ವಾಸನಾ ಶಕ್ತಿ ಮೇಲಿನ ಅಧ್ಯಯನಗಳು ಹಲವು ಬೆರಗುಗಳನ್ನು ನಮ್ಮ ಮುಂದಿಡುತ್ತವೆ. ವಾಸನೆಗೆ ನಮ್ಮ ಮೆದುಳನ್ನು ನಿಯಂತ್ರಿಸುವ, ಚುರುಕುಗೊಳಿಸುವ ಗುಣವೂ ಇದೆ. ಅಲ್ಲದೆ, ಇದು ನಮ್ಮ ಪಂಚೇಂದ್ರಿಯಗಳಿಗೆ ಆ್ಯಂಟಿ ವೈರಸ್'ನಂತೆ ಕೆಲಸ ಮಾಡುತ್ತದೆ.

- ಡಾ. ಮುರಲೀ ಮೋಹನ್‌

ಸ್ಪರ್ಶ, ದೃಷ್ಟಿ, ವಾಸನೆ, ಕೇಳುವಿಕೆ ಮತ್ತು ರುಚಿ ಎಂಬ ಪಂಚ ಇಂದ್ರಿಯಗಳು ನಮ್ಮ ಮೆದುಳನ್ನು ನಿಯಮಿತವಾಗಿ ನಿಯಂತ್ರಿಸುತ್ತವೆ. ಈ ಪಂಚೇಂದ್ರಿಯ­ಗಳಲ್ಲಿ ಯಾವುದು ಶಕ್ತಿಯುತ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಇಲ್ಲಿಯತನಕ ಯಾವ ಸಂಶೋಧನೆಯೂ ಸ್ಪಷ್ಟಅಭಿಮತಕ್ಕೆ ಬಂದಿಲ್ಲ. ‘ವಾಸನಾ' ಸಾಮರ್ಥ್ಯದ ಬಗ್ಗೆ ಹೆಚ್ಚು ಆಳವಾಗಿ ಅಧ್ಯಯನಗಳು ನಡೆದಿವೆ. ತುಂಬಾ ಶಕ್ತಿಶಾಲಿಯಾದ ಸುಗಂಧ ದ್ರವ್ಯ, ಹೂವಿನ ಸುವಾಸನೆ, ಚಾಕ್ಲೆಟ್‌ನ ಪರಿಮಳ- ಇವ್ಯಾವುದರ ಬಗ್ಗೆ ನಾವು ಹೆಚ್ಚು ಗಮನ ಹರಿಸದಿದ್ದರೂ ಎಲ್ಲೋ ಲೀಕ್‌ ಆಗುತ್ತಿರುವ ಗ್ಯಾಸ್‌ ಸೋರಿಕೆಯ ವಾಸನೆ ಬಂದ ಕೂಡಲೇ ನಮ್ಮ ಸುಪ್ತ ಮನಸ್ಸು ಜಾಗೃತವಾಗುತ್ತದೆ. ಈ ಕಾರಣಕ್ಕಾಗಿಯೇ ಆಘ್ರಾಣ ಶಕ್ತಿಯನ್ನು ನಮ್ಮ ಪಂಚೇಂದ್ರಿಯಗಳ ‘ಆ್ಯಂಟಿವೈರಸ್‌' ಎನ್ನಲಾಗುತ್ತದೆ. ಏಕೆಂದರೆ ಅಪಾಯದ ಕೊಂಚ ಸೂಚನೆ ಸಿಕ್ಕಿದ ಕೂಡಲೇ ಸುಪ್ತ ಮನಸ್ಸನ್ನು ಸಂಪೂರ್ಣವಾಗಿ ಜಾಗೃತಗೊಳಿಸಿ, ದೇಹಕ್ಕೆ ತೊಂದರೆಯಾಗದಂತೆ ಕರೆಗಂಟೆಯ ರೀತಿಯಲ್ಲಿ ಇದು ಎಚ್ಚರಿಸುತ್ತದೆ.

ಮೆದುಳಿನ ಮೇಲೆ ನಿಯಂತ್ರಣ: ವಾಸನಾ ಶಕ್ತಿ ನಮ್ಮ ದೇಹ ಮತ್ತು ಸುಪ್ತ ಮನಸ್ಸನ್ನು ಗುಪ್ತವಾಗಿ ನಿಯಂತ್ರಿಸುತ್ತದೆ. ಅದು ಅಪಾಯದ ಕರೆಗಂಟೆ ಇರಬಹುದು, ನಮ್ಮ ನೆನಪಿನ ಶಕ್ತಿ ಇರಬಹುದು, ನಿಮ್ಮ ಸುಪ್ತವಾದ ಸಂಗಾತಿಯ ಬಗೆಗಿನ ಬಯಕೆಗಳು ಇದ್ದಿರಬಹುದು, ನಿಮ್ಮ ಮನಸ್ಸಿನ ಭಾವನೆಗಳು (ಮೂಡ್‌) ಇರಬಹುದು ಅಥವಾ ನಿಮ್ಮ ಆಂತರಿಕ ಸೌಂದರ್ಯವಿರಬಹುದು. ಕಾಮೋದ್ರೇಕಗೊಳಿಸುವ ಚಲನಚಿತ್ರ ವೀಕ್ಷಿಸುತ್ತಿರುವ ವ್ಯಕ್ತಿಯ ಬೆವರನ್ನು ಸಂಗ್ರಹಿಸಿ, ಮಹಿಳೆಯರಿಗೆ ಅದರ ವಾಸನೆಯನ್ನು ಗ್ರಹಿಸಿದ ಬಳಿಕ ಮೆದುಳಿನ ಸ್ಕಾನ್‌ ಮಾಡಿದಾಗ, ಮೆದುಳು ಚುರುಕಾಗಿರುವ ಸಂಕೇತವನ್ನು ಗುರುತಿಸಿಲಾಯಿತು. ಅದೇ ರೀತಿ ಭಯಾನಕ ದೃಶ್ಯಗಳಿರುವ ಚಿತ್ರ ವೀಕ್ಷಿಸುವ ವ್ಯಕ್ತಿಯ ಬೆವರನ್ನು ಮಹಿಳೆಯರು ಸುಲಭವಾಗಿ ಗುರುತಿಸಬಲ್ಲರು ಮತ್ತು ಯಾವುದೇ ರೀತಿಯಿಂದ ಅದರಿಂದ ಉದ್ರೇಕಿತರಾಗು­ವುದಿಲ್ಲ ಎಂಬುದೂ ಸಂಶೋಧನೆಗಳಿಂದ ಸಾಬೀತಾಗಿದೆ.

ಹರಿತ ನೆನಪಿನ ಶಕ್ತಿ: ಆಘ್ರಾಣ ಶಕ್ತಿ ನಮ್ಮ ನೆನಪಿನ ಶಕ್ತಿ­ ಯನ್ನು ಹರಿತಗೊಳಿಸುತ್ತದೆ. ಯಾವುದೋ ಅಸಕ್ತಿದಾಯಕ ವಿಷಯವನ್ನು ಓದುವಾಗ ಪರಿಚಿತವಾದ ವಾಸನೆಗೆ ಒಡ್ಡಿಕೊಂಡಾಗ ನಿಮ್ಮ ಮೆದುಳು ಅದಕ್ಕೆ ಸ್ಪಂದಿಸುತ್ತದೆ. ರಾತ್ರಿ ಮಲಗಿರುವಾಗ ಪುನಃ ಅದೇ ವಾಸನೆಗೆ ನೀವು ಒಡ್ಡಿಕೊಂಡಾಗ ‘ಅದೇ ವಿಷಯ' ನಿಮ್ಮ ಸಪ್ತಾವಸ್ಥೆಯಲ್ಲೂ ಮೆದುಳಿನಲ್ಲಿ ಮಿಂಚಾಗಿ ಬಂದು ಕಾಡಬಹುದು. ಬಾಲ್ಯದಲ್ಲಿ ಯಾವುದೋ ಮೃಗಾಲಯದಲ್ಲಿ ಯಾವುದೋ ಪ್ರಾಣಿಯ ಬಹಿರ್ದೆಸೆಯ ವಾಸನೆ ನಿಮ್ಮ ಮನದಲ್ಲಿ ಅಚ್ಚಳಿಯದೇ ನಿಂತು, ಮಗದೊಮ್ಮೆ ಯೌವನದಲ್ಲಿ ಅದೇ ವರ್ಗದ ಪ್ರಾಣಿಯ ಬಹಿರ್ದೆಸೆಯ ವಾಸನೆಗೆ ಒಡ್ಡಿ­ಕೊಂಡಾಗ, ನೀವು ಸುಪ್ತಾವಸ್ಥೆಯಲ್ಲಿ ನಿಮ್ಮ ಬಾಲ್ಯತನಕ್ಕೆ ಮರಳಿ, ಮನಸ್ಸು ಮಗದೊಮ್ಮೆ ನಿರಾಳವಾಗಿ ಮಗುವಿನಂತೆ ಆಗುವ ಸಾಧ್ಯತೆಯೂ ಇಲ್ಲದ್ದಿಲ್ಲ. ಬಾಲ್ಯದಲ್ಲಿ ನೀವು ನೋಡಿದ ಯಾವುದೇ ದೃಶ್ಯ ನೀವು ಬೇಗನೆ ಮರೆಯ­ಬಹುದು, ಆದರೆ ಅದೇ ದೃಶ್ಯವನ್ನು ಯಾವುದಾದರೊಂದು ವಾಸನೆಯ ಜೊತೆಗೆ ನೋಡಿದಲ್ಲಿ, ನೀವು ಜೀವಮಾನವಿಡೀ ಆ ದೃಶ್ಯ ಪುನಃ ಪುನಃ ನಿಮ್ಮ ಮನಃಪಟಲದಲ್ಲಿ ತೇಲಿ ಹೋಗಬಹುದು. ಯಾಕೆಂದರೆ ‘ಓಲ್ಫಾಕ್ಟರಿ ಬಲ್ಬ್' ಎಂಬ ವಾಸ­ನೆಯ ನರದ ಒಂದು ಭಾಗಕ್ಕೂ, ಮೆದುಳಿನ ನೆನಪಿನ ಶಕ್ತಿಕೇಂದ್ರ ಸ್ಥಾನವಾದ ಹಿಪೋಕ್ಯಾಂಸ್‌, ಅಮಿಗ್‌'ಡಾಲ ಎಂಬ ಜಾಗಕ್ಕೂ ಅವಿನಾಭಾವ ಸಂಬಂಧವಿದೆ. ವಾಸನಾ ಶಕ್ತಿಗೂ ನಮ್ಮ ಮನಸ್ಸಿನ ಮೂಡ್‌ಗೂ ಬಹಳಷ್ಟು ಸಂಬಂಧವಿದೆ. ತೀವ್ರ ಮಧುಮೇಹದಿಂದ ಬಳಲುವ ವ್ಯಕ್ತಿಗೆ ಯಾವುದಾದರೊಂದು ಪರಿಚಿತ ವಾಸನೆಯ ಜೊತೆಯಲ್ಲಿ ಇನ್ಸುಲಿನ್‌ ಚುಚ್ಚುಮದ್ದು ನೀಡಿದ ಬಳಿಕ ಮಗದೊಮ್ಮೆ ಅದೇ ಪರಿಚಿತ ವಾಸನೆಗೆ ಒಡ್ಡಿಕೊಂಡಾಗ, ದೇಹದ ಗುಲ್ಕೋಸ್‌ ಪ್ರಮಾಣ ಕಡಿಮೆಯಾದದ್ದು ನಿಜವಾಗಿಯೂ ಸೋಜಿಗದ ಸಂಗತಿ. ಒಟ್ಟಿನಲ್ಲಿ ಪರಿಚಿತ ವಾಸನೆಗೆ ಮತ್ತು ಮನಸ್ಸಿನ ಮೂಡ್‌ ಅನ್ನು ಉತ್ತೇಜಿಸುವ, ಉದ್ರೇಕಿಸುವ ಅದ್ಭುತವಾದ ಸಾಮರ್ಥ್ಯವಿದೆಯೆಂದರೂ ತಪ್ಪಲ್ಲ.

ಜೇಬಿಗೆ ಕತ್ತರಿ ಹಾಕುವ ವಾಸನೆ:
ನಮ್ಮ ದೇಹದ ಎಲ್ಲಾ ದ್ರವಗಳಾದ ಕಣ್ಣೀರು, ವೀರ್ಯ, ಬೆವರು, ಎಂಜಲುಗಳಲ್ಲಿ ‘ಕಿಮೋ ಸಿಗ್ನಲ್‌' ರಾಸಾಯ­ನಿಕ­ವಿದ್ದು, ಅದಕ್ಕೆ ಸುಪ್ತ ಮನಸ್ಸನ್ನು ಜಾಗೃತಗೊಳಿಸುವ ಸಾಮರ್ಥ್ಯವಿದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಅದೇ ರೀತಿ ಆಘ್ರಾಣ ಶಕ್ತಿಯು, ಸುಪ್ತ ಮನಸ್ಸನ್ನು ಉದ್ರೇಕಿಸಿ ಹೆಚ್ಚು ಹಣ ವೆಚ್ಚ ಮಾಡಲು ಪ್ರಚೋದಿಸುತ್ತದೆ ಎಂದೂ ಸಾಬೀತಾಗಿದೆ. ಕ್ಯಾಸಿನೋದ ಸುಗಂಧಭರಿತ ಜಾಗಗಳಲ್ಲಿ ಜನರು ಹೆಚ್ಚು ವೆಚ್ಚ ಮಾಡುತ್ತಾರೆ. ಆದರೆ, ಸುಗಂಧವಿಲ್ಲದ ಜಾಗಗಳಲ್ಲಿ ವೆಚ್ಚ ಮಾಡಲು ಇಷ್ಟಪಡುವುದೇ ಇಲ್ಲ ಎಂದು ತಿಳಿದು­ಬಂದಿದೆ. ಯಾಕೆಂದರೆ ದೃಷ್ಟಿಶಕ್ತಿ ಮತ್ತು ಕೇಳುವ ಶಕ್ತಿ ಸುಪ್ತಾವಸ್ಥೆಯಲ್ಲಿ ಜಾಸ್ತಿ ಕೆಲಸ ಮಾಡುವುದಿಲ್ಲ. ಆದರೆ ವಾಸನಾ ಶಕ್ತಿ ಸುಪ್ತಾವಸ್ಥೆಯಲ್ಲೂ ಹೆಚ್ಚು ಸಕ್ರಿಯ. ನೋಡಲು ಚೆನ್ನಾಗಿಲ್ಲದಿದ್ದರೂ ಹೆಚ್ಚು ಸುಗಂಧಭರಿತ ವಸ್ತು­ ಗಳಿಗೆ ಜನರು ಮಾರು ಹೋಗುತ್ತಾರೆಂದು ಅಧ್ಯಯನಗಳು ಹೇಳುತ್ತವೆ.

ಪರಿಮಳದ ಪವರ್‌ ಗೊತ್ತಾ?
1) ತಾಜಾ ಪರಿಮಳವನ್ನು ನೀವು ಆಘ್ರಾಣಿಸಿದರೆ, ಆಗ ಹುಟ್ಟಿಕೊಳ್ಳುವ ವಾಸನಾಶಕ್ತಿಯ ಕೋಶಗಳು 28 ದಿನಗಳವರೆಗೆ ಜೀವಂತವಾಗಿರುತ್ತವೆ.
2) ಮೆದುಳಿಗೆ ತಾಜಾನುಭೂತಿ ನೀಡಿದ ಪರಿಮಳವನ್ನು 50 ವರ್ಷದವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ.
3) ಪರಿಮಳಗಳು ನಿಮಗೆ ಬೋರ್‌ ಹಿಡಿಸುತ್ತವೆ. ವಿಶೇಷವಾಗಿ ಆಹಾರದ ವಾಸನೆಗಳು ಆ ಖಾದ್ಯವನ್ನೇ ತಿರಸ್ಕರಿಸುವಂತೆ ಮಾಡುತ್ತವೆ.
4) ನಾವು ತಾಯಿಯ ಗರ್ಭದಲ್ಲಿದ್ದಾಗಲೇ ನಮ್ಮೊಳಗೆ ಆಘ್ರಾಣಶಕ್ತಿಯ ಕೋಶಗಳು ರೂಪುಗೊಂಡಿರುತ್ತವೆ.
5) ಪುರುಷರಿಗಿಂತ ಮಹಿಳೆಯರಿಗೆ ಆಘ್ರಾಣಶಕ್ತಿ ಹೆಚ್ಚು. ಇದು ಪುರುಷರ ಶಕ್ತಿಗಿಂತ ದುಪ್ಪಟ್ಟು.
6) ಮಾನವನ ಮೆದುಳಿಗೆ 10 ಸಾವಿರ ವಾಸನೆಗಳನ್ನು ಗುರುತಿಸುವ ಸಾಮರ್ಥ್ಯವಿದೆ.
7) ಕಾಫಿ, ಸುಗಂಧದ್ರವ್ಯದಂಥ ಕೆಲವು ಪರಿಮಳಗಳು ನಿಮ್ಮನ್ನು ನಿದ್ರೆಯಿಂದಲೂ ಎಚ್ಚರಿಸುತ್ತವೆ.
8) ಅನೋಸ್ಮಿಯಾ ಎಂಬ ಕಾಯಿಲೆ ಇದ್ದವರಿಗೆ ಆಘ್ರಾಣ ಶಕ್ತಿ ಇರುವುದಿಲ್ಲ.