ಏನಿದು ಸೈನಸ್?

ಸೈನಸ್ ಎಂಬುದು ಮೂಗಿನ ಒಂದು ಜಾಗ. ಮೂಗಿನಲ್ಲಿನಟೊಳ್ಳು ಜಾಗಕ್ಕೆ ಸೈನಸ್ ಎನ್ನುತ್ತಾರೆ. ಇದು ಕೆನ್ನೆ, ಹುಬ್ಬಿನ ಮೇಲ್ಭಾಗ, ಕಣ್ಣುಗಳ ಮಧ್ಯೆ ಹಾಗೂ ಕಣ್ಣುಗಳ ಹಿಂಭಾಗಕ್ಕೆ ಸಂಪರ್ಕ ಹೊಂದಿರುತ್ತದೆ. ನಾವು ಉಸಿರಾಡುವುದು ಇದರ ಮೂಲಕವೇ. ಯಾವುದೇ ಒಂದು ಸೈನಸ್‌ನಲ್ಲಿ ಇನ್ಫೆಕ್ಷನ್ ಆದರೆ ಅದಕ್ಕೆ ಸೈನಸ್ ಸೈಟಿಸ್ ಎನ್ನುತ್ತಾರೆ. ಸೈನಸ್ ಸೈಟಿಸ್ ಆಗುವುದು ಸಾಮನ್ಯವಾಗಿ ಶೀತದ ವಾತಾವರಣದಲ್ಲಿ ಅಂದರೆ ಚಳಿಗಾಲ ಹಾಗೂ ಮಳೆಗಾಲದಲ್ಲಿ. ಈ ಸಂದರ್ಭದಲ್ಲಿ ಸೈನಸ್ನಲ್ಲಿ ಇನ್ಫೆಕ್ಷನ್ ಆದರೆ ಅದು ಸೈನಸ್‌ನಲ್ಲಿ ಸೋಂಕು ಹರಡಿದೆ ಎಂದರ್ಥ. ಈ ಸಂದರ್ಭದಲ್ಲಿ ಮೂಗು ಕಟ್ಟುವುದು, ತಲೆ ನೋವು ಕಾಣಿಸಿಕೊಳ್ಳುತ್ತದೆ. ಹೀಗೆ ಸೈನಸ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಹಾಗೂ ಸೋಂಕು ತಗಲುವುದಾಗಿದೆ.

ಸಾಧಾರಣವಾದ ಶೀತ

ಸೂಕ್ಷ್ಮಾಣುಗಳಿಂದ ಕೂಡಿದ ಬ್ಯಾಕ್ಟೀರಿಯಾಗಳು ಹಾಗೂ ನಾನಾ ರೀತಿಯ ವೈರಸ್‌ನಿಂದ ಆರೋಗ್ಯ ಹದಗೆಡುವುದೇ ಸಾಧಾರಣ ಶೀತ. ಇದು ಸಾಮಾನ್ಯವಾಗಿ ಮೂಗು ಕಟ್ಟುವುದು, ಮೂಗು ಸೋರುವುದು, ತಲೆನೋವು, ಮೂಗಿನಿಂದ ರಕ್ತ ಬರುವುದು, ಆಗಾಗ ಸಣ್ಣ ಪ್ರಮಾಣದಲ್ಲಿ ಜ್ವರ ಹಾಗೂ ಕೆಮ್ಮು ಕಾಣಿಸಿಕೊಳ್ಳಲೂಬಹುದು. ಶೀತವಾದಾಗ ತಲೆನೋವು, ಆಯಾಸ, ಜ್ವರಗಳು ಬಂದು ಸುಸ್ತು ಮಾಡಿ ಕೆಲ ದಿನಗಳು ಕಾಡುತ್ತದೆ. ಸೂಕ್ತ ಮೆಡಿಸಿನ್ ತೆಗೆದುಕೊಂಡ ಮೇಲೆ ಕಣ್ಮರೆ ಯಾಗುತ್ತದೆ. ಆದರೆ ಇಲ್ಲಿ ಒಂದು ವ್ಯತ್ಯಾಸ ಎಂದರೆ ಶೀತವಾದ ಮೇಲೂ ಹಲವು ದಿನಗಳ ಕಾಲ ಈ ಸಮಸ್ಯೆ ಮುಂದುವರೆಯುತ್ತದೆ. ಇದು ಪ್ರಾರಂಭದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಕ್ರಮೇಣ ಕಣ್ಮರೆಯಾಗುತ್ತದೆ. ಕೆಲವೊಮ್ಮೆ ಈ ಶೀತವು ಸ್ಕಲ್‌ನ ಕೆಲ ಜಾಗಗಳಲ್ಲಿ ಸ್ವೆಲ್ಲಿಂಗ್ ಶುರುವಾಗಿ ಸೈನಸ್ ಸೈಟಿಸ್‌ಗೆ ತಿರುಗಬಹುದು. ಕಣ್ಣು, ಮುಖದಲ್ಲಿ ನೋವು ಕಾಣಿಸಿ ಕೊಳ್ಳುವುದು, ಹಳದಿ ಅಥವಾ ಹಸಿರು ಬಣ್ಣದಲ್ಲಿ ಮೂಗಿನಿಂದ ಕಫ(ಸಿಂಬಳ) ಸುರಿಯುವುದು, ವಾರಕ್ಕೂ ಹೆಚ್ಚು ಕಾಲ ಕಾಣಿಸಿಕೊಂಡರೆ ತಕ್ಷಣ ಡಾಕ್ಟರ್‌ನ್ನು ಕಾಣುವುದು ಒಳ್ಳೆಯದು. ಯಾಕೆಂದರೆ ಇದು ಸೈನಸ್‌ನ ಲಕ್ಷಣಗಳು.

ಸೈನಸ್ ಕಾಣಿಸಿಕೊಳ್ಳುವುದು ಈ ಕಾಲದಲ್ಲಿ

ಸೈನಸ್ ಎಂದರೆ ಹೆದರಬೇಕಿಲ್ಲ. ಮೂಗಿನಲ್ಲಿ ಕಟ್ಟಿದ ಕಫ ಹಾಗೂ ಅದರ ಮೇಲೆ ಬೆಳೆದ ಬ್ಯಾಕ್ಟೀರಿಯಾಗಳು, ಟಿಶ್ಯೂಗಳಿಂದ ಕೂಡಿದ್ದಾಗಿದೆ. ಇದು ಸಾಮಾನ್ಯವಾಗಿ ಶೀತದ ವಾತಾ ವರಣದಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಮಳೆಗಾಲ, ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಆಹಾರ ಸೇವಿಸುವಾಗಲೂ ಹೆಚ್ಚು ಮುಂಜಾಗ್ರತೆ ವಹಿಸಿಕೊಳ್ಳಬೇಕು.

ನಗರ ಪ್ರದೇಶದಲ್ಲಿ ಸೈನಸ್

ಇಂದು ಕಲುಷಿತಗೊಂಡ ವಾತಾವರಣ ಹೆಚ್ಚು ಕಾಣಸಿಗುವುದು ನಗರ ಪ್ರದೇಶದಲ್ಲಿ. ಏಕೆಂದರೆ ಜನಸಂದಣಿ ಹೆಚ್ಚಾಗಿರುವುದರಿಂದ ಕಾಣಿಸಿಕೊಳ್ಳುತ್ತದೆ. ಫ್ಯಾಕ್ಟರಿ, ವಾಹನ, ಪ್ಲಾಸ್ಟಿಕ್ ಹೀಗೆ ಕಲುಷಿತ ವಾತಾವರಣದಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಉಸಿರಾಡಿದಾಗ ಸೇರಿಕೊಳ್ಳುತ್ತದೆ. ಅಲ್ಲದೆ ಎಸಿ ಬಳಸುವುದರಿಂದ ಅದರಲ್ಲಿನ ಬ್ಯಾಕ್ಟೀರಿಯಾಗಳು ಉಸಿರಾಟದಲ್ಲಿ ಸೇರಿ ಸೈನಸ್‌ನಲ್ಲಿ ಸೋಂಕು ಉಂಟಾಗುತ್ತದೆ.

ಸೈನಸ್‌ನ ಮೊದಲ ಹಂತ

ಸೈನಸ್ ಸೋಂಕು ತಗಲುವ ಮೊದಲು ಸಾಮಾನ್ಯ ಶೀತ ಕಾಣಿಸಿ ಕೊಳ್ಳುತ್ತದೆ. ಶೀತ, ಅಲರ್ಜಿ, ಇರಿಸುಮುರಿಸು ಕಾಣಿಸಿಕೊಂಡು ಸೈನಸ್ ಟಿಶ್ಯೂ ಬೆಳೆಯಲು ಕಾರಣವಾಗುತ್ತದೆ. ಈ ಟಿಶ್ಯೂಗಳು ಬೆಳೆದು ನಂತರ ಪೂರ್ಣವಾಗಿ ಸೈನಸ್ ಸೋಂಕಾಗುತ್ತದೆ.

ಸೈನಸ್ ಸೋಂಕು ದೀರ್ಘಕಾಲವಾ?

ಸೈನಸ್ ಎಂದಾಕ್ಷಣ ಭಯಪಡುವ ಅಗತ್ಯವಿಲ್ಲ. ಕಲುಷಿತಗಾಳಿ ಉಸಿರಾಡಿದಾಗ ಬೇಡದ ವಸ್ತುಗಳು ಸೈನಸ್‌ನಲ್ಲಿ ಕುಳಿತಾಗ ಸೋಂಕು ಹೆಚ್ಚುತ್ತದೆ. ಹಾಗಂತ ಇದು ದೀರ್ಘಕಾಲದ ಸಮಸ್ಯೆ ಅಲ್ಲ. ಶೀತವಾದಾಗ ವಾರದೊಳಗೆ ನಿವಾರಣೆಯಾಗುತ್ತದೆ. ಹೆಚ್ಚು ಕಾಲ ಮುಂದುವರೆದಲ್ಲಿ ಸೈನಸ್‌ನ ಲಕ್ಷಣಗಳು ಕಾಣಿಸಿಕೊಂಡಾಗ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಆದರೆ ಇಲ್ಲಿ ಮದುಮೇಹಿ ಹಾಗೂ ಹೆಚ್‌ಐವಿ ಇರುವವರಿಗೆ ಸೈನಸ್ ಕಾಣಿಸಿಕೊಂಡಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಮದುಮೇಹಿಗಳಲ್ಲಿ ಹಾಗೂ ಸೈನಸ್ ಕಾಣಿಸಿಕೊಂಡಲ್ಲಿ ಮೊದಲು ದೇಹದಲ್ಲಿನ ಶುಗರ್ ಪ್ರಮಾಣ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗೆಯೇ ಹೆಚ್‌ಐವಿ ಇರುವವರಲ್ಲಿಯೂ ಸೈನಸ್ ತಗುಲಿದಾಗ ಮೊದಲು ಡಾಕ್ಟರ್ನ್ನು ಸಂಪರ್ಕಿಸಬೇಕು. ಕೆಲ ಸಂದರ್ಭದಲ್ಲಿ ಸೈನಸ್ ಸೋಂಕು ತಗುಲಿದ್ದಲ್ಲಿ ಮೂಗು ಕಟ್ಟುತ್ತದೆ. ಹೀಗೆ ಮೂಗು ಕಟ್ಟಿದಾಗ ಕೆಲವೊಮ್ಮೆ ಸರ್ಜರಿ ಮಾಡಬೇಕಾಗುತ್ತದೆ ಇಲ್ಲವೇ ಆ್ಯಂಟಿಬಯಾಟಿಕ್ ನೀಡಿಯೂ ಗುಣಪಡಿಬಹುದು. ಆದರೆ ನೆನಪಿರಲಿ ವೈದ್ಯರ ಮಾರ್ಗದರ್ಶನದಂತೆ ಮುನ್ನಡೆಯಬೇಕು.

ಸೈನಸ್‌ನಿಂದಾಗುವ ತೊಂದರೆಗಳು

ಸೈನಸ್ ಸೋಂಕು ಶೀತದ ನಂತರವೂ ಮುಂದುವರೆಯುತ್ತವೆ. ಬೇಡವಾದವುಗಳು ಮೂಗಿನ ಕೊಳವೆಯಲ್ಲಿ ಕುಳಿತು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದು ಅಲರ್ಜಿಯಾಗಿ, ಜ್ವರ, ಮೂಗಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಫಂಗಸ್ ಬೆಳೆಯುತ್ತದೆ.

ಸೈನಸ್ ಸೋಂಕು ಸಾಂಕ್ರಾಮಿಕವಾ?

ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಮೂಲಕ ಸೈನಸ್ ಸೋಂಕು ಕಾಣಿಸಿಕೊಳ್ಳುತ್ತದೆ. ಅಕಸ್ಮಾತ್ ವೈರಸ್‌ನಿಂದ ಸೋಂಕು ಕಾಣಿಸಿಕೊಂಡರೆ ಅದು ಇನ್ನೊಬ್ಬರಿಗೆ ಹರಡುವುದಿಲ್ಲ. ಬದಲಾಗಿ ಶೀತ ಹರಡಬಹುದು. ಶೀತ ತಗುಲಿದವರಿಗೆ ನಂತರದ ದಿನಗಳಲ್ಲಿ ಸೈನಸ್ ಸೋಂಕು ಎದುರಾಗುವ ಸಾಧ್ಯತೆಗಳಿವೆ