ಇತ್ತೀಚಿನ ವರ್ಷಗಳಲ್ಲಿ ಕುಡಿಯೋರ ಸಂಖ್ಯೆ ಜಾಸ್ತಿಯಾಗದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಮದ್ಯಪಾನಿಗಳು ವೈಯಕ್ತಿಕವಾಗಿ ಮದ್ಯ ಸೇವಿಸುವ ಪ್ರಮಾಣ ಕೂಡ ಯದ್ವಾತದ್ವಾ ಜಾಸ್ತಿಯಾಗಿದೆ ಗೊತ್ತೆ? 30 ವರ್ಷದ ಹಿಂದೆ ಜಗತ್ತಿನ ಜನರು ಸರಾಸರಿ ಎಷ್ಟುಕುಡಿಯುತ್ತಿದ್ದರೋ ಅದಕ್ಕಿಂತ ಈಗ ಶೇ.70 ರಷ್ಟು ಜಾಸ್ತಿ ಕುಡಿಯುತ್ತಿದ್ದಾರಂತೆ.

ಕೆನಡಾದ ಟೊರೆಂಟೋದಲ್ಲಿರುವ ಸೆಂಟರ್‌ ಫಾರ್‌ ಅಡಿಕ್ಷನ್‌ ಆ್ಯಂಡ್‌ ಮೆಂಟಲ್‌ ಹೆಲ್ತ್‌ ಹಾಗೂ ಜರ್ಮನಿಯ ಟೆಕ್ನಿಶೆ ಯುನಿವರ್ಸಿಟಿ ಡ್ರೆಸ್‌ಡೆನ್‌ ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಅಧ್ಯಯನದ ಪ್ರಕಾರ, ಜಗತ್ತಿನಾದ್ಯಂತ ಜನರು ಸೇವಿಸುವ ಮದ್ಯದ ಪ್ರಮಾಣ ಅಪಾಯಕಾರಿ ಪ್ರಮಾಣದಲ್ಲಿ ಜಾಸ್ತಿಯಾಗಿದೆ.

1990ರಲ್ಲಿ 189 ದೇಶಗಳಲ್ಲಿ ಜನರು ಸರಾಸರಿ ಎಷ್ಟುಕುಡಿಯುತ್ತಿದ್ದರು ಮತ್ತು 2017ರಲ್ಲಿ ಎಷ್ಟುಕುಡಿಯುತ್ತಿದ್ದಾರೆಂಬುದನ್ನು ಲೆಕ್ಕಹಾಕಿ ಜನರು ಈಗ ಮೊದಲಿಗಿಂತ ಶೇ.70ರಷ್ಟುಜಾಸ್ತಿ ಆಲ್ಕೋಹಾಲ್‌ ಸೇವನೆ ಮಾಡುತ್ತಿದ್ದಾರೆಂಬ ನಿರ್ಧಾರಕ್ಕೆ ಬರಲಾಗಿದೆ. ಆತಂಕಕಾರಿ ಸಂಗತಿಯೆಂದರೆ, ಈ ಟ್ರೆಂಡ್‌ 2030ರವರೆಗೂ ಹೀಗೇ ಮುಂದುವರೆಯುತ್ತದೆಯಂತೆ. ಎಲ್ಲಿಗೆ ಹೋಗಿ ತಲುಪುತ್ತದೋ.

ಇನ್ನು ಮಹಾನ್‌ ಕುಡುಕರು ಎಂದು ಯಾರನ್ನು ಕರೆಯಬೇಕು ಎಂಬುದಕ್ಕೂ ಈ ಅಧ್ಯಯನದಲ್ಲೊಂದು ಮಾನದಂಡ ನೀಡಲಾಗಿದೆ. ಒಂದು ಸಿಟಿಂಗ್‌ನಲ್ಲಿ 60 ಗ್ರಾಮ್‌ಗಿಂತ ಹೆಚ್ಚು ಪ್ಯೂರ್‌ ಆಲ್ಕೋಹಾಲ್‌ ಸೇವನೆ ಮಾಡುವವರು ವಿಪರೀತ ಕುಡುಕರಂತೆ. ನೀವು ಕುಡಿದ ಮದ್ಯದಲ್ಲಿ ಎಷ್ಟುಗ್ರಾಮ್‌ ಪರಿಶುದ್ಧ ಆಲ್ಕೋಹಾಲ್‌ ಇದೆಯೆಂಬುದನ್ನು ಹೇಗೆ ಲೆಕ್ಕ ಹಾಕುತ್ತೀರೋ ನಿಮಗೆ ಬಿಟ್ಟಿದ್ದು!