವನ್ನು ಮೃದುವಾಗಿಯೂ, ಕೋಮಲವಾಗಿಯೂ ಇಡುತ್ತದೆ. ಹರಳೆಣ್ಣೆಯು ಅಂಡರ್‌ಆರ್ಮ್ಸ್‌ಗೆ ಹೊಳಪನ್ನು ನೀಡಿ ಕಪ್ಪಾದ ಬಣ್ಣವನ್ನು ಸರಿಪಡಿಸುತ್ತದೆ. 

ಯೋನಿಗೆ ತಪ್ಪಲಿ ಬೆವರಿನ ಕಾಟ

ಕಂಕುಳಿನ ಆರೋಗ್ಯ ಕಾಪಾಡಲು ಈ ಟಿಪ್ಸ್ ಪಾಲೋ ಮಾಡಿ
- ಪ್ರತಿದಿನ ಸ್ನಾನ ತಪ್ಪಿಸಬೇಡಿ.
- ಯಾವಾಗಲೂ ಆ್ಯಂಟಿಬ್ಯಾಕ್ಟೀರಿಯಲ್ ಸೋಪ್ ಬಳಸಿ.
- ಸ್ನಾನದ ಬಳಿಕ ಕಂಕುಳಿನಲ್ಲಿ ನೀರು ನಿಲ್ಲದೆ ಚೆನ್ನಾಗಿ ಒರೆಸಿ.
- ಮೈಲ್ಡ್ ಡಿಯೋಡ್ರೆಂಟ್ ಬಳಸಿ
- ಅತಿ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ.
- ಕಂಕುಳ ಕೂದಲಿಗೆ ಆಗಾಗ ವ್ಯಾಕ್ಸ್ ಮಾಡಿ.
- ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯಿರಿ.